ಪ್ರತಿ ಮನುಷ್ಯ ದುಡಿಯುವುದು ನಾಳೆಯ ಸುಂದರ ಬದುಕಿಗಾಗಿ. ಹಲವು ಕನಸುಗಳನ್ನು ಪೋಷಿಸುತ್ತಾ, ಮುಂದೊಂದು ದಿನ ಅಂದುಕೊಂಡದ್ದಕ್ಕಿಂತ ಉತ್ತಮ ಬದುಕು ನಮ್ಮದಾಗಲಿದೆ ಎಂಬ ಆಸೆಯಿಂದ ಎಲ್ಲರೂ ದುಡಿಯುತ್ತಾರೆ. ಇದು ನಾಳಿನ ಮಾತಾಯಿತು. ಇಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುವುದೂ ಇದೇ ದುಡಿಮೆಯ ಮೂಲಕ. ಆದರೆ ಎಷ್ಟೋ ಬಾರಿ, ನಮ್ಮ ಇಂದಿನ ಖರ್ಚನ್ನು ಮೀರಿ ನಾಳೆಗೆ ಹಣ ಉಳಿಯುವುದೇ ಇಲ್ಲ. ಹೇಗೆಲ್ಲಾ ಯೋಚಿಸಿದರೂ ದುಡ್ಡು (Money) ಎಲ್ಲಿ ಪೋಲಾಗುತ್ತಿದೆ ಎನ್ನುವುದು ಅರಿವಿಗೆ ಬರುವುದಿಲ್ಲ. ಇದೇ ಕಾರಣದಿಂದ ಎಷ್ಟೋ ಜನರಿಗೆ ನಾಳೆಯ ಕನಸುಗಳಿಗೆ ನೀರುಣಿಸಲು ಉಳಿತಾಯ ಮಾಡುವುದು ಕಷ್ಟವಾಗುತ್ತಿರುತ್ತದೆ. ಆದರೆ ಉಳಿತಾಯವೆನ್ನುವುದು ಒಂದೇ ಬಾರಿ ದೊಡ್ಡ ಮೊತ್ತವನ್ನು ತೆಗೆದಿಡುವುದಲ್ಲ. ನಮ್ಮ ಪ್ರತಿದಿನದ ಕೆಲಸಗಳಲ್ಲಿ ಆರ್ಥಿಕ ಶಿಸ್ತನ್ನು ಅಳವಡಿಸಿಕೊಂಡು, ಒಂದೊಂದೇ ರೂಪಾಯಿ ಪೇರಿಸುತ್ತಾ ಹೋಗುವುದು. ಇದು ಒಂದು ದಿನ ಅಥವಾ ವಾರಕ್ಕೆ ಸಣ್ಣ ಮೊತ್ತವೇ ಆಗಿರಬಹುದು. ಆದರೆ ದೀರ್ಘಾವಧಿಯಲ್ಲಿ ಬಹಳ ದೊಡ್ಡ ಮೊತ್ತವೇ ಹೌದು. ಹಾಗಾದರೆ ಎಲ್ಲರೂ ಸಾಮಾನ್ಯವಾಗಿ ಎಲ್ಲಿ ದುಂದುವೆಚ್ಚ ಮಾಡುತ್ತಾರೆ? ಜನರನ್ನು ಮತ್ತಷ್ಟು ಬಡವರನ್ನಾಗಿಸುವ ಹವ್ಯಾಸಗಳು ಯಾವುವು? ಯಾವೆಲ್ಲಾ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳಬಹುದು? ಇಲ್ಲಿದೆ ನೋಡಿ.
1.ಅನಗತ್ಯ ಖರೀದಿ:
ಇ-ಕಾಮರ್ಸ್ ತಾಣಗಳು, ಯುಪಿಐ ಪದ್ಧತಿ ಮೊದಲಾದ ಕಾರಣಗಳಿಂದ ಜನರಿಗೆ ಹಣವನ್ನು ಖರ್ಚು ಮಾಡುವುದು ಸುಲಭ ಸಾಧ್ಯವಾಗಿದೆ. ಇದರ ಉಪಯೋಗಗಳು ಇದ್ದರೂ ಕೂಡ, ಅವುಗಳ ಅತಿಬಳಕೆ ದುಂದುವೆಚ್ಚಕ್ಕೆ ಕಾರಣವಾಗುತ್ತದೆ. ಜತೆಗೆ ಆನ್ಲೈನ್ ಪಾವತಿಯಿಂದ ಹಣ ಖರ್ಚಾಗುವುದು ಕೂಡ ಅಷ್ಟಾಗಿ ಜನರ ಗಮನಕ್ಕೆ ಬರುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಅನಗತ್ಯ ಖರೀದಿಗಳಿಗೆ ಕಡಿವಾಣ ಹಾಕಿ.
2. ದೈನಂದಿನ ಸಾಮಗ್ರಿಗಳ ಕೊಳ್ಳುವಿಕೆ:
ಹಲವರಿಗೆ ಅಂಗಡಿ ನೋಡಿದಾಗೆಲ್ಲಾ ಏನಾದರೂ ಕೊಳ್ಳುವ ಹವ್ಯಾಸವಿರುತ್ತದೆ. ದೈನಂದಿನ ಬಳಕೆಯ ವಸ್ತುಗಳೇ ಆಗಿರಲಿ, ಸಾಧ್ಯವಾದಷ್ಟು ಅಗತ್ಯವಿದೆಯೇ ಎನ್ನುವುದನ್ನು ಯೋಚಿಸಿ ಖರೀದಿಸಿ. ಜತೆಗೆ ಎಲ್ಲಾ ಸಾಮಗ್ರಿಗಳು ಒಂದೇ ಕಡೆ, ಕಡಿಮೆ ಮೊತ್ತಕ್ಕೆ ಸಿಗುವಲ್ಲಿಯೇ ಖರೀದಿಸಿ. ಇದರಿಂದ ಖರ್ಚೂ ಕಡಿಮೆ ಮತ್ತು ನಿಮಗೆ ಖರ್ಚಿನ ಲೆಕ್ಕಗಳು ಸರಿಯಾಗಿ ತಿಳಿದಿರುತ್ತದೆ.
3. ರಿಯಾಯಿತಿ ದರ ಮಾರಾಟ ತಪ್ಪಿಸಿಕೊಳ್ಳಬೇಡಿ:
ನಿಮಗೆ ಯಾವಾಗಲೂ ಕೊಳ್ಳುವ ಹವ್ಯಾಸವಿರುತ್ತದೆ. ಆದರೆ ರಿಯಾಯಿತಿ ದರದಲ್ಲಿ ಮಾರಾಟವಿರುವ ಸಂದರ್ಭದಲ್ಲಿ ಅವುಗಳನ್ನು ತಪ್ಪಿಸಿಕೊಳ್ಳುತ್ತೀರಿ ಎಂದಾದರೆ ನೀವು ಹಣವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದೇ ಅರ್ಥ. ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಅಥವಾ ಕೊಳ್ಳಬೇಕಾಗಿರುವ ವಸ್ತುಗಳನ್ನು ಪಟ್ಟಿ ಮಾಡಿಟ್ಟು ರಿಯಾಯಿತಿ ಮಾರಾಟದ ಸಂದರ್ಭದಲ್ಲಿ ಎಲ್ಲವನ್ನೂ ಒಟ್ಟಿಗೆ ಖರೀದಿಸಿದರೆ ದೊಡ್ಡ ಮೊತ್ತದ ಹಣ ಉಳಿತಾಯವಾಗುತ್ತದೆ.
4. ವಾಹನವನ್ನು ಕಡಿಮೆ ಚಲಾಯಿಸಿ; ಹೆಚ್ಚು ನಡೆಯಿರಿ:
ಎಲ್ಲರೂ ಅನಿವಾರ್ಯ ಕಾರಣಗಳಿಂದ ವಾಹನ ಬಳಸುತ್ತಾರೆ. ಅದೇ ಅಭ್ಯಾಸವಾದಂತೆ ನಡೆಯುವಷ್ಟು ದೂರವಿರುವ ಸ್ಥಳಗಳಿಗೂ ವಾಹನದಲ್ಲೇ ಹೋಗುವುದು ಅಭ್ಯಾಸವಾಗುತ್ತದೆ. ಇದರಿಂದ ಅನಗತ್ಯ ಖರ್ಚು. ಸಾಧ್ಯವಾದಷ್ಟು ನಡೆಯಿರಿ. ಇದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿ ಹಾಗೂ ಆರ್ಥಿಕವಾಗಿಯೂ ಜೇಬಿಗೆ ಹೊರೆ ಕಡಿಮೆ.
5. ಹೊರಗೆ ತಿನ್ನುವುದು:
ಸಾಮಾನ್ಯವಾಗಿ ಎಲ್ಲರಿಗೂ ಚಾಟ್ಸ್ ಇಷ್ಟವೇ. ಆದರೆ ದಿನವೂ ಅಥವಾ ಆಗಾಗ ಹೊರಗೆ ತಿನ್ನುವುದರಿಂದ ಜೇಬು ಖಾಲಿಯಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ಅಪರೂಪಕ್ಕೊಮ್ಮೆ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಹೊರಗೆ ತಿನ್ನುವುದನ್ನು ರೂಡಿಸಿಕೊಳ್ಳಿ. ಸಾಧ್ಯವಾದಷ್ಟು ತಿನಿಸುಗಳನ್ನು ಮನೆಯಲ್ಲಿಯೇ ಮಾಡಲು ಪ್ರಯತ್ನಿಸಿ. ಈಗಂತೂ ಆನ್ಲೈನ್ನಲ್ಲಿ ರೆಸಿಪಿಗಳನ್ನು ನೋಡಿ ಕಲಿಯಬಹುದು. ಇದು ಹೊರಗೆ ತಿನ್ನುವುದಕ್ಕಿಂತ ಬಹಳ ಅಗ್ಗ. ಈ ವಿಧಾನದಲ್ಲಿ ಕುಟುಂಬದವರೊಂದಿಗೆ ಸಂತಸದಿಂದ ಸಮಯ ಕಳೆಯುವ ಖುಷಿ ನಿಮಗೆ ಬೋನಸ್!
6. ಆರೋಗ್ಯಕ್ಕೆ ಒಳ್ಳೆಯದಲ್ಲದ ಹವ್ಯಾಸಗಳು:
ಹಣ ಪೋಲಾಗಲು ಪ್ರಮುಖ ಕಾರಣ ದುಶ್ಚಟಗಳು. ಅದರಲ್ಲೂ ಧೂಮಪಾನ ಹಣದೊಂದಿಗೆ ಆರೋಗ್ಯವನ್ನೂ ಕಸಿಯುತ್ತದೆ. ಇದರ ಬಗ್ಗೆ ಜಾಗರೂಕರಾಗಿರಿ. ಹಣವನ್ನು ಬೇರೆಲ್ಲಾ ಕಾರಣಗಳಿಗೆ ಮಿತವಾಗಿ ಬಳಸಿ, ದುಶ್ಚಟಗಳಿಗೆ ತಂದು ಸುರಿಯುವವರೂ ಇರುತ್ತಾರೆ. ಅಂತಹ ಸಾಲಿಗೆ ನೀವು ಸೇರಬೇಡಿ. ಕಾರಣ, ಇಂತಹ ಹವ್ಯಾಸಗಳು ನಿಮ್ಮನ್ನು ಕುಗ್ಗಿಸುತ್ತವೆ. ಬದಲಾಗಿ, ಆರ್ಥಿಕ ಶಿಸ್ತುಗಳನ್ನು ರೂಡಿಸಿಕೊಂಡರೆ ನಿಧಾನವಾಗಿ ನಿಮ್ಮ ಉಳಿತಾಯದಲ್ಲಿ ಏರಿಕೆಯಾಗುವುದನ್ನು ಕಾಣಬಹುದು. ಇದು ನಿಮ್ಮ ಭವಿಷ್ಯಕ್ಕೂ ಸಹಕಾರಿ.
ಇದನ್ನೂ ಓದಿ:
Tax Savings FDs: ತೆರಿಗೆ ಉಳಿತಾಯದ ಎಫ್ಡಿಗೆ ಯಾವ ಬ್ಯಾಂಕ್ನಿಂದ ಉತ್ತಮ ಬಡ್ಡಿ ದರ?
Bengaluru Temples: ಮನಸ್ಸಿಗೆ ನೆಮ್ಮದಿ ನೀಡುವ ಬೆಂಗಳೂರಿನ ಪುರಾತನ ದೇವಾಲಯಗಳು