AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೊಬೆಲ್ ಪ್ರಶಸ್ತಿ ವಿಜೇತರ ಜತೆ ಸಂವಾದ ಬೆಂಗಳೂರಿನಲ್ಲಿ: ಭಾರತದಲ್ಲೇ ಮೊದಲು, ಟಾಟಾ ಟ್ರಸ್ಟ್ಸ್ ಆಯೋಜನೆ

ಈ ವರ್ಷ ನವೆಂಬರ್‌ನಲ್ಲಿ ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ ಟಾಟಾ ಟ್ರಸ್ಟ್‌ಗಳು "ನಾವು ಬಯಸುವ ಭವಿಷ್ಯ" ಎಂಬ ಥೀಮ್‌ನೊಂದಿಗೆ ನೊಬೆಲ್ ಪ್ರಶಸ್ತಿ ವಿಜೇತರ ಸಂವಾದವನ್ನು ಆಯೋಜಿಸುತ್ತಿವೆ. ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ, ಜಾಗತಿಕ ಚಿಂತಕರು ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳ ಕುರಿತು ಚರ್ಚಿಸಲಿದ್ದಾರೆ. ಡೇವಿಡ್ ಮ್ಯಾಕ್‌ಮಿಲನ್ ಮತ್ತು ಜೇಮ್ಸ್ ರಾಬಿನ್ಸನ್ ಅವರು ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತರ ಜತೆ ಸಂವಾದ ಬೆಂಗಳೂರಿನಲ್ಲಿ: ಭಾರತದಲ್ಲೇ ಮೊದಲು, ಟಾಟಾ ಟ್ರಸ್ಟ್ಸ್ ಆಯೋಜನೆ
ಪ್ರಾತಿನಿಧಿಕ ಚಿತ್ರImage Credit source: NobelPrize.org
Ganapathi Sharma
|

Updated on: Jul 26, 2025 | 10:42 AM

Share

ಬೆಂಗಳೂರು, ಜುಲೈ 26: ಬೆಂಗಳೂರು ಮತ್ತು ಮುಂಬೈ ಈ ವರ್ಷ ನವೆಂಬರ್‌ನಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿವೆ. ನೊಬೆಲ್ ಪ್ರಶಸ್ತಿ ವಿಜೇತರ ಸಂವಾದವನ್ನು (Nobel Prize Dialogue) ಟಾಟಾ ಟ್ರಸ್ಟ್ಸ್ (Tata Trusts) ಆಯೋಜಿಸಲಿದೆ. ನೊಬೆಲ್ ಪ್ರಶಸ್ತಿ ವಿಜೇತರ ಸಂವಾದ ಕಾರ್ಯಕ್ರಮ ಭಾರತದಲ್ಲಿ ಆಯೋಜಿಸುತ್ತಿರುವುದು ಇದೇ ಮೊದಲಾಗಿದೆ. ಉಭಯ ನಗರಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, ಪ್ರಮುಖ ಜಾಗತಿಕ ಚಿಂತಕರನ್ನು ಒಂದೇ ವೇದಿಕೆಯಡಿ ತರಲಾಗುತ್ತದೆ. ಅವರು ಭವಿಷ್ಯವನ್ನು ರೂಪಿಸಲು ಒತ್ತು ನೀಡಬೇಕಾದ ವಿಚಾರಗಳ ಬಗ್ಗೆ ಮತ್ತು ಸವಾಲುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಟಾಟಾ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

‘ನಾವು ಬಯಸುವ ಭವಿಷ್ಯ (The Future We Want)’ ಎಂಬ ಥೀಮ್‌ನೊಂದಿಗೆ ಸಂವಾದಗಳು ನಡೆಯಲಿವೆ. ಜ್ಞಾನ, ಕ್ರಿಯಾಶೀಲತೆ ಮತ್ತು ಯುವ ಜನಾಂಗದ ಮೇಲಿನ ಹೂಡಿಕೆಯು ಎಲ್ಲರನ್ನೂ ಒಳಗೊಂಡ, ಸುಸ್ಥಿರ ಮತ್ತು ನವೀನ ಜಗತ್ತನ್ನು ನಿರ್ಮಿಸಲು ಹೇಗೆ ಸಹಾಯ ಮಾಡಲಿದೆ ಎಂಬುದರ ಮೇಲೆ ಚರ್ಚೆಯು ಕೇಂದ್ರೀಕೃತವಾಗಿರಲಿದೆ ಎಂದು ಟಾಟಾ ಟ್ರಸ್ಟ್‌ಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಡೇವಿಡ್ ಮ್ಯಾಕ್‌ಮಿಲನ್ (ರಸಾಯನಶಾಸ್ತ್ರ, 2021) ಮತ್ತು ಜೇಮ್ಸ್ ರಾಬಿನ್ಸನ್ (ಆರ್ಥಿಕ ವಿಜ್ಞಾನ, 2024) ಅವರು ವಿಜ್ಞಾನ, ಉದ್ಯಮ ವ್ಯವಹಾರ ಮತ್ತು ನೀತಿ ನಿರೂಪಣೆಯ ಪ್ರಮುಖ ವಿಚಾರಗಳೊಂದಿಗೆ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ.

ನೊಬೆಲ್ ಪ್ರಶಸ್ತಿ ಸಂವಾದ ಎಂದರೇನು?

ನೊಬೆಲ್ ಪ್ರಶಸ್ತಿ ವಿಜೇತರ ಜತೆಗಿನ ಸಂವಾದವು ಮುಕ್ತ ವೇದಿಕೆಯಾಗಿದ್ದು ಇದು ನೊಬೆಲ್ ಪ್ರಶಸ್ತಿ ವಿಜೇತರು, ಪ್ರಮುಖ ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ತತ್ವಜ್ಞರನ್ನು ಒಟ್ಟುಗೂಡಿಸಿ ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸುವ ವೇದಿಕೆಯಾಗಿದೆ ಎಂದು ನೊಬೆಲ್ ಪ್ರಶಸ್ತಿಯ ಅಧಿಕೃತ ವೆಬ್‌ಸೈಟ್‌ ತಿಳಿಸಿದೆ.

ವಿಜ್ಞಾನಿಗಳು ಮತ್ತು ಇತರ ಕ್ಷೇತ್ರದವರನ್ನು ಸಮಾನವಾಗಿ ಒಂದೇ ವೇದಿಕೆಯಡಿ ತರುವ ಕಾರ್ಯಕ್ರಮ ಇದಾಗಿದ್ದು, ಸಂವಾದವು ವೈಜ್ಞಾನಿಕ ಮತ್ತು ಸಮಾಜದ ಉಳಿದ ಕ್ಷೇತ್ರಗಳವರ ನಡುವಿನ ಸಂವಹನವನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ.

ಸರ್ವರಿಗೂ ಮುಕ್ತ ಸಂವಾದ: ಆನ್​​ಲೈನ್ ಮೂಲಕವೇ ಆಭಗವಹಿಸಬಹುದು

ನೊಬೆಲ್ ಪ್ರಶಸ್ತಿ ಸಂವಾದವು ಉಚಿತವಾಗಿದ್ದು, ವಿಶ್ವದಾದ್ಯಂತ ಪ್ರೇಕ್ಷಕರಿಗೆ ಆನ್‌ಲೈನ್‌ ಮೂಲಕ ಭಾಗವಹಿಸಬಹುದಾಗಿದೆ. ಈ ಸಂವಾದವು ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭದ ಹಿಂದಿನ ದಿನ 2012 ರಿಂದ ಸ್ವೀಡನ್ನಲ್ಲಿ ನಡೆಯುತ್ತಿರುವ ‘‘ನೊಬೆಲ್ ವೀಕ್ ಡಯಲಾಗ್’’ನಿಂದ ಪ್ರೇರಿತವಾಗಿದೆ ಎಂದು ಟಾಟಾ ಟ್ರಸ್ಟ್ಸ್ ತಿಳಿಸಿದೆ.

ಇದನ್ನೂ ಓದಿ: ರಸಾಯನಶಾಸ್ತ್ರದಲ್ಲಿ ಡೇವಿಡ್ ಬೇಕರ್ , ಡೆಮಿಸ್ ಹಸ್ಸಾಬಿಸ್, ಜಾನ್ ಎಂ. ಜಂಪರ್​​ಗೆ ನೊಬೆಲ್ ಪ್ರಶಸ್ತಿ

ಟಾಟಾ ಟ್ರಸ್ಟ್ಸ್ ಪ್ರಕಾರ, 2025 ರ ಭಾರತ ಆವೃತ್ತಿಯ ನೊಬೆಲ್ ಪ್ರಶಸ್ತಿ ವಿಜೇತರ ಸಂವಾದವು ದೇಶದ ಶ್ರೀಮಂತ ಬೌದ್ಧಿಕ ಸಂಪ್ರದಾಯಗಳನ್ನು ಪ್ರತಿಬಿಂಬಿಸಲಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ಅದರ ಬೆಳೆಯುತ್ತಿರುವ ಪ್ರಭಾವವನ್ನು ತೋರಿಸಿಕೊಡಲಿದೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ