Air Pollution: ವಾಯು ಮಾಲಿನ್ಯದಿಂದ ಕುಸಿಯುತ್ತಿದೆ ಮನುಷ್ಯರ ಆಯುಷ್ಯ; ಮಾಲಿನ್ಯದಿಂದ ಚೀನಾ ಬಚಾವಾಗಿದ್ದು ಹೇಗೆ?
Delhi Pollution: ದೆಹಲಿಯಲ್ಲಿರುವ ವಿಪರೀತ ವಾಯು ಮಾಲಿನ್ಯದ ಗಾಳಿ ಸೇವನೆಯಿಂದ ದೆಹಲಿ ಜನರ ಆಯಸ್ಸು 9.5 ವರ್ಷ ಕಡಿಮೆಯಾಗುತ್ತಿದೆ. ತಮ್ಮ ಜೀವನದ ಒಂಭತ್ತೂವರೆ ವರ್ಷವನ್ನೇ ಜನರು ಕಳೆದುಕೊಳ್ಳುತ್ತಿದ್ದಾರೆ.
ನವದೆಹಲಿ: ನವದೆಹಲಿ ವಾಯುಮಾಲಿನ್ಯದಿಂದ ತತ್ತರಿಸಿ ಹೋಗಿದೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ವಾಯುಮಾಲಿನ್ಯ ವಿಪರೀತ ಹೆಚ್ಚಾಗುತ್ತಿದೆ. ವಾಯು ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದರೆ, ನೆರೆಯ ಚೀನಾ ದೇಶ ಮಾತ್ರ ವಾಯು ಮಾಲಿನ್ಯವನ್ನು ಸಕ್ಸಸ್ ಫುಲ್ ಆಗಿ ನಿಯಂತ್ರಿಸಿದೆ. ಚೀನಾ ಹೇಗೆ ವಾಯು ಮಾಲಿನ್ಯವನ್ನು ಕಂಟ್ರೋಲ್ ಮಾಡಿತು? ಚೀನಾದಲ್ಲಿ ಸಾಧ್ಯವಾಗಿದ್ದು ನಮ್ಮ ದೇಶದಲ್ಲೆೇಕೆ ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಇಲ್ಲಿದೆ. ವಾಯು ಮಾಲಿನ್ಯ ಇದು ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ನವೆಂಬರ್, ಡಿಸೆಂಬರ್ ತಿಂಗಳು ಬಂತೆಂದರೆ ದೆಹಲಿ ಮಾತ್ರವಲ್ಲದೆ ಇಡೀ ಉತ್ತರ ಭಾರತದ ನಗರಗಳು ವಾಯು ಮಾಲಿನ್ಯದಿಂದ ತತ್ತರಿಸಿ ಹೋಗುತ್ತವೆ. ವಾಯು ಮಾಲಿನ್ಯದ ಮಟ್ಟ ವಿಪರೀತ ಕುಸಿದು ಹೋಗುತ್ತದೆ. ಜನರು ಉಸಿರಾಡೋದು ಕೂಡ ಕಷ್ಟವಾಗುತ್ತದೆ. ವಿಷದ ಗಾಳಿಯನ್ನೇ ಸೇವಿಸಬೇಕಾಗುತ್ತದೆ. ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಹೋಗುತ್ತದೆ. ಆಮ್ಲಜನಕ ಕಡಿಮೆ ಇರುವ ಗಾಳಿಯನ್ನು ಸೇವಿಸಿದರೆ ಶ್ವಾಸಕೋಶ, ಜಠರ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಶುರುವಾಗೋದು ಗ್ಯಾರಂಟಿ. ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆ ಇರೋರು ದೆಹಲಿಯಂಥ ಮಾಲಿನ್ಯ ವಿಪರೀತವಾಗಿರೋ ನಗರಗಳಲ್ಲಿ ಜೀವಿಸೋದು ಭಾರೀ ಕಷ್ಟ. ವೈದ್ಯರ ಬಳಿ ಹೋದರೆ ಆರೋಗ್ಯ ಕಾಪಾಡಿಕೊಳ್ಳಲು ಮಾಲಿನ್ಯ ಹೆಚ್ಚಾಗಿರುವ ನಗರವನ್ನು ಬಿಟ್ಟು ಬೇರೆ ನಗರಗಳಿಗೆ ವಲಸೆ ಹೋಗಿಬಿಡಿ ಅನ್ನೋ ಸಲಹೆಯನ್ನು ನೀಡ್ತಾರೆ. ಈ ಸಲಹೆ ಅನುಸರಿಸುವುದಾದರೆ ದೆಹಲಿಯಲ್ಲಿರುವ ಅರ್ಧದಷ್ಟು ಜನರು ದೆಹಲಿಯನ್ನೇ ಖಾಲಿ ಮಾಡಬೇಕಾಗುತ್ತದೆ.
ತಜ್ಞರ ಪ್ರಕಾರ, ದೆಹಲಿಯಲ್ಲಿರುವ ವಿಪರೀತ ವಾಯು ಮಾಲಿನ್ಯದ ಗಾಳಿ ಸೇವನೆಯಿಂದ ದೆಹಲಿ ಜನರ ಆಯಸ್ಸು 9.5 ವರ್ಷ ಕಡಿಮೆಯಾಗುತ್ತಿದೆ. ತಮ್ಮ ಜೀವನದ ಒಂಭತ್ತೂವರೆ ವರ್ಷವನ್ನೇ ಜನರು ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ದೆಹಲಿ ಹಾಗೂ ಎನ್‌ಸಿಆರ್ ವಲಯದಲ್ಲಿ ವಿಪರೀತ ವಾಯು ಮಾಲಿನ್ಯದಿಂದ ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ವಾಯು ಮಾಲಿನ್ಯದ ಆರ್ಥಿಕ ನಷ್ಟ GDP ಯ ಶೇ. 4.5 ರಷ್ಟಿದೆ ಎಂದು ವ್ಯಾಪಕವಾಗಿ ಅಂದಾಜಿಸಲಾಗಿದೆ. ಇದರಲ್ಲಿ ಜನರ ಅಕಾಲಿಕ ಮರಣವು ಅರ್ಧದಷ್ಟು ಈ ಆರ್ಥಿಕ ಹೊರೆಗೆ ಕೊಡುಗೆ ನೀಡುತ್ತಿದೆ. ಉಳಿದವುಗಳಿಗೆ ಆರೋಗ್ಯ ವೆಚ್ಚಗಳು ಕಾರಣವಾಗಿವೆ. ಈ ಲೆಕ್ಕಾಚಾರಗಳು ಕಲುಷಿತ ಗಾಳಿಯಿಂದಾಗಿ ಉತ್ಪಾದಕತೆಯ ನಷ್ಟವನ್ನು ಒಳಗೊಂಡಿಲ್ಲ. ಸುತ್ತ ಮಾಲಿನ್ಯದ ಮಟ್ಟಗಳು ಹೆಚ್ಚಾದಾಗ, ಕಾರ್ಮಿಕರ ಉತ್ಪಾದಕತೆ ಕಡಿಮೆಯಾಗಿದೆ ಎಂದು ತೋರಿಸುವ ಹಲವಾರು ಅಧ್ಯಯನಗಳಿವೆ. GDP ಮೇಲೆ ಪರಿಣಾಮವು ಸ್ಪಷ್ಟವಾಗಿದೆ, ಏಕೆಂದರೆ ಉತ್ಪಾದನೆಯು ಹಾನಿಗೊಳಗಾಗುತ್ತದೆ . ಗ್ರೀನ್‌ಪೀಸ್ ಅಂದಾಜಿನ ಪ್ರಕಾರ ದೆಹಲಿಯ ಆರ್ಥಿಕ ನಷ್ಟವು, ದೆಹಲಿ ಸರ್ಕಾರದ ದೇಶೀಯ ಉತ್ಪನ್ನದ ಶೇಕಡಾ 13 ರಷ್ಟಿದೆ. ಇದು ಕಳೆದ ವರ್ಷ ಸುಮಾರು USD 8 ಬಿಲಿಯನ್ ಆಗಿತ್ತು.
ಈ ನಷ್ಟವನ್ನು ಅಳೆಯಲು ಎರಡು ವಿಭಿನ್ನ ವಿಧಾನಗಳಿವೆ. ನಾವು ನೋಡುವ ಸಂಖ್ಯೆಗಳು ಮಾನವ ಸಂಪನ್ಮೂಲ ನಷ್ಟದ ಆಧಾರದ ಮೇಲೆ ಪ್ರಭಾವವನ್ನು ಲೆಕ್ಕಹಾಕುತ್ತವೆ. ಆದಾಗ್ಯೂ, ಪಾವತಿಸುವ ಇಚ್ಛೆಯ ವಿಧಾನವನ್ನು ಬಳಸಿದಾಗ ಈ ಸಂಖ್ಯೆಗಳು ಹೆಚ್ಚಾಗುತ್ತವೆ. ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ನಿವಾಸಿಗಳು ಪಾವತಿಸಲು ಸಿದ್ಧರಿರುವ ಗರಿಷ್ಠ ಬೆಲೆಯನ್ನು ಲೆಕ್ಕಾಚಾರಗಳು ಗಣನೆಗೆ ತೆಗೆದುಕೊಂಡಾಗ ಇದು ಸಂಭವಿಸುತ್ತದೆ. ಸುಮಾರು 20 ವರ್ಷಗಳ ಹಿಂದೆ ದೆಹಲಿಯಂತೆಯೇ ಬೀಜಿಂಗ್ ಅನ್ನು ಅದೇ ಸಮಸ್ಯೆಯೊಂದಿಗೆ ನೋಡಿದಾಗ, ಮಾನವ ಸಂಪನ್ಮೂಲ ವೆಚ್ಚ ಮತ್ತು ಪಾವತಿಸಲು ಸಿದ್ಧರಿರುವ ಅಂದಾಜುಗಳು ಕ್ರಮವಾಗಿ ಚೀನಾದ GDP ಯ ಶೇಕಡಾ 3 ಮತ್ತು 6 ರಷ್ಟು ಇತ್ತು. ದೆಹಲಿಗೆ ಪಾವತಿಸುವ ಇಚ್ಛೆಯನ್ನು ಗಣನೆಗೆ ತೆಗೆದುಕೊಂಡರೆ, ರಾಷ್ಟ್ರೀಯ ರಾಜಧಾನಿಯು ಪ್ರತಿ ವರ್ಷ 1 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು . ಅಪಾಯಕಾರಿ ಸುತ್ತುವರಿದ ಗಾಳಿಯ ಗುಣಮಟ್ಟದಿಂದಾಗಿ ಅಂದಾಜು USD 13 ಬಿಲಿಯನ್ ಮೌಲ್ಯದ ಉತ್ಪಾದಕತೆಯನ್ನು ಕಳೆದುಕೊಳ್ಳುತ್ತಿದೆ.
ದೆಹಲಿಯ ಗಾಳಿ ಸೇವಿಸೋದು ದಿನಕ್ಕೆ 15 ರಿಂದ 20 ಸಿಗರೇಟು ಸೇದೋದಕ್ಕೆ ಸಮ ಅಂತ ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಲಂಗ್ಸ್ ಕೇರ್ ಫೌಂಡೇಷನ್ ಅಧ್ಯಕ್ಷ ಹಾಗೂ ವೈದ್ಯರೂ ಆಗಿರುವ ಅರವಿಂದ್ ಕುಮಾರ್ ಹೇಳಿದ್ದಾರೆ. ಈ ಮೊದಲು ದೆಹಲಿಯ ಜನರ ಶ್ವಾಸಕೋಶದ ಬಣ್ಣ ಪಿಂಕ್ ಕಲರ್ ಇತ್ತು. ಆದರೆ, ಈಗ ದೆಹಲಿ ಜನರ ಶ್ವಾಸಕೋಶದ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಮಕ್ಕಳ ಶ್ವಾಸಕೋಶ ಕೂಡ ಕಪ್ಪು ಬಣ್ಣಕ್ಕೆ ತಿರುಗಿದೆ ಅಂತಾರೆ ಡಾಕ್ಟರ್ ಅರವಿಂದ್ ಕುಮಾರ್.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ, ವಿಪರೀತ ಹದಗೆಟ್ಟಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಇದುವರೆಗೂ ಸಾಧ್ಯವಾಗಿಲ್ಲ. ದೆಹಲಿಯ ಆಮ್ ಆದ್ಮಿ ಸರ್ಕಾರವು ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮವನ್ನು ಜಾರಿಗೆ ತಂದಿತ್ತು. ಬಳಿಕ ಮಾಲಿನ್ಯಕಾರಕ ಕಾರ್ಖಾನೆಗಳನ್ನು ಬಂದ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಸುಪ್ರೀಂಕೋರ್ಟ್ 10 ವರ್ಷ ಹಳೆಯ ಡೀಸೆಲ್ ಕಾರ್ ಮತ್ತು 15 ವರ್ಷ ಹಳೆಯ ಪೆಟ್ರೋಲ್ ಕಾರ್ ಗಳ ಸಂಚಾರ ನಿಷೇಧಿಸಿ ತೀರ್ಪು ನೀಡಿದೆ . ಇದರಿಂದ 40 ಲಕ್ಷ ಹಳೆಯ ವಾಹನಗಳು ರಸ್ತೆಗೆ ಇಳಿಯದಂತೆ ಆಗಿದೆ. ಆದರೂ, ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಸುಪ್ರೀಂಕೋರ್ಟ್, ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿ ಹೊಡೆಯುವುದಕ್ಕೂ ನಿರ್ಬಂಧ ವಿಧಿಸಿತ್ತು. ಆದರೆ, ದೀಪಾವಳಿ ವೇಳೆಯು ವಾಯು ಮಾಲಿನ್ಯ ಮಾಪಕ ಪಿಎಂ 2.5 ದೆಹಲಿಯಲ್ಲಿ 500ರಿಂದ 700ರವರೆಗೂ ತಲುಪಿತ್ತು. ಕೆಲವು ಏರಿಯಾಗಳಲ್ಲಿ 900 ತಲುಪಿತ್ತು . ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪಿಎಂ 2.5 ನಲ್ಲಿ ವಾಯುವಿನ ಗುಣಮಟ್ಟ ನೂರರ ಒಳಗೆ ಇದ್ದರೇ, ಮಾತ್ರ ಅಂಥ ಗಾಳಿ ಸುರಕ್ಷಿತ ಅಂತ ಅರ್ಥ . ಆದರೇ, ದೆಹಲಿಯಲ್ಲಿ ವಾಯುವಿನ ಗುಣಮಟ್ಟ ಏಳು ಪಟ್ಟು, 9 ಪಟ್ಟು ಮಲಿನವಾಗಿ ಹೋಗಿತ್ತು . ದೆಹಲಿ ಸರ್ಕಾರ, ಸುಪ್ರೀಂಕೋರ್ಟ್ ವಾಯುಮಾಲಿನ್ಯವನ್ನು ನಿಯಂತ್ರಿಸಲು ಏನೇ ಕ್ರಮ ಕೈಗೊಂಡರೂ, ವಾಯು ಮಾಲಿನ್ಯ ನಿಯಂತ್ರಿಸಲು ಆ ಎಲ್ಲ ಕ್ರಮಗಳು ವಿಫಲವಾಗಿದ್ದವು . ದೆಹಲಿಯಲ್ಲಿ ನವಂಬರ್, ಡಿಸೆಂಬರ್ ನಿಂದ ವಾಯು ಮಾಲಿನ್ಯ ಮಟ್ಟ ವಿಪರೀತ ಹೆಚ್ಚಾಗುತ್ತಲೇ ಹೋಗುತ್ತದೆ. ಮೇ, ಜೂನ್ವರೆಗೂ ವಾಯು ಮಾಲಿನ್ಯದ ಮಟ್ಟ ಚೇತರಿಕೆಯಾಗುವುದಿಲ್ಲ.
ದೆಹಲಿ ರಾಷ್ಟ್ರ ರಾಜಧಾನಿ. ಮೊದಲೇ ಚಿಕ್ಕ ಪ್ರದೇಶ. ಸಂಸತ್ ಭವನದಿಂದ ಯಾವುದೇ ದಿಕ್ಕಿಗೂ 20 ರಿಂದ 30 ಕಿಲೋಮೀಟರ್ ದೂರ ಹೋದರೇ ಸಾಕು, ದೆಹಲಿ ಭೂ ಪ್ರದೇಶ ಅಂತ್ಯವಾಗುತ್ತೆ. ದೆಹಲಿ ಪಕ್ಕದಲ್ಲೇ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ್ ರಾಜ್ಯಗಳಿವೆ. ಈ ರಾಜ್ಯಗಳಲ್ಲಿ ಆಕ್ಟೋಬರ್, ನವಂಬರ್ ತಿಂಗಳ ವೇಳೆಯಲ್ಲೇ ಮುಂಗಾರು ಬೆಳೆಯನ್ನು ಕಟಾವು ಮಾಡಿ, ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಾರೆ. ಬಳಿಕ ಹಿಂಗಾರು ಬೆಳೆಗೆ ಭೂಮಿಯನ್ನು ರೈತರು ಸಿದ್ದಪಡಿಸಲು ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಾರೆ. ಕೃಷಿ ತ್ಯಾಜ್ಯದ ಬೆಂಕಿಯೇ ಗಾಳಿಯಲ್ಲಿ ದೆಹಲಿಗೆ ಬಂದು, ದೆಹಲಿ ಜನರ ಜೀವಕ್ಕೆ ಕೊಳ್ಳಿ ಇಡುತ್ತಿದೆ. ಆದರೇ, ಕೃಷಿ ತ್ಯಾಜ್ಯದ ಬೆಂಕಿಯಿಂದ ಉಂಟಾಗುವ ವಾಯು ಮಾಲಿನ್ಯ ಶೇ.35 ರಷ್ಟು ಎಂಬ ಅಂದಾಜಿತ್ತು. ಆದರೇ, ಕೇಂದ್ರ ಸರ್ಕಾರ ಕೃಷಿ ತ್ಯಾಜ್ಯದ ಬೆಂಕಿಯಿಂದ ಶೇ.10 ರಷ್ಟು ಮಾತ್ರ ದೆಹಲಿಯಲ್ಲಿ ವಾಯು ಮಾಲಿನ್ಯ ಆಗುತ್ತಿದೆ ಎಂದು ಸುಪ್ರೀಂಕೋರ್ಟ್ ಗೆ ಹೇಳಿದೆ. ಸುಪ್ರೀಂಕೋರ್ಟ್ ಕೂಡ, ದೆಹಲಿ ವಾಯು ಮಾಲಿನ್ಯಕ್ಕೆ ನೆರೆಹೊರೆಯ ರಾಜ್ಯಗಳ ರೈತರನ್ನು ದೂಷಣೆ ಮಾಡುವುದು ಸರಿಯಲ್ಲ. ರೈತರು ಕಷ್ಟಗಳ ಬಗ್ಗೆ ಫೈವ್ ಸ್ಟಾರ್, ಸೆವೆನ್ ಸ್ಟಾರ್ ಹೋಟೇಲ್ ಗಳಲ್ಲಿ ಕುಳಿತವರು ಮಾತನಾಡಲ್ಲ. ರೈತರ ಸಮಸ್ಯೆ ಬಗ್ಗೆ ಚಿಂತೆ ಮಾಡಲ್ಲ. ನಾವು ವಾಯು ಮಾಲಿನ್ಯವನ್ನು ಏರ್ ಕ್ವಾಲಿಟಿ ಇಂಡೆಕ್ಸ್ ನಲ್ಲಿ 500ಕ್ಕಿಂತ ಕಡಿಮೆಗೆ ಇಳಿಸಲು ಬಯಸಿದ್ದೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ದೆಹಲಿಯ ವಾಯು ಮಾಲಿನ್ಯಕ್ಕೆ ಮುಖ್ಯವಾಗಿ ವಾಹನಗಳ ಹೊಗೆ, ರಸ್ತೆಯ ಧೂಳು, ಕಟ್ಟಡ ನಿರ್ಮಾಣದ ಧೂಳು, ಥರ್ಮಲ್ ಪ್ಲಾಂಟ್ ಗಳ ಮಾಲಿನ್ಯ, ಕಾರ್ಖಾನೆಗಳ ವಾಯುಮಾಲಿನ್ಯ ಕಾರಣವಾಗಿದೆ. ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಹೇಳಿದೆ. ಚೀನಾ ದೇಶವು ನಮಗೆ ಪಾಕಿಸ್ತಾನದಂತೆ ವೈರಿ ರಾಷ್ಟ್ರಗಳಲ್ಲಿ ಒಂದು. ಆದರೆ, ವಾಯು ಮಾಲಿನ್ಯ ನಿಯಂತ್ರಣದಲ್ಲಿ ಚೀನಾ ಮಾದರಿಯನ್ನು ನಮ್ಮ ದೇಶವು ಅಳವಡಿಸಿಕೊಳ್ಳಲೇಬೇಕಾಗಿದೆ. ಇಲ್ಲದೆ ಹೋದರೆ ದೆಹಲಿ ಸೇರಿದಂತೆ ಉತ್ತರ ಭಾರತದ ನಗರಗಳಿಗೆ ಆಗಲಿ, ಬೆಂಗಳೂರಿನಂಥ ನಗರಗಳಿಗೇ ಉಳಿಗಾಲ ಇರೋದಿಲ್ಲ . ನಗರಗಳ ಜನರು ಹೊಗೆ ಕುಡಿದೇ ಸಾಯಬೇಕಾಗುತ್ತದೆ.
ಬರಾಕ್ ಒಬಾಮಾ ಆಯುಷ್ಯ 6 ಗಂಟೆ ಕಡಿಮೆ ಆಯ್ತು!: ಅಮೆರಿಕದ ಅಧ್ಯಕ್ಷರಾಗಿದ್ದಾಗ ಬರಾಕ್ ಒಬಾಮಾ 2015ರಲ್ಲಿ ದೆಹಲಿಗೆ ಬಂದಿದ್ದರು. ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಾಜಪಥ್ ರಸ್ತೆಯ ಪರೇಡ್ ಅನ್ನು ವೀಕ್ಷಣೆ ಮಾಡಿದ್ದರು. ಆಗ ಕೇವಲ ಎರಡು ಗಂಟೆಗಳ ಕಾಲ ರಾಜಪಥ್ ರಸ್ತೆಯಲ್ಲಿ ಕುಳಿತು ಕೆಟ್ಟ ಗಾಳಿ ಕುಡಿದು ಪರೇಡ್ ವೀಕ್ಷಣೆ ಮಾಡಿದ್ದರಿಂದ ಬರಾಕ್ ಒಬಾಮಾರ ಜೀವನದ ಆಯುಷ್ಯದಲ್ಲಿ 6 ಗಂಟೆ ಕಡಿಮೆ ಆಯ್ತು ಅಂತ ಸಂಸ್ಥೆಯೊಂದು ಹೇಳಿತ್ತು. ಕೇವಲ 2 ಗಂಟೆ ದೆಹಲಿಯ ಗಾಳಿ ಸೇವಿಸಿದ್ದಕ್ಕೆ 6 ಗಂಟೆ ಆಯುಷ್ಯ ಕಡಿಮೆಯಾಗೋದಾದರೆ ವರ್ಷಗಟ್ಟಲೇ ದೆಹಲಿಯಲ್ಲಿ ಜೀವಿಸುವವರ ಆಯುಷ್ಯ ಎಷ್ಟು ಕಡಿಮೆ ಆಗಿರಬಹುದು ಅನ್ನೋದನ್ನು ಲೆಕ್ಕ ಹಾಕಿ.
ಇಂದು ಚೀನಾದ ರಾಜಧಾನಿ ಬೀಜಿಂಗ್ ಸೇರಿದಂತೆ 27 ನಗರಗಳ ಜನರು ಶುದ್ದ ಗಾಳಿಯನ್ನು ಸೇವಿಸುತ್ತಿದ್ದಾರೆ. ಆದರೇ, ಬರೇ ಎಂಟು ವರ್ಷಗಳ ಹಿಂದೆ ಚೀನಾ ಕೂಡ ನಮ್ಮ ಭಾರತದಂತೆಯೇ ಭಾರಿ ಮಾಲಿನ್ಯದಿಂದ ತತ್ತರಿಸಿ ಹೋಗಿತ್ತು . ಈಗ ದೆಹಲಿಯಲ್ಲಿ ಹೇಗೆ ಸ್ಮಾಗ್ ಆವರಿಸಿಕೊಳ್ಳುತ್ತಿದೆಯೋ ಅದೇ ರೀತಿ, ಚೀನಾದಲ್ಲೂ 2013 ರಲ್ಲಿ ಸ್ಮಾಗ್ ಆವರಿಸಿಕೊಂಡಿತ್ತು. 2013ರ ಜನವರಿಯಲ್ಲಿ ಚೀನಾದಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ ಡೇಂಜರಸ್ ಮಟ್ಟದಲ್ಲಿತ್ತು . 2013ರ ಡಿಸೆಂಬರ್ ವೇಳೆಗೆ ಚೀನಾದ 31 ಪ್ರಾಂತ್ಯಗಳ ಪೈಕಿ 25 ಪ್ರಾಂತ್ಯಗಳಲ್ಲಿ ಭಾರಿ ಸ್ಮಾಗ್ ಆವರಿಸಿಕೊಂಡಿತ್ತು . ಆದರೇ, ಚೀನಾ ತಕ್ಷಣವೇ ಎಚ್ಚೆತ್ತುಕೊಂಡಿತ್ತು . ಚೀನಾ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ವಾಯು ಮಾಲಿನ್ಯವನ್ನು ನಿಯಂತ್ರಿಸದೇ ಇದ್ದರೇ, ನಮ್ಮ ದೇಶಕ್ಕೆ ಉಳಿಗಾಲ ಇಲ್ಲ ಅನ್ನೋದು ಬೇಗ ಮನವರಿಕೆಯಾಗಿತ್ತು. ತಕ್ಷಣವೇ ಪ್ಲಾನ್ ಹಾಕಿಕೊಂಡು ಟಾರ್ಗೆಟ್ ಫಿಕ್ಸ್ ಮಾಡಿಕೊಂಡ್ರು. ವಾಯು ಮಾಲಿನ್ಯ ನಿಯಂತ್ರಣದಲ್ಲಿ ಚೀನಾ ಸಕ್ಸಸ್ ಆಗಿದ್ದು ಇಂಟರೆಸ್ಟಿಂಗ್ ಕಥೆ.
ಮಾಲಿನ್ಯ ನಿಯಂತ್ರಿಸಲು ಚೀನಾ ದೇಶ ತೆೆಗೆದುಕೊಂಡ ಕ್ರಮಗಳು ಸಕ್ಸಸ್ ಆಗಿವೆ. ವಾಯು ಮಾಲಿನ್ಯದ ವಿರುದ್ದ ಚೀನಾ ದೇಶವು ಸಮರವನ್ನೇ ಸಾರಿ ಬಿಟ್ಟಿತು. ಚೀನಾ ದೇಶವು ಈ ಹಿಂದೆ ಬಡತನದ ವಿರುದ್ದ ಸಮರ ನಡೆಸಿತ್ತು. ಅದೇ ರೀತಿಯಾದ ಸಮರವನ್ನು ವಾಯು ಮಾಲಿನ್ಯದ ವಿರುದ್ದ ನಡೆಸುತ್ತೇವೆ ಅಂತ 2014ರ ಮಾರ್ಚ್ 1ರಂದು ಚೀನಾ ಪ್ರಿಮಿಯರ್ ಲೀ ಕಿಕಿಯಾಂಗ್ ಘೋಷಿಸಿದ್ದರು. ಆ ಸಮರದಲ್ಲಿ ಚೀನಾ ಈಗ ಯಶಸ್ವಿಯಾಗಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಚೀನಾ ದೇಶವು ನ್ಯಾಷನಲ್ ಏರ್ ಕ್ವಾಲಿಟಿ ಆಕ್ಷನ್ ಪ್ಲಾನ್ ಅನ್ನು ಬಿಡುಗಡೆ ಮಾಡ್ತು. ಈ ಪ್ಲಾನ್ ಪ್ರಕಾರ, ನಗರ ಪ್ರದೇಶಗಳು, ಫೈನ್ ಪರ್ಟಿಕ್ಯೂಲೇಟ್ ಮ್ಯಾಟರ್ಸ್ ಅನ್ನು ಪ್ರತಿ ವರ್ಷ ಶೇ. 10 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬೇಕಾಗಿತ್ತು . ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಶೇಕಡಾ 25 ರಷ್ಟು ಮಾಲಿನ್ಯ ನಿಯಂತ್ರಣ ಮಾಡಬೇಕಾಗಿತ್ತು . ಜತೆಗೇ ಕಲ್ಲಿದ್ದಲು ಬಳಕೆಯನ್ನು ದೇಶಾದಾದ್ಯಂತ ಶೇಕಡಾ 50 ರಷ್ಟು ಕಡಿಮೆ ಮಾಡಬೇಕಾಗಿತ್ತು . ಇದಕ್ಕಾಗಿ ಚೀನಾ ದೇಶವು 120 ಬಿಲಿಯನ್ ಡಾಲರ್ ಹಣವನ್ನು ತೆಗೆದಿಟ್ಟಿತ್ತು . ಪ್ಲಾನ್ ಹಾಕಿಕೊಂಡು ಸುಮ್ಮನೇ ಇರೋ ದೇಶವಲ್ಲ ಚೀನಾ. ತನ್ನ ಪ್ಲಾನ್ ಅನ್ನು ಐದು ವರ್ಷಗಳಲ್ಲಿ ಜಾರಿಗೊಳಿಸಿ ವಾಯು ಮಾಲಿನ್ಯ ನಿಯಂತ್ರಣ ಮಾಡಲೇಬೇಕೆಂದು ಹಠಕ್ಕೆ ಬಿದ್ದು ಜಾರಿ ಮಾಡಿ ಯಶಸ್ವಿಯಾಗಿದೆ.
ವಾಯು ಮಾಲಿನ್ಯಕ್ಕೆ ಬರೀ ವಾಹನಗಳ ಹೊಗೆ ಮಾತ್ರ ಕಾರಣವಲ್ಲ, ಕಲ್ಲಿದ್ದಲು ಬಳಸುವ ಕಾರ್ಖಾನೆಗಳಿಂದಲೂ ಹೆಚ್ಚಿನ ವಾಯು ಮಾಲಿನ್ಯ ಆಗುತ್ತದೆ. ಧೂಳಿನಿಂದಲೂ ಮಾಲಿನ್ಯ ಉಂಟಾಗುತ್ತೆ . ಹೀಗಾಗಿ ಚೀನಾ ದೇಶವು ರಾಜಧಾನಿ ಬೀಜಿಂಗ್ ಸುತ್ತಮುತ್ತಲಿನ ಕಲ್ಲಿದ್ದಲು ಬಳಸುವ ಕಾರ್ಖಾನೆಗಳ ಮೇಲೆ ನಿರ್ಬಂಧ ವಿಧಿಸಿತು. ಕಲ್ಲಿದ್ದಲು ಬದಲು ನ್ಯಾಚುರಲ್ ಗ್ಯಾಸ್ ಬಳಸಲು ಕಾರ್ಖಾನೆಗಳಿಗೆ ಸೂಚನೆ ನೀಡಿತ್ತು.
ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ 103 ಕಾರ್ಖಾನೆಗಳನ್ನು ಮುಚ್ಚಿದೆ . ಈ ಕಾರ್ಖಾನೆಗಳಿಂದ 50 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು . ದೊಡ್ಡ ಡೊಡ್ಡ ಕಾರ್ಖಾನೆಗಳು ಮುಚ್ಚುವುದು ಸುಮ್ಮನೇ ಅಲ್ಲ. ಏಕೆಂದರೇ, ದೊಡ್ಡ ದೊಡ್ಡ ಕಾರ್ಖಾನೆಗಳ ಮಾಲೀಕರಿಗೆ ತಮ್ಮದೇ ಆದ ರಾಜಕೀಯ ಪ್ರಭಾವ ಇರುತ್ತೆ. ಈ ಕಾರ್ಖಾನೆಗಳನ್ನು ಕಾರ್ಮಿಕರು ಉದ್ಯೋಗಕ್ಕಾಗಿ ಅವಲಂಬಿಸಿರುತ್ತಾರೆ . ಕಾರ್ಖಾನೆಗಳ ಉತ್ಪಾದನೆಯೇ ಸ್ಥಗಿತವಾದರೇ, ಆದಾಯಕ್ಕೆ ಕತ್ತರಿ ಬೀಳುತ್ತೆ . ಆದರೂ ಚೀನಾ ದೇಶವು ಈ ಕಠಿಣ ತೀರ್ಮಾನಗಳನ್ನು ತೆಗೆದುಕೊಂಡಿತು . ವಾಯು ಮಾಲಿನ್ಯವು ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಮಾಡಿತ್ತು.
ಬೀಜಿಂಗ್, ಶಾಂಘೈ ಮತ್ತು ಗುಂಜುಗ್ ನಗರಗಳಲ್ಲಿ ಹಳೆಯ ಕಾರ್ ಗಳ ಬಳಕೆಯನ್ನು ನಿಷೇಧಿಸಿತು. ಬೀಜಿಂಗ್ ನಲ್ಲೇ ಸುಮಾರು 5 ಲಕ್ಷ ಹಳೆಯ ಕಾರ್ ಗಳ ಬಳಕೆಯನ್ನು ನಿಷೇಧಿಸಿತು. ಜತೆಗೇ 26 ನಗರಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಯನ್ನು ಕಡಿಮೆ ಮಾಡಿತು . 50 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆಯನ್ನ ಸ್ಥಗಿತಗೊಳಿಸಿದೆ . ಕಲ್ಲಿದ್ದಲು ಗಣಿಗಳನ್ನೇ ಬಂದ್ ಮಾಡಿತು . ಸಿಮೆಂಟ್ ಕಾರ್ಖಾನೆಗಳನ್ನು ಬಂದ್ ಮಾಡಿದೆ. ಇಷ್ಟೇ ಅಲ್ಲ, ಕೆಲವೊಂದು ಎಕ್ಸಟ್ರಾಡಿನರಿ ಕ್ರಮಗಳನ್ನು ತೆಗೆದುಕೊಂಡಿತು . ಮನೆ, ಕಚೇರಿಗಳಲ್ಲಿ ಚಳಿಗಾಲದಲ್ಲಿ ಬಳಸುವ ಕಲ್ಲಿದ್ದಲು ಬಾಯ್ಲರ್ ಗಳ ಬಳಕೆಯನ್ನು ನಿಷೇಧಿಸಿತ್ತು. ಬೀಜಿಂಗ್ ನಗರದಲ್ಲಿ ಈಗ ಹೆಚ್ಚಾಗಿ ನ್ಯಾಚುರಲ್ ಗ್ಯಾಸ್ ಅನ್ನು ಬಳಸುತ್ತಿದ್ದಾರೆ . ಮಾಸ್ಕೋ ನಂತರ ಅತಿ ಹೆಚ್ಚು ನ್ಯಾಚುರಲ್ ಗ್ಯಾಸ್ ಬಳಸುತ್ತಿರುವ ನಗರ ಅಂದರೇ, ಬೀಜಿಂಗ್. ಇಷ್ಟೇ ಅಲ್ಲ , ಹೆಚ್ಚಿನ ಅಧಿಕಾರ ಇರೋ ಎನ್ವಿರಾನ್ ಮೆಂಟ್ ಪ್ರೊಟೆಕ್ಷನ್ ಏಜೆನ್ಸಿಯನ್ನು ಆಸ್ತಿತ್ವಕ್ಕೆ ತಂದಿದೆ.
ಬೀಜಿಂಗ್ ನಗರದಲ್ಲಿ ವಾಯು ಮಾಲಿನ್ಯದ ನಿಯಂತ್ರಣಕ್ಕಾಗಿಯೇ ಈ ವರ್ಷ 3 ಬಿಲಿಯನ್ ಡಾಲರ್ ಹಣವನ್ನು ಎತ್ತಿಡಲಾಗಿದೆ. ಬೀಜಿಂಗ್ ಮತ್ತು ಸುತ್ತಮುತ್ತಲಿನ 450 ಹಳ್ಳಿಗಳಿಗೆ ಈ ವರ್ಷ ಕಲ್ಲಿದ್ದಲಿನಿಂದ ಉತ್ಪಾದಿಸಿದ ವಿದ್ಯುತ್ ನ ಬದಲು ಕ್ಲೀನ್ ಎನರ್ಜಿಯನ್ನು ನೀಡುವ ಪ್ಲಾನ್ ಹಾಕಿಕೊಂಡಿದೆ. ಕಳೆದ ವರ್ಷ 901 ಹಳ್ಳಿಗಳಿಗೆ ಕ್ಲೀನ್ ಎನರ್ಜಿಯನ್ನು ಪೂರೈಸಿದ್ದಾರೆ. ಇದೆಲ್ಲದರಿಂದ ಬೀಜಿಂಗ್ನಲ್ಲಿ ಪಿಎಂ 2.5, ಕಳೆದ ವರ್ಷ 58 ಮೈಕ್ರೋಗ್ರಾಂ ಫಾರ್ ಕ್ಯೂಬಿಕ್ ಮೀಟರ್ಗೆ ಇಳಿದಿದೆ. 2014 ಮತ್ತು 2015 ರಲ್ಲಿ ಬೀಜಿಂಗ್ ನಲ್ಲಿ ಫೈನ್ ಪರ್ಟಿಕ್ಯೂಲೇಟ್ ಮ್ಯಾಟರ್ಸ್ ಶೇಕಡಾ 25 ರಷ್ಟು ಕಡಿಮೆಯಾಗಿದೆ.
ಚೀನಾದಲ್ಲಿ ಬೀಜಿಂಗ್ ನಂತೆ ಅತಿ ಹೆಚ್ಚು ವಾಯು ಮಾಲಿನ್ಯವಾಗಿರುವ ನಗರ ಅಂದರೆ ತಾಂಗ್ ಶಾನ್ ನಗರ. ಚೀನಾದಲ್ಲಿ ವಾಯು ಮಾಲಿನ್ಯದಲ್ಲಿ ತಾಂಗ್ ಶಾನ್ ನಗರಕ್ಕೆ ಆರನೇ ಸ್ಥಾನ. ಆದರೆ ಕಳೆದ ಕೆಲ ವರ್ಷಗಳಿಂದ ತಾಂಗ್ ಶಾನ್ ನಗರದಲ್ಲಿ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ಕೆಲ ಕಾರ್ಖಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಚೀನಾದಲ್ಲಿ ಭಾರೀ ಕೈಗಾರೀಕರಣದಿಂದ ಜನರು ಬಡತನದಿಂದ ಹೊರಗೆ ಬಂದರು, ಜನರ ಆರ್ಥಿಕ ಸ್ಥಿತಿ ಉತ್ತಮವಾಯ್ತು. ಆದರೆ, ಅದರ ಹಿಂದೆಯೇ ಚೀನಾದಲ್ಲಿ ವಾಯು ಮಾಲಿನ್ಯ ಹೆಚ್ಚಾಯ್ತು . ಕುಡಿಯುವ ನೀರು ಕೂಡ ಮಲಿನವಾಯ್ತು . ಆಹಾರ ಕೂಡ ವಿಷವಾಯ್ತು . ಈಗ ವಾಯು ಮಾಲಿನ್ಯವನ್ನು ಮಟ್ಟ ಹಾಕಲು ಸಮರ ನಡೆಸುತ್ತಿದೆ . ಕಾರ್ ಗಳ ಎಮಿಷನ್ ಸ್ಟಾಂಡರ್ಡ್ ಅನ್ನು ಯೂರೋಪ್ ಮತ್ತು ಆಮೆರಿಕಾದ ಸ್ಟಾಂಡರ್ಡ್ ಗೆ ತಕ್ಕಂತೆ ಇರುವಂತೆ ನಿಯಮ ಜಾರಿಗೆ ತರಲಾಗಿದೆ . ಅಷ್ಟೇ ಅಲ್ಲ, ಮಾಲಿನ್ಯ ಮಾಪಕ ಕೇಂದ್ರಗಳ ಅಂಕಿಅಂಶ ಜನರ ಸ್ಮಾರ್ಟ್ ಪೋನ್ ಗಳಲ್ಲೂ ಸಿಗುವಂತೆ ಮಾಡಿದೆ. ಇದರಿಂದಾಗಿ ಯಾವುದಾದರೂ ಪ್ರದೇಶದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ವಾಯು ಮಾಲಿನ್ಯ ಇದ್ದರೇ, ಅದರ ಬಗ್ಗೆ ಜನರೇ ಅಧಿಕಾರಿಗಳಿಗೆ ದೂರು ನೀಡಬಹುದು . ಈ ಹಿಂದೆ ಚೀನಾದಲ್ಲಿ ಅಧಿಕಾರಿಗಳಿಗೆ ತಮ್ಮ ಪ್ರದೇಶದ ಆರ್ಥಿಕ ಬೆಳವಣಿಗೆಯ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸೂಚನೆ ನೀಡಲಾಗಿತ್ತು . ಆದರೇ, ಈಗ ವಾಯು ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡುವಂತೆ ಸೂಚನೆ ನೀಡಲಾಗಿದೆ . ವಾಯು ಮಾಲಿನ್ಯ ನಿಯಂತ್ರಣವೇ ಈಗ ಸರ್ಕಾರ ಮತ್ತು ಅಧಿಕಾರಿಗಳ ಮೊದಲ ಆದ್ಯತೆಯಾಗಿದೆ . ನಗರಗಳ ಮೇಯರ್ ಗಳು ತಮ್ಮ ನಗರಗಳಲ್ಲಿ ವಾಯು ಗುಣಮಟ್ಟವನ್ನು ಸುಧಾರಿಸಲು ಯತ್ನಿಸದೇ ಇದ್ದರೇ, ಪರಿಸರ ಇಲಾಖೆಯ ಕಚೇರಿಗೆ ಕರೆದು ವಾರ್ನಿಂಗ್ ನೀಡಲಾಗುತ್ತಿದೆ . ಚೀನಾವು 2013ರಿಂದ 2018ರೊಳಗೆ ವಾಯು ಮಾಲಿನ್ಯ ನಿಯಂತ್ರಿಸಬೇಕು ಅಂತ ಐದು ವರ್ಷದ ಡೆಡ್ ಲೈನ್ ಕೊಟ್ಟಿಕೊಂಡಿತ್ತು . ಈಗ ಆ ಟಾರ್ಗೆಟ್ ತಲುಪಿದೆ . 2017ರ ಮಧ್ಯೆ ಭಾಗದವರೆಗೂ ಚೀನಾದ ಪರಿಸರ ತಜ್ಞರಿಗೆ ಟಾರ್ಗೆಟ್ ತಲುಪುವ ವಿಶ್ವಾಸ ಇರಲಿಲ್ಲ. ಮಾಲಿನ್ಯ ನಿಯಂತ್ರಣದ ಟಾರ್ಗೆಟ್ ತಲುಪಲು ಇನ್ನೂ ಎರಡು ಮೂರು ವರ್ಷ ಬೇಕು ಅಂತ ಚೀನಾದ ಪರಿಸರ ತಜ್ಞರು ಅಂದುಕೊಂಡಿದ್ದರು . ಆದರೇ, 2018ರ ಜೂನ್ ವೇಳೆಗಾಗಲೇ ಚೀನಾ ತನ್ನ ಟಾರ್ಗೆಟ್ ಅನ್ನು ನಿರೀಕ್ಷೆಯಂತೆ ತಲುಪಿ ಮಾಲಿನ್ಯ ನಿಯಂತ್ರಿಸಿದೆ.
ವಾಯು ಮಾಲಿನ್ಯ ಅತಿಯಾಗಿ ನಮ್ಮ ದೆಹಲಿಯಲ್ಲಿ ಸ್ಮಾಗ್ ಆವರಿಸಿಕೊಂಡಿದೆ. ಸ್ಮಾಗ್ ಅಂದರೇ, ಹೊಗೆ ಮತ್ತು ಧೂಳಿನ ಮಿಶ್ರಣದಿಂದ ರಸ್ತೆಯಲ್ಲಿ ಏನೂ ಕೂಡ ಕಾಣದ ಸ್ಥಿತಿ ನಿರ್ಮಾಣವಾಗುತ್ತೆ . ದೆಹಲಿಯಲ್ಲಿ ಸ್ಮಾಗ್ ಆವರಿಸಿಕೊಂಡರೇ, ನೀಲಿ ಆಕಾಶ ಕೂಡ ಕಾಣಲ್ಲ . ಆದರೇ, ಚೀನಾದಲ್ಲಿ ನೀಲಿ ಆಕಾಶ ಕಾಣಲೇಬೇಕು, ಆ ಮಟ್ಟಿಗೆ ಮಾಲಿನ್ಯ ನಿಯಂತ್ರಿಸಬೇಕು ಅನ್ನೋ ಟಾರ್ಗೆಟ್ ಅನ್ನು ಹಾಕಿಕೊಂಡು ಸರ್ಕಾರ ಮತ್ತು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕೇವಲ ನಾಲ್ಕೈದು ವರ್ಷಗಳಲ್ಲೇ ಮಾಲಿನ್ಯವನ್ನು ದಾಖಲೆ ಪ್ರಮಾಣದಲ್ಲಿ ನಿಯಂತ್ರಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಚೀನಾದಲ್ಲಿ ಈಗ ನೀಲಿ ಆಕಾಶವನ್ನ ಜನರು ನೋಡುತ್ತಿದ್ದಾರೆ .
ನಾಲ್ಕೈದು ವರ್ಷಗಳಿಂದ ವಾಯುಮಾಲಿನ್ಯದ ವಿರುದ್ದ ಸಮರ ನಡೆಸಿ ಯಶಸ್ವಿಯಾಗಿರುವ ಚೀನಾದ ರಾಜಧಾನಿ ಬೀಜಿಂಗ್ ಅನ್ನು ವಿಶ್ವದ ನಾಯಕರೇ ಕೊಂಡಾಡುತ್ತಿದ್ದಾರೆ. ಕಳೆದ ವರ್ಷ ಬೀಜಿಂಗ್ ಗೆ ಭೇಟಿ ನೀಡಿದ್ದ ಪ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ , ಬೀಜಿಂಗ್ ಅನ್ನು ಹಿಂದೆಂದೂ ಈ ರೀತಿ ನೋಡಿರಲೇ ಇಲ್ಲ ಎಂದಿದ್ದಾರೆ. ಹಿಂದೆಲ್ಲಾ ಬೀಜಿಂಗ್ ವಾಯು ಮಾಲಿನ್ಯದಿಂದ ಕೂಡಿತ್ತು . ಆದರೇ, ಈಗ ಸ್ವಚ್ಛ ಗಾಳಿ, ಶುಭ್ರ ನೀಲಿ ಆಕಾಶವನ್ನು ನೋಡಿ ಮ್ಯಾಕ್ರನ್ ಈ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಚೀನಾದಂತೆ ನಮ್ಮ ದೇಶದಲ್ಲೂ ಕಲ್ಲಿದ್ದಲು ಬಳಸುವ ಕಾರ್ಖಾನೆಗಳನ್ನು ಮುಚ್ಚಬೇಕು. ಜತೆಗೇ ಸೋಲಾರ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು . ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಪೋತ್ಸಾಹ ನೀಡಬೇಕು. ಇದಕ್ಕಾಗಿ ಸರ್ಕಾರದಿಂದ ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಸ್ಟೇಷನ್ ಗಳನ್ನು ಹೆಚ್ಚೆಚ್ಚು ಆರಂಭಿಸಬೇಕು. ಹೆದ್ದಾರಿಗಳಲ್ಲಿ ಪ್ರತಿ 50 ಕಿಲೋಮೀಟರ್ ಗೊಂದರಂತೆ ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಸ್ಟೇಷನ್ ಆರಂಭಿಸಬೇಕು. ಪಂಜಾಬ್, ಹರಿಯಾಣ ಸೇರಿದಂತೆ ಉತ್ತರ ಭಾರತದಲ್ಲಿ ಬೆಳೆಯ ತ್ಯಾಜ್ಯಕ್ಕೆ ರೈತರು ಬೆಂಕಿ ಹಚ್ಚುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ದೆಹಲಿಯಂತೆ ಉಳಿದ ನಗರಗಳಲ್ಲೂ ಎಲ್ಲ ವಾಹನಗಳು ಸಿಎನ್.ಜಿ ಬಳಸುವುದನ್ನು ಕಡ್ಡಾಯಗೊಳಿಸಬೇಕು. ಇದರಿಂದ ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆ ಕೂಡ ಕಡಿಮೆಯಾಗುತ್ತದೆ. ಮಾಲಿನ್ಯವೂ ಕಡಿಮೆಯಾಗುತ್ತದೆ.
ಇದನ್ನೂ ಓದಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ಮುಂದಿನ ವಾರದಿಂದ ಹರಿಯಾಣದಲ್ಲಿ ಬೆಸ- ಸಮ ನಿಯಮ ಜಾರಿ