ಗಂಡ ಎಷ್ಟೇ ಒಳ್ಳೆಯವನಾಗಿದ್ರು ಈ ಸಂದರ್ಭದಲ್ಲಿ ಹೆಣ್ಣಿಗೆ ತಾಯಿ ನೆನಪು ಕಾಡುತ್ತದೆಯಂತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 09, 2024 | 5:14 PM

ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೋಗುವುದೆಂದರೆ ಅಷ್ಟು ಸುಲಭವಲ್ಲ. ಆದರೆ ಮದುವೆಯಾದ ಬಳಿಕ ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ತವರು ಮನೆಗೆ ಅತಿಥಿಯಾಗುತ್ತಾಳೆ. ಆದರೆ ಹೊಸ ಮನೆಯ ಆಚಾರ ವಿಚಾರ ಸಂಪ್ರದಾಯ ಹಾಗೂ ಹೊಸ ಜನರೊಂದಿಗೆ ಅರಿತು ಬಾಳಲು ಹೆಚ್ಚು ಸಮಯ ಬೇಕಾಗುತ್ತದೆ. ಆದರೆ ಗಂಡನ ಮನೆಯಲ್ಲಿರುವ ಹೆಣ್ಣು ಈ ಕೆಲವು ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ನೆನಪು ಮಾಡಿಕೊಳ್ಳುತ್ತಾಳೆ. ಹಾಗಾದ್ರೆ ಆ ಸಂದರ್ಭಗಳ ಕುರಿತಾದ ಕುತೂಹಲಕಾರಿ ಸಂಗತಿ ಇಲ್ಲಿದೆ.

ಗಂಡ ಎಷ್ಟೇ ಒಳ್ಳೆಯವನಾಗಿದ್ರು ಈ ಸಂದರ್ಭದಲ್ಲಿ ಹೆಣ್ಣಿಗೆ ತಾಯಿ ನೆನಪು ಕಾಡುತ್ತದೆಯಂತೆ
ಸಾಂದರ್ಭಿಕ ಚಿತ್ರ
Follow us on

ತಾಯಿ ಪ್ರೀತಿಯೇ ಹಾಗೇ… ಆಕೆ ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತನ್ನ ಮಕ್ಕಳಿಗಾಗಿ ಆಕೆ ಎಂತಹ ಸಾಹಸಕ್ಕೂ ತಯಾರಿರುತ್ತಾಳೆ. ಅದರಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳಿಗೆ ತನ್ನ ತಾಯಿ ಹಾಗೂ ತವರಿನ ಮೇಲೆ ಪ್ರೀತಿಯೂ ಹೆಚ್ಚಾಗುತ್ತದೆ. ಗಂಡ ಎಷ್ಟೇ ಪ್ರೀತಿ ತೋರಿ ಸುಖದ ಸುಪ್ಪತ್ತಿಗೆಯಲ್ಲಿ ಕೂರಿಸಿದರು ಕೆಲವು ಸಂದರ್ಭದಲ್ಲಿ ಹೆಣ್ಣಿಗೆ ತನ್ನ ತಾಯಿಯ ನೆನಪು ಕಾಡುತ್ತದೆ. ಈ ಸಂದರ್ಭದಲ್ಲಿ ಅಮ್ಮನನ್ನು ನೆನೆದು ಒಳಗೊಳಗೇ ಹೆಣ್ಣು ಅಳುತ್ತಾಳೆ.

  • ಅಡುಗೆ ವಿಚಾರ ಬಂದಾಗ ತಾಯಿ ನೆನಪಾಗುತ್ತಾಳೆ : ಅತ್ತೆ ಮನೆಯಲ್ಲಿ ಎಷ್ಟೇ ರುಚಿಕರವಾಗಿರುವ ವಿವಿಧ ಬಗೆಯ ಅಡುಗೆಯಿದ್ದರೂ ಅಮ್ಮನ ಕೈ ರುಚಿಯ ಮುಂದೆ ಇದು ಯಾವ ಲೆಕ್ಕ. ಅದಲ್ಲದೇ, ನೀವೇ ಅಡುಗೆ ಮಾಡಿ ಮನೆ ಮಂದಿಗೆಲ್ಲಾ ಬಡಿಸುವಾಗ ಅಮ್ಮನ ಅಡುಗೆ ರುಚಿಯೂ ತವರು ಮನೆಯನ್ನು ನೆನಪಿಸುತ್ತದೆ. ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಅಮ್ಮನಿಗೆ ಬೈಯುತ್ತಿದ್ದದು, ಇಷ್ಟವಿಲ್ಲದ ತಿಂಡಿ ತಿನಿಸು ಮಾಡಿದರೆ ಕೋಪ ಮಾಡಿಕೊಳ್ಳುತ್ತಿದ್ದದ್ದು ನೆನಪಿಗೆ ಬರುತ್ತದೆ. ಆದರೆ ದಿನನಿತ್ಯ ಅಮ್ಮನ ಕೈಯಡುಗೆ ತಿನ್ನಲು ಸಿಗುವುದಿಲ್ಲ ಎನ್ನುವ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
  • ಅಗತ್ಯ ವಸ್ತುಗಳು ಕೈ ಸಿಗದಾಗ : ಗಂಡನ ಮನೆಯಲ್ಲಿ ನಿಮಗೆ ಬೇಕಾದಾಗ ವಸ್ತುಗಳು ಕೈಗೆ ಸಿಗದಾಗ ಮೊದಲು ಅಮ್ಮ ನೆನಪಾಗುತ್ತಾಳೆ. ಅಮ್ಮ ಅದೆಲ್ಲಿ ಇದೆಲ್ಲಿ ಎಂದು ಕೇಳಿದ ತಕ್ಷಣವೇ ಎಲ್ಲವನ್ನು ಕೈಗೆ ಕೊಡುತ್ತಿದ್ದಳು. ಆದರೆ ಇಂದು ನನ್ನ ವಸ್ತುಗಳನ್ನು ನಾನೇ ಹುಡುಕಿಕೊಳ್ಳಬೇಕಾದ, ಪತಿಗೆ ಅಗತ್ಯವಿರುವ ವಸ್ತುಗಳನ್ನು ಕೈ ಸಿಗುವಂತೆ ಇಡಬೇಕಾದ ಸಂದರ್ಭವು ಎದುರಾದಾಗ ತವರಿನಲ್ಲಿರುವ ಅಮ್ಮನ ನೆನಪು ಸದಾ ಕಾಡುತ್ತದೆ.
  • ಅನಾರೋಗ್ಯ ಸಮಸ್ಯೆ ಎದುರಾದಾಗ : ಎಷ್ಟೇ ದೊಡ್ಡವರಾಗಿದ್ದರೂ, ಮದುವೆಯಾಗಿ ಮಕ್ಕಳಿದ್ದರೂ ಅಮ್ಮನಿಗೆ ಯಾವತ್ತೂ ಮಗಳು ಮಗುವೇ ಆಗಿರುತ್ತಾಳೆ. ಆದರೆ ಗಂಡನ ಮನೆ ಸೇರಿದ ಹೆಣ್ಣಿಗೆ ತನ್ನ ತಾಯಿ ನೆನಪಾಗೋದು ಆರೋಗ್ಯವು ಸರಿಯಿಲ್ಲದ ಸಂದರ್ಭದಲ್ಲಿ. ಮದುವೆಗೂ ಮುಂಚೆ ಸ್ವಲ್ಪ ಹುಷಾರಿಲ್ಲ ಎಂದರೆ ಅಮ್ಮನು ಆರೈಕೆ ಹಾಗೂ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ಆದರೆ ಇದೀಗ ಹುಷಾರಿಲ್ಲ ಎಂದು ಸುಮ್ಮನೆ ಮಲಗುವಂತಿಲ್ಲ. ನಮ್ಮ ಮನೆ ಕೆಲಸ ನಾನು ಮಾಡಲೇ ಬೇಕು. ಒಂದೆರಡು ದಿನ ಕಾಲ ತವರಿನಲ್ಲಿ ಉಳಿದು ಬರುವೆ, ಅಮ್ಮನ ಜೊತೆಗೆ ಇರುವೆ ಎನ್ನುವ ಆಲೋಚನೆ ಬಂದರೂ ಕೂಡ, ಮತ್ತೆ ಇದೇ ಮನೆಗೆ ವಾಪಸ್ಸು ಬರಲೇಬೇಕು ಕಟುವಾಸ್ತವವು ಕಣ್ಣ ಮುಂದೆ ಬರುತ್ತದೆ.
  • ಅಲಾರಂ ಸದ್ದಿಗೆ ಎಚ್ಚರವಾದಾಗ : ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಬೆಳಗ್ಗೆ ಬೇಗ ಎದ್ದು ಎಲ್ಲಾ ಕೆಲಸವನ್ನು ಮುಗಿಸಿಕೊಳ್ಳಬೇಕು. ಹೀಗಾಗಿ ಬೆಳಗ್ಗೆ ಬೇಗನೇ ಏಳಲು ಅಲಾರಾಂ ಇಟ್ಟುಕೊಳ್ಳುವ ಪರಿಸ್ಥಿತಿಯೂ ಎಷ್ಟೋ ಹೆಣ್ಣು ಮಕ್ಕಳಾದ್ದಾಗಿರುತ್ತದೆ. ಅಲಾರಂ ಸದ್ದಿಗೆ ಎಚ್ಚರವಾದಾಗ ಹೆಣ್ಣಿಗೆ ತನ್ನ ತವರು ಮನೆ ಹಾಗೂ ತಾಯಿ ನೆನಪಾಗುತ್ತಾಳೆ. ತನ್ನ ತಾಯಿ ನಿದ್ರೆಯಿಂದ ಎಬ್ಬಿಸಲು ಬಂದಾಗ ಇನ್ನೈದು ನಿಮಿಷ ಮಲಗಿರುತ್ತೇನೆ ಎಂದು ಹೇಳಿರುವುದು ಹಾಗೂ ಅಮ್ಮನ ಮನೆಯಲ್ಲಿದ್ದರೆ ಬೆಳಗ್ಗೆ ಎಷ್ಟು ಹೊತ್ತಾದರೂ ಮಗಳು ಮಲಗಲಿ ಎಂದು ಸುಮ್ಮನೆ ಇರುತ್ತಿದ್ದಳು ಎನ್ನುವ ಆಲೋಚನೆಗಳೊಂದಿಗೆ ಅಮ್ಮನ ನೆನಪು ಕಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ