Sunscreen Lotion: ಎಷ್ಟು ಗಂಟೆಗೊಮ್ಮೆ ಸನ್​ಸ್ಕ್ರೀನ್ ಲೋಷನ್ ಹಚ್ಚುತ್ತಿರಬೇಕು?; ತಜ್ಞರ ಉತ್ತರ ಇಲ್ಲಿದೆ

| Updated By: ಸುಷ್ಮಾ ಚಕ್ರೆ

Updated on: May 04, 2022 | 2:52 PM

Summer Health Tips: ದಿನಕ್ಕೆ ಒಮ್ಮೆ ಸನ್​ಸ್ಕ್ರೀನ್ ಲೋಷನ್ ಹಚ್ಚಿದರೆ ಸಾಕಾ ಅಥವಾ ಆಗಾಗ ಮತ್ತೆ ಹಚ್ಚುತ್ತಿರಬೇಕಾ? ಎಂಬ ಅನುಮಾನ ಹಲವರಲ್ಲಿ ಇದೆ. ಇದಕ್ಕೆ ಚರ್ಮರೋಗ ತಜ್ಞರು ಮಾಹಿತಿ ನೀಡಿದ್ದಾರೆ.

Sunscreen Lotion: ಎಷ್ಟು ಗಂಟೆಗೊಮ್ಮೆ ಸನ್​ಸ್ಕ್ರೀನ್ ಲೋಷನ್ ಹಚ್ಚುತ್ತಿರಬೇಕು?; ತಜ್ಞರ ಉತ್ತರ ಇಲ್ಲಿದೆ
ಸನ್​ಸ್ಕ್ರೀನ್ ಲೋಷನ್
Follow us on

ಬೇಸಿಗೆಯಲ್ಲಿ ನಮ್ಮ ತ್ವಚೆಯ ಬಗ್ಗೆ ಎಷ್ಟು ಕಾಳಜಿ ಮಾಡಿದರೂ ಸಾಲದು. ಬಿಸಿಲಿನಿಂದ ಬಹಳ ಬೇಗ ಚರ್ಮ ಟ್ಯಾನ್ ಆಗುತ್ತದೆ, ಚರ್ಮ ಸುಟ್ಟಂತೆ ಆಗಿ, ಶುಷ್ಕವಾಗುತ್ತದೆ. ಹೀಗಾಗಬಾರದು ಎಂದರೆ ಸನ್​ಸ್ಕ್ರೀನ್ ಲೋಷನ್ (Sunscreen Lotion) ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ತ್ವಚೆಯ ಆರೈಕೆಯಲ್ಲಿ ಸನ್‌ಸ್ಕ್ರೀನ್‌ನ ಪ್ರಾಮುಖ್ಯತೆಯು ಮುಖ್ಯವಾಗಿದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು, ದಿನವೂ ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಲು ಮರೆಯಬೇಡಿ. ಬೇಸಿಗೆಯಲ್ಲಿ, ಟ್ಯಾನಿಂಗ್, ಪಿಗ್ಮೆಂಟೇಶನ್ ಮತ್ತು ಸನ್ಬರ್ನ್ ಸಾಮಾನ್ಯ ಸಮಸ್ಯೆಗಳಾಗಿವೆ. ಹಾಗೇ, ಸೂರ್ಯನ UVA ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಚರ್ಮ ಹಾನಿಗೊಳಗಾಗುತ್ತದೆ. ಸನ್‌ಸ್ಕ್ರೀನ್‌ ಲೋಷನ್​ನ ಸರಿಯಾದ ಬಳಕೆಯು ಈ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ದಿನಕ್ಕೆ ಒಮ್ಮೆ ಸನ್​ಸ್ಕ್ರೀನ್ ಲೋಷನ್ ಹಚ್ಚಿದರೆ ಸಾಕಾ ಅಥವಾ ಆಗಾಗ ಮತ್ತೆ ಹಚ್ಚುತ್ತಿರಬೇಕಾ? ಎಂಬ ಅನುಮಾನ ಹಲವರಲ್ಲಿ ಇದೆ. ಇದಕ್ಕೆ ಚರ್ಮರೋಗ ತಜ್ಞರಾದ ಡಾ. ಜೈಶ್ರೀ ಶರದ್ ಮಾಹಿತಿ ನೀಡಿದ್ದಾರೆ.

ಸೂರ್ಯನ ಕಿರಣದಿಂದ ಚರ್ಮವನ್ನು ರಕ್ಷಿಸಲು ಸನ್‍ಸ್ಕ್ರೀನ್ ಕ್ರೀಮ್ ಅಥವಾ ಲೋಷನ್ ಬಳಸುತ್ತೇವೆ. ಸನ್‍ಸ್ಕ್ರೀನ್ ಲೋಷನ್ ಅನ್ನು ನಿಯಮಿತವಾಗಿ ಬಳಸುವುದರಿಂದ ಮುಖದಲ್ಲಿ ಮೊಡವೆ, ಶುಷ್ಕತೆ, ಸುಕ್ಕು, ತುರಿಕೆ ಸೇರಿದಂತೆ ಇನ್ನಿತರ ಸಮಸ್ಯೆಯನ್ನು ನಿವಾರಿಸಬಹುದು, ಚರ್ಮದ ಅಲರ್ಜಿಯನ್ನೂ ತಡೆಗಟ್ಟಬಹುದು.

ಸನ್ ಸ್ಕ್ರೀನ್ ಕ್ರೀಮ್‍ಗಳನ್ನು ಖರೀದಿಸುವಾಗ ಅದರ ಮೇಲೆ ಎಸ್‍ಪಿಎಫ್ ಪ್ರಮಾಣ ಎಷ್ಟಿದೆ ಎನ್ನುವುದನ್ನು ಮೊದಲು ಪರಿಗಣಿಸಬೇಕು. 30+ ಎಸ್‍ಪಿಎಫ್ ಗಿಂತ ಹೆಚ್ಚಿರಬೇಕು. 30 ಎಸ್‍ಪಿಎಫ್ ಕ್ರೀಮ್ ಶೇ. 97ರಷ್ಟು ಯುವಿಬಿ ರೇಡಿಯಂಟ್‍ಗಳಿಂದ ರಕ್ಷಿಸಿದರೆ, 50 ಎಸ್‍ಪಿಎಫ್ ಕ್ರೀಮ್ ಶೇ. 98-100ರಷ್ಟು ಯುವಿಬಿ ರೇಡಿಯಂಟ್‍ಗಳಿಂದ ರಕ್ಷಣೆ ನೀಡುತ್ತದೆ. ಹೆಚ್ಚು ಸಮಯ ಸೂರ್ಯನ ಬಿಸಿಲಿನಲ್ಲಿ ಇರುವವರು ಹೆಚ್ಚು ಪ್ರಮಾಣದ ಎಸ್‍ಪಿಎಫ್ ಸನ್ ಸ್ಕ್ರೀನ್ ಕ್ರೀಮ್‍ಗಳನ್ನು ಬಳಸಬೇಕು ಎಂದು ಚರ್ಮ ತಜ್ಞರು ಸಲಹೆ ನೀಡುತ್ತಾರೆ.

ಹಾಗೇ, ಮನೆಯಿಂದ ಹೊರಗೆ ಹೋಗುವ 20 ನಿಮಿಷಗಳ ಮೊದಲೇ ಸನ್​ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಬೇಕು. ಸನ್ ಸ್ಕ್ರೀನ್ ಲೋಷನ್ ಅನ್ನು ಕೇವಲ ಬಿಸಿಲಿರುವಾಗ ಮಾತ್ರ ಅನ್ವಯಿಸಬೇಕು ಎಂದೇನು ಇಲ್ಲ. ಪ್ರತಿಯೊಂದು ಋತುಮಾನದಲ್ಲೂ ಬಳಸಬಹುದು. ನಿತ್ಯವೂ ಮುಖಕ್ಕೆ ಸನ್‍ಸ್ಕ್ರೀನ್ ಹಚ್ಚುವುದರಿಂದ ಚರ್ಮವು ಸೂರ್ಯನ ಕಿರಣದಿಂದ ರಕ್ಷಣೆ ಪಡೆದುಕೊಳ್ಳುವುದು. ಜೊತೆಗೆ ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ದೂರ ಇಡಬಹುದು. ಸನ್‍ಸ್ಕ್ರೀನ್ ಕ್ರೀಮ್ ಅನ್ನು ಬಹುತೇಕ ಜನರು ಕೇವಲ ಮುಖಕ್ಕೆ ಮಾತ್ರ ಹಚ್ಚುತ್ತಾರೆ. ಆದರೆ, ಸೂರ್ಯನ ಕಿರಣಗಳು ತಾಗುವ ನಮ್ಮ ದೇಹದ ತೋಳು, ಕಾಲು, ಕೈ, ಕುತ್ತಿಗೆಗೂ ಸನ್​ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಬೇಕು.

ಈ ಕುರಿತು ವೀಡಿಯೊವನ್ನು ಹಂಚಿಕೊಂಡಿರುವ ಡಾ. ಜೈಶ್ರೀ ಶರದ್, ಮನೆಯಲ್ಲಿದ್ದಾಗಲೂ ಸನ್​ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ. ಮನೆಯಿಂದ ಹೊರಗೆ ಹೆಜ್ಜೆ ಹಾಕಬೇಕಾದರೆ ಸನ್‌ಸ್ಕ್ರೀನ್ ಅನ್ನು ಪುನಃ ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಹೊರಗೆ ಹೋದಾಗ ನೀವು ಪ್ರತಿ 2-3 ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್ ಲೋಷನ್ ಅನ್ನು ಪುನಃ ಅನ್ವಯಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಆರೋಗ್ಯ, ಸೌಂದರ್ಯದ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Wed, 4 May 22