ಸಾಂದರ್ಭಿಕ ಚಿತ್ರ
ಭಾರತೀಯರು ಅಡುಗೆಗೆ ಬಳಸುವ ಸಾಮಗ್ರಿಗಳಲ್ಲಿ ಅರಶಿನ ಕೂಡ ಒಂದು. ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಫಂಗಲ್ ನಂತಹ ಹಲವು ಔಷಧೀಯ ಗುಣ ಹೊಂದಿರುವ ಅರಶಿನದಲ್ಲಿ ಕಲಬೆರಕೆಯನ್ನು ಕಾಣಬಹುದು. ಈ ಕಲಬೆರಕೆಯುಕ್ತ ಅರಶಿನವನ್ನು ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮಾರುಕಟ್ಟೆಯಿಂದ ತಂದ ಅರಶಿನ ಅಸಲಿಯೇ, ನಕಲಿಯೇ ಎಂದು ಪತ್ತೆಹಚ್ಚಲು ಈ ಕೆಲವು ವಿಧಾನಗಳನ್ನು ಅನುಸರಿಸಬಹುದು.
- ಅರಿಶಿನವು ಅಸಲಿಯೇ ನಕಲಿಯೇ ಎಂದು ಬಣ್ಣಗಳ ಮೂಲಕ ಪರೀಕ್ಷಿಸಬಹುದು. ಶುದ್ಧ ಅರಿಶಿನವು ಸಾಮಾನ್ಯವಾಗಿ ಚಿನ್ನದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಅರಶಿನದ ಬಣ್ಣವು ಮಸುಕಾಗಿದ್ದು, ಮಂದ ಹಳದಿ ಬಣ್ಣದಲ್ಲಿದ್ದರೆ ಅದು ನಕಲಿ ಎಂದರ್ಥ.
- ಒಂದು ಚಿಟಿಕೆ ಅರಿಶಿನ ಪುಡಿಯನ್ನು ಅಂಗೈಯಲ್ಲಿ ಹೆಬ್ಬೆರಳಿನಿಂದ ಉಜ್ಜಿಕೊಳ್ಳಿ. ಅರಿಶಿನವು ಶುದ್ಧವಾಗಿದ್ದರೆ, ಕೈಯಲ್ಲಿ ಹಳದಿ ಬಣ್ಣವು ಉಳಿಯುತ್ತದೆ ಹಾಗೂ ಕೈಗೆ ಅರಶಿನವು ಅಂಟಿಕೊಳ್ಳುತ್ತದೆ. ಅರಶಿನವು ಕಲಬೆರಕೆಯಾಗಿದ್ದರೆ ಬಣ್ಣ ಬಿಡುವುದಿಲ್ಲ, ಪುಡಿಯು ಕೈಯಿಂದ ಉದುರಿ ಹೋಗುತ್ತದೆ.
- ಒಂದು ಚಮಚ ಅರಿಶಿನವನ್ನು ಒಂದು ಲೋಟ ನೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಕರಗಿದ ಬಳಿಕ ತಳಭಾಗದಲ್ಲಿ ಅರಿಶಿನದ ಕಣಗಳು ಉಳಿದುಕೊಂಡಿದ್ದರೆ, ಅದು ನಕಲಿ ಎಂದರ್ಥ. ಕಲಬೆರಕೆ ರಹಿತ ಅರಿಶಿನವಾಗಿದ್ದರೆ ನೀರಿನಲ್ಲಿ ಕರಗುವುದಿಲ್ಲ, ಬದಲಾಗಿ ನೀರಿನಲ್ಲಿ ತೇಲುತ್ತದೆ.
- ಅರಶಿನ ಅಸಲಿಯೇ ನಕಲಿಯೇ ಎಂದು ಗುರುತಿಸಲು ಸ್ವಲ್ಪ ಹೈಡ್ರೋಕ್ಲೋರಿಕ್ ಆಮ್ಲವನ್ನು ಬೆರೆಸಿ ಅರಶಿನವನ್ನು ನೀರಿಗೆ ಹಾಕಬೇಕು. ಆ ವೇಳೆಯಲ್ಲಿ ಅರಿಶಿನದ ಬಣ್ಣವು ನೀಲಿ, ನೇರಳೆ, ಗುಲಾಬಿ ಬಣ್ಣಕ್ಕೆ ತಿರುಗಿದರೆ, ಅರಶಿನ ಶುದ್ಧವಾಗಿಲ್ಲ ಎಂದು ಅರ್ಥ ಮಾಡಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ