ಮಧುಮೇಹವನ್ನು (Diabetes) ಸಕ್ಕರೆ ಕಾಯಿಲೆ ಎಂದೂ ಕೂಡ ಕರೆಯುತ್ತಾರೆ. ಇದೊಂದು ದೀರ್ಘಕಾಲದ ಕಾಯಿಲೆಯಾಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ, ಅನುವಂಶಿಕ (ವಂಶವಾಹಿ) ಕಾರಣ ಸೇರಿದಂತೆ ಇತ್ಯಾದಿ ಕಾರಣಗಳಿಂದ ಮಧುಮೇಹ ಕಾಯಿಲೆ ಬಾಧಿಸಬಹುದು. ದೇಹದಲ್ಲಿ ಇನ್ಸುಲಿನ್ ಅಸಮತೋಲನದಿಂದ ಮಧುಮೇಹ ಕಾಯಿಲೆ ಸಂಭವಿಸುತ್ತದೆ. ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾದರೆ ಅನೇಕ ಗಂಭೀರ ರೋಗಗಳ ಅಪಾಯವು ಹೆಚ್ಚುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಪ್ರತಿ ವರ್ಷ 40 ಲಕ್ಷ ಜನರು ಮಧುಮೇಹ ಕಾಯಿಲೆಗೆ ಬಲಿಯಾಗಿ ಸಾವನ್ನಪ್ಪುತ್ತಿದ್ದಾರೆ. ಈ ಒಂದು ಕಾಯಿಲೆಗೆ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ಉತ್ತಮ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಜೀವನಶೈಲಿ ಮತ್ತು ಆಹಾರಕ್ರಮಗಳಲ್ಲಿ ಕೆಲವೊಂದು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಹುದು. ಹೀಗೆ ಮಧುಮೇಹ ಕಾಯಿಲೆ ಹಾಗೂ ಅದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರಪಂಚದಾದ್ಯಂತ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು (World Diabetes Day) ಆಚರಿಸಲಾಗುತ್ತದೆ.
ಮಧುಮೇಹ ದಿನವನ್ನು ಇಂಟರ್ನ್ಯಾಷನಲ್ ಡಯಾಬಿಟಿಸ್ ಫೌಂಡೇಶನ್ (IDF) ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ (WHO) ಜಂಟಿ ಆಶ್ರಯದಲ್ಲಿ ಪ್ರಾರಂಭಿಸಲಾಯಿತು. 1991 ರಿಂದ ಇದನ್ನು ಪ್ರಪಂಚದಾದ್ಯಂತ ಆಚರಿಸಲು ವಿಶ್ವಸಂಸ್ಥೆ ಘೋಷಿಸಿತು. ವಿಶ್ವ ಮಧುಮೇಹ ದಿನವನ್ನು ನವೆಂಬರ್ 14 ರಂದು ಆಚರಿಸುವ ಮುಖ್ಯ ಕಾರಣವೆಂದರೆ, ಇನ್ಸುಲಿನ್ ಕಂಡುಹಿಡಿದ ವಿಜ್ಞಾನಿಯಾದ ಸರ್ ಫ್ರೆಡಿಕ್ ಬ್ಯಾಂಟಿಂಗ್ ಅವರ ಜನ್ಮ ದಿನದ ನೆನಪಿಗಾಗಿ ನವೆಂಬರ್ 14 ರಂದು ಈ ವಿಶೇಷವಾದ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಮಧುಮೇಹ ಶಾಶ್ವತವಾಗಿ ಹತೋಟಿಯಲ್ಲಿಟ್ಟುಕೊಳ್ಳಲು ನೀವು ಮಾಡಬೇಕಾಗಿರುವುದು ಇಷ್ಟೇ!
ಇಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಮಧುಮೇಹ ಕಾಯಿಲೆಗೆ ಬಲಿಯಾಗಿದ್ದಾರೆ, ಮಧುಮೇಹ ಕಾಯಿಲೆಯಿಂದ ದೇಹದಲ್ಲಿ ಅನೇಕ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೇ ಈ ಕಾಯಿಲೆ ಉಂಟಾಗಲು ಮುಖ್ಯ ಕಾರಣ ಎಂದು ಹೇಳಬಹುದು. ಹಾಗಾಗಿ ಈ ಕಾಯಿಲೆಯ ಗಂಭೀರ ಅಪಾಯಗಳು ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುದು ವಿಶ್ವ ಮಧುಮೇಹ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.
ಈ ಒಂದು ಕಾಯಿಲೆಗೆ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ಉತ್ತಮ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಜೀವನಶೈಲಿ ಮತ್ತು ಆಹಾರಕ್ರಮಗಳಲ್ಲಿ ಕೆಲವೊಂದು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಈ ದಿನ ಅಭಿಯಾನ ಕಾರ್ಯಗಳನ್ನು ಕೂಡ ನಡೆಸಲಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:53 pm, Mon, 13 November 23