
ತನ್ನ ಪೌಷ್ಟಿಕಾಂಶ ಗುಣಗಳಿಗಾಗಿ ಹೆಸರುವಾಸಿಯಾಗಿರುವ ಡ್ರ್ಯಾಗನ್ ಫ್ರೂಟ್ (Dragon fruit) ತಿನ್ನಲು ಬಲು ರುಚಿಕರವಾಗಿರುತ್ತದೆ. ಜೊತೆಗೆ ಸ್ವಲ್ಪ ದುಬಾರಿಯೂ ಹೌದು. ಮಾರುಕಟ್ಟೆಯಲ್ಲಿ ದುಬಾರಿಯಾಗಿರುವ ಈ ಹಣ್ಣನ್ನು ಬಹಳ ಸುಲಭವಾಗಿ ನೀವು ಮನೆಯಲ್ಲಿಯೇ ಬೆಳೆಸಬಹುದು. ಇದಕ್ಕೆ ಹೆಚ್ಚಿನ ಶ್ರಮ, ಸ್ಥಳದ ಅವಶ್ಯಕತೆಯಿಲ್ಲ, ಮನೆಯ ಬಾಲ್ಕನಿ, ಟೆರೇಸ್, ಅಂಗಳದಲ್ಲಿ ಸುಲಭವಾಗಿ ಬೆಳೆಯಬಹುದು ಎಂದು ಕೃಷಿ ತಜ್ಞರು ಸಲಹೆ ನೀಡುತ್ತಾರೆ. ಹಾಗಿದ್ರೆ ಈಸಿಯಾಗಿ ಡ್ರ್ಯಾಗನ್ ಫ್ರೂಟ್ ಬೆಳೆಯೋದೇಗೆ ಎಂಬುದನ್ನು ನೋಡೋಣ ಬನ್ನಿ.
ಡ್ರ್ಯಾಗನ್ ಫ್ರೂಟ್ ಕ್ಯಾಕ್ಟಸ್ ಕುಟುಂಬಕ್ಕೆ ಸೇರಿದ ಸಸ್ಯ. ಇದನ್ನು ಬೆಳೆಯಲು ಹೆಚ್ಚಿನ ಶ್ರಮ ಅಥವಾ ದೊಡ್ಡ ಜಾಗದ ಅವಶ್ಯಕತೆಯಿಲ್ಲ. ಕೇವಲ ಪಾಟ್ ಸಾಕು. ಬೀಜಗಳಿಂದ ಸಸಿ ಬೆಳೆಸುವುದಕ್ಕಿಂತ ಕತ್ತರಿಸಿದ ಗಿಡಗದ ರೆಂಬೆಯಿಂದ ಇನ್ನೊಂದು ಗಿಡವನ್ನು ಸುಲಭವಾಗಿ ಬೆಳೆಯಬಹುದು. ಇದಕ್ಕಾಗಿ 12–18 ಇಂಚು ಎತ್ತರದ ಆರೋಗ್ಯಕರ ಸಸ್ಯವನ್ನು ತೆಗೆದುಕೊಂಡು ಕುಂಡದಲ್ಲಿ ನೆಡಿ. ಅದು ಬಳ್ಳಿಯಂತೆ ಬೆಳೆಯುವುದರಿಂದ, ನೀವು ಅದರ ಪಕ್ಕದಲ್ಲಿ ಮರದ ಕೋಲು ಅಥವಾ ಕಬ್ಬಿಣದ ಕಂಬವನ್ನು ಆಧಾರವಾಗಿ ಇಡಬೇಕು.
ಈ ಸಸ್ಯಕ್ಕೆ ಮಣ್ಣಿನ ವಿಷಯದಲ್ಲಿಯೂ ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ಹಗುರವಾದ, ಮರಳು ಮಿಶ್ರಿತ ಮಣ್ಣನ್ನು ಬಳಸಿದರೆ ಸಾಕು. ಜಾಸ್ತಿ ನೀರು ಹಾಕುವ ಅವಶ್ಯಕತೆಯೂ ಇಲ್ಲ. ಅತಿಯಾಗಿ ನೀರು ಹಾಕಿದರೆ ಬೇರುಗಳಿಗೆ ಹಾನಿಯಾಗುತ್ತದೆ. ಆದ್ದರಿಂದ, ವಾರಕ್ಕೆ ಎರಡು ಬಾರಿ ಸಣ್ಣ ಪ್ರಮಾಣದಲ್ಲಿ ನೀರು ಹಾಕಿದರೆ ಸಾಕು.
ಇದನ್ನೂ ಓದಿ: ಚಳಿಗಾಲದಲ್ಲಿ ತುಳಸಿ ಗಿಡ ಒಣಗಬಾರದೆಂದರೆ ಮನೆಯಲ್ಲೇ ತಯಾರಿಸಿದ ಈ ಗೊಬ್ಬರ ಹಾಕಿ
ನೆಟ್ಟ 12-14 ತಿಂಗಳ ನಂತರ ಸಸ್ಯವು ತನ್ನ ಮೊದಲ ಹೂವುಗಳನ್ನು ಬಿಡುತ್ತದೆ. ನಂತರ ಕಾಯಿ ಬಿಡುತ್ತದೆ. ಡ್ರ್ಯಾಗನ್ ಫ್ರೂಟ್ ಗಿಡದ ಬೆಳವಣಿಗೆಗೆ ಕಡಿಮೆ ನೀರು ಮತ್ತು ಹೆಚ್ಚಿನ ಸೂರ್ಯನ ಬೆಳಕು ಎರಡು ಮೂಲಭೂತ ಅವಶ್ಯಕತೆಗಳಾಗಿದ್ದು, ಇದನ್ನು ಬೆಳೆಯುವ ಮೂಲಕ ಕಡಿಮೆ ಶ್ರಮದಿಂದ ಹೆಚ್ಚಿನ ಫಲಿತಾಂಶ ಪಡೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ