ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಈ ಮೂರಕ್ಷರಕ್ಕಾಗಿಯೇ ಹೋರಾಡುತ್ತಾನೆ. ಯಶಸ್ಸು ಸಿಕ್ಕಿ ಬಿಟ್ಟರೆ ಈ ವ್ಯಕ್ತಿಯನ್ನು ಪ್ರಪಂಚದಲ್ಲಿ ಹಿಡಿಯಲೂ ಸಾಧ್ಯವೇ ಇಲ್ಲ. ಆದರೆ ಈ ಯಶಸ್ಸಿಗಾಗಿ ಒಂದಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ. ನಮಗೆ ನಾವೇ ಧೈರ್ಯ ಹಾಗೂ ಬೆಂಬಲವನ್ನು ನೀಡದೇ ಇದ್ದರೆ ಯಶಸ್ಸಿನ ದಾರಿ ಕಷ್ಟವಾಗಿರುತ್ತದೆ. ಅದಲ್ಲದೇ, ವಿದುರನು ಗುರಿ ಸಾಧಿಸಲು ಪ್ರಯತ್ನ ಮಾಡುವುದರೊಂದಿಗೆ ಈ ಕೆಲವು ವಿಷಯಗಳಿಂದ ದೂರವಿರಬೇಕು ಎಂದು ಎಚ್ಚರಿಸಿದ್ದಾನೆ.
* ಸೋಮಾರಿತನ : ಜೀವನದಲ್ಲಿ ಯಶಸ್ಸು ನಿಮ್ಮದಾಗಬೇಕೆಂದರೆ ಸೋಮಾರಿತನದಿಂದ ದೂರವಿರಿ ಎನ್ನುತ್ತಾನೆ ವಿದುರ. ಈ ಗುಣವನ್ನು ಹೊಂದಿರುವ ವ್ಯಕ್ತಿಯು ತಾನು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಯಾವುದೇ ಕೆಲಸವಿದ್ದರೂ ನಾಳೆ ಮಾಡುವ ಎನ್ನುವ ಮನೋಭಾವವಿದ್ದರೆ ಆ ಕೆಲಸವು ಪೂರ್ಣಗೊಳ್ಳುವುದಿಲ್ಲ. ಅಂತಹ ವ್ಯಕ್ತಿಗಳು ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸುವುದಿಲ್ಲ. ಜೀವನದಲ್ಲಿ ಯಶಸ್ಸು ನಿಮ್ಮದಾಗಲು ಅಲಸ್ಯತನ ಹಾಗೂ ಸೋಮಾರಿತನದಿಂದ ದೂರವಿರುವುದು ಉತ್ತಮ.
* ದೇವರ ಮೇಲೆ ಅವಲಂಬಿತರಾಗಿರುವುದು : ಕೆಲವರಿಗೆ ಏನೇ ಆದರೂ ಕೂಡ ದೇವರಿದ್ದಾನೆ ಎನ್ನುವ ಭಾವನೆಯಿರುತ್ತದೆ. ತಾನು ಯಾರಿಗೆ ಸಹಾಯ ಮಾಡುತ್ತಾನೆಯೋ, ನನಗೂ ಆ ದೇವರು ಸಹಾಯ ಮಾಡುತ್ತಾನೆ ಎಂದೇ ಬದುಕುತ್ತಿರುತ್ತಾರೆ. ದೇವರನ್ನೇ ನಂಬಿಕೊಂಡು ಬದುಕುವ ವ್ಯಕ್ತಿಗಳಿಗೆ ಸಮಸ್ಯೆ ತಪ್ಪಿದ್ದಲ್ಲ. ಎಲ್ಲವನ್ನು ದೇವರು ಮಾಡುತ್ತಾನೆ ಎನ್ನುವುದು ತಪ್ಪು. ಹೀಗಾಗಿ ವಿದುರನು ಹೇಳುವಂತೆ ಒಬ್ಬ ವ್ಯಕ್ತಿಯು ದೇವರಲ್ಲಿ ನಂಬಿಕೆ ಇಟ್ಟುಕೊಂಡಿರಬೇಕು. ಆ ನಂಬಿಕೆಯೊಂದಿಗೆ ಕೆಲಸ ಮಾಡುವ ಮನಸ್ಸು ಹಾಗೂ ಪ್ರಯತ್ನಗಳು ಸದಾ ಇರಬೇಕು. ದೇವರ ಮೇಲೆ ಭಾರ ಹಾಕಿ ಕುಳಿತುಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ..
* ಅತಿಯಾದ ಬಯಕೆ : ಕೆಲವರಲ್ಲಿ ಅತಿಯಾದ ಬಯಕೆಯಿರುತ್ತದೆ. ಎಲ್ಲವೂ ಬೇಕು ಎನ್ನುವ ಆಸೆಯಿಂದ ಅಡ್ಡ ದಾರಿಯಲ್ಲಿ ಹೋಗುವುದೇ ಹೆಚ್ಚು. ಆದರೆ ವಿದುರನು ಹೇಳುವಂತೆ, ಕಡಿಮೆ ಪ್ರಯತ್ನದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸಲು ಬಯಸುವವರು ಕಠಿಣ ಪರಿಶ್ರಮದೆಡೆಗೆ ಗಮನ ಕೊಡುವುದಿಲ್ಲ. ಈ ವ್ಯಕ್ತಿಗಳು ಎಂದಿಗೂ ತಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಲಾರರು. ಹೆಚ್ಚಿನ ಸಂದರ್ಭದಲ್ಲಿ ಅಡ್ಡ ದಾರಿಯಿಂದಲೇ ಯಶಸ್ಸು ಸಾಧಿಸುವ ಕಾರಣ ಈ ಜನರಿಗೆ ಸಮಸ್ಯೆಗಳು ಎದುರಾಗುವುದೇ ಹೆಚ್ಚು. ಹೀಗಾಗಿ ಅತಿಯಾದ ಬಯಕೆ ಬಿಟ್ಟರೆ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದಿದ್ದಾನೆ ವಿದುರ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ