‘ಇದು ಪರಿಸರದ ಮೇಲಿನ ಯುದ್ಧ’; ಮೇಕೆದಾಟು ಯೋಜನೆ ಬಗ್ಗೆ ನಟ ಚೇತನ್​ ಕಿಡಿ

ರಾಜಕೀಯ ಕಾಂಟ್ರ್ಯಾಕ್ಟರ್​ಗಳು ಮೇಕೆದಾಟನ್ನು ನಾಶ ಮಾಡಲು‌ ಮುಂದಾಗಿವೆ. 18 ಸಾವಿರ ಹೆಕ್ಟೇರ್ ಪ್ರದೇಶವನ್ನು ಮುಳುಗಿಸಲು ರಾಜಕೀಯ ಪಕ್ಷಗಳು ಮುಂದಾಗಿವೆ ಎಂದರು ಚೇತನ್​.

‘ಇದು ಪರಿಸರದ ಮೇಲಿನ ಯುದ್ಧ’; ಮೇಕೆದಾಟು ಯೋಜನೆ ಬಗ್ಗೆ ನಟ ಚೇತನ್​ ಕಿಡಿ
ಚೇತನ್ ಕುಮಾರ್

ಮೇಕೆದಾಟು ಯೋಜನೆ (Mekedatu Project )  ಜಾರಿಗೆ ಬರಬೇಕು ಎಂದು ಕಾಂಗ್ರೆಸ್​ನವರು ಇತ್ತೀಚೆಗೆ ಪಾದಯಾತ್ರೆ (Congress Padayatre) ಆರಂಭಿಸಿದ್ದರು. ಆದರೆ, ಇದನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಕೆಲ ಸೆಲೆಬ್ರಿಟಿಗಳು ಈ ಯೋಜನೆಯನ್ನು ಬೆಂಬಲಿಸಿದ್ದರು. ಆದರೆ, ಈ ಅಣೆಕಟ್ಟು ನಿರ್ಮಾಣಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಟ ಚೇತನ್​ ಕೂಡ ಈ ಯೋಜನೆ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಈ ಯೋಜನೆ ಜಾರಿಗೆ ಬರಬಾರದು ಎನ್ನುವ ಅಭಿಪ್ರಾಯವನ್ನು ಹೊರಹಾಕಿರುವ ಅವರು, ಸ್ವಾರ್ಥಕ್ಕಾಗಿ ಈ ಹೋರಾಟ ಎನ್ನುವ ಆರೋಪವನ್ನು ಮಾಡಿದ್ದಾರೆ.

‘ಮೂರು ರಾಜಕೀಯ ಪಕ್ಷಗಳು (ಬಿಜೆಪಿ, ಕಾಂಗ್ರೆಸ್​, ಜೆಡಿಎಸ್) ಮೇಕೆದಾಟು ಯೋಜನೆ ಪರವಾಗಿ ನಿಂತಿವೆ. ಕಾಂಟ್ರ್ಯಾಕ್ಟರ್ ಸ್ವಾರ್ಥಕ್ಕೋಸ್ಕರ ಇದೆಲ್ಲ ಮಾಡುತ್ತಿದ್ದಾರೆ. ಇದು 9,000 ಕೋಟಿ ರೂಪಾಯಿ ಯೋಜನೆ. ಅದರ ಜತೆಗೆ 12-18 ಸಾವಿರ ಎಕರೆ ಕಾಡು ಮುಳುಗಿಸೋಕೆ ನೋಡುತ್ತಿದ್ದಾರೆ. ಅಲ್ಲಿ ಸುತ್ತಮುತ್ತ ಇರೋ ಶ್ರಮ‌ಜೀವಿಗಳನ್ನು ಒಕ್ಕಲೆಬ್ಬಿಸೋಕೆ ಪ್ರಯತ್ನಿಸುತ್ತಿದ್ದಾರೆ. ಅನೇಕ ರಾಜಕೀಯ ಶಕ್ತಿಗಳು ಅವರನ್ನು ಹೆದರಿಸುತ್ತಿದ್ದಾರೆ. ಈಗ ರಾಜಕಾರಣಿಗಳೇ ಕಾಂಟ್ರ್ಯಾಕ್ಟರ್​, ಕಾಂಟ್ರ್ಯಾಕ್ಟರ್​​ಗಳೇ ರಾಜಕಾರಣಿಗಳಾಗಿದ್ದಾರೆ’ ಎಂದು ಚೇತನ್​ ಆರೋಪಿಸಿದರು.

‘ಈ ರೀತಿ ಯೋಜನೆ ಮಾಡುವುದನ್ನು ಬಿಟ್ಟು ಕೆರೆ-ಕುಂಟೆಗಳನ್ನ ಮಾಡಬೇಕಿದೆ. ನೀರಿನ ಮರುಬಳಕೆ ಆಗಬೇಕಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮಾಡ್ತಿರೋದು ಸ್ವಾರ್ಥಕ್ಕೋಸ್ಕರ. ನಮ್ಮ ಪರಿಸರ ಉಳಿಸೋದು ಮುಖ್ಯ ಉದ್ದೇಶ ಆಗಬೇಕು. ಪರಿಸರ ಸ್ನೇಹಿಯಾಗಿ ನಡೆದುಕೊಂಡರೆ ನಾಡಿಗೆ ಒಳ್ಳೆದಾಗುತ್ತದೆ. ಈ ಯೋಜನೆ ಇದು ತಮಿಳುನಾಡಿನ ವಿರುದ್ಧದ ವಿವಾದವಲ್ಲ. ಪರಿಸರ ಮೇಲಿನ ಯುದ್ಧ. ಮೂರು ಪಕ್ಷಗಳು ಜನರ ಬದುಕಿನಲ್ಲಿ ಆಟವಾಡುತ್ತಿದ್ದಾರೆ’ ಎಂದರು ಚೇತನ್​.

‘ರಾಜಕೀಯ ಕಾಂಟ್ರ್ಯಾಕ್ಟರ್​ಗಳು ಮೇಕೆದಾಟನ್ನು ನಾಶ ಮಾಡಲು‌ ಮುಂದಾಗಿವೆ. 18 ಸಾವಿರ ಹೆಕ್ಟೇರ್ ಪ್ರದೇಶವನ್ನು ಮುಳುಗಿಸಲು ರಾಜಕೀಯ ಪಕ್ಷಗಳು ಮುಂದಾಗಿವೆ. ಮಳೆ ನೀರು, ಒಳಚರಂಡಿ, ಪೋಲಾಗುತ್ತಿರುವ ನೀರನ್ನು ಸದ್ಬಳಕೆ ಮಾಡಬೇಕಿದೆ. ಮೇಕೆದಾಟು ಅಣೆಕಟ್ಟು ಯೋಜನೆ ಸರ್ಕಾರ ಕೈಬಿಡಬೇಕು. ತಮ್ಮ ಬೇಳೆ ಬೇಯಿಸಲು ಮೂರು ರಾಜಕೀಯ ಪಕ್ಷಗಳು ಮೇಕೆದಾಟು ವಿಚಾರ ಕೈಗೆತ್ತಿಕೊಂಡಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:  Mekedatu Padayatra Updates: ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿದ ಕಾಂಗ್ರೆಸ್

Analysis: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಸ್ಥಗಿತಕ್ಕೆ ಉತ್ತರ ಪ್ರದೇಶ ಚುನಾವಣೆಯೇ ಮುಖ್ಯ ಕಾರಣ

Click on your DTH Provider to Add TV9 Kannada