ಯುರೋಪ್‌ ಟ್ರಿಪ್‌ ಯಾಕೆ, ನವ ದಂಪತಿಗಳಿಗೆ ಭೇಟಿ ನೀಡಲು ಭಾರತದಲ್ಲಿಯೇ ಇವೆ ರೋಮ್ಯಾಂಟಿಕ್‌ ಹನಿಮೂನ್‌ ತಾಣಗಳು

ಮದುವೆ ಸೀಸನ್‌ ಈಗಾಗ್ಲೇ ಶುರುವಾಗಿದ್ದು, ನವದಂಪತಿಗಳು ಹನಿಮೂನ್‌ಗೆ ಎಲ್ಲಿ ಹೋಗೋದು, ಬೆಸ್ಟ್‌ ತಾಣ ಯಾವುದು ಅಂತ ಪ್ಲಾನ್‌ ಮಾಡ್ತಿರ್ತಾರೆ. ಕೆಲವರಿಗೆ ಯುರೋಪ್‌, ಮಾಲ್ಡೀವ್ಸ್‌, ಪ್ಯಾರಿಸ್‌ ಅಂತೆಲ್ಲಾ ಫಾರಿನ್‌ ಟ್ರಿಪ್‌ಗೆ ಹೋಗುವ ಬಯಕೆಯಾದ್ರೆ, ಇನ್ನೂ ಕೆಲವರು ಭಾರತದಲ್ಲಿರುವ ರೋಮ್ಯಾಂಟಿಕ್‌ ತಾಣಗಳಿಗೆ ಹೋಗುವ ಆಸೆ. ನಿಮಗೂ ಕೂಡಾ ಹನಿಮೂನ್‌ ಹೋಗುವ ಪ್ಲಾನ್‌ ಇದ್ಯಾ, ಹಾಗಿದ್ರೆ ಕಡಿಮೆ ಬಜೆಟ್‌ನಲ್ಲಿ ಯುರೋಪ್‌ಗಿಂತ ಯಾವುದಕ್ಕೂ ಕಮ್ಮಿಯಿಲ್ಲದ ಭಾರತದ ಈ ಅದ್ಭುತ ಹನಿಮೂನ್‌ ಡೆಸ್ಟಿನೇಷನ್ಸ್‌ಗೆ ಭೇಟಿ ನೀಡಿ.

ಯುರೋಪ್‌ ಟ್ರಿಪ್‌ ಯಾಕೆ, ನವ ದಂಪತಿಗಳಿಗೆ ಭೇಟಿ ನೀಡಲು ಭಾರತದಲ್ಲಿಯೇ ಇವೆ ರೋಮ್ಯಾಂಟಿಕ್‌ ಹನಿಮೂನ್‌ ತಾಣಗಳು
ರೋಮ್ಯಾಂಟಿಕ್‌ ಹನಿಮೂನ್‌ ತಾಣಗಳು
Image Credit source: Unsplash

Updated on: Oct 30, 2025 | 3:40 PM

ಹನಿಮೂನ್‌ (honeymoon) ಎಂದಾಕ್ಷಣ ನೆನಪಾಗುವುದೇ ಹೆಚ್ಚಿನವರಿಗೆ ಯುರೋಪ್‌. ಹೌದು ಯುರೋಪ್‌ನಲ್ಲಿ ಅತ್ಯಂತ ಸುಂದ ತಾಣಗಳಿದ್ದು, ಇಲ್ಲಿ ಸುಂದರ ಕ್ಷಣಗಳನ್ನು ಕಳೆಯಬೇಕೆಂದು ನವ ದಂಪತಿಗಳು ಪ್ಯಾರಿಸ್‌, ಇಟಲಿಯ ರೋಮ್‌, ವೆನಿಸ್‌, ಸ್ವಿಟ್ಜರ್‌ಲ್ಯಾಂಡ್‌, ಗ್ರೀಕ್‌ನ ಸ್ಯಾಂಟೊರಿನಿ ಇತ್ಯಾದಿ ರೊಮ್ಯಾಂಟಿಕ್‌ ತಾಣಗಳಿಗೆ ಹೋಗಲು ಬಯಸುತ್ತಾರೆ. ಆದ್ರೆ ಭಾರತದಲ್ಲಿಯೇ ಇಂತಹ ಅದ್ಭುತ ತಾಣಗಳಿದ್ದು ಕಡಿಮೆ ಖರ್ಚಿನಲ್ಲಿ ಹೋಗಬಹುದು. ಈಗಾಗ್ಲೆ ಮದುವೆ ಸೀಸಸ್‌ ಶುರುವಾಗಿದ್ದು, ಹನಿಮೂನ್‌ಗೆ ಹೋಗಲು ಪ್ಲಾನ್‌ ಮಾಡುತ್ತಿರುವ ನವ ದಂಪತಿಗಳಿಗಾಗಿ ಇಲ್ಲಿವೆ ನಮ್ಮ ಭಾರತದಲ್ಲಿರುವಂತಹ ರೋಮ್ಯಾಂಟಿಕ್‌ ಡೆಸ್ಟಿನೇಷನ್ಸ್‌ ಕುರಿತ ಮಾಹಿತಿ.

ಭಾರತದಲ್ಲಿರುವ ರೋಮ್ಯಾಂಟಿಕ್ ಹನಿಮೂನ್ ತಾಣಗಳು:

ಗುಲ್ಮಾರ್ಗ್, ಜಮ್ಮು ಮತ್ತು ಕಾಶ್ಮೀರ:

ಜಮ್ಮು ಕಾಶ್ಮೀರದಲ್ಲಿರುವ ವಿಶ್ವವಿಖ್ಯಾತ ಗುಲ್ಮಾರ್ಗ್‌ ಅತ್ಯದ್ಭುತ ಪ್ರವಾಸಿ ತಾಣವಾಗಿದ್ದು, ಇದು ಹನಿಮೂನ್‌ಗಾಗಿ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಇಲ್ಲಿ ನೀವು ಪೈನ್‌ ಕಾಡುಗಳು, ಹಿಮರಾಶಿಗಳ ಸೌಂದರ್ಯವನ್ನು ಸವಿಯಬಹುದು. ಕೇಬಲ್‌ ಕಾರ್‌ ಸವಾರಿ, ಸ್ಕೀಯಿಂಗ್‌ ಮತ್ತು ಗುಲ್ಮಾರ್ಗ್‌ ಗೊಂಡೊಲಾ ಅನುಭವವನ್ನು ಸವಿಯಬಹುದು.  55,000 ರೂ. ದಿಂದ ಹಿಡಿದು 90,000 ರೂ. ಒಳಗಿನ ಬಜೆಟ್‌ನಲ್ಲಿ ನೀವು ಇಲ್ಲಿಗೆ ಹನಿಮೂನ್‌ ಹೋಗಬಹುದು. ಈ ರೋಮ್ಯಾಂಟಿಕ್‌ ತಾಣದಲ್ಲಿ ಸುಂದರ ಕ್ಷಣವನ್ನು ಕಳೆಯಬಹುದು.

ಔಲಿ, ಉತ್ತರಾಖಂಡ:

ಔಲಿ ಕೂಡ ಯೂರೋಪ್‌ನಂತೆ ಭಾಸವಾಗುವ ಭಾರತದ ಅದ್ಭುತ ತಾಣಗಳಲ್ಲಿ ಒಂದಾಗಿದೆ. ಔಲಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ಒಂದು ಸುಂದರ ಗಿರಿಧಾಮವಾಗಿದ್ದು, ಇದು ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ದೇವದಾರು ಮರಗಳು ಹಾಗೂ ಮಂಜಿನಿಂದ ಆವೃತ್ತವಾದ ಈ ಸ್ಥಳ ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲೆಂಡ್‌ನಂತೆ ಕಾಣುತ್ತದೆ. ಇಲ್ಲಿ ನೀವು ಮಂಜಿನ ರಾಶಿಯ ನಡುವೆ ಸ್ಕೀಯಿಂಗ್‌ ಅನುಭವವನ್ನು ಪಡೆಯಬಹುದು. ಸೂರ್ಯಾಸ್ತದ ದೃಶ್ಯವನ್ನು ವೀಕ್ಷಿಸಬಹುದು. 45 ಸಾವಿರದಿಂದ 70 ಸಾವಿರ ಬಜೆಟ್‌ ಒಳಗೆ ನೀವು ಇಲ್ಲಿಗೆ ಹನಿಮೂನ್‌ಗೆ ಹೋಗಬಹುದು.

ಸಿಕ್ಕಿಂ:

ಹನಿಮೂನ್‌ಗಾಗಿ ಪ್ಲಾನ್‌ ಮಾಡುತ್ತಿರುವ ದಂಪತಿಗಳು ಸಿಕ್ಕಿಂಗೂ ಹೋಗಬಹುದು. ಹಿಮಾಲಯದ ಮಡಿಲಿನಲ್ಲಿ ನೆಲೆಗೊಂಡಿರುವ ಸಿಕ್ಕಿಂ ರಾಜ್ಯ ಅತೀ ಸುಂದರ ಸ್ಥಳಗಳನ್ನು ತನ್ನ ಒಡಲಿನಲ್ಲಿ ಅಡಗಿಸಿಕೊಂಡಿದೆ. ಈ ಸ್ಥಳಗಳು ಹನಿಮೂನ್‌ಗೆ ಹೋಗಲು ಹೇಳಿ ಮಾಡಿಸಿದಂತಿವೆ. ಹೌದು ಇಲ್ಲಿನ ದಟ್ಟವಾದ ಕಾಡುಗಳು, ಹಿಮದಿಂದ ಕೂಡಿದ ಪರ್ವತಗಳ ನಡುವೆ  ನೀವು ಸಂದರ ಕ್ಷಣವನ್ನು ಕಳೆಯಬಹದು. ಇಲ್ಲಿಗೆ ನೀವು 50 ರಿಂದ 80 ಸಾವಿರ ರೂ. ಬಜೆಟ್‌ನಲ್ಲಿ ಪ್ರವಾಸ ಹೋಗಬಹುದು.

ಶಿಲ್ಲಾಂಗ್, ಮೇಘಾಲಯ:

ಮೇಘಾಲಯದ ಶಿಲ್ಲಾಂಗ್‌ ಥೇಟ್‌ ಯುರೋಪ್‌ನಂತೆ ಕಾಣುವ ಅದ್ಭುತ ತಾಣವಾಗಿದೆ. ಪೈನ್ ಮರಗಳಿಂದ ಕೂಡಿದ ಬೀದಿಗಳು, ಅತ್ಯಾಕರ್ಷಕ ಪರ್ವತ ಶಿಖರಗಳು, ಸ್ಪಟಿಕ ಸ್ಪಷ್ಟ ಸರೋವರಗಳು ಇಲ್ಲಿದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಒಮ್ಮೆಯಾದರೂ ಇಲ್ಲಿಗೆ ಹೋಗಲೇಬೇಕು. ಹನಿಮೂನ್‌ಗೆ ಹೋಗಬಯಸುವ ನವದಂಪತಿಗಳಿಗೆ ಇದು ಬೆಸ್ಟ್‌ ತಾಣವಾಗಿದ್ದು, 40 ಸಾವಿರದಿಂದ 60 ಸಾವಿರ ರೂ. ಬಜೆಟ್‌ನಲ್ಲಿ ಇಲ್ಲಿಗೆ ಪ್ರವಾಸ ಹೋಗಿ ಬರಬಹುದು.

ಕೂರ್ಗ್, ಕರ್ನಾಟಕ:  

ನಿಸರ್ಗ ಪ್ರೇಮಿಗಳಿಗೆ ಹನಿಮೂನ್‌ಗೆ ಹೋಗಲು ಸೂಕ್ತವಾದ ಸ್ಥಳವೆಂದರೆ ಅದು ಭಾರತದ ಸ್ಕಾಟ್ಲ್ಯಾಂಡ್‌ ಸಿಟಿ ಎಂದು ಕರೆಯಲ್ಪಡುವ ಕೂರ್ಗ್‌. ಹಚ್ಚ ಹಸಿರಿನಿಂದ ಕೂಡಿದ ಈ ತಾಣ ಭೂಮಿಯ ಮೇಲಿನ ಸ್ವರ್ಗ ಅಂತಾನೇ ಹೇಳಬಹುದು. ಬಜೆಟ್‌ಫ್ರೆಂಡ್ಲಿ ಮಧುಚಂದ್ರಕ್ಕೆ ನವ ದಂಪತಿಗಳು ಈ ತಾಣವನ್ನು ಆಯ್ಕೆ ಮಾಡಬಹುದು. ಇಲ್ಲಿನ ಚುಮುಚುಮು ಚಳಿ, ಜಲಪಾತಗಳು, ಟೀ, ಕಾಫಿ ತೋಟ,  ಬೆಟ್ಟಗುಡ್ಡಗಳ ನಡುವೆ ಅದ್ಭುತ ಕ್ಷಣವನ್ನು ಕಳೆಯಬಹುದು. 30 ಸಾವಿರದಿಂದ 50 ಸಾವಿರ ಬಜೆಟ್‌ನಲ್ಲಿ ನೀವು ಇಲ್ಲಿಗೆ ಹನಿಮೂನ್‌ ಹೋಗಬಹುದು.

ಇದನ್ನೂ ಓದಿ: ಮನಸ್ಥಿತಿಯನ್ನು ಸುಧಾರಿಸಲು, ಸಕಾರಾತ್ಮಕತೆಯನ್ನು ಹೆಚ್ಚಿಸಲು ಮನೆಯಲ್ಲಿ ಗಿಡಗಳನ್ನು ನೆಡಿ

ಮುನ್ನಾರ್, ಕೇರಳ:

ಯುರೋಪ್‌ನಂತೆ ಭಾಸವಾಗುವ ಭಾರತದ ತಾಣಗಳಲ್ಲಿ ಕೇರಳದ  ಮುನ್ನಾರ್ ಕೂಡ ಒಂದು. ಸಮೃದ್ಧವಾಗಿ ಹರಡಿರುವ ಹಸಿರು ಟೀ ತೋಟಗಳು, ರೋಮ್ಯಾಂಟಿಕ್‌ ಹಿಲ್‌ಸ್ಟೇಷನ್‌ಗಳು ಇಲ್ಲಿದ್ದು, ಹನಿಮೂನ್‌ಗಾಗಿ ಹೇಳಿ ಮಾಡಿಸಿದಂತಹ ಸ್ಥಳ ಇದಾಗಿದೆ. ಇಲ್ಲಿ ನೀವು ಎರವಿಕುಲಂ ರಾಷ್ಟ್ರೀಯ ಉದ್ಯಾನವನ, ಅನಮುಡಿ ಶಿಖರ, ಲಕ್ಕಂ ಜಲಪಾತ, ಮುಟ್ಟುಪೆಟ್ಟಿ ಅಣೆಕಟ್ಟು ಸೇರಿದಂತೆ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಬಹುದು. 35 ಸಾವಿರದಿಂದ 55 ಸಾವಿರ ಬಜೆಟ್‌ನಲ್ಲಿ ಇಲ್ಲಿಗೆ ಟ್ರಿಪ್‌ ಹೋಗಬಹುದು.

ಪಾಂಡಿಚೇರಿ:

ಫ್ರೆಂಚ್‌ ಶೈಲಿಯ ಕಟ್ಟಡ, ಕೆಫೆಗಳು, ರೆಸ್ಟೋರೆಂಟ್‌, ಕಡಲ ತೀರಗಳು, ಸುಂದರ ಚರ್ಚ್‌ಗಳನ್ನು ಹೊಂದಿರುವ ಪಾಂಡಿಚೇರಿ ಅಥವಾ ಪುದುಚೇರಿ ರೋಮ್ಯಾಂಟಿಕ್‌ ಹನಿಮೂನ್‌ ತಾಣಗಳಲ್ಲಿ ಒಂದಾಗಿದೆ. ಈ ತಾಣ ಐರೋಪ್ಯ ನೋಟದ ಆಕರ್ಷಣೆಗೆ ಹೆಸರುವಾಸಿಯಾದ ತಾಣವಾಗಿದ್ದು, ನವ ದಂಪತಿಗಳು ಇಲ್ಲಿಗೂ ಕಡಿಮೆ ಬಜೆಟ್‌ನಲ್ಲಿ ಹನಿಮೂನ್‌ ಪ್ಲಾನ್‌ ಮಾಡಬಹುದು. 25 ಸಾವಿರ ರೂ. ನಿಂದ 45 ಸಾವಿರ ರೂ. ಬಜೆಟ್‌ನಲ್ಲಿ ಇಲ್ಲಿಗೆ ಪ್ರವಾಸ ಹೋಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ