ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಪರಿಸರ, ಜೀವ ರಾಶಿಗಳು ಹಾಗೂ ಸಂಪತ್ತು ಭರಿತವಾದ ಕಾಡುಗಳನ್ನು ನಾಶಮಾಡುತ್ತಿದ್ದಾನೆ. ತನ್ನ ಹಾಗೆಯೇ ಜೀವ ರಾಶಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ಮರೆತ್ತಿದ್ದಾನೆ. ಜನಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾಡುಗಳನ್ನು ನಾಶ ಮಾಡಿ ಅದನ್ನು ತನ್ನ ವಾಸಸ್ಥಾನವಾಗಿ ಮಾಡಿಕೊಳ್ಳುತ್ತಿದ್ದಾನೆ. ಪ್ರಾಣಿಗಳ ಆವಾಸ ಸ್ಥಳಗಳಲ್ಲಿ ಕಟ್ಟಡಗಳ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುತ್ತಿರುವ ಹಿನ್ನಲೆಯಲ್ಲಿ ವನ್ಯಜೀವಿಗಳು ನೆಲೆಯನ್ನು ಕಳೆದುಕೊಂಡಿದೆ. ಅದಲ್ಲದೇ, ಹವಾಮಾನ ವೈಪರೀತ್ಯ, ಅರಣ್ಯ ನಾಶ, ಕಾಡ್ಗಿಚ್ಚು, ಕಾಡು ಪ್ರಾಣಿಗಳ ಬೇಟೆ ಹೀಗೆ ನಾನಾ ಕಾರಣಗಳಿಂದ ಜೀವ ಜಗತ್ತಿನ ಸಮತೋಲನದ ಭಾಗವಾಗಿರುವ ವನ್ಯಜೀವಿಗಳು ಅಳಿವಿನಂಚಿನಲ್ಲಿವೆ. ಈ ವನ್ಯ ಜೀವಿಗಳನ್ನು ರಕ್ಷಿಸುವಂತಹ ಹೊಣೆ ಎಲ್ಲರ ಮೇಲೆ ಇರುವ ಕಾರಣ, ಮಾರ್ಚ್ 3 ರಂದು ವಿಶ್ವ ವನ್ಯ ಜೀವಿಗಳ ದಿನದಂದು, ಪ್ರಾಣಿಗಳ ಸಂತತಿಯನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವು ಆಗುತ್ತಿದೆ.
ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ವನ್ಯ ಜೀವಿಗಳ ದಿನದ ಉದ್ದೇಶವಾಗಿದೆ. ಸಿಐಟಿಇಎಸ್ ಒಪ್ಪಂದಕ್ಕೆ 1973 ಮಾರ್ಚ್ 3 ರಂದು ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಪ್ರಪಂಚದಾದಂತ್ಯ ಪ್ರತಿ ವರ್ಷವು ಮಾರ್ಚ್ 3 ರಂದು ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಸಸ್ಯ ಹಾಗೂ ವನ್ಯ ಜೀವಿ ಸಂಕುಲಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡಿದೆ.
ಇದನ್ನೂ ಓದಿ: ಮಾರ್ಚ್ ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳ ಮಾಹಿತಿ ಇಲ್ಲಿದೆ
ಅಳಿವಿನಂಚಿಗೆ ತಲುಪಿರುವ ವನ್ಯಜೀವಿಗಳ ರಕ್ಷಣೆಯ ಬಗ್ಗೆ ಜಾಗೃತಿ ಹಾಗೂ ಪರಿಸರದ ಸಮತೋಲನಕ್ಕೆ ಅವುಗಳ ಪ್ರಾಮುಖ್ಯತೆ ಎಷ್ಟಿದೆ ಎಂದು ತಿಳಿಸಲು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಮಾನವನ ಮಿತಿ ಮೀರಿದ ಚಟುವಟಿಕೆಗಳಿಂದ ಪ್ರಾಣಿ ಜೀವ ಸಂಕುಲವು ಎದುರಿಸುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ. ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿಶ್ವ ವನ್ಯ ಜೀವಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಪ್ರಾಣಿಗಳ ಸಂರಕ್ಷಣೆಯ ಕುರಿತು ಕಾರ್ಯಗಾರಗಳು, ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ