National Girl Child Day 2024: ಈ ಸಮಾಜದಲ್ಲಿ ಹೆಣ್ಣು ಮಕ್ಕಳಿಗೂ ಹೆಚ್ಚು ಸ್ಥಾನಮಾನ ಸಿಗಬೇಕು
ಹೆಣ್ಣು ಸಂಸಾರದ ಕಣ್ಣು ಎನ್ನುವ ಮಾತಿದೆ. ಆದರೆ ಇಂದು ಹೆಣ್ಣು ಸಂಸಾರವನ್ನು ನಿಭಾಯಿಸುವುದರ ಜೊತೆ ಜೊತೆಗೆ ಎಲ್ಲಾ ಕ್ಷೇತ್ರದಲ್ಲಿಯೂ ಕೈಯಾಡಿಸುತ್ತಿದ್ದಾಳೆ. ಸಮಾಜದಲ್ಲಿ ಸ್ಥಾನಮಾನವನ್ನು ಪಡೆದಿರುವ ಹೆಣ್ಣು ಕುಟುಂಬ ಹಾಗೂ ಇಡೀ ಸಮಾಜಕ್ಕೆ ಮಾದರಿಯಾಗುವಂತೆ ಬದುಕು ಕಟ್ಟಿಕೊಂಡಿದ್ದಾಳೆ. ಆದರೆ ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಅಸಮಾನತೆಗಳು, ಮಕ್ಕಳ ಹಕ್ಕುಗಳು, ಸ್ತ್ರೀ ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷವು ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ವಿಶೇಷ ಹಾಗೂ ಮಹತ್ವದ ಕುರಿತಾಗಿ ತಿಳಿಯೋಣ ಬನ್ನಿ.

ಹೆಣ್ಣು ನಾಲ್ಕು ಗೋಡೆಗೆ ಸೀಮಿತವಾಗಿದ್ದ ಕಾಲವೊಂದಿತ್ತು. ಸಂಸಾರ ಹಾಗೂ ಮನೆ ಕೆಲಸ ಬಿಟ್ಟರೆ ಬೇರೆ ಪ್ರಪಂಚದ ಅರಿವೇ ಇಲ್ಲದಂತೆ ಇದ್ದಳು. ಇದೀಗ ಕಾಲ ಬದಲಾಗಿದ್ದು ಹೆಣ್ಣು ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ. ಆದರೆ ಇಂದಿಗೂ ಕೂಡ ಕೆಲವೆಡೆ ಹೆಣ್ಣು ಮಕ್ಕಳು ಅಸಮಾನತೆ, ಸಾಮಾಜಿಕ ತಾರತಮ್ಯ ಮತ್ತು ಶೋಷಣೆ ಅನುಭವಿಸುತ್ತಲೇ ಇದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸಲಾಗುತ್ತಿದ್ದು ಜಾಗೃತಿ ಮೂಡಿಸುವ ಕೆಲಸವನ್ನು ಈ ದಿನ ಮಾಡಲಾಗುತ್ತದೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಇತಿಹಾಸ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು 2008 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಾರಂಭಿಸಿತು. ಹೆಣ್ಣು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶದ ಮಹತ್ವ ಸೇರಿದಂತೆ ಹಲವು ವಿಚಾರಗಳ ಬಗೆಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲು ಮುಂದಾಯಿತು.
ಇದನ್ನೂ ಓದಿ: ಸಂಬಂಧವನ್ನು ಒತ್ತಡದಿಂದ ರಕ್ಷಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವ
ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಹೆಣ್ಣು ಶಿಶುಹತ್ಯೆ, ಲಿಂಗ ಅಸಮಾನತೆ ಮತ್ತು ದೈಹಿಕ ದೌರ್ಜನ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದು. ಸ್ತ್ರೀಯರ ಶಿಕ್ಷಣದ ಮಹತ್ವ, ಮಹಿಳೆಯರ ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ರಾಷ್ಟ್ರೀಯ ಹೆಣ್ಣುಮಕ್ಕಳ ದಿನದಂದು ದೇಶದೆಲ್ಲೆಡೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ. ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಅವರಿಗೆ ಅವಕಾಶಗಳನ್ನು ನೀಡುವ ಕುರಿತು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:




