
ಸೀನು (sneeze) ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬರೂ ಸಹ ಸೀನು ಬರುವುದು ಸಾಮಾನ್ಯ. ಕೆಲವರಂತೂ ಬೆಳಗ್ಗೆ ಎದ್ದ ತಕ್ಷಣವೇ ಅಕ್ಷಿ ಅಕ್ಷಿ ಎಂದು ಜೋರಾಗಿ ಸೀನಲು ಶುರು ಮಾಡುತ್ತಾರೆ. ಧೂಳಿನ ಕಣಗಳು ಮೂಗಿಗೆ ಹೋದಾಗ, ನೆಗಡಿ, ಶೀತ, ಅಲರ್ಜಿ ಉಂಟಾದಾಗ ಸೀನು ಬರುತ್ತದೆ. ಈ ಸಿನುವಿಕೆ ದೇಹದ ನೈಸರ್ಗಿಕ ಪ್ರಕ್ರಿಯೆಯೇ ಹೊರತು ಅದು ಯಾವುದೇ ರೋಗವಲ್ಲ. ಹಾಗಿದ್ರೆ ಸೀನು ಬರುವುದೇಕೆ, ಅದರ ಹಿಂದಿರುವ ವೈಜ್ಞಾನಿಕ ಕಾರಣವಾದರೂ ಏನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಸೀನುವುದು ದೇಹದ ರಕ್ಷಣಾತ್ಮಕ ಪ್ರಕ್ರಿಯೆಯಾಗಿದೆ. ಹೌದು ಸೀನು ನಮ್ಮ ದೇಹವನ್ನು ಸುರಕ್ಷಿತವಾಗಿಡಲು ವಿನ್ಯಾಸಗೊಳಿಸಲಾದ ಜೈವಿಕ ಘಟನೆಗಳ ಸಂಪೂರ್ಣ ಸರಪಣಿಯಾಗಿದ್ದು, ಇದು ಪ್ರಕೃತಿಯ ಅತ್ಯಂತ ವೇಗದ ಮತ್ತು ಬುದ್ಧಿವಂತ ರಕ್ಷಣಾ ಕಾರ್ಯವಿಧಾನಗಳಲ್ಲಿ ಒಂದಾಗಿದೆ. ಇದು ನಿಮ್ಮ ಮೂಗಿನಿಂದ ಬ್ಯಾಕ್ಟೀರಿಯಾ, ಧೂಳು ಸೇರಿದಂತೆ ಇತರೆ ಯಾವುದೇ ಸೂಕ್ಷ್ಮ ಕಣಗಳು ಉಸಿರಾಟದ ವ್ಯವಸ್ಥೆಯನ್ನು ಆಳವಾಗಿ ಭೇದಿಸುವ ಮೊದಲೇ ಅದನ್ನು ಹೊರಹಾಕುತ್ತದೆ. ಸೀನುವಿಕೆ ಏಕೆ ಸಂಭವಿಸುತ್ತದೆ ಮತ್ತು ಅದರ ವೈಜ್ಞಾನಿಕ ಪ್ರಕ್ರಿಯೆ ಏನೆಂಬುದನ್ನು ನೋಡೋಣ.
ಬ್ಯಾಕ್ಟೀರಿಯಾ, ಧೂಳಿನ ಕಣಗಳು, ಸಾಕುಪ್ರಾಣಿಗಳ ಕೂದಲು ಅಥವಾ ಗಾಳಿಯಲ್ಲಿ ಹರಡಿ ಬರುವ ಸೂಕ್ಷ್ಮ ವಸ್ತುಗಳು ಮೂಗಿಗೆ ಪ್ರವೇಶಿಸಿದಾಗ, ದೇಹದ ರೋಗನಿರೋಧಕ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ. ಇದು ಮೂಗಿಗೆ ಪ್ರವೇಶಿಸಿದ ಈ ಹಾನಿಕಾರಕ ಕಣಗಳನ್ನು ಬೆದರಿಕೆ ಎಂದು ಅರ್ಥೈಸುತ್ತದೆ ಮತ್ತು ಹಿಸ್ಟಮೈನ್ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಇದು ನಿಮ್ಮ ಮೂಗಿನ ಒಳಪದರವನ್ನು ಕೆರಳಿಸುತ್ತದೆ ಮತ್ತು ಇದರಿಂದ ಸೀನು ಬರುತ್ತದೆ. ಹೀಗೆ ಸೀನಿದಾಗ ಮೂಗಿನೊಳಗೆ ಪ್ರವೇಶಿಸಿದ ಸೂಕ್ಷ್ಮ ವಸ್ತುಗಳು ಹೊರಹಾಕಲ್ಪಡುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಸೀನುವಿಕೆಯು ಮೂಗು ಮತ್ತು ಗಂಟಲಿನಿಂದ ಬ್ಯಾಕ್ಟೀರಿಯಾ, ಪರಾಗ ಅಥವಾ ಧೂಳಿನಂತಹ ಸೂಕ್ಷ್ಮ ಕಣಗಳನ್ನು ತೆಗೆದುಹಾಕುವ, ಮೂಗನ್ನು ಕ್ಲೀನ್ ಮಾಡುವ ದೇಹದ ರಕ್ಷಣಾತ್ಮಕ ತಂತ್ರವಾಗಿದೆ.
ಇದನ್ನೂ ಓದಿ: ವಜ್ರಗಳಲ್ಲಿ ಎಷ್ಟೆಲ್ಲಾ ವಿಧಗಳಿವೆ, ಅವುಗಳ ನಡುವಿನ ವ್ಯತ್ಯಾಸವೇನು ಗೊತ್ತಾ?
ಸೀನುವಾಗ ನಮ್ಮ ಮೂಗಿನ ಹೊಳ್ಳೆಗಳಿಂದ ಗಾಳಿಯು ಹೆಚ್ಚಿನ ವೇಗದಲ್ಲಿ ಹೊರ ಬರುತ್ತದೆ. ಹೀಗಿರುವಾಗ ನಾವು ಸೀನುವುದನ್ನು ತಡೆಹಿಡಿದರೆ, ಇದು ದೇಹದ ಇತರ ಅಂಗಗಳಿಗೆ ಒತ್ತಡವನ್ನು ಹೆಚ್ಚಿಸಬಹುದು. ಇದರಿಂದ ಕಿವಿಗಳಿಗೆ ಹೆಚ್ಚಿನ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Thu, 11 December 25