Analysis: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಸ್ಥಗಿತಕ್ಕೆ ಉತ್ತರ ಪ್ರದೇಶ ಚುನಾವಣೆಯೇ ಮುಖ್ಯ ಕಾರಣ
ಇಲ್ಲಿ ಪಾದಯಾತ್ರೆ ಮುಂದುವರಿದರೆ ಬಿಜೆಪಿಯು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಅಭಿಯಾನ ಆರಂಭಿಸಿ ರಾಜಕೀಯವಾಗಿ ಟಾಂಗ್ ನೀಡುವ ಸಾಧ್ಯತೆಯಿದೆ ಎಂಬ ಆತಂಕ ಹಿರಿಯ ನಾಯಕರದ್ದಾಗಿತ್ತು.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆಯು ಸ್ಥಗಿತಗೊಳ್ಳಲು ಹೈಕೋರ್ಟ್ ಆದೇಶವೇ ಮುಖ್ಯ ಕಾರಣ. ಪಾದಯಾತ್ರೆ ಕುರಿತು ಕೆಪಿಸಿಸಿಗೆ ಹೈಕೋರ್ಟ್ ಮೂರು ಪ್ರಶ್ನೆಗಳನ್ನು ಕೇಳಿತ್ತು. ಕೊವಿಡ್ ಸೋಂಕು ಉಲ್ಬಣವಾಗಿರುವ ಹೊತ್ತಿನಲ್ಲಿ ಪಾದಯಾತ್ರೆ ಸರಿಯೇ? ಪಾದಯಾತ್ರೆಗೆ ಮುನ್ನ ಸರ್ಕಾರ, ಜಿಲ್ಲಾಡಳಿತದ ಅನುಮತಿ ಪಡೆಯಲಾಗಿದೆಯೇ? ಸರ್ಕಾರ ಹೊರಡಿಸಿದ್ದ ಕೊವಿಡ್ ಮಾರ್ಗಸೂಚಿಯನ್ನು ಕೆಪಿಸಿಸಿ ಪಾಲಿಸಿದೆಯೇ ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷ ಉತ್ತರಿಸಬೇಕಿತ್ತು.
ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಅನುಮತಿ ಪಡೆದಿಲ್ಲ. ಸರ್ಕಾರ ಈಗಾಗಲೇ ಧರಣಿ, ಪಾದಯಾತ್ರೆಗಳನ್ನು ಸ್ಥಗಿತಗೊಳಿಸಿ ಮಾರ್ಗಸೂಚಿ ಹೊರಡಿಸಿದೆ. ಆದರೂ ಪಾದಯಾತ್ರೆ ಮುಂದುವರಿಯುತ್ತಿರುವ ಬಗ್ಗೆ ಹೈಕೋರ್ಟ್ಗೆ ಮನವರಿಕೆ ಮಾಡಿಕೊಡುವುದು ಕಷ್ಟ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿತ್ತು. ಪಾದಯಾತ್ರೆ ವೇಳೆ ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿರಲಿಲ್ಲ. ವಿಚಾರಣೆ ವೇಳೆ ಈ ಅಂಶಗಳು ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿದ್ದವು. ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಲವು ಕಾಂಗ್ರೆಸ್ ನಾಯಕರಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಮುಂದೆ ಕೋವಿಡ್ ಪರಿಸ್ಥಿತಿ ಬಿಗಡಾಯಿಸಿದರೆ ಕಾಂಗ್ರೆಸ್ ಕೂಡಾ ಹೊಣೆಯಾಗಬೇಕಾದೀತು ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಸ್ಥಗಿತಗೊಳಿಸುವುದು ಸೂಕ್ತವೆಂದು ಕಾಂಗ್ರೆಸ್ ಪಕ್ಷದ ಪರವಾಗಿರುವ ವಕೀಲರು ನಿನ್ನೆ (ಜ.12) ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದ್ದರು. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಪಕ್ಷವು ಇದೀಗ ಪಾದಯಾತ್ರೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಹೈಕಮಾಂಡ್ ಲೆಕ್ಕಾಚಾರ ನ್ಯಾಯಾಲಯದಲ್ಲಿ ವಾದ ಮಂಡಿಸಲೆಂದು ಕೆಪಿಸಿಸಿ ನಾಯಕರು ದೆಹಲಿಯ ಪ್ರಖ್ಯಾತ ವಕೀಲರನ್ನು ಸಂಪರ್ಕಿಸಿದ್ದರು. ಈ ವಕೀಲರ ಪೈಕಿ ಹಲವರು ಕೊವಿಡ್ ವಿಷಯದಲ್ಲಿ ಪರಿಣತಿ ಇದ್ದವರು ಎನ್ನುವುದು ಗಮನಾರ್ಹ ಸಂಗತಿ. ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್ ವಕೀಲರಿಂದಲೇ ವಾದ ಮಂಡಿಸಲು ಕಾಂಗ್ರೆಸ್ ನಾಯಕರು ಸಿದ್ಧರಾಗಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಘಟಕದ ಸಾಹಸದ ಬಗ್ಗೆ ಆತಂಕವಿತ್ತು. ಒಂದು ವೇಳೆ ಕೊವಿಡ್ ಹರಡಿದರೆ ಅದಕ್ಕೆ ಪಕ್ಷ ಹೊಣೆ ಹೊರಬೇಕಾದ ಪರಿಸ್ಥಿತಿ ಬರಬಹುದು ಎಂಬ ಅಭಿಪ್ರಾಯವಿದ್ದ ಕಾರಣ ಅವರು ಱಲಿಯಿಂದೆ ಹಿಂದೆ ಸರಿಯುವಂತೆ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಱಲಿ ಮುಂದುವರಿದು ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ಅದು ಉತ್ತರ ಪ್ರದೇಶದ ಚುನಾವಣೆ ಯತ್ನಗಳ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು ಎಂಬ ಆತಂಕ ವ್ಯಕ್ತವಾಯಿತು. ಉತ್ತರ ಪ್ರದೇಶದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುವುದು ಬೇಡ ಎನ್ನುವ ಕಾರಣಕ್ಕೆ ಪಾದಯಾತ್ರೆ ಮೊಟಕುಗೊಳಿಸಲು ಹೈಕಮಾಂಡ್ ನಿರ್ದೇಶನ ನೀಡಿತು.
ಕಾಂಗ್ರೆಸ್ ಪರ ಒಲವು ಇರುವ ಹಲವು ಹಿರಿಯ ವಕೀಲರು ಸಹ ಕರ್ನಾಟಕ ಕಾಂಗ್ರೆಸ್ ನಾಯಕರ ಆಲೋಚನೆಯನ್ನು ಒಪ್ಪಲಿಲ್ಲ. ಕರ್ನಾಟಕ ಸರ್ಕಾರವು ಪ್ರಕಟಿಸುತ್ತಿರುವ ಕೋವಿಡ್ ಅಂಕಿಅಂಶಗಳೇ ಬೋಗಸ್ ಎಂದು ವಾದ ಮಂಡಿಸಲು ಬಹುತೇಕರು ಸಮ್ಮತಿಸಲಿಲ್ಲ. ವಿಶ್ವಾದಾದ್ಯಂತ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗ ಹೀಗೆ ವಾದ ಮಂಡಿಸುವುದು ಸರಿಯಾಗುವುದಿಲ್ಲ. ಹೀಗೆ ಮಾಡುವುದರಿಂದ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿರುವ ರಾಜ್ಯಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳನ್ನೂ ಅನುಮಾನದಿಂದ ನೋಡಿದಂತೆ ಆಗುತ್ತದೆ. ಈ ವಾದ ಮುಂದಿಟ್ಟು ಲಾಭವಿಲ್ಲ ಎಂದು ಹಿರಿಯ ವಕೀಲರು ಅಭಿಪ್ರಾಯಪಟ್ಟರು.
ಇನ್ನೊಂದೆಡೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ನ ಹಲವು ಹಿರಿಯ ನಾಗರಿಕರಿಗೂ ಕೊರೊನಾ ಪಾಸಿಟಿವ್ ಆಗಿತ್ತು. ಪರಿಸ್ಥಿತಿ ಕೈ ಮೀರಿದರೆ ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇಲ್ಲಿ ಪಾದಯಾತ್ರೆ ಮುಂದುವರಿದರೆ ಬಿಜೆಪಿಯು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧ ಅಭಿಯಾನ ಆರಂಭಿಸಿ ರಾಜಕೀಯವಾಗಿ ಟಾಂಗ್ ನೀಡುವ ಸಾಧ್ಯತೆಯಿದೆ. ಚುನಾವಣೆಗಳು ನಡೆಯುತ್ತಿರುವ ಇತರ ರಾಜ್ಯಗಳಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪಾದಯಾತ್ರೆಯನ್ನು ಮೊಟಕುಗೊಳಿಸಲು ಹೈಕಮಾಂಡ್ ನಿರ್ದೇಶನ ನೀಡಿತು.
ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಕ್ಕೆ ಪ್ರಮುಖ ಕಾರಣಗಳು – ತೀವ್ರಗೊಳ್ಳುತ್ತಿರುವ ಕೋವಿಡ್ ಸೊಂಕಿನ ಆತಂಕ – ಕಾಂಗ್ರೆಸ್ ಹಿರಿಯ ನಾಯಕರಿಗೆ ಕಾಣಿಸಿಕೊಳ್ಳುತ್ತಿರುವ ಕೋವಿಡ್ – ಮುಂದೆ ಕೋವಿಡ್ ತೀವ್ರವಾಗಿ ಹರಡಿದರೆ ಕಾಂಗ್ರೆಸ್ ಹೊಣೆ ಹೊರಬೇಕಾಗುತ್ತದೆ – ಕಾಂಗ್ರೆಸ್ನ ಹಟಮಾರಿತನದಿಂದ ಕೋವಿಡ್ ಹೆಚ್ಚಾಯ್ತು ಎಂಬ ಆರೋಪ ಎದುರಿಸಬೇಕಾಗಬಹುದು – ಆರೋಗ್ಯ ತುರ್ತು ಪರಿಸ್ಥಿತಿ ಇರುವಾಗಲೂ ಕಾಂಗ್ರೆಸ್ಗೆ ರಾಜಕೀಯ ಪಾದಯಾತ್ರೆಯೇ ಮುಖ್ಯವಾಯ್ತು ಎಂಬ ಆರೋಪ ಎದುರಾಗಬಹುದು – ಎಐಸಿಸಿ ಮಟ್ಟದಲ್ಲಿಯೂ ಕೂಡ ರಾಜ್ಯ ಕಾಂಗ್ರೆಸ್ ಪಾದಯಾತ್ರೆ ಮುಜುಗರ ಉಂಟು ಮಾಡುವ ಸಾಧ್ಯತೆ – ಚುನಾವಣೆ ಇರುವ ಉತ್ತರ ಪ್ರದೇಶದಲ್ಲಿಯೇ ಕಾಂಗ್ರೆಸ್ ವರ್ಚುವಲ್ ಸಭೆಗಳನ್ನು ಹಮ್ಮಿಕೊಳ್ಳುತ್ತಿದೆ – ಕಾಂಗ್ರೆಸ್ ಪ್ರಮುಖ ನಾಯಕಿ ಪ್ರಿಯಾಂಕ ಗಾಂಧಿ ವರ್ಚುವಲ್ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡ್ತಿದ್ದಾರೆ – ಅವರದೇ ಪಕ್ಷ ಕೋವಿಡ್ ಹೆಚ್ಚಳಕ್ಕೆ ಕಾರಣವಾದರೆ ರಾಷ್ಟ್ರೀಯ ಮಟ್ಟದಲ್ಲೂ ಮುಜುಗರ – ಕಾನೂನಾತ್ಮಕವಾಗಿಯೂ ಪಾದಯಾತ್ರೆಯನ್ನು ಮುಂದುವರಿಸಲು ಅಡ್ಡಿ – ಹೈಕೋರ್ಟ್ಗೆ ಕಾಂಗ್ರೆಸ್ ಪಕ್ಷವು ನಾಳೆಯೇ (ಜನವರಿ 14) ಉತ್ತರ ನೀಡಬೇಕಿತ್ತು
ಇದನ್ನೂ ಓದಿ: ಜನರ ಆರೋಗ್ಯ ಗಮನದಲ್ಲಿಟ್ಟು ಪಾದಯಾತ್ರೆ ಸ್ಥಗಿತ, ಕೊರೊನಾ ಕಡಿಮೆಯಾದ ಬಳಿಕ ಮತ್ತೆ ಪಾದಯಾತ್ರೆ: ಡಿಕೆ ಶಿವಕುಮಾರ್ ಇದನ್ನೂ ಓದಿ: Mekedatu Padayatra: ಪಾದಯಾತ್ರೆ ಮೊಟಕುಗೊಳಿಸಿದ ಕಾಂಗ್ರೆಸ್; ಹೈಕಮಾಂಡ್ ಆದೇಶಕ್ಕೆ ತಲೆಬಾಗಿದ ರಾಜ್ಯ ನಾಯಕರು