AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಐದು ಐರಾವತ ಕ್ಲಬ್ ಕ್ಲಾಸ್ 2.0 ಬಸ್​​ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐದು ಹೊಸ ವೋಲ್ವೋ ಐರಾವತ ಕ್ಲಬ್ ಕ್ಲಾಸ್ 2.0 ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಈ ಹೊಸ ಬಸ್‌ಗಳು ಬೆಂಗಳೂರು, ಮಂಗಳೂರು, ಮೈಸೂರು ಮತ್ತು ತಿರುಪತಿಗೆ ಸಂಚರಿಸಲಿವೆ. ಜೊತೆಗೆ 45 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಮತ್ತು ಮೃತ ಸಿಬ್ಬಂದಿಗಳ ಕುಟುಂಬಗಳಿಗೆ ಒಟ್ಟು 27 ಕೋಟಿ ರೂ. ಪರಿಹಾರವನ್ನು ವಿತರಿಸಿದರು.

ಹೊಸ ಐದು ಐರಾವತ ಕ್ಲಬ್ ಕ್ಲಾಸ್ 2.0 ಬಸ್​​ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ಬಸ್​​ಗಳನ್ನು ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ
ಗಂಗಾಧರ​ ಬ. ಸಾಬೋಜಿ
|

Updated on:Jul 26, 2025 | 11:21 AM

Share

ಬೆಂಗಳೂರು, ಜುಲೈ 26: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) 5 ಐರಾವತ ಕ್ಲಬ್ ಕ್ಲಾಸ್ 2.0 ವೋಲ್ವೋ ಬಸ್​​ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಶುಕ್ರವಾರ ಚಾಲನೆ ನೀಡಿದ್ದಾರೆ. ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನುಕಂಪದ ಆಧಾರದ ಮೇಲೆ ಕ.ರಾ.ಸಾ ಪೇದೆ ಹುದ್ದೆಗೆ ನೇಮಕಗೊಂಡ 45 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ, ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ ರೂ.1 ಕೋಟಿ ರೂ ಪರಿಹಾರ ಮತ್ತು ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ 26 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.10 ಲಕ್ಷದಂತೆ 2.60 ಕೋಟಿ ರೂ ಪರಿಹಾರ ವಿತರಣೆ ಮಾಡಿದರು.

ಕೆಎಸ್ಆರ್​​ಟಿಸಿಗೆ 05 ನೂತನ ವೋಲ್ವೋ ಐರಾವತ ಕ್ಲಬ್ ಕ್ಲಾಸ್ 2.0 ಬಸ್​ಗಳು ಬೆಂಗಳೂರು ಟು ತಿರುಪತಿಗೆ ಒಂದು ಬಸ್​​, ಮಂಗಳೂರು ಟು ಬೆಂಗಳೂರು ಎರಡು ಮತ್ತು ಮೈಸೂರು ಟು ಮಂತ್ರಾಲಯಕ್ಕೆ ಎರಡು ಬಸ್​ಗಳು ಸಂಚಾರ ನಡೆಸಲಿವೆ.

ವೋಲ್ವೋ ಐರಾವತ ಕ್ಲಬ್ ಕ್ಲಾಸ್ 2.0 ಬಸ್ ವಿಶೇಷತೆಗಳು

  • 51 ಆಸನಗಳು 2×2 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
  • ಇದು ಶಕ್ತಿಯುತ ಹಾಲೋಜನ್ ಹೆಡ್ಲೈಟ್​ಗಳು ಮತ್ತು ಡೇಟೈಮ್ ರನ್ನಿಂಗ್ ಲೈಟ್​ಗಳನ್ನು (DRL) ಹೊಂದಿರುತ್ತದೆ.
  • ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್ಟೆರಿಯರ್​ ಹೊಂದಿದೆ, ಇದು ದೃಶ್ಯಾವಳಿಯಲ್ಲಿ ಆಕರ್ಷಕ ಎಸ್ಥೆಟಿಕ್ಸ್ ಅನ್ನು ನೀಡುತ್ತದೆ.
  • ವಾಯುಗತಿ ಶಾಸ್ತ್ರದ ವಿನ್ಯಾಸವು ಉತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತದೆ. ನೂತನ ಆವಿಷ್ಕಾರದ ಎಂಜಿನ್ ತಂತ್ರಜ್ಞಾನವು ಶ್ರೇಷ್ಠ ಕಾರ್ಯಕ್ಷಮತೆಯನ್ನು ಮತ್ತು ಸುಧಾರಿತ ಇಂಧನ ದಕ್ಷತೆಯನ್ನು (KMPL) ಒದಗಿಸುತ್ತದೆ.
  • ಬಸ್ ಉದ್ದದಲ್ಲಿ 3.5 ಏರಿಕೆಯಿಂದ ಪ್ರಯಾಣಿಕರ ಆಸನಗಳ ನಡುವೆ ಹೆಚ್ಚು ಸ್ಥಳವನ್ನು ಒದಗಿಸುತ್ತದೆ. ಬಸ್ ಎತ್ತರದಲ್ಲಿ 5.6 ಏರಿಕೆಯಿಂದ ಹೆಚ್ಚಿನ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ.
  • ಚಾಲಕರ ದೃಶ್ಯಾವಧಿಯನ್ನು ಸುಧಾರಿಸಲು ಮತ್ತು ಬ್ಲೈಂಡ್ ಸ್ಪಾಟ್ ಕಡಿಮೆ ಮಾಡಲು ಮುಂಭಾಗದ ಗಾಜು 9.5 ಅಗಲವಾಗಿದೆ.
  • ಹಳೆಯ ಬಸ್​​ಗಳಿಗಿಂತ 20 ಹೊಂದಿರುವುದರಿಂದ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ದೊಡ್ಡ ಲಗೇಜ್ ಸ್ಥಳವನ್ನು ಹೊಂದಿರುವ ಮೊದಲ ಬಸ್ ಆಗಿದೆ.
  • ಮೊಬೈಲ್ ಚಾರ್ಜಿಂಗ್ ಪಾಯಿಂಟ್​​ಗಳನ್ನು, ಯುಎಸ್​ಬಿ ಮತ್ತು ಸಿ-ಟೈಪ್, ಹೊಂದಿಸಲಾಗಿದೆ.
  • ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಹವಾನಿಯಂತ್ರಣ ವ್ಯವಸ್ಥೆ, ಇದರಿಂದಾಗಿ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಉತ್ತಮ ಆಸನಗಳು ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ಆದ ಅನುಕೂಲವನ್ನು ಒದಗಿಸುತ್ತದೆ.
  • ಪ್ಯಾಂಟೊಗ್ರಾಫಿಕ್ ವಿನ್ಯಾಸವು ವಾಹನ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.
  • ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟ್​ಗಳು. ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್​ಗಳನ್ನು ಹೊಂದಿವೆ.
  • ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಸ್ಥಾಪಿಸಲಾಗಿದೆ. ಬೆಂಕಿ ಅಪಘಾತಗಳ ಸಂದರ್ಭದಲ್ಲಿ ನೀರನ್ನು ಸಿಂಪಡಿಸಲು ಪ್ರಯಾಣಿಕರ ಆಸನಗಳ ಎರಡೂ ಬದಿಗಳಲ್ಲಿರುವ 30 ನೊಝಲ್ಗಳ ನೀರು ಪೈಪುಗಳನ್ನು ಅಳವಡಿಸಲಾಗಿದೆ.
  • ಚಾಲಕರು ಪ್ರಯಾಣಿಕರ ಬಾಗಿಲಿನಿಂದ ಪಾದಚಾರಿಗಳನ್ನು ಸುಲಭವಾಗಿ ನೋಡಬಹುದಾದ ಕಾರಣ, ಪಾದಚಾರಿ ಸುರಕ್ಷತೆಯನ್ನು ಸುಧಾರಿಸಿದೆ.

ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ವಿತರಣೆ

ನಿಗಮದಲ್ಲಿ ಕಳೆದ 10 ವರ್ಷಗಳಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ಸಚಿವರ ಸೂಚನೆ ಮೇರೆಗೆ ಅನುಕಂಪದ ಆಧಾರದ ಮೇಲೆ ನೌಕರಿಗೆ ಪ್ರಕ್ರಿಯೆಯು ಪ್ರಾರಂಭಗೊಂಡ ಕಳದೆ 01 ವರ್ಷದ ಅವಧಿಯಲ್ಲಿ 271 ವಿವಿಧ ಹುದ್ದೆಗಳನ್ನು (ಕರಾಸಾ ಪೇದೆ-152, ಕಛೇರಿ ಸಹಾಯಕ (ಸ್ವಚ್ಛತೆ)-60, ತಾಂತ್ರಿಕ ಸಹಾಯಕ-37, ಚಾಲಕ ಕಂ ನಿರ್ವಾಹಕ-22) ಭರ್ತಿ ಮಾಡಲಾಗಿದೆ. ನಿನ್ನೆ 45 ಅಭ್ಯರ್ಥಿಗಳಿಗೆ ಕ.ರಾ.ಸಾ ಪೇದೆ ಹುದ್ದೆಯ ನೇಮಕಾತಿ ಆದೇಶವನ್ನು ವಿತರಣೆ ಮಾಡಿದರು.

Ramaling Reddy

ಸಾರಿಗೆ ಸಿಬ್ಬಂದಿಗಳು ಹಗಲು–ಇರುಳು ಸಂಸ್ಥೆಗಾಗಿ ಶ್ರಮಿಸಿರುವುದರಿಂದ ಸಾರಿಗೆ ಸಂಸ್ಥೆಯು ಇಂದು ಉನ್ನತ ಸ್ಥಾನದಲ್ಲಿರುತ್ತದೆ. ಮೃತ ಸಿಬ್ಬಂದಿಗಳ ಕುಟುಂಬವನ್ನು ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮೃತರ ಅವಲಂಬಿತರಿಗೆ ನಾಲ್ಕು ನಿಗಮಗಳಲ್ಲಿ ಅನುಕಂಪದ ಆಧಾರದ ಮೇಲೆ 1000 ನೌಕರಿ ನೀಡಿರುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸಾರಿಗೆ ಸುರಕ್ಷಾ ವಿಮಾ ಯೋಜನೆ

ಸಂಸ್ಥೆಯು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದುವರೆಗೂ 26 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ. ಕರ್ತವ್ಯದಲ್ಲಿರುವಾಗ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಓರ್ವ ಸಿಬ್ಬಂದಿಯ ಅವಲಂಬಿತರಿಗೆ ರೂ. 1 ಕೋಟಿ ಚೆಕ್ ನೀಡಲಾಗಿದೆ. ಒಟ್ಟಾರೆ 27 ಸಿಬ್ಬಂದಿಗಳ ಅವಲಂಬಿತರಿಗೆ ಒಟ್ಟಾರೆ ರೂ.27 ಕೋಟಿ ಪರಿಹಾರ ನೀಡಲಾಗಿದೆ.

ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ

ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಪರಿಹಾರ ಮೊತ್ತವಾದ ರೂ. 3 ಲಕ್ಷವನ್ನು 2023 ನವೆಂಬರ್​ 01ರಿಂದ ರೂ.10 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಇದುವರೆಗೆ 125 ಪ್ರಕರಣಗಳಲ್ಲಿ ತಲಾ ರೂ.10 ಲಕ್ಷಗಳ ಪರಿಹಾರ ಧನವನ್ನು ನೀಡಲಾಗಿದೆ.

26 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.10.00 ಲಕ್ಷಗಳಂತೆ ಒಟ್ಟು ರೂ.2.60 ಕೋಟಿ ಪರಿಹಾರದ ಚೆಕ್ ಅನ್ನು ವಿತರಿಸಲಾಗಿದೆ. ಈವರೆಗೂ 151 ಸಿಬ್ಬಂದಿಗಳ ಅವಲಂಬಿತರಿಗೆ ಒಟ್ಟು ರೂ. 15.10 ಕೋಟಿಗಳ ಪರಿಹಾರ ನೀಡಲಾಗಿದೆ.

ಸಾಂತ್ವನ ಹೇಳಿದ ಸಚಿವ ರಾಮಲಿಂಗಾರೆಡ್ಡಿ

ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಾಂತ್ವನ ಹೇಳಿದ ಸಚಿವ ರಾಮಲಿಂಗಾರೆಡ್ಡಿ, ಸಿಬ್ಬಂದಿಗಳ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ. ಆದರೆ ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ವಿದ್ಯಾಬ್ಯಾಸ, ಮನೆ ನಿರ್ಮಾಣ ಮತ್ತು ಇತರೆ ಶುಭ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಬಡ್ಡಿ  ವ್ಯಾಮೋಹಕ್ಕೆ  ಒಳಗಾಗಿ ಪರಿಹಾರ ಧನವನ್ನು ಯಾರಿಗೂ ನೀಡದಂತೆ  ಕಿವಿ ಮಾತು ಹೇಳಿದರು. ಹಣವಿದ್ದರೆ ಎಲ್ಲರು ನೆಂಟರೆ ಆದರೆ ಸೂಕ್ತವಾದ ರೀತಿಯಲ್ಲಿ ಹಣ ಬಳಕೆ ಮಾಡುವಂತೆ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:13 am, Sat, 26 July 25