National Pollution Control Day 2023: ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಇತಿಹಾಸ ಮತ್ತು ಮಹತ್ವ ಏನು?
1984ರಲ್ಲಿ ಭೋಪಾಲ್ ಅನಿಲ ದುರಂತದಲ್ಲಿ ಸಾವನ್ನಪ್ಪಿದವರನ್ನು ಸ್ಮರಿಸುವ ಸಲುವಾಗಿ ಹಾಗೂ ಮಾಲಿನ್ಯದಿಂದ ಮಾನವರ ಆರೋಗ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು (National Pollution Control Day) ಆಚರಿಸಲಾಗುತ್ತದೆ.

ಇಂದು ಇಡೀ ಜಗತ್ತೇ ಮಾಲಿನ್ಯದಿಂದ ತೊಂದರೆಗೀಡಾಗಿದೆ. ಮಾಲಿನ್ಯವು ನಮ್ಮ ಪರಿಸರ ಮತ್ತು ಮಾನವರ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಉದಾಹರಣೆಗೆ ವಾಯುಮಾಲಿನ್ಯವು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತದೆ ಮತ್ತು ಪರಿಸರದ ಆರೋಗ್ಯವನ್ನು ಹದಗೆಡಿಸುತ್ತದೆ. ಮತ್ತೊಂದೆಡೆ ಜಲ ಮಾಲಿನ್ಯವು ಜಲಚರಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತದೆ. ಹಾಗೂ ಪ್ಲಾಸ್ಟಿಕ್ ಬಳಕೆ, ವಿಪರೀತ ರಾಸಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಗುಣಮಟ್ಟ ಹದಗೆಟ್ಟು ಮಣ್ಣಿನ ಮಾಲಿನ್ಯವೂ ಉಂಟಾಗುತ್ತಿದೆ. ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ ಪ್ರಕಾರ ಪ್ರಪಂಚದಾದ್ಯಂತ ಪ್ರತಿವರ್ಷ 7 ಮಿಲಿಯನ್ ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ. ಮಾಲಿನ್ಯದಿಂದ ಉಂಟಾಗುತ್ತಿರುವ ಇಂತಹ ಎಲ್ಲಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಮಾಲಿನ್ಯದಿಂದ ಮಾನವರ ಆರೋಗ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು (National Pollution Control Day) ಆಚರಿಸಲಾಗುತ್ತದೆ.
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಇತಿಹಾಸ:
ಪ್ರತಿವರ್ಷ ಡಿಸೆಂಬರ್ 2 ರಂದು ಆಚರಿಸಲಾಗುವ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಇತಿಹಾಸವು ಭೋಪಾಲ್ ನಗರದಲ್ಲಿ ಸಂಭವಿಸಿದ ಅನಿಲ ದುರಂತಕ್ಕೆ ಸಂಬಂಧಿಸಿದೆ. ವಾಸ್ತವವಾಗಿ ಡಿಸೆಂಬರ್ 2, 1984 ರಂದು ಭೋಪಾಲ್ ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ನ (UCIL) ಕೀಟನಾಶಕ ಸ್ಥಾವರದಿಂದ ʼಮೀಥೈಲ್ ಐಸೊಸೈನೇಟ್ʼ ಅನಿಲ ಸೋರಿಕೆಯಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದರು. ಅಲ್ಲದೆ ಈ ದುರಂತದಲ್ಲಿ ಸಿಳುಕಿದ ನೂರಾರು ಜನ ಅಸ್ವಸ್ಥತೆಗೊಳಗಾದರು. ಇದನ್ನು ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕ ವಿಪತ್ತುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಭೀಕರ ದುರಂತದಲ್ಲಿ ಸಾವನ್ನಪ್ಪಿದವರ ನೆನಪಿಗಾಗಿ ಭಾರತದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ. ಮತ್ತು ಈ ದಿನ ಮಾನವನ ನಿರ್ಲಕ್ಷ್ಯದಿಂದ ಉಂಟಾಗುವ ಕೈಗಾರಿಕ ಮಾಲಿನ್ಯವನ್ನು ತಡೆಗಟ್ಟಲು, ಕೈಗಾರಿಕ ವಿಪತ್ತುಗಳನ್ನು ಹೇಗೆ ನಿರ್ವಹಿಸುವುದು ಮತ್ತು ನಿಯಂತ್ರಿಸುವುದು ಎಂಬುದರ ಕುರಿತು ಸಾರ್ವಜನಿಕರಿಗೆ ಶಿಕ್ಷಣವನ್ನು ನೀಡಲಾಗುತ್ತದೆ.
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಮಹತ್ವ:
ಪ್ರಸ್ತುತ ಮಾಲಿನ್ಯದ ಮಟ್ಟವು ತುಂಬಾ ಹೆಚ್ಚಿದ್ದು, ಭಾರತದಲ್ಲಿ ಪ್ರತಿವರ್ಷ 24 ಲಕ್ಷ ಜನರು ಮಾಲಿನ್ಯದ ಕಾರಣದಿಂದ ಸಾಯುತ್ತಿದ್ದಾರೆ ಎಂಬ ಅಂಕಿಂಶದಿಂದ ಭಾರತದಲ್ಲಿ ಮಾಲಿನ್ಯವು ಎಷ್ಟು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂಬುದನ್ನು ಅಳೆಯಬಹುದು. ಈ ಪೈಕಿ 16.7 ಲಕ್ಷ ಸಾವುಗಳು ವಾಯು ಮಾಲಿನ್ಯದಿಂದಲೇ ಸಂಭವಿಸಿದೆ. ಅಷ್ಟೇ ಅಲ್ಲದೇ ಈ ಮಾಲಿನ್ಯದ ಕಾರಣದಿಂದಾಗಿ ಜೀವರಾಶಿಗಳು ಅನೇಕ ತೊಂದರೆಗಳನ್ನು ಅನುಭವಿಸುತ್ತಿವೆ. ಹಾಗಾಗಿ ಎಲ್ಲಾ ರೀತಿಯ ಮಾಲಿನ್ಯಗಳನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ವಾಯು ಮಾಲಿನ್ಯದಿಂದ ಕುಸಿಯುತ್ತಿದೆ ಮನುಷ್ಯರ ಆಯುಷ್ಯ; ಮಾಲಿನ್ಯದಿಂದ ಚೀನಾ ಬಚಾವಾಗಿದ್ದು ಹೇಗೆ?
ಈ ದಿನವು ನಮ್ಮ ಪರಿಸರದ ಮೇಲೆ ಮಾಲಿನ್ಯದ ವಿನಾಶಕಾರಿ ಪರಿಣಾಮಗಳು ಮತ್ತು ಅದರ ಪರಿಣಾಮಕಾರಿ ನಿಯಂತ್ರಣ ಕ್ರಮಗಳ ತಕ್ಷಣದ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅಲ್ಲದೆ ಮಾಲಿನ್ಯದ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಯಾವುದೇ ರೀತಿಯ ಕೈಗಾರಿಕಾ ವಿಪತ್ತುಗಳು ಸಂಭವಿಸದಂತೆ ತಡೆಯಲು ಕೈಗಾರಿಕ ವಿಪತ್ತು ನಿರ್ವಹಣೆ ಮತ್ತು ಅದರ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣವನ್ನು ನೀಡಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ