AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Vegetarian Day: ಸಸ್ಯಾಹಾರ ಎಂದರೆ ಕೇವಲ ತರಕಾರಿ ತಿನ್ನುವುದಲ್ಲ; ತಟ್ಟೆಯಲ್ಲಿ ಈ ಆಹಾರಗಳೂ ಇರಲಿ

ಅಕ್ಟೋಬರ್ 1ರಂದು ವಿಶ್ವ ಸಸ್ಯಾಹಾರ ದಿನವನ್ನು ಆಚರಿಸಲಾಗುತ್ತದೆ. ಸಸ್ಯಾಹಾರ ಎಂದರೆ ಕೇವಲ ತರಕಾರಿ ಮತ್ತು ಹಣ್ಣು ಸೇವಿಸುವುದಲ್ಲ. ಬೇಳೆಕಾಳು, ಸಂಪೂರ್ಣ ಧಾನ್ಯ, ಬೀಜಗಳು, ಒಣಹಣ್ಣುಗಳು ಸೇರಿದಂತೆ ವಿವಿಧ ಆಹಾರಗಳನ್ನು ಸೇರಿಸಿಕೊಂಡಾಗ ಸಮತೋಲಿತ ಆಹಾರ ರೂಪಿಸಬಹುದು. ಸಂಪೂರ್ಣ ಸಸ್ಯಾಧಾರಿತ ಆಹಾರ ಸೇವಿಸುವವರು ವಿಟಮಿನ್ ಬಿ12, ಕಬ್ಬಿಣದಂತಹ ಪೋಷಕಾಂಶಗಳ ಬಗ್ಗೆ ವಿಶೇಷ ಗಮನ ನೀಡಬೇಕು.

World Vegetarian Day: ಸಸ್ಯಾಹಾರ ಎಂದರೆ ಕೇವಲ ತರಕಾರಿ ತಿನ್ನುವುದಲ್ಲ; ತಟ್ಟೆಯಲ್ಲಿ ಈ ಆಹಾರಗಳೂ ಇರಲಿ
World Vegetarian Day
ಮಾಲಾಶ್ರೀ ಅಂಚನ್​
| Edited By: |

Updated on: Oct 01, 2026 | 7:34 AM

Share

ಮುಖ್ಯಾಂಶಗಳು

  • ಸಸ್ಯಾಹಾರ ಎಂದಾಕ್ಷಣ ತರಕಾರಿ ಮತ್ತು ಹಣ್ಣು ಮಾತ್ರ ಅಲ್ಲ
  • ಸಸ್ಯಾಹಾರಿಗಳ ತಟ್ಟೆಯಲ್ಲಿ ಈ ಆಹಾರಗಳು ಇರಲೇಬೇಕು!
  • ಸಸ್ಯಾಹಾರ ಸೇವಿಸುವವರು ಬಿ12 ಕೊರತೆಯ ಬಗ್ಗೆ ಏಕೆ ಗಮನಹರಿಸಬೇಕು?

ಅಕ್ಟೋಬರ್ 1ರಂದು ವಿಶ್ವ ಸಸ್ಯಾಹಾರ ದಿನವನ್ನು ಆಚರಿಸಲಾಗುತ್ತದೆ. ಸಸ್ಯಾಹಾರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರೋಗ್ಯಕರ (Health) ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವುದು ಈ ದಿನದ ಉದ್ದೇಶ. 1977ರಲ್ಲಿ ನಾರ್ತ್ ಅಮೆರಿಕನ್ ವೆಜಿಟೇರಿಯನ್ ಸೊಸೈಟಿ ಈ ದಿನವನ್ನು ಆರಂಭಿಸಿತು. 1978ರಲ್ಲಿ ಇಂಟರ್‌ನ್ಯಾಷನಲ್ ವೆಜಿಟೇರಿಯನ್ ಯೂನಿಯನ್ ಇದನ್ನು ಬೆಂಬಲಿಸಿತು. ಅಕ್ಟೋಬರ್ ತಿಂಗಳನ್ನು ಸಸ್ಯಾಹಾರ ಜಾಗೃತಿ ತಿಂಗಳ ಆರಂಭವಾಗಿಯೂ ಪರಿಗಣಿಸಲಾಗುತ್ತದೆ.

ಸಸ್ಯಾಹಾರ ಎಂದರೆ ತರಕಾರಿ ಮಾತ್ರವಲ್ಲ

ಸಸ್ಯಾಹಾರ ಎಂದಾಕ್ಷಣ ತರಕಾರಿ ಮತ್ತು ಹಣ್ಣು ಮಾತ್ರ ನೆನಪಿಗೆ ಬರುತ್ತವೆ. ಆದರೆ ಸಮತೋಲಿತ ಸಸ್ಯಾಹಾರದಲ್ಲಿ ಬೇಳೆ, ಕಾಳುಗಳು, ಧಾನ್ಯಗಳು, ಬೀಜಗಳು, ಒಣಹಣ್ಣುಗಳು ಸೇರಿದಂತೆ ಹಲವು ಆಹಾರಗಳಿಗೆ ಸ್ಥಾನವಿದೆ. ಹಾಲು ಮತ್ತು ಮೊಸರು ಸೇವಿಸುವವರು ಅವುಗಳನ್ನೂ ಆಹಾರದ ಭಾಗವನ್ನಾಗಿ ಮಾಡಬಹುದು. ಆಹಾರದಲ್ಲಿ ವೈವಿಧ್ಯ ಇರುವುದರಿಂದ ದೇಹಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳನ್ನು ಪಡೆಯಲು ಸಹಾಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯೂ ವೈವಿಧ್ಯಮಯ ಆಹಾರ, ಬೇಳೆಕಾಳು, ಸಂಪೂರ್ಣ ಧಾನ್ಯ, ತರಕಾರಿ, ಹಣ್ಣು ಮತ್ತು ಬೀಜಗಳನ್ನು ಒಳಗೊಂಡ ಆಹಾರಕ್ಕೆ ಒತ್ತು ನೀಡುತ್ತದೆ.

ಪ್ರೋಟೀನ್‌ಗಾಗಿ ಏನು ತಿನ್ನಬೇಕು?

ಸಸ್ಯಾಹಾರ ಸೇವಿಸುವವರು ಪ್ರೋಟೀನ್‌ಗಾಗಿ ಮಾಂಸಾಹಾರಕ್ಕೆ ಬದಲಾಗಿ ಬೇಳೆ, ಕಡಲೆ, ರಾಜ್ಮಾ, ಸೋಯಾ, ಬಟಾಣಿ, ಶೇಂಗಾ, ಬಾದಾಮಿ ಸೇರಿದಂತೆ ವಿವಿಧ ಆಹಾರಗಳನ್ನು ಬಳಸಬಹುದು. ಒಂದು ರೀತಿಯ ಆಹಾರವನ್ನೇ ಅವಲಂಬಿಸುವ ಬದಲು ಹಲವು ಆಹಾರಗಳನ್ನು ಸೇರಿಸುವುದು ಹೆಚ್ಚು ಸೂಕ್ತ.

ಸಸ್ಯಾಹಾರ ಆರೋಗ್ಯಕರವಾಗಿರಬೇಕಾದರೆ…

ಸಸ್ಯಾಹಾರ ಸೇವಿಸುತ್ತಿದ್ದೇವೆ ಎಂದ ಮಾತ್ರಕ್ಕೆ ಆಹಾರ ಆರೋಗ್ಯಕರವಾಗುತ್ತದೆ ಎನ್ನಲಾಗುವುದಿಲ್ಲ. ಕರಿದ ತಿಂಡಿ, ಹೆಚ್ಚು ಸಕ್ಕರೆ ಇರುವ ಸಿಹಿ ಪದಾರ್ಥಗಳು, ಸಂಸ್ಕರಿಸಿದ ಆಹಾರ ಮತ್ತು ಹೆಚ್ಚಿನ ಉಪ್ಪಿನ ತಿಂಡಿಗಳನ್ನು ಹೆಚ್ಚಾಗಿ ಸೇವಿಸಿದರೆ ಅದು ಸಮತೋಲಿತ ಆಹಾರವಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಆರೋಗ್ಯಕರ ಆಹಾರದಲ್ಲಿ ಉಪ್ಪು, ಮುಕ್ತ ಸಕ್ಕರೆ ಹಾಗೂ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬಿನ ಪ್ರಮಾಣವನ್ನು ಮಿತಿಗೊಳಿಸುವುದು ಮುಖ್ಯ.

Smoking: ವರ್ಷಗಟ್ಟಲೆ ಧೂಮಪಾನ… ಹಾನಿಗೊಳಗಾದ ಶ್ವಾಸಕೋಶಗಳು ಹೇಗೆ ಚೇತರಿಸಿಕೊಳ್ಳಬಹುದು?

ಸಸ್ಯಾಹಾರದಲ್ಲಿ ಗಮನಿಸಬೇಕಾದ ಅಂಶ

ಮಾಂಸ, ಮೊಟ್ಟೆ, ಹಾಲು ಸೇರಿದಂತೆ ಎಲ್ಲಾ ಪ್ರಾಣಿ ಮೂಲದ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವ ಸಸ್ಯಾಧಾರಿತ ಆಹಾರ ಪದ್ಧತಿಯನ್ನು ಅನುಸರಿಸುವವರು ಕೆಲವು ಪೋಷಕಾಂಶಗಳ ಬಗ್ಗೆ ವಿಶೇಷ ಗಮನ ನೀಡಬೇಕಾಗಬಹುದು. ವಿಶೇಷವಾಗಿ ವಿಟಮಿನ್ ಬಿ12 ಮತ್ತು ಕಬ್ಬಿಣದಂತಹ ಪೋಷಕಾಂಶಗಳ ಕೊರತೆಯ ಅಪಾಯ ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಸೂಚಿಸುತ್ತದೆ. ಅಗತ್ಯವಿದ್ದರೆ ವೈದ್ಯರು ಅಥವಾ ಆಹಾರ ತಜ್ಞರ ಸಲಹೆಯೊಂದಿಗೆ ಆಹಾರ ಯೋಜನೆ ರೂಪಿಸಬಹುದು.

ಹೀಗಾಗಿ ವಿಶ್ವ ಸಸ್ಯಾಹಾರ ದಿನವನ್ನು ಕೇವಲ ಮಾಂಸಾಹಾರ ತ್ಯಜಿಸುವ ದಿನವಾಗಿ ನೋಡುವ ಬದಲು, ನಮ್ಮ ಪ್ರತಿದಿನದ ತಟ್ಟೆಯಲ್ಲಿ ತರಕಾರಿ, ಹಣ್ಣು, ಬೇಳೆಕಾಳು, ಸಂಪೂರ್ಣ ಧಾನ್ಯ ಮತ್ತು ಬೀಜಗಳಂತಹ ಪೌಷ್ಟಿಕ ಆಹಾರಗಳಿಗೆ ಎಷ್ಟು ಸ್ಥಾನವಿದೆ ಎಂಬುದನ್ನು ಗಮನಿಸುವ ದಿನವಾಗಿಯೂ ಆಚರಿಸಬಹುದು.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More