ಆರೋಗ್ಯ ಇಲಾಖೆ ವಿರುದ್ಧ 108 ಆಂಬುಲೆನ್ಸ್ ನೌಕರರ ಕಿಡಿ: ಆಗಸ್ಟ್ 1 ರಿಂದ ಮುಷ್ಕರದ ಎಚ್ಚರಿಕೆ
ರಾಜ್ಯದಲ್ಲಿ ಯಾರಿಗೆ ಎಲ್ಲಿಯೇ ಆದರೂ ತುರ್ತು ಆರೋಗ್ಯ ಸೇವೆಗೆ ಬೇಕಾಗುವುದು ಆರೋಗ್ಯ ಕವಚ 108 ಆಂಬುಲೆನ್ಸ್. ಇಷ್ಟು ದಿನ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ಈ ತುರ್ತು ಸೇವೆಯನ್ನು ಇನ್ನು ಮುಂದೆ ಆರೋಗ್ಯ ಇಲಾಖೆಯೇ ಮಾಡಲಿದೆ. ಆದರೆ, ಈ ಬೆಳವಣಿಗೆ ಬೆನ್ನಲ್ಲೇ ಆಂಬುಲೆನ್ಸ್ ನೌಕರರ ಆಕ್ರೋಶ ಭುಗಿಲೆದ್ದಿದ್ದು, ಮುಷ್ಕರದ ಸುಳಿವು ನೀಡಿದ್ದಾರೆ.

ಬೆಂಗಳೂರು, ಜುಲೈ 26: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಮುಖ ಯೋಜನೆಗಳಲ್ಲಿ ಒಂದಾದ 108 ಆಂಬುಲೆನ್ಸ್ (108 Ambulance ) ಆರೋಗ್ಯ ಕವಚ ಸೇವೆಯನ್ನು ಇಷ್ಟು ದಿನಗಳ ಕಾಲ ಜಿವಿಕೆ ಎಂಬ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಶೀಘ್ರದಲ್ಲೇ ಆರೋಗ್ಯ ಇಲಾಖೆಯೇ (Karnataka Health Department) ನಿರ್ವಹಣೆ ಮಾಡುವುದಾಗಿ ಘೋಷಿಸಿದೆ. ಆದರೆ ಈ ಬೆಳವಣಿಗೆ ಬೆನ್ನಲ್ಲೇ 108 ಆರೋಗ್ಯ ಕವಚ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಕೆಂದರೆ, ಈವರೆಗೂ ಒಂದೇ ಸಂಸ್ಥೆಯ ನಿರ್ವಹಣೆ ಅಡಿಯಲ್ಲಿ 3500 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಇವರನ್ನೇ ಮುಂದುವರಿಸುವ ಬಗ್ಗೆ ಸರ್ಕಾರ ಅಥವಾ ಇಲಾಖೆ ಸ್ಪಷ್ಟತೆ ನೀಡಿಲ್ಲ. ಅಲ್ಲದೆ ಹಲವು ಸಮಸ್ಯೆ ಹಾಗೂ ಬೇಡಿಕೆಗಳನ್ನು ನೌಕರರು ಮುಂದಿಟ್ಟಿದ್ದಾರೆ. ಸರ್ಕಾರ ಇದಕ್ಕೆ ಸ್ಪಂದಿಸದಿದ್ದಲ್ಲಿ ಆಗಸ್ಟ್ 1 ರಿಂದ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಹೋರಾಟಕ್ಕೆ ಮುಂದಾಗುವ ಸುಳಿವು ನೀಡಿದ್ದಾರೆ.
ಆಂಬುಲೆನ್ಸ್ ನೌಕರರ ‘108’ ಸಮಸ್ಯೆಗಳು!
- 2 ಪಾಳಿಯಿಂದ 3 ಪಾಳಿ ಮಾಡಿರುವುದು ಅವೈಜ್ಞಾನಿಕ
- ಗ್ರಾಮೀಣ ಪ್ರದೇಶದಲ್ಲಿ ನೌಕರರಿಗೆ ಸಾರಿಗೆ ಸೇವೆ ಇಲ್ಲ
- ಮಹಿಳಾ ಸಿಬ್ಬಂದಿಗೆ ತೀವ್ರ ಸಮಸ್ಯೆ ಉಂಟಾಗಿದೆ
- ಹೊಸ ಆಂಬುಲೆನ್ಸ್ ವ್ಯವಸ್ಥೆ ಬಗ್ಗೆ ಗೊಂದಲ
- ಜಿಲ್ಲಾ ಮಟ್ಟದಲ್ಲಿ ಏಜೆನ್ಸಿಗಳ ಮೂಲಕ ನೌಕರರ ನೇಮಕ ಬೇಡ
- ಒಂದೇ ಸಂಸ್ಥೆ ಮೂಲಕ ನೌಕರರ ನಿರ್ವಹಣೆ ಮಾಡಬೇಕು
- ಈಗ ಕೆಲಸ ಮಾಡುತ್ತಿರುವ ಎಲ್ಲರನ್ನೂ ಮುಂದುವರೆಸಬೇಕು
ಒಟ್ಟಾರೆಯಾಗಿ, ಸರ್ಕಾರಗಳು ಬದಲಾದರೂ 108 ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಮಸ್ಯೆಗಳು ಮಾತ್ರ ಹಾಗೆyಏ ಉಳಿದಿವೆ. ಜನಸಾಮಾನ್ಯರು ಅನಾರೋಗ್ಯಕ್ಕೆ ಒಳಗಾದಾಗ ಬೇಕಾದ ಅತ್ಯವಶ್ಯಕ ಸೇವೆಗಳಲ್ಲಿ ಸರ್ಕಾರದ ಆಂಬುಲೆನ್ಸ್ ಸೇವೆಯಲ್ಲಿ ಇರುವ ಲೋಪಗಳನ್ನು ಸರಿ ಪಡಿಸಲು ಆರೋಗ್ಯ ಇಲಾಖೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳಿವೆ.
ಇದನ್ನೂ ಓದಿ: ಹೊಸ ಐದು ಐರಾವತ ಕ್ಲಬ್ ಕ್ಲಾಸ್ 2.0 ಬಸ್ಗಳನ್ನು ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ
ಇದರ ಮಧ್ಯೆ, ತಾನೇ ಆಂಬುಲೆನ್ಸ್ ಸೇವೆ ನಿರ್ವಹಣೆ ಮಾಡುವುದಾಗಿ ಹೇಳಿರುವ ಇಲಾಖೆ ಎಷ್ಟು ಸಮರ್ಥವಾಗಿ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು




