ಈ ಆಹಾರ ಪದಾರ್ಥಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ
ಇಂದಿನ ದಿನಗಳಲ್ಲಿ ಪ್ರೆಶರ್ ಕುಕ್ಕರ್ ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಹೆಚ್ಚಿನವರು ಪ್ರತಿಯೊಂದು ಅಡುಗೆಯನ್ನು ತಯಾರಿಸಲು ಸಹ ಪ್ರೆಶರ್ ಕುಕ್ಕರನ್ನೇ ಬಳಸುತ್ತಾರೆ. ಆದ್ರೆ ಹೀಗೆ ಎಲ್ಲಾ ಬಗೆಯ ಆಹಾರ ಪದಾರ್ಥಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದು ಅಷ್ಟು ಸೂಕ್ತವಲ್ಲವಂತೆ. ಕೆಲವೊಂದು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೌಷ್ಟಿಕಾಂಶ ಮೌಲ್ಯ ನಾಶವಾಗುವುದಲ್ಲದೆ, ಅವು ನಮ್ಮ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಆ ಆಹಾರಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಈಗಂತೂ ಎಲ್ಲರ ಮನೆಗಳಲ್ಲೂ ಅನ್ನ ಬೇಯಿಸುವುದರಿಂದ ಹಿಡಿದು ಸಾಂಬಾರ್ ಮಾಡುವವರೆಗೆ ಬಹುತೇಕ ಎಲ್ಲಾ ಅಡುಗೆ ಮಾಡಲು ಪ್ರತಿನಿತ್ಯ ಪ್ರೆಶರ್ ಕುಕ್ಕರ್ (pressure cooker) ಬಳಸಲಾಗುತ್ತದೆ. ಇದು ಆಹಾರವನ್ನು ತ್ವರಿತವಾಗಿ ಬೇಯಿಸುವ ಮೂಲಕ ಸಮಯ ಉಳಿತಾಯ ಮತ್ತು ಗ್ಯಾಸ್ ಉಳಿತಾಯ ಮಾಡಲು ಸಹಕಾರಿ ನಿಜ, ಆದರೆ ಅಡುಗೆ ಬೇಗನೇ ಆಗಿ ಹೋಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಬಗೆಯ ಆಹಾರಗಳನ್ನು ಕುಕ್ಕರ್‌ನಲ್ಲಿಯೇ ಬೇಯಿಸುವುದು ಸರಿಯಲ್ಲ. ಹೌದು ಕೆಲವೊಂದು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶ ನಾಶವಾಗುವುದಲ್ಲದೆ ಅಂತಹ ಆಹಾರವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದ್ದರಿಂದ ಈ ಕೆಲವು ಬಗೆಯ ಆಹಾರಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಲೇಬಾರದು. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಲೇಬಾರದ ಆಹಾರ ಪದಾರ್ಥಗಳಿವು:
ಅನ್ನ: ಸಾಮಾನ್ಯವಾಗಿ ಹೆಚ್ಚಿನವರು ಅನ್ನವನ್ನು ಕುಕ್ಕರ್‌ನಲ್ಲಿಯೇ ಬೇಯಿಸುತ್ತಾರೆ. ಆದರೆ ಅನ್ನವನ್ನು ಎಂದಿಗೂ ಕುಕ್ಕರ್‌ನಲ್ಲಿ ಬೇಯಿಸಬಾರದು. ಏಕೆಂದರೆ, ಈ ರೀತಿ ಕುಕ್ಕರ್‌ನಲ್ಲಿ ಅನ್ನ ಬೇಯಿಸುವುದರಿಂದ ಆರ್ಸೆನಿಕ್ ಎಂಬ ವಿಷಕಾರಿ ವಸ್ತು ಬಿಡುಗಡೆಯಾಗುತ್ತದೆ, ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ತೆರೆದ ಪಾತ್ರೆಯಲ್ಲಿ ಅನ್ನವನ್ನು ಬೇಯಿಸುವುದು ಉತ್ತಮ.
ಹಸಿರು ಎಲೆ ತರಕಾರಿಗಳು: ಪಾಲಕ್, ಮೆಂತ್ಯ ಸೊಪ್ಪು, ಹರಿವೆ ಸೊಪ್ಪಿನಂತಹ ಹಸಿರು ಎಲೆ ತರಕಾರಿಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶಗಳು ನಾಶವಾಗುತ್ತವೆ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ, ಅವುಗಳನ್ನು ನಾರ್ಮಲ್ ಪ್ಯಾನ್‌ನಲ್ಲಿ ಕಡಿಮೆ ಉರಿಯಲ್ಲಿ ಬೇಯಿಸುವುದು ಉತ್ತಮ.
ಬೀನ್ಸ್: ಬೀನ್ಸ್‌ನಲ್ಲಿ ನೈಸರ್ಗಿಕವಾಗಿ ಕಂಡುಬರುವ ಲೆಕ್ಟಿನ್ ಎಂಬ ವಿಷವಿದ್ದು, ಸರಿಯಾಗಿ ಬೇಯಿಸದಿದ್ದರೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಆಹಾರ ವಿಷವನ್ನು ಸಹ ಉಂಟುಮಾಡಬಹುದು. ಅಲ್ಲದೆ ಒತ್ತಡದಲ್ಲಿ ಬೇಯಿಸುವುದರಿಂದ ಬೀನ್ಸ್‌ನಲ್ಲಿರುವ ಲೆಕ್ಟಿನ್ ವೇಗವಾಗಿ ಒಡೆಯುತ್ತದೆ, ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ತರಕಾರಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದು ಸರಿಯಲ್ಲ.
ಹಾಲು ಮತ್ತು ಹಾಲಿನ ಉತ್ಪನ್ನಗಳು: ಪ್ರೆಶರ್ ಕುಕ್ಕರ್‌ನಲ್ಲಿ ಹಾಲನ್ನು ಕುದಿಸುವುದರಿಂದ ಅದರ ನೈಸರ್ಗಿಕ ರಚನೆಯಲ್ಲಿ ಬದಲಾವಣೆ ಉಂಟಾಗಬಹುದು ಮತ್ತು ಅದು ಉರಿಯಲು ಅಥವಾ ಹೆಪ್ಪುಗಟ್ಟಲು ಕಾರಣವಾಗಬಹುದು, ಇದರಿಂದಾಗಿ ಅದರ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ಹಾಲನ್ನು ಕುದಿಸಲು ಸ್ಟೀಲ್ ಅಥವಾ ನಾನ್-ಸ್ಟಿಕ್ ಪ್ಯಾನ್ ಉತ್ತಮ.
ಟೊಮ್ಯಾಟೊ: ಟೊಮೆಟೊ, ಹುಣಸೆಹಣ್ಣು ಅಥವಾ ಹುಳಿ ಆಹಾರವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವು ಹೆಚ್ಚು ಆಮ್ಲೀಯವಾಗಬಹುದು, ಇದು ದೇಹಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ, ಅವುಗಳನ್ನು ಉಕ್ಕಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ಬೇಯಿಸುವುದು ಉತ್ತಮ.
ಇದನ್ನೂ ಓದಿ: ಶುಂಠಿ, ಈರುಳ್ಳಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸೂಕ್ತವೇ?
ದ್ವಿದಳ ಧಾನ್ಯಗಳು ಮತ್ತು ಕಿಡ್ನಿ ಬೀನ್ಸ್: ಬೀನ್ಸ್ ಮತ್ತು ಕೆಲವು ಧಾನ್ಯಗಳು ನೈಸರ್ಗಿಕ ವಿಷಕಾರಿ ಅಂಶಗಳನ್ನು ಒಳಗೊಂಡಿರುತ್ತವೆ, ಇವುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಸಂಪೂರ್ಣವಾಗಿ ಹೊರಹಾಕಲಾಗುವುದಿಲ್ಲ. ಆದ್ದರಿಂದ, ಅವುಗಳನ್ನು ರಾತ್ರಿಯಿಡೀ ನೆನೆಸಿ ನಂತರ ಕಡಿಮೆ ಉರಿಯಲ್ಲಿ ತೆರೆದ ಪಾತ್ರೆಯಲ್ಲಿ ಬೇಯಿಸುವುದು ಆರೋಗ್ಯಕರವಾಗಿರುತ್ತದೆ.
ಆಲೂಗಡ್ಡೆ ಮತ್ತು ಇತರೆ ಪಿಷ್ಟ ತರಕಾರಿಗಳು: ಆಲೂಗಡ್ಡೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪಿಷ್ಟವು ಬೇಗನೆ ಒಡೆಯುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗಬಹುದು . ಆದ್ದರಿಂದ, ಇದನ್ನು ಪ್ಯಾನ್‌ನಲ್ಲಿಯೇ ಬೇಯಿಸುವುದು ಸೂಕ್ತ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




