
ಭವಿಷ್ಯ, ವೈದ್ಯಕೀಯ ತುರ್ತುಪರಿಸ್ಥಿತಿಯಂತಹ ಕಷ್ಟದ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಹಣದ ಅವಶ್ಯಕತೆ ತುಂಬಾನೇ ಮುಖ್ಯ. ಈ ಪರಿಸ್ಥಿತಿಗಳನ್ನು ನಿಭಾಯಿಸಲು ನಾವು ಕೂಡಿಟ್ಟ ಹಣ ನಮಗೆ ಸಹಾಯಕ್ಕೆ ಬರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಹಣ ಉಳಿತಾಯ (savings) ಮಾಡುವುದೇ ಒಂದು ಸವಾಲಿನ ಸಂಗತಿಯಾಗಿದೆ. ಹೀಗಿದ್ದರೂ ಭವಿಷ್ಯದ ದೃಷ್ಟಿಯಿಂದ ಖರ್ಚು ಕಡಿಮೆ ಮಾಡಿ ಹಣವನ್ನು ಉಳಿತಾಯ ಮಾಡುವುದು ಅತೀ ಅವಶ್ಯಕವಾಗಿದೆ. ಹಣ ಉಳಿತಾಯದ ಈ ಮಹತ್ವದ ಬಗ್ಗೆ ತಿಳಿಸಲು ಪ್ರತಿವರ್ಷ ಅಕ್ಟೋಬರ್ 31 ರಂದು ವಿಶ್ವ ಉಳಿತಾಯ ದಿನವನ್ನು ಆಚರಿಸಲಾಗುತ್ತದೆ. ಆದರೆ 1984 ರಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅಕ್ಟೋಬರ್ 31 ರಂದು ನಿಧನರಾದ ಕಾರಣ ಭಾರತದಲ್ಲಿ ಉಳಿತಾಯ ದಿನವನ್ನು ಅಕ್ಟೋಬರ್ 30 ರಂದು ಆಚರಿಸುವ ಪರಿಪಾಠವಿದೆ. ಈ ದಿನವನ್ನು ವಿಶ್ವ ಮಿತವ್ಯಯ ದಿನ ಎಂದೂ ಕರೆಯುತ್ತಾರೆ. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು, ಇದರ ಮಹತ್ವವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
1924 ರಲ್ಲಿ, ಇಟಾಲಿಯನ್ ಪ್ರಾಧ್ಯಾಪಕ ಫಿಲಿಪ್ಪೊ ರವಿಝಾ ಅವರು ಅಂತಾರಾಷ್ಟ್ರೀಯ ಮಿತವ್ಯಯ ಕಾಂಗ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಮಿತವ್ಯಯ ದಿನದ ಆಚರಣೆಯ ಬಗ್ಗೆ ಪ್ರಸ್ತಾಪಿಸಿದರು. ನಂತರ ಹಣವನ್ನು ಉಳಿಸುವ ಕಲ್ಪನೆಯನ್ನು ಉತ್ತೇಜಿಸಲು ಮತ್ತು ಬ್ಯಾಂಕುಗಳಲ್ಲಿ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. 1925 ರಲ್ಲಿ ಮೊದಲ ವಿಶ್ವ ಉಳಿತಾಯ ದಿನವನ್ನು ಆಚರಿಸಲಾಯಿತು. ಮೊದಲನೆಯ ಮಹಾಯುದ್ಧದ ನಂತರ ಜನರು ಉಳಿತಾಯದ ಬಗ್ಗೆ ಖಚಿತವಾಗಿರದ ಕಾರಣ, ಹಣವನ್ನು ಉಳಿಸುವ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ
ಹಣವನ್ನು ಉಳಿಸುವ ಮೂಲಕ, ನಾವು ನಮ್ಮದೇ ಆದ ಸ್ವಂತ ಬ್ಯುಸಿನೆಸ್ ಪ್ರಾರಂಭಿಸಬಹುದು, ಉತ್ತಮ ಶಿಕ್ಷಣವನ್ನು ಪಡೆಯಬಹುದು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು. ಮುಖ್ಯವಾಗಿ ನಮ್ಮ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಬಹುದು. ಆದ್ದರಿಂದ, ಪ್ರತಿಯೊಬ್ಬರೂ ಉಳಿತಾಯದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಾಸಿಕ ಆದಾಯದ ಸ್ವಲ್ಪ ಭಾಗವನ್ನು ಉಳಿಸುವುದು ಬಹಳ ಮುಖ್ಯವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:58 am, Thu, 30 October 25