International women’s day 2024: ವಿಶ್ರಾಂತಿಯಿಲ್ಲದೇ ದುಡಿಯುವ ಹೆಣ್ಮಕ್ಕಳೇ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಈ ಟಿಪ್ಸ್ ಪಾಲಿಸಿ

|

Updated on: Mar 08, 2024 | 12:28 PM

ನಾಲ್ಕು ಗೋಡೆಗೆ ಸೀಮಿತವಾಗಿದ್ದ ಮಹಿಳೆಯು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸುತ್ತಿದ್ದಾಳೆ. ಮನೆ, ಸಂಸಾರ, ಉದ್ಯೋಗ ಹೀಗೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತ ತನ್ನ ಆರೋಗ್ಯವನ್ನು ಕಡೆಗಣಿಸುತ್ತಿದ್ದಾಳೆ. ಹೀಗಾಗಿ ವಯಸ್ಸು ನಲವತ್ತು ಸಮೀಪಿಸುತ್ತಿದ್ದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ತನ್ನವರ ಯೋಗ ಕ್ಷೇಮ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯು ವಿಶೇಷವಾದ ಗಮನ ನೀಡುವುದು ಅಗತ್ಯ. ಈ ಕೆಲವು ಆರೋಗ್ಯ ಸಲಹೆಗಳನ್ನು ಅನುಸರಿಸಿದರೆ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು.

International womens day 2024: ವಿಶ್ರಾಂತಿಯಿಲ್ಲದೇ ದುಡಿಯುವ ಹೆಣ್ಮಕ್ಕಳೇ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಈ ಟಿಪ್ಸ್ ಪಾಲಿಸಿ
Follow us on

ಇಂದಿನ ಮಹಿಳೆ ಮನೆಯ ಹೊರಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಹೀಗಾಗಿ ದಿನನಿತ್ಯದ ಬದುಕಿನ ಜಂಜಾಟದಲ್ಲಿ ದೇಹ ಹಾಗೂ ಮತ್ತು ಮನಸ್ಸನ್ನು ನೋಡಿಕೊಳ್ಳುವುದಕ್ಕೆ ಮರೆಯುತ್ತಿದ್ದಾಳೆ. ಮಹಿಳೆಯರು ಆರೋಗ್ಯದ ಬಗ್ಗೆ ಗಮನ ಹರಿಸದೇ ಹೋದರೆ ಮುಂದೊಂದು ದಿನ ಇದೇ ದೊಡ್ಡ ಸಮಸ್ಯೆಗಳಾಗಿ ಆರೋಗ್ಯಕ್ಕೆ ಕಂಟಕವಾಗಬಹುದು. ಹೀಗಾಗಿ ಕುಟುಂಬ ಮತ್ತು ಪ್ರೀತಿಪಾತ್ರರನ್ನು ನೋಡಿಕೊಳ್ಳಲು, ಮಹಿಳೆಯರು ಮೊದಲು ತಮ್ಮನ್ನು ತಾವು ಆರೋಗ್ಯವಾಗಿರಿಸಿಕೊಳ್ಳುವುದು ಬಹುಮುಖ್ಯವಾಗಿರುತ್ತದೆದೆ.

ಉತ್ತಮ ಆರೋಗ್ಯಕ್ಕಾಗಿ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ

  1. ಆರೋಗ್ಯಕರ ಆಹಾರವನ್ನು ಅನುಸರಿಸಿ: ಒತ್ತಡದಿಂದ ಕೂಡಿದ ಜೀವನ ಶೈಲಿಯ ನಡುವೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯು ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಹೀಗಾಗಿ ಮಹಿಳೆಯರೇ ಸಾಧ್ಯವಾದಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ದ್ವಿದಳ ಧಾನ್ಯಗಳು, ಕೋಳಿ, ಮೀನು, ಬೀನ್ಸ್, ಸೇರಿದಂತೆ ಪ್ರೊಟೀನ್ ಯುಕ್ತ ಆಹಾರ ಸೇವನೆಯತ್ತ ಗಮನ ಕೊಡಿ. ಸಕ್ಕರೆ ಹಾಗೂ ಅಧಿಕ ಕೊಬ್ಬಿನಾಂಶಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ಆದಷ್ಟು ದೂರವಿರಿ.
  2.  ಪ್ರತಿದಿನ ವ್ಯಾಯಾಮ ಮಾಡಿ : ದಿನನಿತ್ಯ ಹೆಚ್ಚು ಕ್ರಿಯಾಶೀಲರಾಗಿದ್ದರೆ ಕಾಯಿಲೆಯಿಂದ ದೂರವಿರಬಹುದು. ನಿಯಮಿತವಾದ ವ್ಯಾಯಾಮವು ಹೃದಯವನ್ನು ಆರೋಗ್ಯಕರವಾಗಿಸುತ್ತದೆ, ಸ್ನಾಯು ಮತ್ತು ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ. ಈ ಅಭ್ಯಾಸವು ಅನೇಕ ರೀತಿಯ ನಾನಾ ರೀತಿಯ ಸಮಸ್ಯೆಗಳನ್ನು ತಡೆಯುತ್ತದೆ. ಕೆಲಸದಲ್ಲಿ ನಿರತರಾಗಿದ್ದರೆ, ದಿನವಿಡೀ ಸಣ್ಣ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಿ. ಈ ಅಭ್ಯಾಸವನ್ನು ಆರೋಗ್ಯವನ್ನು ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ.
  3. ಸಾಕಷ್ಟು ನಿದ್ರೆ ಮಾಡಿ : ಕೆಲಸದ ಒತ್ತಡ, ಮನೆ ನಿಭಾಯಿಸುವಿಕೆ ಏನೇ ಇರಲಿ, ಆದರೆ ದೇಹಕ್ಕೆ ವಿಶ್ರಾಂತಿ ಅಗತ್ಯ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಗುಣಮಟ್ಟದ ನಿದ್ರೆಯು ಮುಖ್ಯವಾಗುತ್ತದೆ. ನಿದ್ರೆಯ ಕೊರತೆಯು ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರುತ್ತದೆ. ಮನಸ್ಥಿತಿಯನ್ನು ಬದಲಿಸಿ ಒತ್ತಡವನ್ನು ಉಲ್ಬಣಗೊಳಿಸಬಹುದು. ಹೀಗಾಗಿ ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸುವುದನ್ನು ಮರೆಯದಿರಿ.
  4. ದೇಹದ ತೂಕ ನಿಯಂತ್ರಣದಲ್ಲಿರಿಸಿಕೊಳ್ಳಿ : ನೀವು ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಹೃದ್ರೋಗ, ಟೈಪ್ 2 ಡಯಾಬಿಟಿಸ್ ಮತ್ತು ಕ್ಯಾನ್ಸರ್ ಅಪಾಯ ಮಟ್ಟವು ಕಡಿಮೆಯಿರುತ್ತದೆ. ಅಧಿಕತೂಕವನ್ನು ಹೊಂದಿದ್ದರೆ ಆಹಾರಗಳ ಜೊತೆಗೆ ತೂಕ ಇಳಿಸಿಕೊಳ್ಳಲು ವ್ಯಾಯಾಮ ಬಹಳ ಮುಖ್ಯವಾಗುತ್ತದೆ. ಅದಲ್ಲದೆ ಆಹಾರದಲ್ಲಿ ಸಕ್ಕರೆಯ ಬಳಕೆ ಕಡಿಮೆ ಮಾಡಿ, ಸೋಡಾ ಮತ್ತು ಸಕ್ಕರೆಯ ಮಿಶ್ರಿತ ಕಾಫಿ ಪಾನೀಯಗಳ ಸೇವನೆಯು ಮಿತಿಯಲ್ಲಿರಲಿ.
  5. ಕಾಲಕಾಲಕ್ಕೆ ವೈದ್ಯರನ್ನು ಭೇಟಿಯಾಗಿ : ಈಗಿನ ಕಾಲದಲ್ಲಿ ವಯಸ್ಸು ನಲವತ್ತು ಸಮೀಪಿಸುತ್ತಿದ್ದಂತೆ ಬೇಡದ ಕಾಯಿಲೆಗಳು ಬರಲು ಶುರುವಾಗುತ್ತದೆ. ಹೀಗಾಗಿ ಕಾಲಕಾಲಕ್ಕೆ ದೇಹವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ. ವೈದ್ಯರು ಹೇಳುವ ಸಲಹೆ ಹಾಗೂ ಸೂಚನೆಗಳನ್ನು ಗಂಭೀರವಾಗಿ ಪಾಲಿಸುವುದು ಒಳ್ಳೆಯದು.
  6. ಒತ್ತಡವನ್ನು ಕಡಿಮೆ ಮಾಡಿ : ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳುಮಾಡುವುದೇ ಒತ್ತಡತುಂಬಿದ ಜೀವನ ಶೈಲಿ. ಮನೆ ಉದ್ಯೋಗ ಎಂದು ಒತ್ತಡಭರಿತವಾದ ಜೀವನ ಶೈಲಿಯು ನಿಮ್ಮದಾಗಿದ್ದರೆ ಯೋಗ ಹಾಗೂ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಬಿಡುವು ಸಿಕ್ಕಾಗಲೆಲ್ಲ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆಗೆ ಸಮಯ ಕಳೆಯಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ