ಅಕ್ಕಿ ತೊಳೆದ ನೀರನ್ನು ವೇಸ್ಟ್‌ ಎಂದು ಚೆಲ್ಲಬೇಡಿ, ಅದನ್ನು ಈ ರೀತಿಯಾಗಿ ಉಪಯೋಗಿಸಿ

ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಅಕ್ಕಿ ತೊಳೆದ ನೀರನ್ನು ಅನುಪಯುಕ್ತ, ಅದರಿಂದ ಯಾವುದೇ ಉಪಯೋಗವಿಲ್ಲ ಎಂದು ಚೆಲ್ಲಿಬಿಡುತ್ತಾರೆ. ವೇಸ್ಟ್‌ ಎಂದು ಚೆಲ್ಲುವ ಈ ನೀರಿನಲ್ಲೂ ಸಾಕಷ್ಟು ಉಪಯೋಗಗಳಿದ್ದು, ಈ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ. ಈ ನೀರಿನ ಬಹುಪಯೋಗಗಳ ಬಗ್ಗೆ ಕೇಳಿದ್ರೆ, ನೀವು ಸಹ ಅದನ್ನು ಎಸೆಯುವ ತಪ್ಪನ್ನು ಎಂದಿಗೂ ಮಾಡಲಾರಿರಿ.

ಅಕ್ಕಿ ತೊಳೆದ ನೀರನ್ನು ವೇಸ್ಟ್‌ ಎಂದು ಚೆಲ್ಲಬೇಡಿ, ಅದನ್ನು ಈ ರೀತಿಯಾಗಿ ಉಪಯೋಗಿಸಿ
ಸಾಂದರ್ಭಿಕ ಚಿತ್ರ
Image Credit source: vecteezy

Updated on: Jan 19, 2026 | 6:39 PM

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಅನ್ನ ಮಾಡಲಾಗುತ್ತದೆ. ಹೀಗೆ ಅನ್ನ ಮಾಡುವ ಸಂದರ್ಭದಲ್ಲಿ ಅಕ್ಕಿ ತೊಳೆದ ನೀರನ್ನು (Rice Water) ಅನುಪಯುಕ್ತ ಎಂದು ಚೆಲ್ಲುವವರೇ ಹೆಚ್ಚು. ಆದರೆ ನೀರಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಖನಿಜಗಳಿದ್ದು, ಇದು ಚರ್ಮದಿಂದ ಹಿಡಿದು ಕೂದಲಿನವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ಇದರ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಹಾಗಿದ್ದರೆ ಅಕ್ಕಿ ತೊಳೆದ ನೀರಿನ ಉಪಯೋಗಗಳೇನು, ಅದನ್ನುಬಳಸುವುದೇಗೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಅಕ್ಕಿ ತೊಳೆದ ನೀರಿನ ಉಪಯೋಗಗಳೇನು?

ಸಸ್ಯಗಳಿಗೆ ಹಾಕಬಹುದು:  ಅನೇಕ ಜನರು ಅಕ್ಕಿ ತೊಳೆದ ನೀರನ್ನು ಎಸೆದುಬಿಡುತ್ತಾರೆ. ಇದರ ಬದಲು ಇದನ್ನು ಗಿಡಗಳ ಬುಡಗಳಿಗೆ ಹಾಕಬಹುದು. ಇದು ಉತ್ತಮ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಮತ್ತು ಖನಿಜಗಳು ಸಸ್ಯಗಳ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿವೆ.

ಮನೆ ಶುಚಿಗೊಳಿಸುವಿಕೆಗಾಗಿ: ಅಕ್ಕಿ ನೀರನ್ನು ತಣ್ಣಗಾಗಿಸಿ ಅದನ್ನು ಬಾಟಲಿಗೆ ಹಾಕಿ ಕನ್ನಡಿ ಮತ್ತು ಗಾಜಿನ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಮೊದಲು, ಈ ನೀರನ್ನು ಕಲೆ ಇರುವ ಜಾಗಕ್ಕೆ ಸಿಂಪಡಿಸಿ ನಂತರ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿ. ಗಾಜಿನ ವಸ್ತುಗಳು ಚೆನ್ನಾಗಿ ಹೊಳೆಯುತ್ತವೆ.

ಪಾತ್ರೆಗಳನ್ನು ಸ್ವಚ್ಛಗೊಳಿಸಲು: ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್‌ ಸಂಗ್ರಹಿಸಿದಂತಹ ಡಬ್ಬಗಳು ಸ್ವಚ್ಛಗೊಳಿಸಿದ ನಂತರವೂ ಅದರಲ್ಲಿ ವಾಸನೆ ಹಾಗೆಯೇ ಉಳಿದು ಬಿಡುತ್ತದೆ. ಈ ವಾಸನೆಯನ್ನು ತೊಡೆದುಹಾಕಲು ಅಕ್ಕಿ ನೀರನ್ನು ಬಳಸಬಹುದು. ಅದಕ್ಕಾಗಿ ವಾಸನೆಯಿರುವ ಪಾತ್ರೆಯೊಳಗೆ ಅಕ್ಕಿ ತೊಳೆದ ನೀರನ್ನು ಹಾಕಿ ಸ್ವಲ್ಪ ಸಮಯದ ಬಳಿಕ ಸ್ವಚ್ಛಗೊಳಿಸಿ. ವಾಸನೆ ಸಂಪೂರ್ಣವಾಗಿ ಹೋಗುತ್ತದೆ. ಜೊತೆಗೆ ಪಾತ್ರೆಗಳ ಜಿಡ್ಡಿನಾಂಶವನ್ನು ಸಹ ಹೋಗಲಾಡಿಸಲುತ್ತದೆ.

ಇದನ್ನೂ ಓದಿ: ಆಹಾರ ಪದಾರ್ಥಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಬಟ್ಟೆ ಸ್ವಚ್ಛಗೊಳಿಸಲು: ಅಕ್ಕಿ ತೊಳೆದ ನೀರಿನಲ್ಲಿ ನೈಸರ್ಗಿಕ ಪಿಷ್ಟವಿರುತ್ತದೆ. ಇದನ್ನು ಕಾಟನ್‌ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬಳಸಬಹುದು.

ಚರ್ಮಕ್ಕೂ ಪ್ರಯೋಜನಕಾರಿ: ಅಕ್ಕಿ ತೊಳೆದ ನೀರನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಇದು ಮುಖದ ರಂಧ್ರಗಳನ್ನು ಬಿಗಿಗೊಳಿಸಿ, ಚರ್ಮವನ್ನು ಕಾಂತಿಯುತವಾಗಿಸುತ್ತದೆ.

ಕೂದಲಿಗೂ ಪ್ರಯೋಜನಕಾರಿ: ಅಕ್ಕಿ ತೊಳೆದ ನೀರನ್ನು ಕೂದಲಿಗೂ ಬಳಸಬಹುದು. ಇದರಿಂದ ಹೇರ್‌ ವಾಶ್‌ ಮಾಡುವುದರಿಂದ ಕೂದಲು ಉದುರುವಿಕೆಯಿಂದ ಪರಿಹಾರ ಸಿಗುತ್ತದೆ, ಸೀಳು ಕಡಿಮೆಯಾಗುತ್ತದೆ, ಶುಷ್ಕತೆಯೂ ಕಡಿಮೆಯಾಗುತ್ತದೆ. ಅಲ್ಲದೆ ಇದರ ಬಳಕೆಯಿಂದ ಕೂದಲು ವೇಗವಾಗಿ ಬೆಳೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ