ಸಮುದ್ರ ಮಾಲಿನ್ಯವನ್ನು ತಡೆಗಟ್ಟಬೇಕು ಎಂಬ ಅತ್ಯಮೂಲ್ಯವಾದ ಆಶಯದೊಂದಿಗೆ ಪ್ರತಿ ವರ್ಷ ಜೂನ್ 8ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಪರಿಸರದಲ್ಲಿನ ಸಮುದ್ರ ತೀರಗಳು ಪ್ರವಾಸೋದ್ಯಮದ ಮುಖ್ಯ ತಾಣ. ಒಂದಷ್ಟು ಸಮಯವನ್ನು ಕಳೆಯಲು ಸಾವಿರಾರು ಕಿಲೋ ಮೀಟರ್ ಪ್ರಯಾಣ ನಡೆಸಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸಮುದ್ರದ ದಡದಲ್ಲಿ ಕುಳಿತು ಮಾತನಾಡಿ ಹರಟೆ ಹೊಡೆದು ದಿನಕಳೆಯುತ್ತಾರೆ. ಈ ಸಂದರ್ಭದಲ್ಲಿ ಒಂದಷ್ಟು ತಿನಿಸುಗಳನ್ನು ತಿಂದು ಅದರ ಪ್ಲಾಸ್ಟಿಕ್ ಪೊಟ್ಟಣ, ಬಾಟಲಿಗಳನ್ನು ಅಲ್ಲೆ ಎಸೆದು ಹೋಗುತ್ತಾರೆ. ಸಮುದ್ರದ ಅಲೆ ಒಂದೇ ರೀತಿಯಾಗಿರುವುದಿಲ್ಲ. ಹೀಗಾಗಿ ದಡಕ್ಕೆ ಅಪ್ಪಳಿಸಿದ ಅಲೆ ತನ್ನೊಂದಿಗೆ ಈ ವಿಷಕಾರಿ ವಸ್ತುಗಳನ್ನು ಕೊಂಡೊಯ್ಯುತ್ತದೆ. ಇದರಿಂದ ಸಮುದ್ರದ ಸ್ವಚ್ಛಂದ ಮಡಿಲು ಕಲ್ಮಷವಾಗುತ್ತದೆ. ಇದರ ಪರಿಣಾಮವನ್ನು ಅರಿತು ಪ್ರತಿ ವರ್ಷ ಸಮುದ್ರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.
ಸಮುದ್ರ ದಿನ ಇತಿಹಾಸ:
ವಿಶ್ವ ಸಮುದ್ರ ದಿನವನ್ನು ಆಚರಿಸಬೇಕು ಎನ್ನುವ ಮಹದಾಸೆಯೊಂದಿಗೆ 1992ರಲ್ಲಿ ಕೆನಡಾದ ಸಮುದ್ರ ಅಭಿವೃದ್ಧಿ ಅಂತಾರಾಷ್ಟ್ರೀಯ ಕೇಂದ್ರ(ಐಸಿಒಡಿ) ಮತ್ತು ಕೆನಡಾದ ಸಾಗರ ಸಂಸ್ಥೆ (ಒಐಸಿ) ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಿದವು. ಪರಿಸರ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಬ್ರೆಜಿಲ್ನಲ್ಲಿ ನಡೆದಿದ್ದ ಭೂ ಶೃಂಗಸಭೆಯಲ್ಲಿ ಈ ಪ್ರಸ್ತಾವ ಸಲ್ಲಿಕೆ ಆಯಿತು. ಆದರೆ ಇದನ್ನು ವಿಶ್ವಸಂಸ್ಥೆಯು 2008ರಲ್ಲಿ ಅಧಿಕೃತವಾಗಿ ಘೋಷಣೆ ಮಾಡಿತು.
ನಮ್ಮ ಪರಿಸರದಲ್ಲಿನ ಸಮುದ್ರಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾನೂನು ಕ್ರಮವನ್ನು ಜಾರಿಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲೆ ಇದೆಯಾದರೂ ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಜನಸಾಮಾನ್ಯರ ಮೇಲೆ ಇದೆ. ಕಾರಣ ನಾವು ಮೊದಲು ನಮ್ಮ ಪರಿಸರದ ಕಾಳಜಿ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್ 8 ರಂದು ಸಾಗರ ಮಾಲಿನ್ಯವನ್ನು ತಡೆಗಟ್ಟಲು ಪ್ರಯತ್ನಿಸಲಾಗುತ್ತದೆ ಅಂತೆಯೇ 2021ರ ವಿಶ್ವ ಸಾಗರ ದಿನವನ್ನು ಸಮುದ್ರ ಮಾಲಿನ್ಯ ತಡೆಗೆ ಮೀಸಲಿಡೋಣ.
ಸಾಗರ ಮಾಲಿನ್ಯಕ್ಕೆ ಪ್ರಮುಖ ಕಾರಣ ಪ್ಲಾಸ್ಟಿಕ್. ಹೀಗಾಗಿ ಇದನ್ನು ಮೊದಲು ನಿರ್ಮೂಲನೆ ಮಾಡಬೇಕು. ಈ ವರ್ಷದ ವಿಶ್ವ ಸಾಗರ ದಿನದ ಆಚರಣೆಯಲ್ಲಿ ಸಮುದ್ರವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ಈ ನಿಟ್ಟಿನಲ್ಲಿ ಈ ಕೆಳಕಂಡ ಮಾರ್ಗಗಳನ್ನು ನಾವು ಅನುಸರಿಸಬೇಕು.
ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ಬಳಸಿ
ಮರುಬಳಕೆ ಮಾಡಬಹುದಾದ ಬಾಟಲಿಯನ್ನು ಬಳಸುವುದರಿಂದ ಪ್ಲಾಸ್ಟಿಕ್ನಿಂದ ಉಂಟಾಗುವ ಪರಿಣಾಮವನ್ನು ಕಡಿಮೆ ಮಾಡಬಹುದು. ಇದು ಕೇವಲ ಸಾಗರವನ್ನಷ್ಟೇ ಅಲ್ಲ ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ಒಳ್ಳೆಯದು. ದಿನಂಪ್ರತಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಹಣವೂ ಕೂಡ ವ್ಯಯವಾಗುತ್ತದೆ. ಹೀಗಾಗಿ ಮರುಬಳಕೆ ಮಾಡುವ ವಸ್ತುಗಳನ್ನು ಖರೀದಿಸಿ ಮತ್ತು ಅವುಗಳನ್ನು ಬಳಸಿ. ಪರಿಸರ ಸ್ನೇಹಿ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವಾಗ ಪ್ಲಾಸ್ಟಿಕ್ ಬಳಸುವುದು ಕಾನೂನುಬಾಹೀರ ಎನ್ನುವುದನ್ನು ಮರೆಯದಿರಿ.
ಕಾರ್ಬನ್ ಅಥವಾ ಇಂಗಾಲದ ಹೆಜ್ಜೆ ಗುರುತನ್ನು ತಡೆಯಿರಿ
ಸಾಗರದ ಅಂಚಿನಲ್ಲಿನ ಸಸ್ಯಗಳಿಂದ ಬಿಡುಗಡೆಯಾಗುವ ಆಮ್ಲಜನಕ ಪೂರೈಕೆಯೂ ನಮಗೆ ಅರ್ಧದಷ್ಟು ಆಮ್ಲಜನಕವನ್ನು ಒದಗಿಸುತ್ತದೆ. ಆದರೆ ನಾವು ಇಡುವ ಕಾರ್ಬನ್ ಹೆಜ್ಜೆ ಗುರುತು ಇದೆಲ್ಲವನ್ನು ನಾಶ ಮಾಡುತ್ತದೆ. ನೀವು ಸೈಕಲ್ ಓಡಿಸುತ್ತೀರಿ ಎಂದಾದರೆ ಕಾರ್ಬನ್ ಹೆಜ್ಜೆ ಗುರುತು ಇರುವುದಿಲ್ಲ. ಅದೇ ನೀವು ಕಾರು ಮತ್ತು ಬೈಕ್ಗಳಲ್ಲಿ ಓಡಾಡುತ್ತೀರಿ ಎಂದರೆ ಕಾರ್ಬನ್ ಹೆಜ್ಜೆ ಗುರುತು ಇರುತ್ತದೆ. ಹೀಗಾಗಿ ಆದಷ್ಟು ಹವಾಮಾನಕ್ಕೆ ಹಾನಿಯಾಗದಂತೆ ಸಂಚರಿಸಲು ಮತ್ತು ಅನಗತ್ಯವಾಗಿ ಕಾರ್ಬನ್ ಹೆಜ್ಜೆ ಇಡುವ ಬದಲು ಸರಳ ಜೀವನ ಪಾಲಿಸುವುದನ್ನು ರೂಡಿಸಿಕೊಳ್ಳಿ.
ಸಮುದ್ರಕ್ಕೆ ಹಾನಿಯುಂಟು ಮಾಡುವ ಸೌಂದರ್ಯವರ್ಧಕದ ಉತ್ಪಾದನೆ ನಿಲ್ಲಿಸಿ
ಸೌಂದರ್ಯವರ್ಧಕದ ಉದ್ಯಮವು ಸಾಗರದಲ್ಲಿ ಸೇರುವ ಅನೇಕ ಹಾನಿಕಾರಕ ವಸ್ತುಗಳಿಗೆ ಅವಕಾಶ ಮಾಡಿಕೊಡುತ್ತದೆ. ಸೌಂದರ್ಯವರ್ಧಕ ಉತ್ಪಾದನೆಗೆ ಬಳಸುವ ಮೈಕ್ರೋಬೀಡ್‌ಗಳು ಮತ್ತು ಮೈಕ್ರೋಪ್ಲ್ಯಾಸ್ಟಿಕ್‌ಗಳನ್ನು ಸಮುದ್ರಗಳಿಂದ ಬೆರ್ಪಡಿಸುವುದು ಮತ್ತು ಸ್ವಚ್ಛಗೊಳಿಸುವುದು ಬಹಳ ಕಷ್ಟ. ಸೌಂದರ್ಯವರ್ಧಕಗಳಲ್ಲಿನ ಈ ವಿಷಕಾರಿ ರಾಸಾಯನಿಕಗಳು ಚರಂಡಿಗಳ ಮೂಲಕ ಹರಿದು ಸಮುದ್ರ ಸೇರುವುದರಿಂದ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ ಮತ್ತು ಜಲಚರಗಳಿಗೆ ತೊಂದರೆ ಉಂಟುಮಾಡುತ್ತದೆ ಹೀಗಾಗಿ ಇವುಗಳ ಬಳಕೆಯನ್ನು ತಪ್ಪಿಸುವುದು ಸೂಕ್ತ.
ಸಮುದ್ರದಲ್ಲಿ ಕಸ ಹಾಕುವುದನ್ನು ತಪ್ಪಿಸಿ, ಸಾಧ್ಯವಾದಷ್ಟು ಸ್ವಚ್ಛತೆ ಕಾಪಾಡಿ
ಸಮುದ್ರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಲಿ ಎಂದು ಕಾದು ಕುಳಿತುಕೊಳ್ಳುವುದನ್ನು ನಿಲ್ಲಿಸಿ. ನಮ್ಮ ಸಾಗರಗಳ ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ನಾವು ವಹಿಸಬೇಕು. ಹೀಗಾಗಿ ಒಂದು ತಂಡವನ್ನು ಕಟ್ಟಿ ಕಡಲ ತೀರದಲ್ಲಿ ಬಿದ್ದಿರುವ ಕಸವನ್ನು ತೆಗೆದು ಶುಚಿಯಾಗಿಡುವ ಅಭ್ಯಾಸ ಮಾಡಿಕೊಳ್ಳಿ ಈ ಅಭ್ಯಾಸ ವಾರರಕ್ಕೆ ಒಮ್ಮೆಯಂತೆ ಇದ್ದರೂ ಸಾಕು.
ಮರು ಬಳಕೆಯಾಗುವ ಚೀಲಗಳನ್ನು ಬಳಸಿ
ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ಜಲಚರಗಳನ್ನು ಪ್ಲಾಸ್ಟಿಕ್ ಚೀಲಗಳು ಕೊಲ್ಲುತ್ತಿವೆ. ಹೀಗಾಗಿ ಮರುಬಳಕೆ ಮಾಡಬಹುದಾದ ಚೀಲಗಳನ್ನು ಹೆಚ್ಚು ಬಳಸಿ ಮತ್ತು ಆ ಮೂಲಕ ಜಲಚರಗಳ ಸಾವಿಗೆ ಕಾರಣವಾಗುವುದನ್ನು ನಿಲ್ಲಿಸಿ.
ವಿಶ್ವ ಸಾಗರ ದಿನಾಚರಣೆ 2021 ಆಶಯ
ವಿಶ್ವ ಸಾಗರ ದಿನಾಚರಣೆ 2021 ಸಮುದ್ರದಲ್ಲಿರುವ ಜೀವ ಹಾಗೂ ಜೀವಿಗಳ ಜೀವನ ಶೈಲಿಯನ್ನು ತೋರಿಸುತ್ತದೆ. ಭೂಮಿಯ ಮೇಲ್ಮೈ ಶೇಕಡಾ 71 ರಷ್ಟು ನೀರಿನಿಂದ ಆವೃತವಾಗಿದೆ. ಇದು ಸಸ್ಯಗಳು, ಪ್ರಾಣಿಗಳು ಮತ್ತು ಇತರ ಜೀವಿಗಳ ಆವಾಸಸ್ಥಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಸುತ್ತಮುತ್ತಲಿನ ಸಾಗರಗಳನ್ನು ಉಳಿಸಬೇಕು.
ಇದನ್ನೂ ಓದಿ:
World Food Safety Day 2021: ಉತ್ತಮ ನಾಳೆಗಾಗಿ ಇಂದು ಸುರಕ್ಷಿತವಾದ ಆಹಾರ ಸೇವಿಸಿ
(World Ocean Day 2021 Those who love to travel to the sea are also concerned about the ocean)
Published On - 10:38 am, Mon, 7 June 21