ನಿವೃತ್ತಿಯ ನಂತರ ಯಾವುದೇ ಸರ್ಕಾರಿ ಹುದ್ದೆ ಸ್ವೀಕರಿಸುವುದಿಲ್ಲ; ಸಿಜೆಐ ಗವಾಯಿ ಘೋಷಣೆ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ನಿವೃತ್ತಿ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. 'ನಾನು ನಿವೃತ್ತಿಯ ನಂತರ ಯಾವುದೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ' ಎಂದು ಅವರು ಹೇಳಿದ್ದಾರೆ. ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಸಿಜೆಐ ಗವಾಯಿ ಈ ವರ್ಷ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. 65 ವರ್ಷ ವಯಸ್ಸನ್ನು ತಲುಪಿದ ನಂತರ ಹುದ್ದೆಯನ್ನು ತ್ಯಜಿಸಿದ ಸಿಜೆಐ ಸಂಜೀವ್ ಖನ್ನಾ ಅವರ ಉತ್ತರಾಧಿಕಾರಿಯಾಗಿ ಗವಾಯಿ ನೇಮಕಗೊಂಡಿದ್ದಾರೆ.

ಅಮರಾವತಿ, ಜುಲೈ 25: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ (BR Gavai) ಇಂದು (ಶುಕ್ರವಾರ) ತಮ್ಮ ನಿವೃತ್ತಿಯ ನಂತರ ಯಾವುದೇ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಅಮರಾವತಿ (Amarawati) ಜಿಲ್ಲೆಯ ತಮ್ಮ ಸ್ಥಳೀಯ ಗ್ರಾಮವಾದ ದಾರಾಪುರದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. “ನನ್ನ ನಿವೃತ್ತಿಯ ನಂತರ ನಾನು ಯಾವುದೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸಬಾರದು ಎಂದು ನಿರ್ಧರಿಸಿದ್ದೇನೆ. ನಿವೃತ್ತಿಯ ನಂತರ ನನಗೆ ಹೆಚ್ಚಿನ ಸಮಯ ಸಿಗುತ್ತದೆ. ಆದ್ದರಿಂದ ನಾನು ದಾರಾಪುರ, ಅಮರಾವತಿ ಮತ್ತು ನಾಗ್ಪುರದಲ್ಲಿ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸುತ್ತೇನೆ” ಎಂದು ಗವಾಯಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಬಿ.ಆರ್ ಗವಾಯಿ ನವೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಪ್ರಸ್ತುತ ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಸಿಜೆಐ ಗವಾಯಿ ಈ ವರ್ಷ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ನವೆಂಬರ್ 24, 1960ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಜನಿಸಿದ ಗವಾಯಿ ಭಾರತದ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಬೌದ್ಧ ಧರ್ಮೀಯರು. ಅವರು 65 ವರ್ಷ ವಯಸ್ಸಿನ ನಂತರ ನಿವೃತ್ತರಾದ ಸಿಜೆಐ ಸಂಜೀವ್ ಖನ್ನಾ ಅವರ ನಂತರ ಅಧಿಕಾರ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: ತೆಲಂಗಾಣಕ್ಕೆ ಭೇಟಿ ನೀಡಿದ್ದಾಗ ತೀವ್ರ ಸೋಂಕು ತಗುಲಿ ಸಿಜೆಐ ಬಿಆರ್ ಗವಾಯಿ ಆಸ್ಪತ್ರೆಗೆ ದಾಖಲು
ಬಿ.ಆರ್ ಗವಾಯಿ ನವೆಂಬರ್ 2005ರಲ್ಲಿ ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾದರು. ಮೇ 2019ರಲ್ಲಿ ಅವರಿಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲಾಯಿತು. ಬಿ.ಆರ್ ಗವಾಯಿ ಡಿಸೆಂಬರ್ 2023ರಲ್ಲಿ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಸರ್ವಾನುಮತದಿಂದ ಎತ್ತಿಹಿಡಿದ 5 ನ್ಯಾಯಾಧೀಶರ ಸಂವಿಧಾನ ಪೀಠದ ಭಾಗವಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




