ಸಣ್ಣ ಕಾಳಿನಂತಿರುವ ಈ ಜೀರಿಗೆ ಆರೋಗ್ಯಕ್ಕೆ ಉತ್ತಮ, ಇಲ್ಲಿದೆ ಸರಳ ಮನೆಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 07, 2024 | 5:25 PM

ಭಾರತೀಯ ಅಡುಗೆ ಮನೆಯಲ್ಲಿರುವ ಕೆಲವು ಮಸಾಲೆ ಪದಾರ್ಥಗಳು ಅಡುಗೆಯನ್ನು ರುಚಿಯನ್ನು ಹೆಚ್ಚಿಸುವುದರೊಂದಿಗೆ ರೋಗರುಜಿನಗಳನ್ನು ದೂರ ಮಾಡುವ ಗುಣವನ್ನು ಹೊಂದಿದೆ. ಈ ವಿಚಾರದಲ್ಲಿ ದಿನನಿತ್ಯ ಆಹಾರ ಪದಾರ್ಥಗಳಲ್ಲಿ ಬಳಸುವ ಈ ಜೀರಿಗೆ ಕೂಡ ಹೊರತಾಗಿಲ್ಲ. ನಿತ್ಯ ಅಡುಗೆಯಲ್ಲಿ ಬಳಕೆ ಮಾಡುವ ಮಸಾಲೆ ಪದಾರ್ಥಗಳಲ್ಲಿ ಜೀರಿಗೆಯು ಒಂದು. ಆರೋಗ್ಯವು ಕೈ ಕೊಟ್ಟಾಗ ಈ ಜೀರಿಗೆಯಿಂದ ಔಷಧಿಯನ್ನು ತಯಾರಿಸಿ ಸೇವಿಸುವುದರಿಂದ ಪರಿಣಾಮಕಾರಿಯಾಗಿದೆ.

ಸಣ್ಣ ಕಾಳಿನಂತಿರುವ ಈ ಜೀರಿಗೆ ಆರೋಗ್ಯಕ್ಕೆ ಉತ್ತಮ, ಇಲ್ಲಿದೆ ಸರಳ ಮನೆಮದ್ದು
ಸಾಂದರ್ಭಿಕ ಚಿತ್ರ
Follow us on

ಪ್ರತಿದಿನ ಅಡುಗೆಯಲ್ಲಿ ಈ ಜೀರಿಗೆ ಇದ್ದರೇನೇ ಅಡುಗೆಯು ರುಚಿಕರವಾಗುತ್ತದೆ. ಸಣ್ಣಗೆ ಕಾಳಿನಂತಿರುವ ಈ ಜೀರಿಗೆಯಲ್ಲಿ ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮ್ಯಾಂಗನೀಸ್, ಸತು ಮತ್ತು ಮೆಗ್ನೀಸಿಯಂ, ಫೈಬರ್‍ನಂತಹ ಅನೇಕ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದರ ಆರೋಗ್ಯ ಪ್ರಯೋಜನಗಳನ್ನು ತಿಳಿದವರೇ ಬಲ್ಲರು. ಸದಾ ಲಭ್ಯವಿರುವ ಈ ಜೀರಿಗೆಯಿಂದ ಸಣ್ಣ ಪುಟ್ಟ ಆರೋಗ್ಯ ತೊಂದರೆಗಳನ್ನು ದೂರಮಾಡಿಕೊಳ್ಳಬಹುದಾಗಿದೆ.

ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಜೀರಿಗೆಯಿಂದ ತಯಾರಿಸಬಹುದಾದ ಮನೆಮದ್ದುಗಳು

* ಜೀರಿಗೆ ಕಷಾಯಕ್ಕೆ ಹಾಲು, ಜೇನು ತುಪ್ಪ ಸೇರಿಸಿ ಪ್ರತಿದಿನ ಸೇವಿಸಿದರೆ ಎದೆ ಹಾಲು ಉತ್ಪತ್ನಿಯಾಗುತ್ತದೆ.

* ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಬೆರೆಸಿ ಕುಡಿಯುವುದರಿಂದ ಪಿತ್ತಶಮನವಾಗುತ್ತದೆ.

* ಜೀರಿಗೆ ಮತ್ತು ಶುಂಠಿಯನ್ನು ಕುಟ್ಟಿ ಪುಡಿ ಮಾಡಿ ಒಂದು ಲೋಟದಷ್ಟು ನೀರಿನಲ್ಲಿ ಹಾಕಿ ಕುದಿಸಿ, ಆ ಬಳಿಕ ಲಿಂಬೆರಸ, ಬೆಲ್ಲ ಸೇರಿಸಿ ದಿನಕ್ಕೆ ಮೂರು ಬಾರಿ ಊಟಕ್ಕೆ ಮೊದಲು ಕುಡಿದರೆ ಹೊಟ್ಟೆ ನೋವು ದೂರವಾಗುತ್ತದೆ.

* ಪರಂಗಿ ಕಾಯಿಯ ಹೋಳುಗಳಿಗೆ ಜೀರಿಗೆಪುಡಿ, ಕಾಳು ಮೆಣಸಿನ ಪುಡಿ, ಉಪ್ಪು, ನಿಂಬೆರಸ ಸೇರಿಸಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆಯು ನಿವಾರಣೆಯಾಗುವುದಲ್ಲದೆ, ಜಂತುಹುಳುಗಳು ನಾಶವಾಗುತ್ತದೆ.

* ಜೀರಿಗೆ, ಸಕ್ಕರೆ, ಒಣಶುಂಠಿ ಹಾಗೂ ಅಡಿಗೆ ಉಪ್ಪು ಇವು ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಒಂದು ಲೋಟ ಬಿಸಿ ನೀರಿಗೆ ಹಾಕಬೇಕಿ, ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧ ಪಟ್ಟ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ಜೀರಿಗೆಯನ್ನು ನುಣ್ಣಗೆ ಅರೆದು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟು ಸಮಸ್ಯೆಯು ಕಡಿಮೆಯಾಗುತ್ತದೆ.

* ಜೀರಿಗೆಯನ್ನು ಪುಡಿ ಮಾಡಿ ತೆಂಗಿನ ಕಾಯಿ ಹಾಲಿನಲ್ಲಿ ಬೆರೆಸಿ ಮೈಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆಗಳು ನಿಮ್ಮ ಹತ್ತಿರವು ಸುಳಿವುದಿಲ್ಲ.

* ಜೀರಿಗೆಯನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲುನೋವಿನ ಸಮಸ್ಯೆಗೆ ರಾಮಬಾಣವಾಗಿದೆ. ಈ ಜೀರ್ಣಶಕ್ತಿಯು ಸುಧಾರಿಸುತ್ತದೆ.

ಇದನ್ನೂ ಓದಿ: ಗಾಢ ನಿದ್ದೆಯಲ್ಲಿರುವವರನ್ನು ತಕ್ಷಣ ಎಬ್ಬಿಸುವುದು ಎಷ್ಟು ಅಪಾಯಕಾರಿ ಗೊತ್ತಾ?

* ಜೀರಿಗೆಯನ್ನು ಪುಡಿ ಮಾಡಿ ಎರಡು ಲೋಟ ನೀರಿಗೆ ಹಾಕಿ ಕುದಿಸಿ ಅರ್ಧ ಲೋಟಕ್ಕಿಳಿದ ಬಳಿಕ ಹಾಲು ಸಕ್ಕರೆ ಸೇರಿಸಿ ಪ್ರತಿದಿನ ಬೆಳಗ್ಗೆ ಕುಡಿದರೆ ಬಾಯಿಹುಣ್ಣು ಶಮನವಾಗುತ್ತದೆ.

* ನೇರಳೆ ಹಣ್ಣನ್ನು ಎರಡು ಹೋಳು ಮಾಡಿ ಅದಕ್ಕೆ ಜೀರಿಗೆ ಪುಡಿ ತುಂಬಿ, ಒಂದು ರಾತ್ರಿ ಇಬ್ಬನಿ ಬೀಳುವ ಜಾಗದಲ್ಲಿಡಬೇಕು. ಮರುದಿನ ಖಾಲಿ ಹೊಟ್ಟೆಯಲ್ಲಿ ಅದರ ರಸವನ್ನು ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.

* ಜೀರಿಗೆ ನೀರನ್ನು ನಿತ್ಯ ಸೇವಿಸುವುದರಿಂದ ದೇಹವನ್ನು ತಂಪಾಗಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ