Literature : ಅಭಿಜ್ಞಾನ ; ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದಕ್ಕೆ ಕಾಲೇಜಿನಿಂದ ಡಿಬಾರ್ ಮಾಡಲಾಗಿತ್ತು

|

Updated on: Jan 13, 2022 | 3:34 PM

Gangadhara Chittala : ‘ಗಂಗಾಧರರ ಕಾವ್ಯರಚನೆಯೆಂದರೆ ಹೆಚ್ಚಾಗಿ ಅವರ ಮನಸ್ಸಿನಲ್ಲಿಯೇ ಅವರ ಅಂತರಂಗದ ಒಳಪಟಲದ ಮೇಲೆ ನಡೆಯುವಂಥ ಕ್ರಿಯೆ. ಕವಿತೆ ಒಳಗೇ ಸಂಪೂರ್ಣವಾಗಿ ಮೈತಳೆದ ನಂತರ ಮುಂದೆಂದೋ ಕಾಗದದ ಮೇಲೆ ಮೈದೋರುತ್ತಿತ್ತು. ಹೀಗಾಗಿ ಇಡಿಯ ಕವಿತೆಗೆ ಕವಿತೆಯೇ ಅವರ ಕಂಠದಲ್ಲಿ ವಾಸ್ತವ್ಯ ಮಾಡುತ್ತಿತ್ತು.’ ಶಾಂತಿನಾಥ ದೇಸಾಯಿ

Literature : ಅಭಿಜ್ಞಾನ ; ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದಕ್ಕೆ ಕಾಲೇಜಿನಿಂದ ಡಿಬಾರ್ ಮಾಡಲಾಗಿತ್ತು
ಕವಿ ಗಂಗಾಧರ ಚಿತ್ತಾಲ
Follow us on

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಕವಿ ಗಂಗಾಧರ ಚಿತ್ತಾಲ- ಎಪ್ಪತ್ತೆರಡು ಕವಿತೆಗಳು ಹಾಗೂ ವಿಮರ್ಶಕರ ಸ್ಪಂದನ- ಗಂಗಾಧರ ಚಿತ್ತಾಲರ ಕಾವ್ಯಸೃಷ್ಟಿ, ಕಾದಂಬರಿಕಾರ ಶಾಂತಿನಾಥ ದೇಸಾಯಿ ಬರೆದ ಮುನ್ನುಡಿಯ ಆಯ್ದ ಭಾಗ.

*

ಜೂನ್ 1940 : ಮುಂಬಯಿ ವಿಶ್ವವಿದ್ಯಾಲಯದ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯ ಫಲಿತಾಂಶ. ಇಡಿಯ ಮುಂಬಯಿ ಇಲಾಖೆಗೆ (ಸಿಂಧ, ಗುಜರಾತ, ಮಹಾರಾಷ್ಟ್ರ, ಉತ್ತರ ಕರ್ನಾಟಕ ಇವುಗಳನ್ನೊಳಗೊಂಡ ಹಳೇ ಮುಂಬಯಿ ಪ್ರಾಂತಕ್ಕೆ) ರೆಕಾರ್ಡ್​ ಬ್ರೇಕ್ ಮಾಡಿ ಫರ್ಸ್ಟ್ ರ್ಯಾಂಕ್ ಪಡೆದಂಥ ಅಸಾಮಾನ್ಯ ಹುಡುಗ-ನಮ್ಮ ಜಿಲ್ಲೆಯವ. ನನ್ನ ಮನಸ್ಸಿನಲ್ಲಿ (ನಾನಾಗ ಅದೇ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಇಂಗ್ಲಿಷ್ ಮೂರನೆಯ ಇಯತ್ತೆಯ ವಿದ್ಯಾರ್ಥಿ) ಒಂದು ಆದರ್ಶವಾಗಿ, ಒಂದು ಸಂಕೇತವಾಗಿ ಮೂಡಿದಂಥ ವ್ಯಕ್ತಿ ಗಂಗಾಧರ ಚಿತ್ತಾಲ. ಮುಂದೆ 1942ರ ಸ್ವಾತಂತ್ರ್ಯ ಸಂಗ್ರಾಮದ ಕಾಲಕ್ಕೆ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಗುನ್ಹೆಗಾಗಿ ಕರ್ನಾಟಕ ಕಾಲೇಜಿನಿಂದ ಡಿಬಾರ್ ಆದಂಥ ಗಂಗಾಧರ ಚಿತ್ತಾಲರ ಹೆಸರು ನನ್ನ ಮನಸ್ಸಿನಲ್ಲಿ ಇನ್ನಿಷ್ಟು ಅಚ್ಚೊತ್ತಿ ನಿಂತಿತು. 1943 ರಲ್ಲಿ ಅವರು ಯಾವ ಧಾರವಾಡದ ಹಾಯಸ್ಕೂಲಿನಲ್ಲಿ ಕಲಿತಿದ್ದರೋ ಅದೇ ಕರ್ನಾಟಕ ಹಾಯಸ್ಕೂಲಿಗೆ ನಾನೂ ಹೋದೆ.

ಯೋಗಾಯೋಗದಿಂದ ಅವರ ಬಂಧುಗಳಾದ ಯಶವಂತ, ನರಹರಿ, ಮೋಹನ ಇವರೂ ಅದೇ ಹಾಯಸ್ಕೂಲಿನಲ್ಲಿದ್ದರಲ್ಲದೆ ನಾವಿದ್ದ ಚಾಳಿನಲ್ಲಿಯೇ ಅವರ ವಾಸ್ತವ್ಯವಿತ್ತು. ಸಾಂಗಲಿಯಿಂದ ದೀಪಾವಳಿ ಸೂಟಿಗೆ ಗಂಗಾಧರ ಧಾರವಾಡಕ್ಕೆ ಬಂದ ದಿನ, ‘ಆ ಅವರೇ’ ಎಂದು ಬಾಯಿಬಿಟ್ಟು ಕಣ್ಣುತುಂಬಿ ನೋಡಿದ ಸಂದರ್ಭ ಇನ್ನೂ ನೆನಪಿದೆ. ನಂತರ ದಾಮಣ್ಣಾ ಚಿತ್ತಾಲರ ಬಂಧು-ಪ್ರೀತಿಯ ಛತ್ರದ ಕೆಳಗೆ ಚಿತ್ತಾಲ ಬಂಧುಗಳಲ್ಲಿ ನಾನೂ ಅನಾಯಾಸವಾಗಿಯೇ ಸೇರಿಬಿಟ್ಟಿದ್ದೆ. ಮುಂದೆ ನಮ್ಮ ನಮ್ಮ ಅಸ್ಮಿತೆಯ ಪ್ರಕಾರ ಬೆಳವಣಿಗೆ, ಶೈಕ್ಷಣಿಕ ಹಾಗೂ ಸಾಹಿತ್ಯ ಸಾಧನೆ… ಗಂಗಾಧರ ಚಿತ್ತಾಲರ ಕಾವ್ಯ ಅಷ್ಟರಲ್ಲಿಯೇ ಒಂದು ನಿಟ್ಟಿನಲ್ಲಿ ಹರಿಯುತ್ತಿತ್ತು. ಅದು ನಮ್ಮೆಲ್ಲರ ಅಂತರಂಗದ ಪ್ರವಾಹವೂ ಆಯಿತು. ನಮ್ಮ ಸಂವೇದನೆಯಲ್ಲಿ ಬೇರೆ ಬೇರೆ ಎಷ್ಟೋ ತೊರೆಗಳು ಸೇರಿದರೂ, ಇವರ ಕಾವ್ಯಧಾರೆ ಮಾತ್ರ ಆಪ್ತವಾಗಿ, ಆತ್ಮೀಯವಾಗಿ ನಮ್ಮ ಅಂತರಂಗದ ಭಾಗವಾಗಿಯೇ ಉಳಿದಿದೆ. ಅದರ ಅರ್ಥ ನಾವು ಅದರ ಬಗ್ಗೆ ವಸ್ತುನಿಷ್ಠವಾಗಿ ನೋಡುವ ಶಕ್ತಿ ಕಳೆದುಕೊಂಡೆವೆಂದಲ್ಲ; ಆದರೆ ಅವರ ಕಾವ್ಯಕ್ಕೆ ನಾವು ಸ್ಪಂದಿಸುವ ರೀತಿಯಲ್ಲಿ ರಸಾಸ್ವಾದದ ಅಂಶ ಹೆಚ್ಚೆಂದು ಒಪ್ಪಬೇಕು…

ಕಾದಂಬರಿಕಾರ ಶಾಂತಿನಾಥ ದೇಸಾಯಿ

ಗಂಗಾಧರರ ಕಾವ್ಯರಚನೆಯೆಂದರೆ ಹೆಚ್ಚಾಗಿ ಅವರ ಮನಸ್ಸಿನಲ್ಲಿಯೇ ಅವರ ಅಂತರಂಗದ ಒಳಪಟಲದ ಮೇಲೆ ನಡೆಯುವಂಥ ಕ್ರಿಯೆ. ಕವಿತೆ ಒಳಗೇ ಸಂಪೂರ್ಣವಾಗಿ ಮೈತಳೆದ ನಂತರ ಮುಂದೆಂದೋ ಕಾಗದದ ಮೇಲೆ ಮೈದೋರುತ್ತಿತ್ತು. ಹೀಗಾಗಿ ಇಡಿಯ ಕವಿತೆಗೆ ಕವಿತೆಯೇ ಅವರ ಕಂಠದಲ್ಲಿ ವಾಸ್ತವ್ಯ ಮಾಡುತ್ತಿತ್ತು. ಅವರು ಕವಿತೆ ಅಂದುತೋರಿಸುವಾಗ ಅವರಿಗೆ ಕೈಯಲ್ಲಿ ತಮ್ಮ ನೋಟುಬುಕ್ಕಾಗಲೀ ಅಥವಾ ಪುಸ್ತಕವಾಗಲಿ ಎಂದೂ ಬೇಕಾಗುತ್ತಿರಲಿಲ್ಲ. ಬೇಕಾದಾಗ ಬೇಕಾದಲ್ಲಿ ಅಂದರೆ ರಸಿಕತೆ-ಸ್ನೇಹಬಂಧುತ್ವದ ವಾತಾವರಣವಿದ್ದಲ್ಲಿ ಅವರು ತಮ್ಮ ಕಾವ್ಯ ಅಂದು ತೋರಿಸುತ್ತಿದ್ದರು. ಅವರ ಕಾವ್ಯವನ್ನು ಅವರ ಬಾಯಿಂದಲೇ, ಅವರ ಧ್ವನಿಯಲ್ಲಿಯೇ ಕೇಳಬೇಕು ಅಂದಾಗಲೇ ಅವರ ವಿಶಿಷ್ಟ ‘ರೆಟರಿಕ್ಕಿ’ನ ನಿಜವಾದ ‘ಇನ್‌ಸ್ಕೇಪ್’ ಗೊತ್ತಾಗುತ್ತದೆ. ಅವರ ಪಾರ್ಕಿನ್ಸನ್ ವ್ಯಾಧಿಯಿಂದ ಕನ್ನಡಕ್ಕಾದ ಹಾನಿ ಅಷ್ಟಿಷ್ಟಲ್ಲ. ಹಲವಾರು ರೀತಿಯ ದುರಂತಗಳಲ್ಲಿ ಅವರ ಕಾವ್ಯಧ್ವನಿಯೂ ನಿಂತುಹೋದದ್ದು ಒಂದು. ಸದ್ಯ ಅದು ಅವರ ಬಂಧುಜನರ ಹಾಗೂ ಸ್ನೇಹಿತರ ಸ್ಮೃತಿಯಲ್ಲಿ ಮಾತ್ರ ಮೊಳಗುವ ಧ್ವನಿಯಾಗಿ ಉಳಿದಿದೆ. (‘ಸಂಪರ್ಕ’ದಲ್ಲಿಯ ಅವರ ವ್ಯಾಧಿಯ ಬಗೆಗಿನ ಕವನಗಳನ್ನು ಓದುವಾಗ ಯಾರಿಗೆ ಕಂಠ ಬಿಗಿದು ಬರುವದಿಲ್ಲ?)

ಬರಿ ಕಪೋಲಕಲ್ಪಿತವಲ್ಲವು ಈ ಕುತ್ತು
ಇದು ಪ್ರತ್ಯಕ್ಷ, ಇದು ಸಾಕ್ಷಾತ್ತು
ಚಹರೆಯೇ ಇಲ್ಲದ ಇದರ ವಿಕರಾಳ ಮುಖ
ಹೆಜ್ಜೆಹೆಜ್ಜೆಗೂ ಹುಟ್ಟಿಸುವ ಎದೆನಡುಕ
ವ್ಯಾಧಿಗ್ರಸ್ತನೊಬ್ಬನಿಗೇ ಗೊತ್ತು
ಇದ ಬಣ್ಣಿಸಲೆಳಸುವ ಬರಿಮಾತು
ಏನನ್ನೂ ಹಿಡಿಯಲು ಬಾರದ ತೂತು.

*

ಸೌಜನ್ಯ : ಪ್ರಿಸಂ ಬುಕ್ಸ್​ 

ಇದನ್ನೂ ಓದಿ : Devanuru Mahadeva : ಅಭಿಜ್ಞಾನ ; ‘ಅಲ್ಲಿಯವರೆಗೂ ಏನು ಹೇಳೋಣ? ಹೆಂಡದ ಬದಲು ಬೀರು ಕುಡಿಯಿರಿ’

Published On - 3:25 pm, Thu, 13 January 22