ಸಿಕಲ್ ಸೆಲ್ ಎನ್ನುವುದು ಅನುವಂಶೀಯವಾಗಿ ಬರುವ ಕಾಯಿಲೆಯಾಗಿದ್ದು, ತಂದೆ ತಾಯಿಯಿಂದ ಮಕ್ಕಳಿಗೆ ಬರುತ್ತದೆ. ಹುಟ್ಟಿನಿಂದ ಕೊನೆಯವರೆಗೂ ಕಾಡುವ ರೋಗವಿದಾಗಿದ್ದು, ರೋಗಿಯೂ ವಿಪರೀತ ನರಕಯಾತನೆಯನ್ನು ಅನುಭವಿಸುತ್ತಾನೆ. ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸಿಕಲ್ ಸೆಲ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
ಸಿಕಲ್ ಸೆಲ್ ಕಾಯಿಲೆ ಇರುವವರಲ್ಲಿ ಅಸಹಜವಾದ ಕೆಂಪುರಕ್ತಕಣಗಳ ರಚನೆಯಿರುತ್ತದೆ. ದುಂಡಗಿರಬೇಕಾದ ರಕ್ತ ಕಣಗಳ ಗಾತ್ರ ಈ ರೋಗಿಗಳಲ್ಲಿ ಕಡಗೋಲಿನಾಕಾರದಲ್ಲಿರುತ್ತದೆ. ಸಣ್ಣ ಸಣ್ಣ ರಕ್ತನಾಳಗಳಲ್ಲಿ ಕೆಂಪು ರಕ್ತಕಣಗಳು ಸೇರಿಕೊಂಡು ರಕ್ತನಾಳಗಳು ಮುಚ್ಚಿರುತ್ತದೆ. ಹೀಗಾಗಿ ಜೀವಕೋಶಗಳಿಗೆ ಆಮ್ಲಜನಕ ಸರಬರಾಜು ಪ್ರಕ್ರಿಯೆಯೂ ಸರಿಯಾಗಿ ಆಗುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ.
ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರಿಗೆ ಅಂತಾರಾಷ್ಟ್ರೀಯ ಯೋಗ ದಿನದಂದು ಹೀಗೆ ಶುಭಾಶಯ ತಿಳಿಸಿ
* ಉಸಿರಾಟದ ಸಮಸ್ಯೆ
* ಅತಿಯಾದ ಸುಸ್ತು
* ತಲೆನೋವು
* ಮೂಳೆಯಲ್ಲಿ ಹಠಾತ್ ನೋವು ಕಾಣಿಸಿಕೊಳ್ಳುವುದು
* ಕಿಡ್ನಿ, ಜಾಂಡಿಸ್, ಹೃದಯ, ಯಕೃತ್ತ್, ಮೆದುಳು ಮತ್ತು ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ
* ಅಂಗೈ ಮತ್ತು ಅಂಗಾಲುಗಳು ತಣ್ಣಗಾಗುವುದು.
* ವಾಸಿಯಾಗದ ಹುಣ್ಣುಗಳು ಈ ರೋಗದ ಲಕ್ಷಣವಾಗಿದೆ.
ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಸಣ್ಣ ಪುಟ್ಟ ನೋವಿಗೆ ನೋವು ನಿವಾರಕ ಔಷಧಿ ಮತ್ತು ಹೀಲಿಂಗ್ ಪ್ಯಾಡ್‌ಗಳನ್ನು ನೀಡಲಾಗುತ್ತದೆ. ಅದಲ್ಲದೆ, ರೋಗಿಗಳ ಪದೇ ಪದೇ ಸೋಂಕಿಗೆ ತುತ್ತಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ರೋಗ ತೀರಾ ಮುಂದಿನ ಹಂತಕ್ಕೆ ತಲುಪಿದ್ದರೆ ರೋಗಿಯ ದೇಹದ ರಕ್ತವನ್ನು ಪದೇ ಪದೇ ಬದಲಾಯಿಸಬೇಕಾಗುತ್ತದೆ. ಆದರೆ ಇದರಿಂದಾಗುವ ಅಡ್ಡಪರಿಣಾಮಗಳೇ ಹೆಚ್ಚು. ಪದೇ ಪದೇ ಕಾಡುವ ಜ್ವರ, ಮೂಳೆ ನೋವು ಮತ್ತು ಸೋಂಕಿನ ಕಾರಣ ನಿರಂತರವಾದ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತ್ಯಗತ್ಯವಾಗಿದೆ.
ವಿಶ್ವ ಕುಡಗೋಲು ಕಣ ರೋಗದ ಜಾಗೃತಿ ದಿನವು ಡಿಸೆಂಬರ್ 22, 2008 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ವಿಶ್ವದಾದ್ಯಂತ ರೋಗದ ಬಗ್ಗೆ ಜಾಗೃತಿ ಮೂಡಿಸಲು ಜೂನ್ 19 ರಂದು ಅಧಿಕೃತ ದಿನವೆಂದು ಘೋಷಿಸಿತು. ಜನರಲ್ಲಿ ಈ ರೋಗದ ಬಗೆಗಿನ ತಿಳುವಳಿಕೆಯ ಕೊರತೆ ಹಾಗೂ ಕುಡಗೋಲು ಕೋಶ ಕಾಯಿಲೆಗೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಪರಿಹರಿಸಲು ವಿಶ್ವ ಸಿಕಲ್ ಸೆಲ್ ಜಾಗೃತಿ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿ ವರ್ಷವು ವಿಶ್ವ ಸಿಕಲ್ ಸೆಲ್ ಜಾಗೃತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಕುಡಗೋಲು ಕಣ ಕಾಯಿಲೆ ಇರುವ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು. ಆರಂಭಿಕ ರೋಗನಿರ್ಣಯ ಹಾಗೂ ಪರಿಣಾಮಕಾರಿ ಚಿಕಿತ್ಸಾ ಆಯ್ಕೆಗಳು ಹಾಗೂ ಸುಧಾರಿತ ಆರೋಗ್ಯ ಸೇವೆಗಳಿಗಾಗಿ ಸಲಹೆ ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: