ಪಕೋಡಾದಂತಹ ಎಣ್ಣೆಯಲ್ಲಿ ಕರಿದ ಖಾದ್ಯಗಳ ಜೊತೆ ಡಿಪ್ ಮಾಡಿ ತಿನ್ನಲು ಸೂಕ್ತವಾದ ಟೊಮೆಟೊ ಪುದಿನ ಚಟ್ನಿಯ ಪಾಕವಿಧಾನವನ್ನು ಚೆಫ್ ಅನಾಹಿತಾ ಧೋಂಡಿ ಅವರು ತಿಳಿಸಿಕೊಟ್ಟಿದ್ದಾರೆ. ಪಕೋಡಾ, ಸಮೋಸ, ಬೋಂಡಾ ಈ ರೀತಿಯ ಎಣ್ಣೆಯಲ್ಲಿ ಕರಿದ ತಿಂಡಿಗಳು ಚಟ್ನಿಯೊಂದಿಗೆ ಸವಿಯಲು ಉತ್ತಮವಾಗಿರುತ್ತವೆ. ಚಟ್ನಿಯೊಂದಿಗೆ ಇವುಗಳನ್ನು ಬೆರೆಸಿ ತಿನ್ನುವುದರಿಂದ ಆ ತಿನಿಸುಗಳ ರುಚಿ ದುಪ್ಪಟ್ಟಾಗುತ್ತವೆ. ತಿಂಡಿ ಮಾತ್ರವಲ್ಲದೆ, ಊಟದ ಸಮಯದಲ್ಲೂ ಈ ಚಟ್ನಿಯನ್ನು ಬಡಿಸುವುದು ಭಾರತೀಯ ಪಾಕಪದ್ಧತಿಯ ಸಂಸ್ಕೃತಿಯಾಗಿದೆ. ಹಬ್ಬದ ಸಮಯದಲ್ಲಿ ವಿವಿಧ ಭಕ್ಷ್ಯಗಳ ಜೊತೆಗೆ ಚಟ್ನಿಯನ್ನು ಕೂಡಾ ತಯಾರಿಸುತ್ತಾರೆ.
ನಮ್ಮ ದೇಶಿಯ ಪದ್ಧತಿಯಂತೆ ವಿವಿಧ ರೀತಿಯ ಚಟ್ನಿಗಳನ್ನು ನಾವು ಕಾಣಬಹುದು. ಸೊಪ್ಪುಗಳು, ಕಾಳುಗಳಿಂದ ವಿವಿಧ ಬಗೆಯ ಚಟ್ನಿಗಳನ್ನು ತಯಾರಿಸುತ್ತಾರೆ. ಇವುಗಳ ರುಚಿಯು ಕೂಡಾ ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಕಾಯಿ ಚಟ್ನಿಯು ದೋಸೆ, ಇಡ್ಲಿಯೊಂದಿಗೆ ಸವಿಯಲು ಉತ್ತಮವಾಗಿರುತ್ತವೆ. ಇನ್ನು ಕೆಲವು ಗ್ರೀನ್ ಚಟ್ನಿಗಳು ಪಕೋಡಾಗಳಂತಹ ಎಣ್ಣೆಯಲ್ಲಿ ಕರಿದ ತಿಂಡಿಯ ಜೊತೆ ಸವಿಯಲು ಉತ್ತಮವಾಗಿರುತ್ತವೆ. ಪಕೋಡಾಗಳನ್ನು ಡೀಪ್ ಫ್ರೆ ಮಾಡಲಾಗಿರುತ್ತದೆ. ಅದನ್ನು ಮಸಾಲೆಯುಕ್ತ ಚಟ್ನಿಯೊಂದಿಗೆ ಸೇವಿಸಿದಾಗ ಅದರ ರುಚಿ ಹೆಚ್ಚಾಗುತ್ತದೆ. ಮತ್ತು ಈ ಚಟ್ನಿ ಜೀರ್ಣಕ್ರಿಯೆಗೂ ಸಹಕರಿಸುತ್ತವೆ.
ಇದೇ ರೀತಿಯ ಆರೋಗ್ಯಕರವಾದ ಚಟ್ನಿಯ ಪಾಕವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಟೊಮೆಟೋ-ಪುದೀನ-ಕೊತ್ತಂಬರಿ ಸೊಪ್ಪಿನ ಗ್ರೀನ್‌ಚಟ್ನಿ ಪಾಕವಿಧಾನವನ್ನು ಚೆಫ್ ಅನಾಹಿತಾ ಧೋಂಡಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಖರ, ಸಿಹಿಯಾದ ಮಸಾಲೆಯುಕ್ತ ರುಚಿಯನ್ನು ನೀಡುವ ಚಟ್ನಿಯು ಪಕೋಡಾದೊಂದಿಗೆ ಸವಿಯಲು ಉತ್ತಮವಾಗಿರುತ್ತದೆ.
ಇದನ್ನೂ ಓದಿ: Mug Cake Recipe: ಕೇವಲ 2 ನಿಮಿಷಗಳಲ್ಲಿ ಚಾಕೊಲೇಟ್ ಮಗ್ ಕೇಕ್ ತಯಾರಿಸಿ
ಬೇಕಾಗುವ ಪದಾರ್ಥಗಳು: ಈರುಳ್ಳಿ-1, ಟೊಮೆಟೊ-1, ಹಸಿಮೆಣಸಿನಕಾಯಿ-2, ಬೆಳ್ಳುಳ್ಳಿ ಎಸಳು 4-5, ಸಣ್ಣ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, 6 ತುಂಡು ಐಸ್‌ಕ್ಯೂಬ್, ಜೀರಿಗೆ ಪುಡಿ-1 ಚಮಚ, ಕೊತ್ತಂಬರಿ ಸೊಪ್ಪು 1 ಕಪ್, ಪುದೀನಾ ಸೊಪ್ಪು 1/2 ಕಪ್, ಅರ್ಧ ನಿಂಬೆ.
ಮೊದಲಿಗೆ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ಶುಂಠಿ, ಉಪ್ಪು ಮತ್ತು ಜೀರಿಗೆ ಪುಡಿ ಹಾಗೂ ಐಸ್ ಕ್ಯೂಬ್ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಇನ್ನೊಂದು ಬಾರಿ ಮಿಕ್ಸಿಜಾರ್‌ನಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿ ಅದಕ್ಕೆ ನಿಂಬೆ ರಸವನ್ನೂ ಸೇರಿಸಿ ರುಬ್ಬಿಕೊಳ್ಳಿ. ತಯಾರಾದ ಚಟ್ನಿ ಮಿಶ್ರಣವನ್ನು ರೆಫ್ರಿಜರೆಟರ್‌ನಲ್ಲಿ ಸಂಗ್ರಹಿಸಿಡಿ. ಐಸ್ ಸೇರಿಸುವುದರಿಂದ ಚಟ್ನಿಗೆ ಒಳ್ಳೆಯ ಬಣ್ಣ ಮತ್ತು ರುಚಿ ದೊರೆಯುತ್ತದೆ ಎಂದು ಚೆಫ್ ಹೇಳುತ್ತಾರೆ.
Published On - 6:44 pm, Wed, 8 March 23