Kannada News Lifestyle Winter Tips : How to get out of bed in the morning stay productive in winter? Follow these tips Kannada News
Winter Tips : ಚಳಿಗಾಲದಲ್ಲಿ ಬೆಳಗ್ಗಿನ ವೇಳೆ ಕಾಡುವ ಸೋಮಾರಿತನಕ್ಕೆ ಹೀಗೆ ಬ್ರೇಕ್ ಹಾಕಿ, ಇಲ್ಲಿದೆ ಸಿಂಪಲ್ ಟಿಪ್ಸ್
ಚಳಿಗಾಲ ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಬೆಚ್ಚಗೆ ಹೊದ್ದು ಮಲಗುವುದು. ಈ ಋತುವಿನಲ್ಲಿ ಬೆಳಗ್ಗೆ ಬೇಗನೇ ಎದ್ದೇಳುವುದಂದರೆ ಕಷ್ಟದ ಕೆಲಸ. ಹೆಚ್ಚಿನವರು ಯಾರು ಎದ್ದೇಳ್ತಾರೆ ಎನ್ನುತ್ತಲೇ ತಮ್ಮ ದಿನವನ್ನು ಆರಂಭಿಸುತ್ತಾರೆ. ಒಂದು ವೇಳೆ ಮುಂಜಾನೆ ಬೇಗನೇ ಎದ್ದೇಳಲು ಮನಸ್ಸಾಗುತ್ತಿಲ್ಲವಾದರೆ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದು ಪರಿಣಾಮಕಾರಿಯಾಗಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕಚಿತ್ರ
Follow us on
ಚುಮುಚುಮು ಚಳಿಯೂ ಶುರುವಾಗಿದೆ. ಶೀತ ವಾತಾವರಣದ ನಡುವೆ ಬೆಳಗ್ಗೆ ಎದ್ದೇಳಲು ಮನಸ್ಸೇ ಆಗಲ್ಲ. ಕಂಬಳಿ ಹೊದ್ದು ಮಲಗಿ ಬಿಡೋಣ ಎನ್ನುವಷ್ಟರ ಮಟ್ಟಿಗೆ ಸೋಮಾರಿತನವು ಕಾಡುತ್ತದೆ. ಈ ಋತುವಿನಲ್ಲಿ ಹಗಲು ಕಡಿಮೆ, ರಾತ್ರಿ ಹೆಚ್ಚಾಗಿರುವ ಕಾರಣ, ಕತ್ತಲಾಗುತ್ತಿದ್ದಂತೆ ದೇಹದಲ್ಲಿ ನಿದ್ರೆಯ ಹಾರ್ಮೋನ್ ಗಳು ಬಿಡುಗಡೆಯಾಗುತ್ತದೆ. ಹೀಗಾಗಿ ರಾತ್ರಿಯ ವೇಳೆ ಬೇಗನೇ ಮಲಗಿ ಬಿಡುತ್ತೇವೆ. ರಾತ್ರಿ ಮಲಗುವ ಸಮಯಕ್ಕಿಂತ ಮುಂಚಿತವಾಗಿ ಮಲಗಿದರೂ, ಬೆಳಗ್ಗೆ ಎಚ್ಚರವಾಗುವುದೇ ಇಲ್ಲ. ಮುಂಜಾನೆ ಕಾಡುವ ಆಲಸ್ಯವನ್ನು ದೂರ ಮಾಡಲು ಈ ಕೆಲವು ವಿಧಾನಗಳನ್ನು ಅನುಸರಿಸುವುದು ಉತ್ತಮ.
ದಿನವನ್ನು ಬೇಗನೇ ಆರಂಭಿಸಿ : ಚಳಿಗಾಲದಲ್ಲಿ ಎದ್ದೇಳುವುದಕ್ಕೆ ಮನಸ್ಸೇ ಆಗುವುದಿಲ್ಲ. ಮುಂಜಾನೆ ಎಚ್ಚರವಾದ ತಕ್ಷಣವೇ ಎದ್ದು ಬಿಡಿ. ಐದು ನಿಮಿಷ ಬಿಟ್ಟು ಎದ್ದೇಳುವೆನು ಎಂದುಕೊಂಡರೆ ಮತ್ತೆ ಹೆಚ್ಚು ಸಮಯವೇ ಮಲಗಿ ಬಿಡುತ್ತೀರಿ. ಹೀಗಾಗಿ ಕಣ್ಣು ಬಿಟ್ಟ ತಕ್ಷಣವೇ ಎದ್ದು ಯೋಗ, ವಾಕಿಂಗ್, ವ್ಯಾಯಾಮದಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಇದರಿಂದ ಆಲಸ್ಯವು ದೂರವಾಗಿ ಇಡೀ ದಿನವು ಚಟುವಟಿಕೆಯಿಂದ ಕೂಡಿರುತ್ತದೆ.
ಬ್ಯುಸಿಯಾದ ವೇಳಾ ಪಟ್ಟಿ ರಚಿಸಿ : ಚಳಿಗಾಲದಲ್ಲಿ ವಾತಾವರಣವು ಶೀತವಾಗಿರುವ ಬೆಳಗ್ಗೆ ಬೇಗನೇ ಎದ್ದೇಳಲು ಹಾಗೂ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಈ ವೇಳೆಯಲ್ಲಿ ಆ ದಿನದ ಮಾಡಬೇಕಾದ ಕೆಲಸಗಳ ವೇಳಾಪಟ್ಟಿ ರಚಿಸಿ, ಒಂದೊಂದೇ ಕೆಲಸವನ್ನು ಮಾಡಿ ಮುಗಿಸಿ. ಬ್ಯುಸಿಯಾಗಿರುವ ಟೈಮ್ ಟೇಬಲ್ ರಚಿಸುವುದರಿಂದ ಎಲ್ಲಾ ಕೆಲಸವನ್ನು ಮಾಡಿ ಮುಗಿಸಲೇ ಬೇಕಾಗಿರುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಎದ್ದೇಳುತ್ತೀರಿ. ಕೆಲಸದ ನಡುವೆ ಸುಸ್ತಾದರೆ ವಿಶ್ರಾಂತಿ ಪಡೆಯುವುದನ್ನು ಮರೆಯಬೇಡಿ.
ಬೆಳಗ್ಗೆ ಅಲಾರಂ ಇಟ್ಟುಕೊಳ್ಳಿ : ಚಳಿಗೆ ಬೆಳಗ್ಗೆ ಬೇಗನೇ ಎದ್ದೇಳುವುದಕ್ಕಿಂತ ಕಷ್ಟದ ಕೆಲಸ ಮತ್ತೊಂದಿಲ್ಲ. ನಿಮಗೂ ಕೂಡ ಇದೇ ರೀತಿ ಆಗುತ್ತಿದ್ದರೆ ಬೆಳಗ್ಗೆ ಬೇಗ ಎಳಲು ಅಲಾರಂ ಇಟ್ಟುಕೊಳ್ಳಿ. ಎದ್ದೇಳುವ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿ ಹಾಗೂ ಎದ್ದೇಳುವ ಸಮಯಕ್ಕೆ ಸರಿಯಾಗಿ ಅಲಾರಾಂ ಸೆಟ್ ಮಾಡಿಕೊಳ್ಳಿ. ಅಲಾರಾಂ ಆದ ಕೂಡಲೇ ಆಫ್ ಮಾಡಿ ಮತ್ತೆ ಮಲಗಲು ಹೋಗಬೇಡಿ, ಆ ತಕ್ಷಣವೇ ಹಾಸಿಗೆಯಿಂದ ಏಳುವ ಅಭ್ಯಾಸವಿರಲಿ.
ಬೆಡ್‌ರೂಂ ಲೈಟ್ ಪ್ರಕಾಶಮಾನವಾಗಿರಲಿ : ಕೆಲವರು ತಮ್ಮ ಮಲಗುವ ಕೋಣೆಯಲ್ಲಿ ಮಂದ ಹಾಗೂ ಮೂಡಿ ಲೈಟ್ ಗಳನ್ನು ಬಳಸುತ್ತಾರೆ. ಬೆಡ್‌ರೂಂನಲ್ಲಿ ಬೆಳಗ್ಗೆ ಕತ್ತಲು ಕತ್ತಲು ಅಥವಾ ಮಂದ ಬೆಳಕು ಇದ್ದರೆ ಬೇಗ ಎದ್ದೇಳುವುದಕ್ಕೆ ಮನಸ್ಸಾಗುವುದಿಲ್ಲ. ಸಾಧ್ಯವಾದಷ್ಟು ಪ್ರಕಾಶಮಾನವಾದ ಲೈಟ್ ಬಳಕೆ ಮಾಡುವುದು ಒಳ್ಳೆಯದು.
ಸ್ವೆಟರ್, ಕಂಬಳಿಯಿಂದ ಆದಷ್ಟು ದೂರವಿರಿ : ಚಳಿಗಾಲ ಶುರುವಾಗ್ತಿದ್ದಂತೆ ಸ್ವೆಟರ್, ಕಂಬಳಿಗಳು ಮನೆಯ ಕಪಾಟಿನಿಂದ ಹೊರಗೆ ಬರುತ್ತವೆ. ಹೆಚ್ಚಿನವರು ರಾತ್ರಿ ಮಲಗುವ ವೇಳೆ ಸ್ವೆಟರ್ ಧರಿಸುತ್ತಾರೆ. ಅದಲ್ಲದೇ ಕಂಬಳಿ ಹೊದ್ದು ಮಲಗುತ್ತಾರೆ. ಇದರಿಂದ ಬೆಳಗ್ಗಿನ ಸಮಯದಲ್ಲಿ ತ್ತೆ ಸ್ವಲ್ಪ ಹೊತ್ತು ಮಲಗುವ ಎಂದೆನಿಸುತ್ತದೆ. ಸೋಮಾರಿತನವನ್ನು ಹೆಚ್ಚಿಸುವ ಕಾರಣ ಸಾಧ್ಯವಾದಷ್ಟು ಸ್ವೆಟರ್, ಕಂಬಳಿಯನ್ನು ಬಳಸುವುದನ್ನು ತಪ್ಪಿಸಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ