ಕರ್ನಾಟಕದಿಂದ ತಮಿಳುನಾಡಿನ ವೇಲಂಕಣಿ ಜಾತ್ರೆಗೆ ತೆರಳುವ ಭಕ್ತರಿಗೆ ಗುಡ್ನ್ಯೂಸ್: ವಿಶೇಷ ರೈಲು ಸಂಚಾರ
ಕರ್ನಾಟಕದಿಂದ ತಮಿಳುನಾಡಿನ ವೇಲಂಕಣಿ ಜಾತ್ರೆಗೆ ತೆರಳುವವರಿಗೆ ನೈರುತ್ಯ ಇಲಾಖೆ ಗುಡ್ ನ್ಯೂಸ್ ನೀಡಿದೆ. ಆಗಸ್ಟ್ 29 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯುವ ಈ ಜಾತ್ರೆಗೆ ನೈರುತ್ಯ ರೈಲ್ವೆ ವಿಶೇಷ ರೈಲುಗಳ ಓಡಾಟಕ್ಕೆ ನಿರ್ಧರಿಸಿದೆ. ಈ ವಿಶೇಷ ರೈಲಿನ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 26: ಕರ್ನಾಟಕದಿಂದ ತಮಿಳುನಾಡಿನ ವೇಲಂಕಣಿ ಜಾತ್ರೆಗೆ (Velankanni fair) ತೆರಳುವವರಿಗೆ ನೈರುತ್ಯ ಇಲಾಖೆ ಗುಡ್ ನ್ಯೂಸ್ ನೀಡಿದೆ. ಆಗಸ್ಟ್ 29 ರಿಂದ ಸೆಪ್ಟೆಂಬರ್ 8 ರವರೆಗೆ ವೇಲಂಕಣಿ ಜಾತ್ರೆ ನಡೆಯಲಿದೆ. ಈ ಜಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ (South Western Railway) ವಿಶೇಷ ರೈಲು ಸಂಚಾರಕ್ಕೆ ನಿರ್ಧರಿಸಿದೆ. ಇದು ಕರ್ನಾಟಕದ ಹಲವು ಜಿಲ್ಲೆಗಳಿಂದ ಗೋವಾ ಮತ್ತು ತಮಿಳುನಾಡಿಗೆ ಸಂಚರಿಸುವವರಿಗೂ ಅನುಕೂಲಕರವಾಗಲಿದೆ. ವಿಶೇಷ ರೈಲಿನ ವೇಳಾಪಟ್ಟಿ ವಿವರ ಇಲ್ಲಿದೆ.
ದೇಶದ ಪ್ರಮುಖ ಕ್ರೈಸ್ತ ಯಾತ್ರಾ ಕೇಂದ್ರಗಳಲ್ಲಿ ಒಂದಾದ, ‘ಲೌರ್ಡ್ಸ್ ಆಫ್ ದಿ ಈಸ್ಟ್ ಎಂದೇ ಖ್ಯಾತವಾಗಿರುವ ತಮಿಳುನಾಡಿನ ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್ ವೇಲಂಕಣಿಯಲ್ಲಿ ಅಗಸ್ಟ್ 29 ರಿಂದ ಸೆಪ್ಟೆಂಬರ್ 8 ರವರೆಗೆ ವಾರ್ಷಿಕ ಜಾತ್ರೆ ನಡೆಯಲಿದೆ.
ನೈಋತ್ಯ ರೈಲ್ವೆ ಟ್ವೀಟ್
SWR to Operate Special Trains between Vasco-Da-Gama – Velankanni for the convenience of devotees traveling to the annual festival in Velankanni, Tamil Nadu. ವೇಲಂಕಣಿ ಜಾತ್ರೆಗೆ ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ವ್ಯವಸ್ಥೆ#SWRupdates pic.twitter.com/5lHrX7Afch
— South Western Railway (@SWRRLY) July 25, 2025
ಪ್ರತಿ ವರ್ಷ ಗೋವಾ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಈ ಜಾತ್ರೆಗೆ ತೆರಳುತ್ತಾರೆ. ಈ ವೇಳೆ ಉಂಟಾಗುವ ಜನದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, ನೈಋತ್ಯ ರೈಲ್ವೆ ಗೋವಾದ ವಾಸ್ಕೋಡಗಾಮಾದಿಂದ ತಮಿಳುನಾಡಿನ ವೇಲಂಕಣಿವರೆಗೆ ಮತ್ತು ವೇಲಂಕಣೆಯಿಂದ ವಾಸ್ಕೋ-ಡ-ಗಾಮಾವರೆಗೆ ಪ್ರತಿ ದಿಕ್ಕಿನಲ್ಲಿ ತಲಾ ಮೂರು ಟ್ರಿಪ್ ವಿಶೇಷ ರೈಲುಗಳು ಕಾರ್ಯಾಚರಣೆ ಮಾಡಲಿದೆ. ಈ ವಿಶೇಷ ರೈಲುಗಳು ಜಾತ್ರಾ ಅವಧಿಯಲ್ಲಿ ಭಕ್ತರ ಸುಗಮ ಪ್ರಯಾಣಕ್ಕೆ ನೆರವಾಗಲಿವೆ.
ರೈಲು ಸಂಖ್ಯೆ 07361 ವಾಸ್ಕೋ-ಡ-ಗಾಮಾ-ವೇಲಂಕಣಿ ವಿಶೇಷ ಎಕ್ಸಪ್ರೆಸ್ ವಾಸ್ಕೋ-ಡ-ಗಾಮಾದಿಂದ ಆಗಸ್ಟ್ 27 ಸೆಪ್ಟೆಂಬರ್ 1 ಮತ್ತು 6 ರಂದು(ಬುಧವಾರ, ಸೋಮವಾರ ಮತ್ತು ಶನಿವಾರ) ರಾತ್ರಿ 9:55ಕ್ಕೆ ಹೊರಟು, ಆಯಾ ದಿನಗಳಲ್ಲಿ (ಶುಕ್ರವಾರ, ಬುಧವಾರ ಮತ್ತು ಸೋಮವಾರ) ಬೆಳಿಗಿನ ಜಾವ 3:45ಕ್ಕೆ ವೇಲಂಕಣಿ ತಲುಪಲಿದೆ.
ಮರಳಿ ರೈಲು ಸಂಖ್ಯೆ 07362 ವೇಲಂಕಣಿ-ವಾಸ್ಕೋ-ಡ-ಗಾಮಾ ವಿಶೇಷ ಎಕ್ಸ್‌ಪ್ರೆಸ್ ವೇಲಂಕಣೆಯಿಂದ ಆಗಸ್ಟ್ 29, ಸೆಪ್ಟೆಂಬರ್ 3 ಮತ್ತು 8 ರಂದು (ಶುಕ್ರವಾರ, ಬುಧವಾರ ಮತ್ತು ಶನಿವಾರ) ರಾತ್ರಿ 11:55ಕ್ಕೆ ಹೊರಟು, ಆಯಾ ದಿನಗಳಲ್ಲಿ (ಭಾನುವಾರ, ಶುಕ್ರವಾರ ಮತ್ತು ಬುಧವಾರ) ಬೆಳಗಿನ ಜಾವ 3:00 ಗಂಟೆಗೆ ವಾಸ್ಕೋ-ಡ-ಗಾಮಾ ತಲುಪಲಿದೆ.
ಇದನ್ನೂ ಓದಿ: ಗುಡ್ ನ್ಯೂಸ್: ವೇಗ ಪಡೆದುಕೊಂಡ ಮೈಸೂರು-ಚೆನ್ನೈ ಬುಲೆಟ್ ಟ್ರೈನ್ ಯೋಜನೆ
ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಮಡಗಾಂವ್, ಸ್ಯಾನ್ವರ್ಡಮ್, ಕುಳಿಂ, ಕ್ಯಾಸಲ್ ರಾಕ್, ಲೋಂಡಾ, ಧಾರವಾಡ, ಎಸ್‌ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು ಕೃಷ್ಣರಾಜಪುರಂ, ಬಂಗಾರಪೇಟೆ, ಮೊರವೂರು, ಬೊಮ್ಮಿಡಿ, ಸೇಲಂ, ನಾಮಕಲ್, ಊರು, ಕುಳಿತಲೆ, ಮುಚ್ಚಿರಾಪಳ್ಳಿ, ತಂಜಾವೂರು, ನಿಡಾಮಂಗಲಂ, ಪೌವಾರೂರು ಮತ್ತು ನಾಗಪಟ್ಟಣಂ ನಿಲ್ದಾಣಗಳನ್ನು ಹೊಂದಿದೆ.
ಈ ವಿಶೇಷ ರೈಲುಗಳು 1ಎಸಿ ಫಸ್ಟ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 11 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್,ಡಿ ಬೋಗಿಗಳು ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿ ಮತ್ತು ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು ಭಾರತೀಯ ರೈಲ್ವೆ ವೆಬ್ಸೈಟ್ಗೆ ಭೇಟಿ ನೀಡಬಹುದು. ಪ್ರಯಾಣಿಕರು ಈ ವಿಶೇಷ ರೈಲು ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಶಲಾಬ್ದಿ ಎಕ್ಸಪ್ರೆಸ್ಗೆ ಹೆಚ್ಚುವರಿ ಬೋಗಿ
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಕೆಎಸ್‌ಆರ್ ಬೆಂಗಳೂರು) ಮತ್ತು ಡಾ. ಎಂಜಿಆರ್ ಚೆನೈ ಸೆಂಟ್ರಲ್ ನಿಲ್ದಾಣಗಳ ನಡುವೆ ಸಂಚರಿಸುವ ಶತಾಬ್ದಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 12027/12028) ರೈಲಿಗೆ ಹೆಚ್ಚುವರಿ ಹವಾ ನಿಯಂತ್ರಿತ ಚೇರ್ ಕಾರ್ (AC Chair Car) ಬೋಗಿಯನ್ನು ಅಳವಡಿಸಲು ನಿರ್ಧರಿಸಲಾಗಿದೆ.
ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ಶತಾಬ್ದಿ ಎಕ್ಸ್ ಪ್ರೆಸ್ ಮತ್ತು ಡಾ. ಎಂ.ಜಿ.ಆರ್ ಚೆನೈ ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಶತಾಬ್ದಿ ಎಕ್ಸ್ ಪ್ರೆಸ್ ಎರಡೂ ರೈಲುಗಳಿಗೆ ಜುಲೈ 27ರಿಂದ ಈ ಹೆಚ್ಚುವರಿ ಬೋಗಿ ಲಭ್ಯವಿರಲಿದೆ.
ಇದನ್ನೂ ಓದಿ: ಬೆಂಗಳೂರು ಭುವನೇಶ್ವರ ವಿಶೇಷ ರೈಲು ಟ್ರಿಪ್ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ಈ ಹಿಂದೆ ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳು 17 ಬೋಗಿಗಳನ್ನು ಹೊಂದಿದ್ದವು. ಹೆಚ್ಚುವರಿ ಒಂದು ಬೋಗಿಯ ಸೇರ್ಪಡೆಯೊಂದಿಗೆ, ರೈಲಿನ ಒಟ್ಟು ಬೋಗಿಗಳ ಸಂಖ್ಯೆ ಈಗ 18 ಕ್ಕೆ ಏರಿಕೆಯಾಗಲಿದೆ. ಇದರಿಂದ ಬೆಂಗಳೂರು ಮತ್ತು ಚೆನೈ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಆಸನಗಳು ಲಭ್ಯವಾಗಲಿದ್ದು, ಇನ್ನಷ್ಟು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ದೊರೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




