ಸಾಂದರ್ಭಿಕ ಚಿತ್ರ
ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಪ್ರೇಮಿಗಳ ವಾರದಂದು ಒಂದು ದಿನ
ರೋಸ್ ಡೇಯನ್ನು
(Rose Day) ಆಚರಿಸಲಾಗುತ್ತದೆ ಎಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಪ್ರೇಮಿಗಳ ದಿನದಂದು ಮಾತ್ರವಲ್ಲದೆ, ಸೆಪ್ಟೆಂಬರ್ 22ನೇ ತಾರೀಕು ಕ್ಯಾನ್ಸರ್ ರೋಗಿಗಳಿಗಾಗಿ ಕೂಡಾ ರೋಸ್ ಡೇಯನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ವ್ಯಕ್ತಿಯನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಕುಗ್ಗಿಸುತ್ತದೆ. ಮತ್ತು ಕ್ಯಾನ್ಸರ್ ಎಂದರೆ ಜೀವನದ ಅಂತ್ಯ ಎಂದು ಅನೇಕರು ಭಾವಿಸುತ್ತಾರೆ. ಹೀಗಿರುವಾಗ ದೃತಿಗೆಡದೆ, ಈ ಮಾರಣಾಂತಿಕ ರೋಗದ ವಿರುದ್ಧ ಧೈರ್ಯವಾಗಿ ಹೋರಾಡಿ ಜಯಿಸಬಹುದು ಎಂದು ಕ್ಯಾನ್ಸರ್ ರೋಗಿಗಳಿಗೆ ಬದುಕಿನ ಭರವಸೆಯನ್ನು ಮೂಡಿಸಲು ಹಾಗೂ ಮನೋಸ್ಥೈರ್ಯವನ್ನು ತುಂಬಲು ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಗುಲಾಬಿ ದಿನದ ಇತಿಹಾಸ:
ಕೆನಡಾದ ಮೆಲಿಂಡಾ ರೋಸ್ ಎಂಬ ಹುಡುಗಿಯ ನೆನಪಿಗಾಗಿ ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ. 1994ರಲ್ಲಿ 12 ವರ್ಷದ ಪುಟ್ಟ ಬಾಲಕಿಯಾಗಿದ್ದ ಮೆಲಿಂಡಾ ಆಸ್ಕಿನ್ ಟ್ಯೂಮರ್ ಎಂಬ ಮಾರಣಾಂತಿಕ ರಕ್ತದ ಕ್ಯಾನ್ಸರ್ ಕಾಯಿಲೆಗೆ ತುತ್ತಾದಳು. ಕ್ಯಾನ್ಸರ್ ಆಕೆಯನ್ನು ಭಾದಿಸಿದೆ ಎಂದು ಪತ್ತೆ ಮಾಡಿದ ನಂತರ ಈಕೆ ಕೇಲವ ಎರಡು ವಾರಗಳ ಕಾಲ ಮಾತ್ರ ಬದುಕುಳಿಯಲು ಸಾಧ್ಯ ಎಂದು ವೈದ್ಯರು ಹೇಳುತ್ತಾರೆ. ಆದರೆ ಮೆಲಿಂಡಾ ಛಲ ಮತ್ತು ಬದುಕುವ ಭರವಸೆಯಿಂದ ಆರು ತಿಂಗಳುಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿ ಇಹಲೋಕ ತ್ಯಜಿಸಿದಳು. ಮತ್ತು ಈ ಆರು ತಿಂಗಳುಗಳ ಕಾಲ ಕ್ಯಾನ್ಸರ್ ರೋಗವಿದೆ ಎಂದು ಮಾನಸಿಕವಾಗಿ ಕುಗ್ಗದೆ ಸಕರಾತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಂಡು ಈಕೆ ಕವನಗಳು ಮತ್ತು ಪತ್ರಗಳನ್ನು ಬರೆಯುತ್ತಿದ್ದಳು. ಮತ್ತು ಕ್ಯಾನ್ಸರ್ ರೋಗಿಗಳ ಜೊತೆಗೆ ಸಮಯ ಕಳೆಯುತ್ತಾ ಅವರ ನೋವನ್ನು ಮರೆಸಲು ಪ್ರಯತ್ನಿಸುತ್ತಿದ್ದಳು. ಇದಲ್ಲದೆ ಇ-ಮೇಲ್ ಸಂದೇಶಗಳನ್ನು ಕಳುಹಿಸುವ ಮೂಲಕ ಕ್ಯಾನ್ಸರ್ ರೋಗಿಗಳನ್ನು ಸಂತೋಷವಾಗಿಡಲು ಪ್ರಯತ್ನಿಸಿದಳು.
ಹೀಗೆ ಆರು ತಿಂಗಳುಗಳ ಕಾಲ ಆಕೆ ಕ್ಯಾನ್ಸರ್ ವಿರುದ್ಧ ಹೋರಾಡಿದ ರೀತಿ, ಬದುಕು ಹುಮ್ಮಸ್ಸು ಇವೆಲ್ಲವೂ ಇತರ ಕ್ಯಾನ್ಸರ್ ರೋಗಿಗಳಿಗೆ ಮಾದರಿಯಾಗುವಂತಿತ್ತು. ಇದೇ ಕಾರಣದಿಂದ ಮೆಲಿಂಡಾ ಎಂಬ ಧೈರ್ಯವಂತ ಬಾಲಕಿಯ ನೆನಪಿಗಾಗಿ ಪ್ರತಿವರ್ಷ ವಿಶ್ವ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಕ್ಯಾನ್ಸರ್ ರೋಗಿಗಳಿಗೆ ಗುಲಾಬಿ ಹೂವುಗಳನ್ನು ನೀಡುವ ಮೂಲಕ ಅವರ ನೋವನ್ನು ಮರೆಸಿ, ಬದುಕುವ ಛಲ ಮತ್ತು ಹುಮ್ಮಸ್ಸನ್ನು ತುಂಬಲಾಗುತ್ತದೆ.
ವಿಶ್ವ ಗುಲಾಬಿ ದಿನದ ಮಹತ್ವ:
ಇದು ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಜನರಲ್ಲಿ ಬದುಕಿನ ಭರವಸೆ ಮತ್ತು ಉತ್ಸಾಹವನ್ನು ಹರಡಲು ಮೀಸಲಾಗಿರುವ ದಿನವಾಗಿದೆ. ಈ ದಿನದಂದು ಗುಲಾಬಿ ಹೂವುಗಳನ್ನು ನೀಡುವ ಮೂಲಕ ಕ್ಯಾನ್ಸರ್ ಪೀಡಿತರಿಗೆ ಕ್ಯಾನ್ಸರ್ ರೋಗವು ಜೀವನದ ಅಂತ್ಯವಲ್ಲ ಎಂಬ ಸಂದೇಶವನ್ನು ಸಾರಲಾಗುತ್ತದೆ. ಮತ್ತು ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿ, ಜೀವನವನ್ನು ಜಯಿಸಬಹುದು ಎಂಬ ಭರವಸೆಯನ್ನು ಮೂಡಿಸಲಾಗುತ್ತದೆ. ಇದಲ್ಲದೆ ಈ ವಿಶೇಷ ದಿನವು ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.