World Hearing Day 2022: ಕಿವಿ ಹೇಗೆ ಕೆಲಸ ಮಾಡುತ್ತದೆ? ಶ್ರವಣ ದೋಷಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿಯಿರಿ

| Updated By: Pavitra Bhat Jigalemane

Updated on: Mar 03, 2022 | 11:30 AM

ಪ್ರತೀ ವರ್ಷ ಮಾ. 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸುತ್ತಾರೆ. ಕಿವುಡತೆಯ ಬಗ್ಗೆ ಅರಿವು ಮೂಡಿಸುವ ಹಾಗೂ ಆ ಸಮಸ್ಯೆಯಿಂದ ಹೊರಬರಲು ಇರುವ ಪರಿಹಾರಗಳ ಬಗ್ಗೆ ತಿಳಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತೀ ವರ್ಷ ವಿಶ್ವ ಶ್ರವಣ ದಿನವನ್ನು ಜಾರಿಗೆ ತಂದಿದೆ.

World Hearing Day 2022: ಕಿವಿ ಹೇಗೆ ಕೆಲಸ ಮಾಡುತ್ತದೆ? ಶ್ರವಣ ದೋಷಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿಯಿರಿ
ವಿಶ್ವ ಶ್ರವಣ ದಿನ (ಪ್ರಾತಿನಿಧಿಕ ಚಿತ್ರ)
Follow us on

ಸಂವಹನ (Communication) ಪ್ರತೀ ಜೀವಿಯ ಜೀವನದ ಅವಿಭಾಜ್ಯ ಅಂಗ. ಅದು  ಹೇಳುವುದಾಗಿರಬಹದು ಅಥವಾ ಕೇಳಿಸಿಕೊಳ್ಳುವುದಾಗಿರಬಹುದು. ಹೇಳುಗನ ಮಾತನ್ನು ಕೇಳಿಸಿಕೊಳ್ಳುವವನಿದ್ದಾಗ ಮಾತ್ರ ಸಂವಹನ ಪೂರ್ತಿಯಾಗಲು ಸಾಧ್ಯ, ಆದರೆ ಕೆಲವರಿಗೆ ಶ್ರವಣ ದೋಷದಿಂದ ಕೇಳಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರಿಗೆ ವಯಸ್ಸಾದಂತೆ ಶ್ರವಣ ಶಕ್ತಿ ಕಡಿಮೆಯಾಗುತ್ತದೆ. ಯಾರ ಮನೆಯಲ್ಲಿ ಶ್ರವಣ ದೋಷವುಳ್ಳ ಹಿರಿಯರು ಇರುತ್ತಾರೋ ಅಂತಹ ಮನೆಗಳಲ್ಲಿ ಸಾಮಾನ್ಯವಾಗಿ ಎದುರಾಗುವ ಸಮಸ್ಯೆಯಾಗಿದೆ. ವಯೋಸಹಜತೆಯಿಂದ ಕೇಳುವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಮನೆಯಲ್ಲಿ ಇದ್ದವರು ಜೋರಾಗಿ ಹೇಳಿದರೆ ನನಗೂ ಕಿವಿ (Ear) ಕೇಳಿಸುತ್ತದೆ ಎಂದು ರೇಗುವವರಿರುತ್ತಾರೆ. ಇನ್ನು ಕೆಲವು ಸಮಯದಲ್ಲಿ ನಾವು ಹೇಳುವುದು ಕೇಳಿಸದಿದ್ದರೂ ಕೇಳಿಸಿದಂತೆ ನಟಿಸಿ ಕಿವಿ ಕೇಳುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಸಾಮಾನ್ಯವಾಗಿ ಯಾರಿಗೇ ಆದರೂ ಕಿವಿ ಕೇಳಿಸುವುದಿಲ್ಲವಾ? ಎಂದು ಕೇಳಿದರೆ ಸಿಟ್ಟು ಬರುತ್ತದೆ. ಅದರಲ್ಲೂ ಕಿವಿ ಕೇಳದವರ ಬಳಿ ಹೋಗಿ ಜೋರಾಗಿ ಹೇಳಿದರೆ ನಿಧಾನ ಹೇಳು ಕೇಳಿಸುತ್ತದೆ ಎಂದು ಸಿಟ್ಟಾಗುತ್ತಾರೆ. ಈಗೀಗ  ತಂತ್ರಜ್ಞಾನ (Technology) ಮುಂದುವರೆದಿದೆ. ಕಿವಿ ಕೇಳದವರಿಗೂ ಕಿವಿ ಕೇಳಿಸುವಂತೆ ಮಾಡುವ ಮಷಿನ್​ಗಳು ಬಂದಿವೆ.  ಕಿವಿಯೊಳಗೆ ಮಷಿನ್​ ಅಳವಡಿಸಿ, ಕಿವುಡರಿಗೂ ಶ್ರವಣಶಕ್ತಿಯನ್ನು ತುಂಬುವಷ್ಟು ವಿಜ್ಞಾನ ಲೋಕ ಮುಂದುವರೆದಿದೆ.

ಪ್ರತೀ ವರ್ಷ ಮಾ. 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸುತ್ತಾರೆ. ಕಿವುಡತೆಯ ಬಗ್ಗೆ ಅರಿವು ಮೂಡಿಸುವ ಹಾಗೂ ಆ ಸಮಸ್ಯೆಯಿಂದ ಹೊರಬರಲು ಇರುವ ಪರಿಹಾರಗಳ ಬಗ್ಗೆ ತಿಳಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತೀ ವರ್ಷ ವಿಶ್ವ ಶ್ರವಣ ದಿನವನ್ನು ಜಾರಿಗೆ ತಂದಿದೆ. ಪ್ರತೀ ವರ್ಷ ಸರಿಸುಮಾರು 360 ಮಿಲಿಯನ್​ ಜನರು ಈ ರೀತಿಯ ಶ್ರವಣ ದೋಷಕ್ಕೆ ತುತ್ತಾಗುತ್ತಾರೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ 2016ರಲ್ಲಿ ಅಧಿಕೃತವಾಗಿ ವಿಶ್ವ ಶ್ರವಣ ದಿನವನ್ನು ಜಾರಿಗೆ ತರಲಾಯಿತು. ಎಲ್ಲವೂ ಸರಿ ಆದರೆ ಕಿವಿ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಅರಿತುಕೊಂಡರೆ ಮಾತ್ರ ದೋಷವನ್ನು ಅಲ್ಪ ಪ್ರಮಾಣದಲ್ಲಾದರೂ ಪತ್ತೆಹಚ್ಚಲು ಸಾಧ್ಯ.

ಕಿವಿಯ ಕಾರ್ಯ ಹೇಗೆ?
ಕಿವಿ ಮೂರು ವಿಭಿನ್ನ ಭಾಗಗಳಿಂದ ಮಾಡಲ್ಪಟ್ಟಿದೆ ಅವುಗಳೆಂದರೆ ಹೊರ ಕಿವಿ, ಮಧ್ಯ ಕಿವಿ ಮತ್ತು ಒಳ ಕಿವಿ. ಈ ಭಾಗಗಳು ಒಟ್ಟಿಗೆ ಕೆಲಸ ಮಾಡುವುದರಿಂದ ನೀವು ಕೇಳಬಹುದು. ಹೊರಗಿನ ಕಿವಿ, ಅಥವಾ ಪಿನ್ನಾ ಭಾಗದ ಮೂಲಕ ಧ್ವನಿ ತರಂಗಗಳು ಕಿವಿಯ ಒಳಗೆ ಹೋಗುತ್ತದೆ.  ಧ್ವನಿ ತರಂಗಗಳು ಮಧ್ಯದ ಕಿವಿಯ ಭಾಗಕ್ಕೆ ಬಡಿದಾಗ,  ಅದು ಕಂಪಿಸಲು ಪ್ರಾರಂಭಿಸುತ್ತದೆ, ಆಗ ಅದು ನಿಮ್ಮ ಕಿವಿಯಲ್ಲಿ ಮೂರು ಸಣ್ಣ ಮೂಳೆಗಳನ್ನು ಚಲಿಸುವಂತೆ ಮಾಡುತ್ತದೆ. ಈ ಮೂಳೆಗಳನ್ನು ಸುತ್ತಿಗೆ, ಅಂವಿಲ್ ಮತ್ತು ಸ್ಟಿರಪ್  ಎಂದು ಕರೆಯಲಾಗುತ್ತದೆ. ಈ  ಭಾಗಗಳು ಒಳಗಿನ ಕಿವಿಗೆ  ಧ್ವನಿ ಚಲಿಸಲು ಸಹಾಯ ಮಾಡುತ್ತದೆ.

ನಂತರ ಕಂಪನಗಳು ಒಳ ಕಿವಿಯ ಭಾಗವಾದ ಕೋಕ್ಲಿಯಾಕ್ಕೆ ಪ್ರಯಾಣಿಸುತ್ತವೆ. ಕೋಕ್ಲಿಯಾ ಒಂದು ಸಣ್ಣ ಬಸವನ ಚಿಪ್ಪಿನಂತೆ ಕಾಣುತ್ತದೆ. ಇದು ದ್ರವ ಮತ್ತು ಸಣ್ಣ ಕೂದಲಿನಿಂದ ಕೂಡಿದೆ. ಧ್ವನಿ ಕಂಪನಗಳು ಸಣ್ಣ ಕೂದಲುಗಳನ್ನು ಚಲಿಸುವಂತೆ ಮಾಡುತ್ತದೆ. ಕೂದಲಿನ ಕೋಶಗಳಲ್ಲಿ ಎರಡು ವಿಧಗಳಿವೆ ಅವುಗಳೆಂದರೆ ಹೊರ ಮತ್ತು ಒಳ ಜೀವಕೋಶಗಳು. ಹೊರಗಿನ ಕೂದಲಿನ ಕೋಶಗಳು ಧ್ವನಿ ಮಾಹಿತಿಯನ್ನು ತೆಗೆದುಕೊಳ್ಳುತ್ತವೆ,  ಆಗ ಅವು ಕಂಪನಗಳನ್ನು ಟ್ಯೂನ್  ಆಗಿ ಮಾಡುತ್ತವೆ. ಒಳಗಿನ ಕೂದಲಿನ ಕೋಶಗಳು ಧ್ವನಿ ತರಂಗಗಳನ್ನು ವಿದ್ಯುತ್ ಸಂಕೇತಗಳಾಗಿ ಬದಲಾಯಿಸುತ್ತವೆ. ಶ್ರವಣ ನರವು ನಂತರ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ, ಆಗ ನಿಮಗೆ ಕೇಳಲು ಸಾಧ್ಯವಾಗುತ್ತದೆ.

ಶ್ರವಣ ದೋಷಕ್ಕೆ ಕಾರಣಗಳೇನು?
ಕಿವುಡುತನಕ್ಕೆ ಹಲವು ಕಾರಣಗಳಿವೆ. ಅದು ಅನುವಂಶಿಕವಾಗಿಯೂ ಬರಬಹುದು. ಅಥವಾ ಕೆಲವೊಮ್ಮೆ ಯಾವುದಾದರೂ ಅಪಘಾತದಿಂದ ಅಥವಾ ಕಿವಿಯ ಒಳಗಿನ ಅಂಗಗಳ ಮೇಲೆ ಕರ್ಕಶ ಶಬ್ದಗಳು ಬಿದ್ದಾಗ ಅವು ಕಾರ್ಯನಿರ್ವಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇದರಿಂದಲೂ ಕಿವುಡುತನ ಉಂಟಾಗಬಹುದು. ಇನ್ನು ಕೆಲವು ಕಾರಣಗಳೆಂದರೆ ವಯೋಸಹಜವಾಗಿ ಕಿವುಡತನ ಕಾಣಿಸಿಕೊಳ್ಳುತ್ತದೆ. ಅತಿಯಾದ ನೋವಿನ ಮಾತ್ರೆಗಳನ್ನು ಸೇವಿಸುವುದರಿಂದ ಕಾಲಕ್ರಮೆಣ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ.

ಈಗ ತಂತ್ರಜ್ಞಾನ ಮುಂದುವರೆದಿದೆ. ಮೇಲೆ ಹೇಳಿದಂತೆ ಯಾವುದೇ ವಯಸ್ಸಿನವರಿಗೂ  ಶ್ರವಣ ದೋಷವನ್ನು ಸರಿಪಡಿಸಲು ಮಷಿನ್​ಗಳನ್ನು ಅಳವಡಿಸಲಾಗುತ್ತದೆ, ಹಿಯರ್​ ಬಡ್​ಗಳ ಅಳವಡಿಕೆಯಿಂದ ಕಿವುಡುತನವನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ ಈ ಹಿಯರ್ ಏಡ್​ ಬಡ್​ಗಳು​ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು  ತಿಳಿದುಕೊಳ್ಳಬೇಕು. ಇಲ್ಲಿದೆ ನೋಡಿ ಮಾಹಿತಿ,

ಶ್ರವಣ ಸಾಧನವು ಮೈಕ್ರೊಫೋನ್ ಮೂಲಕ ಧ್ವನಿಯನ್ನು ಸ್ವೀಕರಿಸುತ್ತದೆ, ಇದು ಧ್ವನಿ ತರಂಗಗಳನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುತ್ತದೆ  ನಂತರ ಅವುಗಳನ್ನು ಆಂಪ್ಲಿಫೈಯರ್ಗೆ ಕಳುಹಿಸುತ್ತದೆ. ಆಂಪ್ಲಿಫಯರ್ ಸಂಕೇತಗಳ ಶಕ್ತಿಯನ್ನು ಹೆಚ್ಚಿಸಿ ನಂತರ ಅವುಗಳನ್ನು ಸ್ಪೀಕರ್ ಮೂಲಕ ಕಿವಿಗೆ ಕಳುಹಿಸುತ್ತದೆ. ಆಗ ಕಿವುಡ ವ್ಯಕ್ತಿಯೂ ಕೇಳುಗನಾಗುತ್ತಾನೆ.

ಇದನ್ನೂ ಓದಿ:

Chickenpox: ಚಿಕನ್​ಪಾಕ್ಸ್​​ ಲಕ್ಷಣಗಳೇನು? ಹರಡುವಿಕೆ ಹೇಗೆ? ಇಲ್ಲಿದೆ ಮಾಹಿತಿ

Published On - 11:25 am, Thu, 3 March 22