ಮೇಕೆದಾಟು ಅಣೆಕಟ್ಟೆಯಿಂದ 1200 ಹೆಕ್ಟೇರ್ ಅರಣ್ಯ ನಾಶ: ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್
ಮೇಕೆದಾಟು ಅಣೆಕಟ್ಟು ನಿರ್ಮಿಸಿದರೆ 1200 ಹೆಕ್ಟೇರ್ ಅರಣ್ಯ ಭೂಮಿಯೊಂದಿಗೆ ಆ ಭಾಗದಲ್ಲಿ ವಾಸಿಸುವ ಪ್ರಾಣಿ ಸಂಕುಲವೂ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು: ಮೇಕೆದಾಟು ಯೋಜನೆ (Mekedatu Project) ಬೇಕು. ಆದರೆ ಅಣೆಕಟ್ಟು ನಿರ್ಮಿಸುವುದು ಬೇಡ ಎಂದು ನರ್ಮದಾ ಬಚಾವ್ (Narmada Bachav Andolan) ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ (Medha Patkar) ಹೇಳಿದರು. ಮೇಕೆದಾಟು ಅಣೆಕಟ್ಟು ನಿರ್ಮಿಸಿದರೆ 1200 ಹೆಕ್ಟೇರ್ ಅರಣ್ಯ ಭೂಮಿಯೊಂದಿಗೆ ಆ ಭಾಗದಲ್ಲಿ ವಾಸಿಸುವ ಪ್ರಾಣಿ ಸಂಕುಲವೂ ನಾಶವಾಗಲಿದೆ. ಕಾಡು ನಾಶವಾದರೆ ಸಾವಿರಾರು ಜನರ ಬದುಕಿಗೆ ಗಂಡಾಂತರ ಒದಗಲಿದೆ. ಪರಿಸರದ ಮೇಲೆಯೂ ಇವೆಲ್ಲವೂ ಪರಿಣಾಮ ಬೀರಲಿದೆ. ಅಣೆಕಟ್ಟು ಕಟ್ಟುವ ಬದಲು ಕೆರೆ, ಕುಂಟೆಗಳನ್ನು ಸಂರಕ್ಷಿಸಿ, ಜೀವಜಲ ಉಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕರ್ನಾಟಕ ನೆಲ ಜಲ ರಕ್ಷಣಾ ಸಮಿತಿ ಆಯೋಜಿಸಿದ್ದ ಮೇಕೆದಾಟು ಪರ, ಅಣೆಕಟ್ಟು ವಿರುದ್ಧ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಕೆದಾಟು ನಮಗೆ ಬೇಕು ಎಂದಾದರೆ ಅಣೆಕಟ್ಟು ಎನ್ನಬೇಕು. ಅಲ್ಲಿ ಅಣೆಕಟ್ಟು ಕಟ್ಟುವುದರಿಂದ ಸುಮಾರು 1200 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗುತ್ತೆ. ಲಕ್ಷಾಂತರ ಮರಗಳು ಹಾಳುಗೆಡವುವ ಇಂಥ ಯೋಜನೆ ನಮಗೆ ಬೇಕಿಲ್ಲ ಎಂದು ಅಭಿಪ್ರಾಯಪಟ್ಟರು.
ನಾವೆಲ್ಲರೂ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ವಿರೋಧಿಸಬೇಕು. ಅಣೆಕಟ್ಟು ನಿರ್ಮಿಸುವುದರಿಂದ ಕೆಲ ರಾಜಕಾರಿಣಿಗಳಿಗೆ, ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ. ಜನರಿಗೆ ಇದರಿಂದ ಯಾವ ಅನುಕೂಲವೂ ಇಲ್ಲ. ಉತ್ತಮ ಪರಿಸರ ಉಳಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದರು.
ಅಣೆಕಟ್ಟೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಚೇತನ್ ಅವರ ಪ್ರಯತ್ನಕ್ಕೆ ಮೇಧಾಪಾಟ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ಹೋರಾಟ ಮಾಡಿ ಪರಿಸರ ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ಈ ಹೋರಾಟದಲ್ಲಿ ದಲಿತ, ಬುಡಕಟ್ಟು ಜನರು ಭಾಗವಹಿಸುತ್ತಿರುವುದು ಸಂತೋಷದ ವಿಷಯ. ನಾವು ಆದಿವಾಸಿಗಳನ್ನು ಉಳಿಸಬೇಕಾಗಿದೆ. ನಾವೆಲ್ಲರೂ ಸೇರಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ವಿರೋಧಿಸಬೇಕಿದೆ ಎಂದು ನುಡಿದರು.
ಅಣೆಕಟ್ಟು ಕಟ್ಟುವುದರಿಂದ ಯಾರಿಗೆ ಅನುಕೂಲ ಎಂದು ಪ್ರಶ್ನಿಸಿದ ಅವರು, ಅಣೆಕಟ್ಟು ನಿರ್ಮಾಣದಿಂದ ಕೆಲ ರಾಜಕಾರಿಣಿಗಳಿಗೆ ಗುತ್ತಿಗೆದಾರರಿಗೆ ಅನುಕೂಲವಾಗಬಹುದು. ಸಾಮಾನ್ಯ ಜನರಿಗೆ ಏನೂ ಪ್ರಯೋಜನವಿಲ್ಲ. ಅದೇ ಉತ್ತಮ ಪರಿಸರ ಉಳಿದ್ರೆ ಉಳಿದ್ರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ. ಅಣೆಕಟ್ಟು ನಿರ್ಮಾಣವಾದರೆ ಪರಿಸರಕ್ಕೆ ಹಾನಿಯಾಗುತ್ತದೆ. ಕಾಡುನಾಶವಾದರೆ ವಾತಾವರಣ ಮತ್ತಷ್ಟು ಹದಗೆಡುತ್ತದೆ ಎಂದು ಎಚ್ಚರಿಸಿದರು.
ಮೇಕೆದಾಟು ಅಣೆಕಟ್ಟು ಯೋಜನೆಯ ವಿಸ್ತೃತ ಯೋಜನಾ ವರದಿ (Detailed Project Report – DPR) ನಾನಿನ್ನೂ ನೋಡಿಲ್ಲ. ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಪಾದಯಾತ್ರೆ ಮಾಡುತ್ತಿದೆ. ಮಹಾತ್ಮಗಾಂಧಿ ಏನು ಹೇಳಿದ್ದಾರೆ ಎನ್ನುವುದು ಈಗಿನ ಕಾಂಗ್ರೆಸಿಗರಿಗೆ ಗೊತ್ತಿದೆಯೇ? ಬಿಜೆಪಿ ನಾಯಕರು ಪ್ರಸ್ತುತ ಗಾಂಧಿ ಮಾದರಿಯನ್ನು ಅನುಸರಿಸುತ್ತಿಲ್ಲ. ಅವರು ನರೇಂದ್ರ ಮೋದಿ ಮಾದರಿಯನ್ನು ಅನುಸರಿಸುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂಥ ಯೋಜನೆಗಳನ್ನು ಜಾರಿಗೊಳಿಸಲು ಮೋದಿ ಮತ್ತು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ಆದರೆ ಯೋಜನೆ ಬೇಕೆ? ಬೇಡವೇ ಎಂದು ನಿರ್ಧರಿಸುವುದು ಜನರ ಹಕ್ಕು. ಪರಿಸರಕ್ಕೆ ಹಾನಿಯುಂಟು ಮಾಡುವ ಯೋಜನೆಯನ್ನು ಜನರು ಬೇಡ ಎನ್ನಬೇಕು ಎಂದು ಪ್ರತಿಪಾದಿಸಿದರು.
‘ಇದು ಪರಿಸರದ ಮೇಲಿನ ಯುದ್ಧ’; ಮೇಕೆದಾಟು ಯೋಜನೆಗೆ ನಟ ಚೇತನ್ ವಿರೋಧ ಮೇಕೆದಾಟು ಯೋಜನೆ (Mekedatu Project ) ಜಾರಿಗೆ ಬರಬೇಕು ಎಂದು ಕಾಂಗ್ರೆಸ್ನವರು ಇತ್ತೀಚೆಗೆ ಪಾದಯಾತ್ರೆ (Congress Padayatre) ಆರಂಭಿಸಿದ್ದರು. ಆದರೆ, ಇದನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಕೆಲ ಸೆಲೆಬ್ರಿಟಿಗಳು ಈ ಯೋಜನೆಯನ್ನು ಬೆಂಬಲಿಸಿದ್ದರು. ಆದರೆ, ಈ ಅಣೆಕಟ್ಟು ನಿರ್ಮಾಣಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಟ ಚೇತನ್ ಕೂಡ ಈ ಯೋಜನೆ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಈ ಯೋಜನೆ ಜಾರಿಗೆ ಬರಬಾರದು ಎನ್ನುವ ಅಭಿಪ್ರಾಯವನ್ನು ಹೊರಹಾಕಿರುವ ಅವರು, ಸ್ವಾರ್ಥಕ್ಕಾಗಿ ಈ ಹೋರಾಟ ಎನ್ನುವ ಆರೋಪವನ್ನು ಮಾಡಿದ್ದಾರೆ.
‘ಮೂರು ರಾಜಕೀಯ ಪಕ್ಷಗಳು (ಬಿಜೆಪಿ, ಕಾಂಗ್ರೆಸ್, ಜೆಡಿಎಸ್) ಮೇಕೆದಾಟು ಯೋಜನೆ ಪರವಾಗಿ ನಿಂತಿವೆ. ಕಾಂಟ್ರ್ಯಾಕ್ಟರ್ ಸ್ವಾರ್ಥಕ್ಕೋಸ್ಕರ ಇದೆಲ್ಲ ಮಾಡುತ್ತಿದ್ದಾರೆ. ಇದು 9,000 ಕೋಟಿ ರೂಪಾಯಿ ಯೋಜನೆ. ಅದರ ಜತೆಗೆ 12-18 ಸಾವಿರ ಎಕರೆ ಕಾಡು ಮುಳುಗಿಸೋಕೆ ನೋಡುತ್ತಿದ್ದಾರೆ. ಅಲ್ಲಿ ಸುತ್ತಮುತ್ತ ಇರೋ ಶ್ರಮಜೀವಿಗಳನ್ನು ಒಕ್ಕಲೆಬ್ಬಿಸೋಕೆ ಪ್ರಯತ್ನಿಸುತ್ತಿದ್ದಾರೆ. ಅನೇಕ ರಾಜಕೀಯ ಶಕ್ತಿಗಳು ಅವರನ್ನು ಹೆದರಿಸುತ್ತಿದ್ದಾರೆ. ಈಗ ರಾಜಕಾರಣಿಗಳೇ ಕಾಂಟ್ರ್ಯಾಕ್ಟರ್, ಕಾಂಟ್ರ್ಯಾಕ್ಟರ್ಗಳೇ ರಾಜಕಾರಣಿಗಳಾಗಿದ್ದಾರೆ’ ಎಂದು ಚೇತನ್ ಆರೋಪಿಸಿದರು.
ಮೇಧಾಪಾಟ್ಕರ್ ಭಾಷಣ ಕೇಳಲು ಲಿಂಕ್: https://fb.watch/aw-UbO05JU/
ಇದನ್ನೂ ಓದಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ನಿಂತಿಲ್ಲ: ಮೇಧಾ ಪಾಟ್ಕರ್ ಹೇಳಿಕೆ ಇದನ್ನೂ ಓದಿ: ‘ಇದು ಪರಿಸರದ ಮೇಲಿನ ಯುದ್ಧ’; ಮೇಕೆದಾಟು ಯೋಜನೆ ಬಗ್ಗೆ ನಟ ಚೇತನ್ ಕಿಡಿ
Published On - 3:17 pm, Fri, 14 January 22