
ಜೀವನ (Life) ಎನ್ನುವಂತಹದ್ದು ತುಂಬಾನೇ ಅಮೂಲ್ಯವಾವದ್ದು, ಇಂತಹ ಶ್ರೇಷ್ಠ ಮಾನವ ಜೀವನದಲ್ಲಿ ನೋವು-ನಲಿವು, ಸುಖ-ದುಃಖ, ಕಷ್ಟ ಕಾರ್ಪಣ್ಯ ಎಲ್ಲವೂ ಇದ್ದೇ ಇರುತ್ತದೆ. ಆದರೆ ಅನೇಕರು ಕಷ್ಟ ಬಂತೆಂದು ಅದನ್ನು ಎದುರಿಸಲಾಗದೆ, ಇದ್ದು ಜಯಿಸಲಾಗದೆ ತಮ್ಮ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವೆಂದು, ದುಡುಕಿ ತಮ್ಮ ಅಮೂಲ್ಯವಾದ ಜೀವವನ್ನೇ ಕಳೆದುಕೊಳ್ಳುತ್ತಾರೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವವರ ಮನಃ ಪರಿವರ್ತನೆ ಮಾಡಲು, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕವಾಗಿ ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆ (World Suicide Prevention Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಇಂಟರ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಸೈಡ್ ಪ್ರಿವೆನ್ಷನ್ (IASP) ಎಂಬ ಸಂಸ್ಥೆ 2003 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲು ಪ್ರಾರಂಭಿಸಿತು. ಇದು ಜಾಗತಿಕ ಜಾಗೃತಿ ಅಭಿಯಾನವಾಗಿದ್ದು, ಆತ್ಮಹತ್ಯೆಯನ್ನು ತಡೆಗಟ್ಟಲು ಮತ್ತು ಆತ್ಮಹತ್ಯೆಗೆ ಯತ್ನಿಸುವವರ ಮನಃ ಪರಿವರ್ತನೆ ಮಾಡುವ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಈ ಸಂಸ್ಥೆಗಳು ಆತ್ಮಹತ್ಯೆ ತಡೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ನಡೆಸುತ್ತವೆ.
ಆತ್ಮಹತ್ಯೆ ಗಂಭೀರ ಜಾಗತಿಕ ಸಮಸ್ಯೆಯಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳು, ಒತ್ತಡ, ಒಂಟಿತನ, ಸಾಮಾಜಿಕ ಅಥವಾ ಆರ್ಥಿಕ ಒತ್ತಡಗಳು ಮುಂತಾದ ಹಲವು ಅಂಶಗಳಿಂದ ಜನ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಾರೆ. ಹಾಗಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು ಮತ್ತು ಮಾನಸಿಕ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಇದನ್ನೂ ಓದಿ: ಸಾಕ್ಷರತೆಯಿಂದ ದೇಶದ ಅಭಿವೃದ್ಧಿ ಸಾಧ್ಯ; ಸಾಕ್ಷರತಾ ದಿನಾಚರಣೆಯ ಉದ್ದೇಶವನ್ನು ತಿಳಿಯಿರಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ