Bengaluru Temples: ಮನಸ್ಸಿಗೆ ನೆಮ್ಮದಿ ನೀಡುವ ಬೆಂಗಳೂರಿನ ಪುರಾತನ ದೇವಾಲಯಗಳು
ಕ್ರಿ.ಶ. 1537ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾದ ಹಾಗೂ ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ತನದೇ ಆದ ಮಹತ್ವ, ಇತಿಹಾಸ, ಪ್ರಸಿದ್ಧ ತಾಣಗಳಿಂದ ಹೆಸರುವಾಸಿಯಾಗಿದೆ. ಕಬ್ಬನ್ ಪಾರ್ಕ್, ಲಾಲ್ ಬಾಗ್ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು ಉದ್ಯಾನ ನಗರಿ ಎಂದೂ ಪ್ರಸಿದ್ಧವಾಗಿದೆ. ಗಂಗ, ಚೋಳ, ಹೊಯ್ಸಳ, ಮರಾಠರು, ಮುಘಲರು, ಹೈದರ್ ಅಲಿ, ಟಿಪ್ಪು ಸುಲ್ತಾನ್, ಬ್ರಿಟೀಷರು ಆಳ್ವಿಕೆ ನಡೆಸಿದ್ದ ಬೆಂಗಳೂರಿನಲ್ಲಿ ಬೆರಗುಗೊಳಿಸುವ ಅನೇಕ ಪುರಾತನ ದೇವಾಲಯಗಳಿವೆ. ಅವುಗಳ ಪೈಕಿ ಕೆಲ ಐತಿಹಾಸಿಕ ಪುರಾತನ ದೇವಾಲಯಗಳ ಪಟ್ಟಿ ಇಲ್ಲಿದೆ.
Updated on: Feb 21, 2022 | 7:30 AM

top old and historical Temples of Bengaluru

top old and historical Temples of Bengaluru

ಗವಿ ಗಂಗಾಧರೇಶ್ವರ ದೇವಸ್ಥಾನ(Gavi Gangadhareshwara Temple): ಗವಿಪುರಂ ಗುಹಾ ದೇವಾಲಯ ಎಂತಲೂ ಕರೆಯಿಸಿಕೊಳ್ಳುವ ಈ ದೇವಸ್ಥಾನವು ಗವಿಪುರಂನ (ಗುಟ್ಟಹಳ್ಳಿ) ಕೆಂಪೇಗೌಡ ನಗರದಲ್ಲಿದ್ದು ಬಸವನಗುಡಿಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಇದನ್ನು 16ನೇ ಶತಮಾನದಲ್ಲಿ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರು ನಿರ್ಮಿಸಿದ್ದಾರೆ ಎನ್ನಲಾಗಿದೆ. ಹಾಗೂ ಈ ದೇವಾಲಯವು ತ್ರೇತಾ ಯುಗಕ್ಕೂ ಹಿಂದಿನದು ಎನ್ನಲಾಗುತ್ತೆ. ಈ ದೇವಾಲಯದಲ್ಲಿ ಗೌತಮ ಮುನಿ ಶಿವನನ್ನು ಪೂಜಿಸಿದ್ದನಂತೆ. ವಿಶೇಷವೆಂದರೆ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಸೂರ್ಯಾಸ್ತದ ಸೂರ್ಯನ ಕಿರಣಗಳು ಕಿಟಕಿಯನ್ನು ಪ್ರವೇಶಿಸಿ ನಂದಿಯ ಕೊಂಬುಗಳ ನಡುವೆ ಹಾದು ಶಿವಲಿಂಗದ ಮೇಲೆ ಬೀಳುತ್ತದೆ.

ದೊಡ್ಡ ಗಣಪತಿ ದೇವಸ್ಥಾನ(Dodda ganapathi Temple Basavanagudi): ಬಸವನಗುಡಿಯ ಬುಲ್ ಟೆಂಪಲ್ ನಂದಿಗೆ ಸಮರ್ಪಿತವಾಗಿರುವ ಹಾಗು ನಂದಿಯ ಬೃಹತ್ ವಿಗ್ರಹವಿರುವ ಜಗತ್ತಿನ ಏಕಮಾತ್ರ ದೇವಸ್ಥಾನವೆಂದು ನಂಬಲಾಗಿದೆ. ಇನ್ನು ಅದರ ಪಕ್ಕದಲ್ಲೆ ಇರುವ ದೊಡ್ಡ ಗಣಪತಿ ದೇವಸ್ಥಾನವು ಜನಪ್ರಿಯ ದೇವಸ್ಥಾನವಾಗಿದೆ. ಇದನ್ನು ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿದೆ. ಒಮ್ಮೆ ಕೆಂಪೇಗೌಡರು ವಿಹರಿಸುತ್ತಿದ್ದಾಗ ಹಲವು ಬಂಡೆಗಳಲ್ಲಿ ಒಂದು ಬಂಡೆಯು ಗಣಪತಿಯ ಆಕರವನ್ನು ಹೋಲುತ್ತಿದ್ದ ಹಾಗೆ ಕಂಡುಬಂದಿತು. ತಕ್ಷಣವೆ ಅವರು ತಮ್ಮ ಶಿಲ್ಪಿಗಳನ್ನು ಕರೆತಂದು ಅದನ್ನು ಒಂದು ಏಕಶಿಲಾ ಗಣಪತಿಯ ವಿಗ್ರಹದ ಹಾಗೆ ರೂಪಿಸಲು ಸೂಚಿಸಿದರಂತೆ. ಇಲ್ಲಿ ಪ್ರತಿ ವರ್ಷ ಕಡಲೇಕಾಯಿ ಪರೀಷೆ ನಡೆಯುತ್ತದೆ.

ಕಾಡು ಮಲ್ಲೇಶ್ವರ ದೇವಾಲಯ(Kadu Malleshwara Temple): ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯ ಸುಮಾರು ಕ್ರಿ.ಶ 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಾಡು ಮಲ್ಲೇಶ್ವರ ಎಂದೇ ಪ್ರಸಿದ್ಧ. ಇದು ಉದ್ಭವ ಲಿಂಗ. ಇಲ್ಲಿ ಗಣಪತಿ, ಕಾಶಿ ವಿಶ್ವನಾಥ, ಮಹಾ ವಿಷ್ಣು, ಸೂರ್ಯನಾರಾಯಣ, ಆಂಜನೇಯ, ಕಾಲಭೈರವ, ಅರುಣಾಚಲೇಶ್ವರ, ಪಾರ್ವತಿ, ದಕ್ಷಿಣಾಮೂರ್ತಿ, ನವಗ್ರಹ, ಸುಬ್ರಹ್ಮಣ್ಯೇಶ್ವರ, ದುರ್ಗಾ ದೇವತೆಯ ಮೂರ್ತಿಗಳೂ ಇವೆ.

ಧರ್ಮರಾಯಸ್ವಾಮಿ ದೇವಸ್ಥಾನ(Dharmaraya Swamy Temple): ಬೆಂಗಳೂರಿನ ತಿಗಳರಪೇಟೆಯ ಒಟಿಸಿ ರಸ್ತೆಯಲ್ಲಿರುವ ಧರ್ಮರಾಯ ದೇವಸ್ಥಾನವು ಪಾಂಡವರಿಗೆ ಸಮರ್ಪಿಸಲಾದ ದೇವಾಲಯವಾಗಿದೆ. ಇದು ಗಂಗ ಅರಸು ಜನಾಂಗದವರಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುತ್ತೆ. ಪುರಾತತ್ವ ಇಲಾಖೆಯು ಈ ದೇಗುಲವು ಸುಮಾರು 800 ವರ್ಷಗಳಷ್ಟು ಪುರಾತನವಾದುದು ಎಂದು ದಾಖಲಿಸಿದೆ. ಈ ದೇವಸ್ಥಾನದಿಂದ ನಡೆಯುವ ಬೆಂಗಳೂರು ಕರಗವು ಹೆಚ್ಚು ಜನಪ್ರಿಯವಾಗಿದೆ.

ಹಲಸೂರು ಸೋಮೇಶ್ವರ ದೇವಾಲಯ(Halasuru Someshwara Temple): ಬೆಂಗಳೂರಿನ ಹಲಸೂರಿನಲ್ಲಿರುವ ಸೋಮೇಶ್ವರ ದೇವಾಲಯವು ಚೋಳರ ಕಾಲಕ್ಕೆ ಸಂಬಂಧಿಸಿದ ಪುರಾತನ ದೇವಾಲಯಗಳ ಪೈಕಿ ಒಂದಾಗಿದೆ. ಹೊಯ್ಸಳ, ಚೋಳ ಹಾಗು ವಿಜಯನಗರದ ವಾಸ್ತುಶಿಲ್ಪಗಳನ್ನು ಇಲ್ಲಿ ಕಾಣಬಹುದು. ಸೋಮೇಶ್ವರ ಅಥವಾ ಶಿವನಿಗೆ ಸಮರ್ಪಿತವಾದ ಈ ದೇವಾಲಯದಲ್ಲಿ ಬ್ರಹ್ಮ ಹಾಗು ವಿಷ್ಣು ದೇವರನ್ನೂ ಸಹ ಪೂಜಿಸಲಾಗುತ್ತದೆ. ಅದ್ಭುತವಾದ ವಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯದ ರಾಜಗೋಪುರ ಹಾಗು ಧ್ವಜಸ್ಥಂಭಗಳು ನೋಡಲು ಆಕರ್ಷಕವಾಗಿವೆ. ಈ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ.

ಬನಶಂಕರಿ ದೇವಸ್ಥಾನ(Banashankari Temple): ಬೆಂಗಳೂರು ದಕ್ಷಿಣದಲ್ಲಿರುವ ಬನಶಂಕರಿಯಲ್ಲಿ ಬನಶಂಕರಿ ಅಮ್ಮನ ದೇವಸ್ಥಾನವಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಬನಶಂಕರಿ ಎಂಬ ಹೆಸರು ಬಂದಿದೆ. ಸೊಮಣ್ಯ ಶೆಟ್ಟಿ ಎಂಬ ಬನಶಂಕರಿ ಅಮ್ಮನ ಭಕ್ತರು ಈ ದೇವಸ್ಥಾನವನ್ನು 1915 ರಲ್ಲಿ ನಿರ್ಮಿಸಿದ್ದಾರೆ. ಇವರು ದೇವಿಯ ಮೂರ್ತಿಯನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ತೆಗೆದುಕೊಂಡು ಬಂದು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ ಎನ್ನಲಾಗಿದೆ. ಈ ದೇವಸ್ಥಾನದ ವಿಶೇಷತೆಯೆಂದರೆ, ಹಿಂದೂಗಳಲ್ಲಿ ಸಾಮಾನ್ಯವಾಗಿ ಒಳ್ಳೆಯ ಘಳಿಗೆಯಲ್ಲ ಎಂದು ನಂಬಲ್ಪಡುವ ರಾಹು ಕಾಲದಲ್ಲಿ ದೇವಿಗೆ ಪೂಜೆಯನ್ನು ಮಾಡಲಾಗುತ್ತದೆ. ದೇವಿಯು ಎಲ್ಲ ವಿಘ್ನಗಳನ್ನು ಪರಿಹರಿಸುತ್ತಾಳೆ ಎಂಬುದು ಇದರ ಸಂಕೇತವಾಗಿದೆ. ಅರ್ಧ ಸಿಳಿದ ನಿಂಬೆ ಹಣ್ಣಿನ ತೊಗಟೆಯನ್ನು ಹಣತೆಯನ್ನಾಗಿ ಮಾಡಿ ಅದರಲ್ಲಿ ದೀಪ ಬೆಳಗಿ ಭಕ್ತರು ದೇವಿಯನ್ನು ಆರಾಧಿಸುತ್ತಾರೆ.

ಸೆಂಟ್ ಮೇರಿ ಬ್ರೆಸಿಲಿಯಾ ಚರ್ಚ್(St. Mary's Basilica): ಶಿವಾಜಿ ನಗರದ ರಸೆಲ್ ಮಾರ್ಕೆಟ್ ಎದುರಿರುವ ಸೆಂಟ್ ಮೇರಿ ಬ್ರೆಸಿಲಿಯಾ ಚರ್ಚ್ 1882ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತೆ. ಚರ್ಚ್ನ ವಾಸ್ತುಶಿಲ್ಪವು ಗೋಥಿಕ್ ಶೈಲಿಯಲ್ಲಿದೆ. ಸೇಂಟ್ ಮೇರಿಸ್ ಫೀಸ್ಟ್ ಅನ್ನು ಪ್ರಮುಖವಾಗಿ ಆಚರಿಸಲಾಗುತ್ತದೆ. ಕ್ರೈಸ್ತರ ಹಬ್ಬದ ಸಂದರ್ಭದಲ್ಲಿ ಇಲ್ಲಿ ಜನ ಸಾಗರವೇ ತುಂಬಿರುತ್ತೆ.

ಜಮಿಯಾ ಮಸೀದಿ (Jamia Masjid Bangalore City): ಬೆಂಗಳೂರಿನ ಸಿಟಿ ಮಾರ್ಕೆಟ್ ಪ್ರದೇಶದಲ್ಲಿರುವ ಜಮಿಯಾ ಮಸೀದಿ ಐದು ಅಂತಸ್ತಿನ ಕಟ್ಟಡವೊಂದಿದ್ದು 1790 ರ ಸುಮಾರಿಗೆ ನಿರ್ಮಿಸಲ್ಪಟ್ಟಿದೆ. 10,000 ಕ್ಕಿಂತ ಹೆಚ್ಚು ಜನರು ಪ್ರಾರ್ಥನೆ ಮಾಡಬಹುದಾದ ಸಭಾಂಗಣವನ್ನು ಇದು ಹೊಂದಿದೆ.




