ಪ್ರಕೃತಿ ಎಂದ ತಕ್ಷಣ ಕಣ್ಣೆದುರು ಬರುವಂಥದ್ದು ಹಸಿರು, ಮಣ್ಣಿನ ಘಮ, ಹರಿಯುವ ನೀರು, ತಂಪಾದ ಗಾಳಿ. ನಾವೆಲ್ಲರೂ ಅವಲಂಬಿತವಾಗಿರುವುದು ಇವುಗಳ ಮೇಲೆಯೇ.
ಪ್ರಕೃತಿ ಸಂರಕ್ಷಣೆಯ ಮಹತ್ವವೇನು?
ಪ್ರಕೃತಿಯು ನಮಗೆ ದಿನನಿತ್ಯದ ಅಗತ್ಯವನ್ನು ಪೂರೈಸುತ್ತದೆ. ಮಿತಿಮೀರಿದ ಜನಸಂಖ್ಯೆ ಮತ್ತು ಮಾನವನ ಬೇಜವಾಬ್ದಾರಿಯ ಪರಿಣಾಮವಾಗಿ ನಾವು ನಮ್ಮ ಸಂಪನ್ಮೂಲಗಳನ್ನು ಅತಿಯಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ್ದೇವೆ.
ಇದೇ ರೀತಿ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆಗೆ ಸಂಪನ್ಮೂಲಗಳೇ ಇರುವುದಿಲ್ಲ. ಪ್ರಕೃತಿ ಮತ್ತು ಅದರ ಸಂಪನ್ಮೂಲಗಳನ್ನು ರಕ್ಷಿಸುವುದು ಮುಖ್ಯ
-ಪರಿಸರ ಸಮತೋಲನವನ್ನು ಉತ್ತೇಜಿಸುವ ಮೂಲಕ ಜೀವನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದು
-ಜೀವವೈವಿಧ್ಯವನ್ನು ರಕ್ಷಿಸಲು
-ಮಾನವ ಜನಾಂಗದ ಉಳಿವು ಕಾಪಾಡಲು
ಮಾನವ ಜನಸಂಖ್ಯೆ ಮತ್ತು ಕೃಷಿ ಭೂಮಿ ತೆರವು ಹೆಚ್ಚಾದಂತೆ ವಿಭಿನ್ನ ಪರಿಸರ ವ್ಯವಸ್ಥೆಗಳ ನಡುವಿನ ಪರಿವರ್ತನೆಯ ವಲಯಗಳು ವಿಸ್ತರಿಸಿವೆ.
ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಉದ್ದೇಶ ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಭೂಮಿಯ ನೈಸರ್ಗಿಕ ಪರಿಸರದಿಂದ ದೂರವಾಗುತ್ತಿರುವ ಅಥವಾ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳು ಮತ್ತು ಮರಗಳನ್ನು ಸಂರಕ್ಷಿಸುವುದು.
ಖ್ಯಾತ ರಷ್ಯಾದ ಬರಹಗಾರ ಲಿಯೋ ಟಾಲ್‌ಸ್ಟಾಯ್ ಅವರ ಪ್ರಕಾರ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಪರ್ಕವನ್ನು ಮುರಿಯಬಾರದು ಎಂಬುವುದು ಪ್ರಕೃತಿ ಸಂರಕ್ಷಣೆಯ ಮೊದಲ ಷರತ್ತಾಗಿದೆ.
ಮಹತ್ವ ಭೂ ತಾಯಿಯನ್ನು ರಕ್ಷಿಸುವಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮಾಡುವುದು ಬಹಳ ಮುಖ್ಯ. ನೀರು, ಗಾಳಿ, ಮಣ್ಣು, ಸಸ್ಯವರ್ಗ, ಖನಿಜಗಳು, ಪ್ರಾಣಿ ಹೀಗೆ ಪ್ರಕೃತಿಯ ವಿವಿಧ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಭೂಮಿಯ ನೈಸರ್ಗಿಕ ಸೌಂದರ್ಯದಲ್ಲಿನ ಸಮತೋಲನವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯಕರ ಪರಿಸರವು ಸ್ಥಿರ ಮತ್ತು ಉತ್ತಮ ಸಮಾಜಕ್ಕೆ ಅಡಿಪಾಯವಾಗಿದೆ. ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಯ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಿಶ್ವ ಪ್ರಕೃತಿ ಸಂರಕ್ಷಣಾ ದಿನವು ಮಹತ್ವದ ಪಾತ್ರ ವಹಿಸುತ್ತದೆ.
ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಸುಸ್ಥಿರವಾಗಿ ಅದನ್ನು ನಿರ್ವಹಿಸಲು ನಾವೆಲ್ಲರೂ ಕೈ ಜೋಡಿಸಬೇಕು. ಆಗ ಮಾತ್ರ ಪರಿಸರದ ಕಾಳಜಿ ಸಾಧ್ಯ. ಅಲ್ಲದೇ ಕೇವಲ ಒಂದು ದಿನಕ್ಕೆ ಮಾತ್ರ ಪರಿಸರ ಉಳಿಸುವ ಮತ್ತು ಮರ-ಗಿಡಗಳನ್ನು ಬೆಳೆಸುವ ಕಾರ್ಯ ಆಗಬಾರದು ಎಂಬ ಕಾಳಜಿ ಇದ್ದರೆ, ನೈಸರ್ಗಿಕ ಸಂಪತ್ತು ಸದಾ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ದುರುಪಯೋಗದಿಂದಾಗಿ ಜಾಗತಿಕ ತಾಪಮಾನ ಏರಿಕೆ, ವಿವಿಧ ರೋಗಗಳು, ನೈಸರ್ಗಿಕ ವಿಕೋಪಗಳು ಇತ್ಯಾದಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇತಿಹಾಸ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಇತಿಹಾಸ ಮತ್ತು ಮೂಲದ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ ಜುಲೈ 28 ರಂದು ಇದನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ, ಜನರು ಪ್ರಕೃತಿಯನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡುವುದು ಮತ್ತು ಅದನ್ನು ಸಂರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು.