ಮದುವೆಯಾದ ಹೊಸತರಲ್ಲಿ ಸಂಬಂಧಿಕರು, ಆತ್ಮೀಯರು ಕೇಳುವ ಪ್ರಶ್ನೆ ಏನಾದರೂ ಸಿಹಿ ಸುದ್ದಿ ಇದೆಯೇ ಎಂದು. ಆ ಕ್ಷಣಕ್ಕೆ ಇಲ್ಲ ಎನ್ನುವ ಉತ್ತರ ನೀಡಿ ಸುಮ್ಮನಾದರೂ ಮಕ್ಕಳ ವಿಷಯದಲ್ಲಿ ಲೇಟ್ ಮಾಡಬಾರದು ಎನ್ನುವ ಸಲಹೆಯೂ ಕೂಡ ಎದುರಾಗುತ್ತದೆ. ಆದರೆ ದಂಪತಿಗಳಿಬ್ಬರೂ ಮಗು ವಿಷಯದಲ್ಲಿ ಯಾರದ್ದೋ ಒತ್ತಾಯಕ್ಕೆ ಮಣಿಯಬಾರದು. ಮಗು ಪಡೆಯುವ ಮೊದಲು ಕೂಡ ತಮ್ಮ ಮುಂದಿನ ಜೀವನದ ಹಾಗೂ ಮಗು ಪಡೆದ ಬಳಿಕ ಇಬ್ಬರ ಜವಾಬ್ದಾರಿಗಳ ಕುರಿತು ಮುಕ್ತವಾಗಿ ಚರ್ಚಿಸುವುದು ಬಹಳ ಮುಖ್ಯವಾಗುತ್ತದೆ.
* ಮಕ್ಕಳನ್ನು ಬೆಳೆಸುವ ಬಗ್ಗೆ ಇಬ್ಬರ ಅಲೋಚನೆ: ದಂಪತಿಗಳು ಮಗುವನ್ನು ಪಡೆಯುವ ಮೊದಲು ಮಗುವನ್ನು ಹೇಗೆ ಬೆಳೆಸುವುದು ಎನ್ನುವುದನ್ನು ಚರ್ಚಿಸುವುದು ಮುಖ್ಯ. ದಂಪತಿಗಳಿಬ್ಬರೂ ತಮ್ಮ ಮಗುವನ್ನು ಹೀಗೆಯೇ ಬೆಳೆಸಬೇಕು ಎಂದುಕೊಂಡಿರಬಹುದು. ಇಬ್ಬರ ಅಲೋಚನೆಗಳು ಬೇರೆ ಬೇರೆಯಾಗಿರಬಹುದು. ಹೀಗಾಗಿ ತಾವು ಪೋಷಕರಾಗುವ ಮುನ್ನ ಈ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಉತ್ತಮ. ಈ ವಿಚಾರದಿಂದಲೇ ಮುಂಬರುವ ದಿನಗಳಲ್ಲಿ ಜಗಳಗಳು ಉಂಟಾಗಬಹುದು. ಅದಲ್ಲದೇ, ಮಕ್ಕಳು ಪಡೆಯುವ ಮೊದಲು ದಂಪತಿಗಳಿಬ್ಬರೂ ಮಾನಸಿಕವಾಗಿ ಸಿದ್ಧರಾಗಲು ಸಹಾಯ ಮಾಡುತ್ತದೆ.
* ಹಣಕಾಸಿನ ಸ್ಥಿತಿಯ ಬಗ್ಗೆ ಚರ್ಚಿಸಿ : ಮಗುವಾದ ಬಳಿಕ ಹಣಕಾಸಿನ ನಿರ್ವಹಣೆ ಸಾಧ್ಯವೇ ಎಂದು ಯೋಚಿಸಿ. ಪೋಷಕರಾದ ಬಳಿಕ ಜವಾಬ್ದಾರಿಗಳು ಹಾಗೂ ಖರ್ಚು ವೆಚ್ಚಗಳು ಹೆಚ್ಚಾಗುತ್ತದೆ. ಅದನ್ನು ನಿಭಾಯಿಸಿಕೊಂಡು ಹೋಗಲು ಆರ್ಥಿಕವಾಗಿ ಸದೃಢರಾಗಿರುವುದು ಮುಖ್ಯ. ಹೀಗಾಗಿ ಮಗುವಿನ ಪ್ರೀತಿ ಕಾಳಜಿ ತೋರಿಸುವುದರ ಜೊತೆಗೆ ಶಿಕ್ಷಣ, ಆರೋಗ್ಯ ರಕ್ಷಣೆ ಹಾಗೂ ಬೇಡಿಕೆಯನ್ನು ಈಡೇರಿಸಲು ಆರ್ಥಿಕವಾಗಿ ಸಶಕ್ತರಾಗಿದ್ದೇವೆ ಎಂದು ಇಬ್ಬರೂ ಯೋಚಿಸಿ ಈ ಬಗ್ಗೆ ಮಾತುಕತೆ ಮಾಡುವುದು ಒಳಿತು.
* ಮಗುವನ್ನು ಬೆಳೆಸುವ ವಿಧಾನ : ದಂಪತಿಗಳಿಬ್ಬರೂ ತಮ್ಮ ಮಗುವಿಗೆ ಯಾವ ಮೌಲ್ಯಗಳನ್ನು ತುಂಬಲು ಬಯಸುತ್ತಾರೆ ಎನ್ನುವ ಬಗ್ಗೆ ಚರ್ಚಿಸುವುದು ಅಗತ್ಯ. ಇಬ್ಬರೂ ಕೂಡ ಬೇರೆ ಬೇರೆ ಸಿದ್ಧಾಂತವನ್ನು ಹೊಂದಿರಬಹುದು. ಹೀಗಾಗಿ ಪರಸ್ಪರರೂ ಮಾತನಾಡಿ ನಮ್ಮ ಮಗುವಿಗೆ ಏನು ಬೇಕು ಏನು ಬೇಡ ಎನ್ನುವುದನ್ನು ಮಾತನಾಡಿಕೊಳ್ಳಿ.
* ಜವಾಬ್ದಾರಿಗಳ ಹಂಚಿಕೆ : ಮಗುವನ್ನು ಹೊಂದುವುದು ದೊಡ್ಡ ವಿಷಯವಲ್ಲ. ಆದರೆ ಮಗುವಿನ ಜವಾಬ್ದಾರಿಗಳನ್ನು ಇಬ್ಬರೂ ಸಮಾನರಾಗಿ ಹೊತ್ತುಕೊಳ್ಳಬೇಕು. ಕೆಲಸಕ್ಕೆ ತೆರಳುವ ಮಹಿಳೆಯಾಗಿದ್ದರೆ ಮಗು ಹುಟ್ಟಿದ ಬಳಿಕ ತನ್ನ ಉದ್ಯೋಗವನ್ನು ಬಿಡಬೇಕಾಗುತ್ತದೆ. ಮಹಿಳೆಯು ಕೆಲವು ಕೆಲಸವನ್ನು ಬದಿಗೊತ್ತಿ ಮಗುವಿನ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಹೀಗಾಗಿ ಇಬ್ಬರಿಗೂ ಜವಾಬ್ದಾರಿಗಳು ಹೆಚ್ಚು. ಯಾವೆಲ್ಲಾ ಜವಾಬ್ದಾರಿಗಳನ್ನು ಹಂಚಿಕೆ ಮಾಡಬಹುದು ಎನ್ನುವ ಬಗ್ಗೆ ದಂಪತಿಗಳಿಬ್ಬರೂ ಮಾತನಾಡುವುದು ಅಗತ್ಯ.
ಇದನ್ನೂ ಓದಿ: ಕರ್ನಾಟಕದ ಸಾಂಪ್ರದಾಯಿಕ ತಿನಿಸು ಈ ನುಚ್ಚಿನುಂಡೆ, ಮಾಡೋದು ಹೇಗೆ?
* ಮಗುವಿನ ಬೆಳವಣಿಗೆಗೆ ಮನೆಯವರ ಬೆಂಬಲ : ಮಗುವನ್ನು ಪಡೆಯಬೇಕೆಂದುಕೊಂಡಿರುವ ದಂಪತಿಗಳಿಬ್ಬರೂ ಇಬ್ಬರ ಮನೆಯಲ್ಲಿ ಬೆಂಬಲ ಹೇಗಿದೆ, ಮಗುವನ್ನು ಬೆಳೆಸಲು ನಿಮ್ಮ ಮನೆಯವರು ಯಾವ ರೀತಿ ಸಹಾಯ ಮಾಡಬಹುದು ಎನ್ನುವುದು ಮುಕ್ತವಾಗಿ ಚರ್ಚಿಸಿ. ಅಥವಾ ಯಾರ ಸಹಾಯವನ್ನು ಪಡೆದುಕೊಳ್ಳುವಿರಿ ಎನ್ನುವ ಬಗ್ಗೆ ಮಾತನಾಡಿಕೊಳ್ಳಿ. ಇಲ್ಲಿ ನಿಮ್ಮ ಮಗುವಿನ ಬೆಳವಣಿಗೆಗೆ ಕುಟುಂಬದವರ ಸಹಕಾರವು ಮುಖ್ಯವಾಗುತ್ತದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ