ಹೆಚ್ಚಿನ ಜನರನ್ನು ಕಾಡುವ ಒಂದು ಸಮಸ್ಯೆಯೆಂದರೆ ಅದು ಕೂದಲು ಉದುರುವಿಕೆ. ಕಳಪೆ ಮಟ್ಟದ ಆಹಾರ ಸೇವನೆ, ಅನಾರೋಗ್ಯಕರ ಜೀವನಶೈಲಿಯ ಕಾರಣದಿಂದಾಗಿ ಮಾತ್ರ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುವುದಲ್ಲದೆ, ರಾಸಾಯನಿಕಯುಕ್ತ ಶಾಂಪೂಗಳ ಬಳಕೆಯಿಂದ ಕೂದಲಿಗೆ ಹಲವು ರೀತಿಯ ಹಾನಿಯುಂಟಾಗುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಅನೇಕ ಬಗೆಯ ದುಬಾರಿ ಬೆಲೆಯ ಶಾಂಪೂಗಳು ಮಾರುಕಟ್ಟೆಯಲ್ಲಿ ಲಭ್ಯವಿರಬಹುದು. ಆದರೆ ಅವುಗಳು ಕೂದಲಿಗೆ ರಕ್ಷಣೆ ನೀಡುವ ಬದಲು ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ. ಏಕೆಂದರೆ ಈ ಶಾಂಪೂಗಳು ಸೋಡಿಯಂ ಲಾರಿಲ್ ಸಲ್ಫೇಟ್ ಮತ್ತು ಸೋಡಿಯಂ ಲಾರಿಲ್ ಈಥರ್ ಸಾಲ್ಫೆಟ್ ಸೇರಿದಂತೆ ಹಲವು ಬಗೆಯ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದು ಕೂದಲು ಉದುರುವಿಕೆಯ ಸಮಸ್ಯೆಯ ಜೊತೆಗೆ ಮತ್ತಷ್ಟು ಕೂದಲಿನ ಹಾನಿಗೆ ಕಾರಣವಾಗುತ್ತದೆ. ಹೀಗಿರುವಾಗ ಶಾಂಪೂಗಳ ಪರ್ಯಾಯವಾಗಿ ಹಿಂದಿನ ಕಾಲದಲ್ಲಿ ಕೂದಲು ತೊಳೆಯಲು ಉಪಯೋಗಿಸುತ್ತಿದ್ದ ನೈಸರ್ಗಿಕ ವಸ್ತುಗಳನ್ನು ನೀವೂ ಕೂಡ ಬಳಸಬಹುದು. ಅವುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ನಿಂಬೆ ರಸವು ನೆತ್ತಿಯ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ. ಜೊತೆಗೆ ನಿಂಬೆ ಹಣ್ಣಿನ ಸಂಕೋಚನ ಗುಣಲಕ್ಷಣಗಳು ನಿಮ್ಮ ನೆತ್ತಿಯಿಂದ ಹೆಚ್ಚುವರಿ ಕೊಳೆ ಮತು ಜಿಡ್ಡಿನಾಂಶವನ್ನು ತೊಡೆದುಹಾಕಲು ಸಹಕಾರಿಯಾಗಿದೆ ಆದ್ದರಿಂದ ಸೊಂಪಾದ ಹೊಳಪಾದ ಕೂದಲನ್ನು ಪಡೆಯಬೇಕೆಂದಿದ್ದರೆ, ಶಾಂಪೂ ಬದಲಿಗೆ ನಿಂಬೆ ರಸವನ್ನು ಬಳಸಿ ಕೂದಲನ್ನು ತೊಳೆಯಿರಿ. ನೀವು ನಿಂಬೆ ರಸವನ್ನು ನೇರವಾಗಿ ನೆತ್ತಿ ಮತ್ತು ಕೂದಲಿಗೆ ಅನ್ವಯಿಸಿ, ಸ್ವಲ್ಪ ಹೊತ್ತಿನ ಬಳಿಕ ನೀರಿನಿಂದ ತೊಳೆಯಿರಿ.
ಇದು ಕೂಡಾ ಅದ್ಭುತ ಶಾಂಪೂ ಪರ್ಯಾಯವಾಗಿದೆ. ಗೋರಂಟಿ ಪುಡಿಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವ ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿದೆ. ಆರೋಗ್ಯಕರ ಕೂದಲನ್ನು ಪಡೆಯಬೇಕೆಂದರೆ ಪ್ರತಿ 6 ವಾರಕ್ಕೊಮ್ಮ ಗೋರಂಟಿ ಕೂದಲಿಗೆ ಅನ್ವಯಿಸಿ. ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಗೋರಂಟಿ ಪುಡಿಯನ್ನು ಮಿಶ್ರಣ ಮಾಡಿ, ಅದನ್ನು ತಣ್ಣಗಾಗಲು ಬಿಡಿ ಮತ್ತು ಅದನ್ನು ಕೂದಲಿಗೆ ಅನ್ವಯಿಸಿ. ಬಳಿಕ ನೀರಿನಿಂದ ಕೂದಲನ್ನು ತೊಳೆಯಿರಿ.
ಬೇವು ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಾಂಪೂಗೆ ಇದು ಅತ್ಯುತ್ತಮ ಪರ್ಯಾಯವಾಗಿದೆ. ಕೆಲವು ಎಸಲು ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಆ ನೀರನ್ನು ಸೋಸಿಕೊಳ್ಳಿ. ಅದನ್ನು ತಣ್ಣಗಾಗಿಸಿ ನಂತರ ಅದರಿಂದ ಕೂದಲನ್ನು ತೊಳೆದುಕೊಳ್ಳಿ. ಈ ಒಂದು ಶಾಂಪೂ ಪರ್ಯಾಯವು ನಿಮ್ಮ ಕೂದಲು ಮತ್ತು ನೆತ್ತಿಯನ್ನು ಸ್ವಚ್ಛಗೊಳಿಸವುದು ಮಾತ್ರವಲ್ಲದೆ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಇದನ್ನೂ ಓದಿ: ನೈಲ್ ಪಾಲಿಶ್ ಹಾಗೂ ಶಾಂಪೂವಿಂದಲೂ ಮಹಿಳೆಯರು ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ
ಆಲೋವೆರಾವೂ ತ್ವಚೆಗೆ ಮಾತ್ರವಲ್ಲದೆ ಕೂದಲಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಸರಳವಾಗಿ ಅಲೋವೆರಾ ತಿರುಳಿನಿಂದ ಅದರ ಜೆಲ್ ತೆಗೆದು ಕೂದಲಿಗೆ ಅನ್ವಯಿಸಿ ನಂತರ 15 ರಿಂದ 20 ನಿಮಿಷಗಳ ಬಳಿಕ ಅದನ್ನು ನೀರಿನಿಂದ ಸ್ವಚ್ಛಗೊಳಿಸಿ. ಇದು ಕೂದಲಿನ ಧೂಳು ಮತ್ತು ಕಲ್ಮಶಗಳನ್ನು ತೆಗೆದು ಹಾಕುತ್ತದೆ ಮತ್ತು ನೆತ್ತಿಯಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ. ಅಲ್ಲದೆ ಅಲೋವೆರಾ ಜೆಲ್ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಇದು ನೆತ್ತಿಯಿಂದ ಸತ್ತ ಚರ್ಮವವನ್ನು ತೆಗೆದುಹಾಕಲು ಸಹಕಾರಿಯಾಗಿದೆ.
ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ನೆಲ್ಲಿಕಾಯಿಯು ಪ್ರಮುಖ ಪಾತ್ರ ವಹಿಸುತ್ತದೆ. ಮಿಟಮಿನ್ ಎ, ಇ, ಸಿ ಯಂತಹ ಅಗತ್ಯ ಜೀವಸತ್ವಗಳು ನೆಲ್ಲಿಕಾಯಿಯಲ್ಲಿ ಕಂಡುಬರುತ್ತದೆ. ಜೊತೆಗೆ ಇದು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿಂದ ಸಮೃದ್ಧವಾಗಿದೆ. ಹಾಗೂ ಅಗತ್ಯವಾದ ಕೊಬ್ಬಿನಾಮ್ಲಗಳು ಇದರಲ್ಲಿದೆ ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: