New Book : ಅಚ್ಚಿಗೂ ಮೊದಲು : ‘ಬೆಳೀ ಬರದಿದ್ರ ನಾಳೆ ಏನು ಊಟಾ ಮಾಡ್ತೀರಿ?’

|

Updated on: Aug 13, 2021 | 12:37 PM

Farmers : ರೈತ ಸಂಘದ ಕರಪತ್ರ ನೋಡಿ ದಲಾಲ ಪರಸಪ್ಪ ಕುದ್ದು ಹೋದ. ಇದು ಅನೀರಿಕ್ಷಿತವಾಗಿ ಅಪ್ಪಳಿಸಿದ ಆಘಾತವಾಗಿತ್ತು. ಅವನ ಮೈ ತುಂಬಾ ರಕ್ತದ ಬದಲು ಸಿಟ್ಟು ಹರಿದಾಡಿತು. ಬರುವ ಸಾಲಗಳಾದರೂ ಬರಲೆಂದು ಹಳ್ಳಿಗಳ ಕಡೆ ವಸೂಲಿಗೆ ತೆರಳಿದ. ಮೊದಲಿಗಿಂತ ಕಠೋರವಾಗಿದ್ದ. ಆದರೆ, ಹಳ್ಳಿಗಳಿಗೆ ಹೋದಾಗ ಜನರ ವರ್ತನೆಗಳು ಮೊದಲಿಗಿಂತ ಈಗ ಬದಲಾಗಿದ್ದು ಗೋಚರವಾಗತೊಡಗಿತು.

New Book : ಅಚ್ಚಿಗೂ ಮೊದಲು : ‘ಬೆಳೀ ಬರದಿದ್ರ ನಾಳೆ ಏನು ಊಟಾ ಮಾಡ್ತೀರಿ?’
ಲೇಖಕ ಟಿ. ಎಸ್. ಗೊರವರ
Follow us on

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಹಸಿರು ಟಾವೆಲ್ (ರೈತನೊಬ್ಬನ ಜೀವನ ಕಥನ)
ಲೇಖಕರು : ಟಿ.ಎಸ್.ಗೊರವರ
ಪುಟ : 108
ಬೆಲೆ : ರೂ. 120
ಮುಖಪುಟ ವಿನ್ಯಾಸ : ಮುರಳೀಧರ ರಾಠೋಡ
ಪ್ರಕಾಶನ : ಸಂಗಾತ, ಧಾರವಾಡ

*
ಕಣ್ಮುಟ್ಟುವತನಕ ಹರಡಿರುವ ಕಸುವುಳ್ಳ ಕಪ್ಪುಮಣ್ಣಿನ ಹೊಲ. ತನಗೆ ತಿಳಿದಾಗ ಬಂದು ಸುರಿದು ಹೋಗುವ ಮಳೆ. ಒಂದಕ್ಕೊಂದು ಜತ್ತು ತಪ್ಪಿದ ಒಗೆತನ. ಆದರೂ ಒಕ್ಕಿದ್ದಕ್ಕೆ ಕಣ ತುಂಬುವ ನೆಲದ ತಾಯ್ತನ. ರೋಣ, ಗಜೇಂದ್ರಗಡ, ನರಗುಂದ, ನವಲಗುಂದದ ಚೌಕಿಯ ಬಾಳೇವು ಇದು. ದಾಂಪತ್ಯವಿರಸದ ಮಕ್ಕಳಂತೆ ಉದ್ವೇಗದ ಏರುಗಚ್ಚಿನಲ್ಲಿರುವ ಜನ. ದುಡಿಮೆ-ವಿರಾಮ, ಪ್ರೀತಿ –ಜಗಳ, ಬಾಂಧವ್ಯ-ದ್ವೇಷ, ಕೂಡುಣ್ಣುವ – ಕೂಡಿ ಕಾದುವ ಎಲ್ಲದರಲ್ಲೂ ಪುಟ್ಟಪೂರಾ ಅನುಭವಿಸಿಯೇನೆಂಬ ತಾದ್ಯಾತ್ಮ. ಜಮೀನ್ದಾರಿಕೆಯ ಅಹಮಿಕೆಯನ್ನೇ ಅಲಕ್ಷ್ಯ ಮಾಡಿ ಮಾಡಿ ಎಲ್ಲರೊಳಗೊಂದಾಗಿ ಬಾಳೇವು ಮಾಡಬೇಕೆಂಬ ಜೀವನವಿವೇಕವನ್ನು ಕಟ್ಟಿಕೊಂಡವರು. ಕಾಡಿನ ಹಸಿರಿಲ್ಲ ಎಂದು ಕೊರಗದೆ, ಸುರೇಪಾನದ ಹಳದಿ ದಿಬ್ಬಣ ನಿಲಿಸಿ, ಸೌಖ್ಯದ ಪದರರೂಪೀ ಸಂರಚನೆಯನ್ನು ನಿರೂಪಿಸಿದ ಜನ. ಬಯಲುಸೀಮೆಯ ಜನ ಬದುಕಿನ ಕಥನವನ್ನು ಈ ಜೀವನ ವೃತ್ತಾಂತ ನೆನಪಿಸುತ್ತದೆ.

‘ಹಸಿರು ಟಾವೆಲ್’ ಕೂಡ್ಲೆಪ್ಪ ಎಂಬ ಅಬೋಧ ಹುಡುಗ, ತನ್ನ ಅನಾಥ ಪ್ರಜ್ಞೆಯೊಂದಿಗೆ ಗುದಮುರಿಗಿ ಹಾಕುತ್ತಲೇ ಬಾಳನ್ನು ಕಟ್ಟಿಕೊಂಡ ಕವಿತೆ. ಬಿರುಬಿಗಿದ ಮಣ್ಣ ಪದರದಿಂದ ಎಳೆಹುಲ್ಲಿನ ದಳಗಳು ತಲೆಯೆತ್ತುವ ಕಥೆ. ಈ ದೇಶದ ಸಾಮಾನ್ಯಾತಿ ಸಾಮಾನ್ಯನ ಬಾಳಸಂಪುಟ. ಲಿಂಗ ಜಾತಿ ಕುಲ ಕಷ್ಟಗಳಿಂದಲೂ ‘ವಿಶಿಷ್ಟ’ ಎಂದು ಗುರುತಿಸಿಕೊಳ್ಳಲು ಆಗದವನ ಚರಿತ್ರೆ. ಮನುಷ್ಯ ಬಾಳು ವಿಶಿಷ್ಟವಾಗುವುದು ಅವನದನ್ನು ನಿರ್ವಹಿಸುವ ಬಗೆಯಲ್ಲಿ ಎಂದು ತಿಳಿಸುವ ಟಿಪ್ಪಣಿ. ವ್ಯಕ್ತಿಕಥೆಯೊಂದಿಗೆ ಸಮುದಾಯ ಕಥೆಯನ್ನು ಬೆರೆಸಿದ ಲಾವಣಿ.
ಡಾ. ವಿನಯಾ ಒಕ್ಕುಂದ, ಕವಿ, ಕಥೆಗಾರರು

*

‘ಹಸಿರು ಟಾವೆಲ್’ ಬರವಣಿಗೆ ಮಾಡುವಾಗ ಅನೇಕ ಸವಾಲುಗಳನ್ನು ಒಡ್ಡಿತು. ಈ ಕೃತಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಬರೆಸಿಕೊಂಡಿತು. ಅಂದರೆ ಆ ನಾಲ್ಕು ವರ್ಷವೂ ಸತತ ಇದನ್ನೇ ಬರೆಯಲಿಲ್ಲ. ಮೊದಲು ಹತ್ತಾರು ಪುಟಗಳನ್ನು ಬರೆದೆ. ಅದು ಸರಿ ಅನ್ನಿಸಲಿಲ್ಲ. ಟೈಪಿಸಿದ ಅಷ್ಟೂ ಪುಟಗಳನ್ನು ಡಿಲಿಟ್ ಮಾಡಿ ನಿರಮ್ಮಳನಾದೆ. ಮತ್ತೆ ಮೊದಲಿನಿಂದ ಬರೆಯತೊಡಗಿದೆ. ಇದು ಕೂಡ ಯಾಕೋ ಮನಸಿಗೆ ಹಿಡಿಸಲಿಲ್ಲ. ಯಾಕೆ ಹೀಗಾಗುತ್ತಿದೆ? ಎಂದು ಆಲೋಚಿಸಿದೆ. ಈವರೆಗೆ ಕತೆ ಬರೆಯುವಾಗ ಹೀಗಾಗಿರಲಿಲ್ಲ. ಬಹಳ ಸಲ ತಾಸು, ಎರಡು ತಾಸಿನಲ್ಲಿ ಒತ್ತರು ಬಂದವನಂತೆ ಕತೆ ಬರೆದು ಮುಗಿಸಿದವನ ಅಹಂಕಾರವನ್ನು ಈ ಕೃತಿ ಕೆಣಕಿತು. ದಿನವೂ ಮನಸಿಗೆ ಕಸಿವಿಸಿ. ಒಳಗೇ ಒಂದು ಗುದ್ದಾಟದ ಯಾತನೆ.

ಒಬ್ಬರ ಜೀವನ ಚರಿತ್ರೆಯನ್ನು ದಾಖಲಿಸುವುದು ಸುಲಭ ಅನ್ನಿಸಿಬಿಡಬಹುದು. ಯಾಕೆಂದರೆ ಆ ವ್ಯಕ್ತಿ ತಮ್ಮ ಬದುಕಿನ ನೆನಪುಗಳನ್ನು ನಮ್ಮೆದುರಿಗೆ ಹರವಿ ಕೂಡುತ್ತಾರೆ. ಅವುಗಳನ್ನು ಪೋಣಿಸಿ ಬರಹ ರೂಪಕ್ಕೆ ಇಳಿಸಿದರಾಯಿತೆಂದು ಯೋಚಿಸಿರುತ್ತೇವೆ. ನಾನೂ ಮೊದ ಮೊದಲು ಹಾಗೇ ಅಂದುಕೊಂಡಿದ್ದೆ. ನನ್ನೊಳಗಿನ ಕಥನಕಾರ ಹೀಗೆ ಮಾಡಲು ಬಿಡಲಿಲ್ಲ. ಬರೀ ಜೀವನ ವಿವರಗಳನ್ನು ದಾಖಲಿಸಿ ಕೊಟ್ಟರೆ ಅದು ಓದುಗನನ್ನು ನೀರು, ನೆರಳಿಲ್ಲದ ಊರಿನಲ್ಲಿ ಬಿಟ್ಟು ಬಂದ ಹಾಗೆ ಅನಿಸತೊಡಗಿತು. ಆಗಲೇ ನಿರೂಪಣೆಯ ಶೈಲಿ ಬದಲಿಸಿ ಕಾದಂಬರಿ ಸ್ವರೂಪದಲ್ಲಿ ಬರೆಯಲು ಯತ್ನಿಸಿದೆ. ಆಗ ಬರವಣಿಗೆ ತುಸು ಸರಾಗವಾಯಿತು. ಜೀವಂತ ಪಾತ್ರಗಳ ಕಥೆಯಾಗಿಸಲು ನಡೆದ ನನ್ನೊಳಗಿನ ಸೃಜನಶೀಲ ಒದ್ದಾಟವಿದು.
ಟಿ.ಎಸ್.ಗೊರವರ, ಲೇಖಕ

ಕಲೆ : ಮುರಳೀಧರ ರಾಠೋಡ

(ಆಯ್ದ ಭಾಗ)

ಸೂಡಿಯಲ್ಲಿ ಪರಸಪ್ಪ ಎನ್ನುವ ದಲಾಲಿ ವ್ಯಾಪಾರಿಯ ಕಿರುಕುಳ ಜೋರಾಗಿತ್ತು. ಸಾವಿರಾರು ಕುಟುಂಬಕ್ಕೆ ಸಾಲ ಕೊಟ್ಟಿದ್ದ. ಆ ಸಾಲದ ಬಲೆಯಲ್ಲಿ ಒಮ್ಮೆ ಸಿಲುಕಿದರೆ ಮತ್ತೆ ವಾಪಸ್ ಬಿಡಿಸಿಕೊಂಡು ಬರೋದು ರೈತರಿಗೆ ಬಹಳ ಕಷ್ಟವಾಗುತ್ತಿತ್ತು. ಅದೊಂದು ತಿರುಗುಣಿ ಇದ್ದಂಗೆ. ಬಡ್ಡಿ, ಚಕ್ರಬಡ್ಡಿ ತಿರುಗುಣಿಯಲ್ಲೇ ರೈತರು ಬಿದ್ದು ಹೊರಳಾಡಬೇಕಿತ್ತು. ಆ ಮೇಲೆ ಬಡ್ಡಿ ಕೊಡದೇ ಇರುವವರ ಆಸ್ತಿಯನ್ನು ಜಬರ್‌ದಸ್ತಿ ಮಾಡಿ ಬೇರೆಯವರಿಗೆ ಬರೆಸಿಕೊಟ್ಟು ತನ್ನ ರೊಕ್ಕ ಪಡೆಯುತ್ತಿದ್ದ. ಪರಸಪ್ಪನ ಹತ್ತಿರ ಹೀಗೆ ಸಾಲ ಪಡೆದ ಎಷ್ಟೋ ರೈತರು ಬಡ್ಡಿ ಕಟ್ಟದೆ ಹೊಲ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ಇವರ ಉಪಟಳಕ್ಕೆ ಬೇಸತ್ತಿದ್ದ ರೈತನೊಬ್ಬ ಇದಕ್ಕೆ ಪರಿಹಾರ ಸಿಗಬಹುದೆಂದು ಕೂಡ್ಲೆಪ್ಪನವರ ಬಳಿಗೆ ಬಂದು ಅತ್ತು ಕರೆದಿದ್ದ. ಅವರು ಇದಕ್ಕೆ ಏನಾದರೂ ಮಾಡಲೇಬೇಕೆಂಬ ಯೋಚನೆಗೆ ಬಿದ್ದರು. ದಲಾಲರ ದಬ್ಬಾಳಿಕೆ ವಿರೋಧಿಸಿ ಸಂಘದಿಂದ ಕರಪತ್ರ ಹಾಕಿಸಿದರು. ರೈತ ಸಂಘದ ಕಾರ್ಯಕರ್ತರೆಲ್ಲ ಸೇರಿ ಕಾರು ಬಾಡಿಗೆ ಪಡೆದು ಸುತ್ತ ಮುತ್ತಲ ಇಪ್ಪತ್ತು ಹಳ್ಳಿಗೆ ಆ ಕರಪತ್ರ ಹಂಚಿದರು.

ಸಾಲ ಪಡೆದ ರೈತರು ಆ ಕರಪತ್ರವನ್ನು ಸಾಲಿ ಕಲಿತ ಮಕ್ಕಳ ಹತ್ತಿರ ಕದ್ದು ಮುಚ್ಚಿ ಓದಿಸಿದರು. ಏನೇನಾಗುತ್ತದೋ ಎಂದು ಜನ ಬಹಳ ಭಯಗೊಂಡಿದ್ದರು. ಹಳ್ಳಿಗಳ ಚಹಾದಂಗಡಿ, ಕಟಿಂಗ್ ಅಂಗಡಿ, ಗುಡಿ, ಮಸೀದಿಗಳ ಕಟ್ಟೆ ಮೇಲೆ ಗುಂಪುಗೂಡಿದ ಜನರಲ್ಲಿ ಈ ಕರಪತ್ರದ್ದೇ ಚರ್ಚೆ. ಒಂದೂರಿನಲ್ಲಿ ಕನಿಷ್ಟ ಅರ್ಧದಷ್ಟು ಜನರಾದರೂ ಪರಸಪ್ಪನ ಹತ್ತಿರ ಸಾಲ ಪಡೆದವರೇ ಆಗಿದ್ದರು. ಸಾಲಗಾರರು ಆ ಕರಪತ್ರ ಮಡಚಿ ಬೊಕ್ಕಣದಲ್ಲಿ ಇಟ್ಕೊಂಡು ಅಡ್ಡಾಡುತ್ತ ಕದ್ದು ಮುಚ್ಚಿ ಅವರಿಗೆ ಇವರಿಗೆ ತೋರಿಸೋರು. ಆ ಬಗ್ಗೆ ಬಹಿರಂಗವಾಗಿ ಮಾತಾಡೋಕೆ ಹೆದರುತ್ತಿದ್ದರು. ಪರಸಪ್ಪ ಅಷ್ಟೊಂದು ಭಯವನ್ನು ರೈತರೊಳಗೆ ಬಿತ್ತಿದ್ದ.

ರೈತ ಸಂಘದ ಕರಪತ್ರ ನೋಡಿ ದಲಾಲ ಪರಸಪ್ಪ ಕುದ್ದು ಹೋದ. ಇದು ಅನೀರಿಕ್ಷಿತವಾಗಿ ಅಪ್ಪಳಿಸಿದ ಆಘಾತವಾಗಿತ್ತು. ಅವನ ಮೈ ತುಂಬಾ ರಕ್ತದ ಬದಲು ಸಿಟ್ಟು ಹರಿದಾಡಿತು. ಬರುವ ಸಾಲಗಳಾದರೂ ಬರಲೆಂದು ಹಳ್ಳಿಗಳ ಕಡೆ ವಸೂಲಿಗೆ ತೆರಳಿದ. ಮೊದಲಿಗಿಂತ ಕಠೋರವಾಗಿದ್ದ. ಆದರೆ, ಹಳ್ಳಿಗಳಿಗೆ ಹೋದಾಗ ಜನರ ವರ್ತನೆಗಳು ಮೊದಲಿಗಿಂತ ಈಗ ಬದಲಾಗಿದ್ದು ಗೋಚರವಾಗತೊಡಗಿತು. ಬಂದಾಗೊಮ್ಮೆ ವಿಧೇಯತೆ ತೋರುತ್ತ, ನಮಸ್ಕಾರ ಹೇಳುತ್ತಾ, ಸಾಲ ಹರಿಯಲೆಂದೇ ತಿಂಗಳಪೂರ್ತಿ ಕೂಲಿ ಮಾಡಿದ ದುಡ್ಡನ್ನು ಇವನ ಬೊಗಸೆಗೆ ಹಾಕುತ್ತಿದ್ದರು. ಆಗೆಲ್ಲ ಬಡ್ಡಿ ಹಣ ಕೊಡದಿದ್ದರೆ ಬೆದರಿಕೆ ಹಾಕುತ್ತಿದ್ದ. ಇದರಿಂದ ಹೆದರಿದ್ದ ಜನ ಹೊಟ್ಟೆ ಬಟ್ಟೆಗೆ ಇರದಿದ್ದರೂ ಅಡ್ಡಿ ಇಲ್ಲ, ಬಡ್ಡಿ ಕೊಡಲು ಹಣ ಹೊಂದಿಸುತ್ತಿದ್ದರು. ಈಗ ಜನ ಯಾಕೋ ಹೆದರಿದಂತೆ ಕಾಣುತ್ತಿಲ್ಲ. ಇದು ಪರಸಪ್ಪನನ್ನು ಮತ್ತಷ್ಟು ಕೆರಳಿಸತೊಡಗಿತು.

ರಾತ್ರಿ ಕನಸು ಬಿದ್ದರೆ ಅದರಲ್ಲಿ ರೈತ ಸಂಘದ ಕರಪತ್ರವೇ ಪಟಪಟಿಸಿ ನಿದ್ದೆಗೆಡುತ್ತಿದ್ದ. ಬೆಳಗಾದರೆ ಎಂದಿನಂತೆ ಹಳ್ಳಿಗಳಿಗೆ ಸಾಲ ವಸೂಲು ಮಾಡಲು ಹೋಗೋದು ಈಗೀಗ ಕಿರಿಕಿರಿ ಅನಿಸತೊಡಗಿತ್ತು. ಜನ ಸುಮ್ಮನಿದ್ದರೂ ಅಪಹಾಸ್ಯ ಮಾಡಿದಂತೆ ತೋರುತ್ತಿತ್ತು. ತಲೆಯೊಳಗೆ ನೂರಾರು ಹುಳುಗಳು ಓಡಾಡಿದಂತೆನಿಸುತ್ತಿತ್ತು. ಇದಕ್ಕೆ ಏನಾದರೂ ಮಾಡಲೇಬೇಕೆಂದು ಮನಸೊಳಗೆ ಅಕಲು ಹಾಕತೊಡಗಿದ.

ಜನರಿಗೆ ಭಯ ಹುಟ್ಟಿಸಲು ಮಾಸ್ತಕಟ್ಟಿಯ ಒಬ್ಬ ರೈತನನ್ನು ನಾಪತ್ತೆ ಮಾಡಿದ. ಆದರೆ, ಭಯದ ಬದಲು ಈ ತಂತ್ರ ಪರಸಪ್ಪನಿಗೇ ತಿರುವು ಮುರುವಾಯಿತು. ಮಾಸ್ತಕಟ್ಟಿಯ ಜನ ಹನುಮಸಾಗರ ಪೊಲೀಸ್ ಠಾಣೆಗೆ ಹೋಗಿ ಅಲ್ಲಿನ ಪಿಎಸ್‌ಐ ಹುಡುಗಿ ಎನ್ನುವವರಿಗೆ ಕಂಪ್ಲೆಂಟ್ ಕೊಟ್ಟರು. ರೈತ ಸಂಘದ ಕರಪತ್ರವನ್ನು ಈ ಮೊದಲೇ ಗಮನಿಸಿದ್ದ ಪಿಎಸ್‌ಐ, ಪರಸಪ್ಪನನ್ನು ಒದ್ದು ಜೈಲಿಗೆ ಹಾಕಿದ. ರೊಕ್ಕದ ಪ್ರಭಾವ ಇದ್ದುದರಿಂದ ಕೆಲವೇ ದಿನಗಳಲ್ಲಿ ಪರಸಪ್ಪ ಜೈಲಿನಿಂದ ಹೊರ ಬಂದ. ಆದರೆ, ಪರಸಪ್ಪ ಜೈಲಿಗೆ ಹೋಗಿ ಬಂದಿದ್ದು ಹಳ್ಳಿಗಳಲ್ಲೆಲ್ಲಾ ಗುಲ್ಲೆದ್ದು ‘ಬೇಸಿ ಮಾಡ್ಯಾರ ನೋಡು ಅಂವಂಗ’ ಅಂತ ಜನ ಮಾತಾಡಿಕೊಂಡರು.

ನೆಲ್ಲೂರಿನಲ್ಲಿ ಸಾಲ ವಸೂಲಿಗೆ ಬಂದಾಗ ಲೆಕ್ಕದ ಪುಸ್ತಕ ಕಸಿದುಕೊಂಡು ಜನ ನಾಲ್ಕು ಹೊಡೆದು ಕಳಿಸಿದರು. ಅವತ್ತಿನಿಂದ ಪರಸಪ್ಪನಿಗೆ ಬುಗಿಲು ಹೊಕ್ಕಿತು. ಬಡ್ಡಿ, ಚಕ್ರಬಡ್ಡಿ ಬಿಟ್ಟು ಕೊಟ್ಟ ದುಡ್ಡನ್ನಷ್ಟೇ ವಿನಯದಿಂದ ಕೇಳತೊಡಗಿದ. ದಲಾಲಿ ಅಂಗಡಿಯವರ ಸಾಲ, ಸಾಲ ಕೊಟ್ಟ ಖಾಸಗಿ ವ್ಯಕ್ತಿಗಳು ರೈತರಿಗೆ ಕಿರುಕುಳ ಕೊಡೋದನ್ನು ನಿಲ್ಲಿಸತೊಡಗಿದರು. ರೈತ ಸಂಘದ ಕಾಳಜಿಯ ಬಗ್ಗೆ ಜನ ಮಾತಾಡುತ್ತ, ಸಂಘಟಿತರಾಗತೊಡಗಿದರು.

ಬೆಳೆಗಳು ಅಷ್ಟಕ್ಕಷ್ಟೆ ಬರುತ್ತಿದ್ದರಿಂದ ರೈತರಿಗೆ ವಿದ್ಯುತ್ ಬಿಲ್ ತುಂಬೋದು ತ್ರಾಸದಾಯಕವಾಗತೊಡಗಿತ್ತು. ಇದನ್ನೆಲ್ಲ ಮನಗಂಡ ರೈತ ಸಂಘ ಕರ ನಿರಾಕರಣೆ ಚಳವಳಿ ಹಮ್ಮಿಕೊಂಡಿತು. ಬೋರ್‌ಗಳಿಗೆ ಅಳವಡಿಸಿದ್ದ ಮೀಟರ್‌ಗಳನ್ನೆಲ್ಲ ಕಿತ್ತು ರೈತರು ಕೊಪ್ಪಳಕ್ಕೆ ಹೋಗಿ ಕೊಟ್ಟು ಬಂದರು. ರೈತರ ಪ್ರಬಲ ವಿರೋಧ ಎದುರಿಸಬೇಕಾದುದರಿಂದ ವಿದ್ಯುತ್ ಬಿಲ್ ವಸೂಲಿ ಮಾಡಲು ಹಳ್ಳಿಗಳಿಗೆ ಬರುವುದಕ್ಕೆ ಹಿಂದೇಟು ಹಾಕತೊಡಗಿದರು. ಹದಿಮೂರು ವರ್ಷಗಳವರೆಗೆ ರೈತರು ಹೀಗೆ ವಿದ್ಯುತ್ ಬಿಲ್ ತುಂಬಲಿಲ್ಲ.
ರೈತ ಸಂಘ ಇದೇ ಹೊತ್ತಿನಲ್ಲಿ ಇಬ್ಬಾಗ ಆಯ್ತು. ನಂಜುಂಡಸ್ವಾಮಿ ಬಣ ಮತ್ತು ಪುಟ್ಟಣ್ಣಯ್ಯ ಬಣಗಳಾದ ಮೇಲೆ ನಂಜುಂಡಸ್ವಾಮಿ ರೋಣದಲ್ಲಿ ಬಂದು ಮೂರು ದಿನ ಉಳಿದರು. ರೋಣ ತಾಲ್ಲೂಕಿನ ರೈತರು ತಮ್ಮ ಜೊತೆಗಿರಬೇಕೆಂಬುದು ನಂಜುಂಡಸ್ವಾಮಿಯವರ ಹಂಬಲವಾಗಿತ್ತು. ಆದರೂ ರೋಣದಲ್ಲಿ ರೈತರು ಎರಡು ಬಣಗಳಾಗಿ ಒಡೆದು ಹೋದರು.

ಕೂಡ್ಲೆಪ್ಪನವರು ನಂಜುಂಡಸ್ವಾಮಿ ಬಣದಲ್ಲಿ ಉಳಿದರು. ಅಂದಿನಿಂದ ನಂಜುಂಡಸ್ವಾಮಿಯವರು ಕೂಡ್ಲೆಪ್ಪನವರಿಗೆ ರೈತ ಚಳವಳಿಯ ಮಾರ್ಗದರ್ಶನ ಮಾಡತೊಡಗಿದರು. ನಂಜುಂಡಸ್ವಾಮಿಯವರ ಮೂಲಕ ಇವರಿಗೆಲ್ಲ ಪೆರಿಯಾರ್ ಆಲೋಚನೆ ಪರಿಚಯ ಆಯ್ತು. ರೈತರು ತಿಳಿದುಕೊಳ್ಳಬೇಕಾದ ಕಾನೂನುಗಳ ಬಗೆಗಿನ ಸಾಹಿತ್ಯವನ್ನು ರೈತ ಮುಖಂಡರಿಗೆ ತಲುಪಿಸುತ್ತಿದ್ದರು. ಕರಪತ್ರಗಳು ಕೂಡ ಹೊಸ ತಿಳಿವಳಿಕೆ ನೀಡುವುದರ ಜೊತೆಗೆ ಅರಿವನ್ನು ತಿದ್ದುವಂತಿರುತ್ತಿದ್ದವು. ಪ್ರಭುತ್ವದ ಹುನ್ನಾರಗಳನ್ನು ಬಹು ಬೇಗನೆ ಗ್ರಹಿಸುವಂತಾಯಿತು. ಸೈದ್ಧಾಂತಿಕವಾಗಿ ಆಗ ಕೂಡ್ಲೆಪ್ಪನವರು ಗಟ್ಟಿಗೊಳ್ಳತೊಡಗಿದರು.

ಅದೆಷ್ಟು ಗಟ್ಟಿ ಎಂದರೆ ಅಧಿಕಾರಶಾಹಿಯನ್ನು ರಾಜಾರೋಷವಾಗಿ ವಿರೋಧಿಸುವುದನ್ನು, ನೇರವಾಗಿ ಮಾತಾಡುವುದನ್ನು ಕಲಿತರು. ಬಳಗೋಡದಲ್ಲಿ ಒಮ್ಮೆ ಟಿಸಿ ಸುಟ್ಟಿತ್ತು. ಕೆಇಬಿಯವರು ಟಿ.ಸಿ.ಹಾಕಲೇ ಇಲ್ಲ. ರೈತರು ಸಂಘಟಿತರಾಗಿ ಕೆಇಬಿಗೆ ಹೋಗಿ ಮುತ್ತಿಗೆ ಹಾಕಲು ನಿರ್ಧರಿಸಿದರು. ಆಗ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಹದಿನಾರು ಎತ್ತಿನ ಚಕ್ಕಡಿಗಳೊಂದಿಗೆ ನೂರಾರು ರೈತರು ಕೆಇಬಿಯೊಳಗೆ ನುಗ್ಗಿದರು. ಆಗ ಸಿಪಿಐ ರೈತ ಮುಖಂಡ ಕೂಡ್ಲೆಪ್ಪನವರಿಗೆ ‘ಚಕ್ಕಡಿ ಒಳ ಬಿಡಬೇಡ್ರಿ..’ ಅಂತ ಕೈ ಜಗ್ಗಾಡಿದ.

ಕಲೆ : ಮುರಳೀಧರ ರಾಠೋಡ

ಆಗ ಕೂಡ್ಲೆಪ್ಪನವರು ‘ಏನಪ್ಪ ಇದನ್ನೇ ಓದಿದ್ದಾ ನೀನು. ನಾವು ಏನ್ ಮಾಡ್ತಿದಿವಿ ಅನ್ನೋದೇನಾದ್ರು ಅರಿವಿದೆಯಾ ನಿನಗೆ. ದಾಂಧಲೆ ಮಾಡೋಕೆ ಬಂದಿದಿವಾ ನಾವು. ಟಿ.ಸಿ. ಸುಟ್ಟು ರೈತರ ಬೆಳೆಗೆ ನೀರು ಇಲ್ದ ಒಣಗಾಕ ಹತ್ಯಾವು. ಬೆಳಿ ಬರದಿದ್ರೆ ನಾಳೆ ಏನು ಊಟ ಮಾಡ್ತಿರಿ. ರೈತರೇನು ಶ್ರೀಮಂತರಲ್ಲ. ಅವ್ರಿಗೆ ನಿಮ್ಮಂಗ ತಿಂಗಳಾ ತಿಂಗಳ ತಪ್ಪದ ಪಗಾರ ಬರೋದಿಲ್ಲ. ನೀವೆಲ್ಲ ತಿಳಿವಳಿಕೆ ಇರೋರು. ಇದ್ನೆಲ್ಲಾ ನಿಮಗ ಹೇಳಬೇಕೇನು..’ ಅಂತ ಮುಖಕ್ಕೆ ಹೊಡೆದಂಗೆ ಹೇಳಿದರು.

ಇವರ ಮಾತುಗಳಿಂದ ಸಿಪಿಐಗೆ ಜ್ಞಾನೋದಯವಾಗಿರಬೇಕು. ಮರು ಮಾತಾಡದೇ ಅಲ್ಲಿಂದ ಕಾಲ್ಕಿತ್ತು ತಾಸು ಎರಡು ತಾಸು ಆಫೀಸಿನಲ್ಲಿ ಕುಳಿತವರು ಮತ್ತೆ ಹೊರಗೆ ಬರಲೇ ಇಲ್ಲ. ಬದಲಾಗಿ ರೈತರಿಗೆಲ್ಲ ಸಪೋರ್ಟ್ ಮಾಡುತ್ತ, ಅವರಿಗೆಲ್ಲ ನಾಲ್ಕೈದು ದಿನ ಊಟಕ್ಕೆ ವ್ಯವಸ್ಥೆ ಮಾಡಿದ. ರೈತರು ಅಲ್ಲೇ ಕೆಇಬಿ ಆವರಣದಲ್ಲಿ ಮೇವು ಹಾಕಿ ಎತ್ತುಗಳನ್ನು ಕಟ್ಟಿದ್ದರು.

ಕೊನೆಗೆ ರೈತರೊಂದಿಗೆ ಮಾತಾಡಲು ಎಸ್‌ಪಿ ಬರಬೇಕಾಯಿತು. ರಾಜೀ ಮಾಡಲು ನೋಡಿದರು. ‘ಎಲ್ಲ ರೈತರು ನೂರು ರೂಪಾಯಿ ತುಂಬ್ರಿ. ಟಿಸಿ ಕೊಡಿಸೋ ವ್ಯವಸ್ಥೆ ಮಾಡೋಣು..’ ಅಂದ್ರು.

ಕೂಡ್ಲೆಪ್ಪನವರು ‘ಒಂದು ರೂಪಾಯಿ ತುಂಬೋದಿಲ್ಲ. ರೈತರು ಕಷ್ಟದಾಗಿದಾರ. ನಯಾಪೈಸೆ ಬೆಳೆ ಬಂದಿಲ್ಲ. ರೈತರು ರೊಕ್ಕ ಎಲ್ಲಿಂದ ಕೊಡಬೇಕು. ಅವ್ರಿಗೆಲ್ಲ ಊಟುದ್ದ ಚಿಂತಿ ಆಗೇತಿ. ಇಂತಾದ್ರಾಗ ಟಿಸಿ ಕೊಡ್ಲಿಲ್ಲಂದ್ರ ಹೆಂಗ. ಟಿಸಿ ಕೊಡೋವರೆಗೂ ನಾವು ಪ್ರತಿಭಟನೆ ಮಾಡ್ತಿವಿ..’ ಅಂದರು.

ಆಗ ರೈತರೆಲ್ಲ ‘ರೈತ ವಿರೋಧಿ ಸರಕಾರಕ್ಕೆ ಧಿಕ್ಕಾರ’, ‘ರೈತ ವಿರೋಧಿ ಅಧಿಕಾರಿಗಳಿಗೆ ಧಿಕ್ಕಾರ’, ಅಂತ ಘೋಷಣೆ ಹಾಕತೊಡಗಿದರು. ಹೋರಾಟಕ್ಕೆ ಮಣಿದ ಎಸ್‌ಪಿ ಕೆಇಬಿ ಅಧಿಕಾರಿಗಳ ಜೊತೆ ಚರ್ಚಿಸಿ ಟಿಸಿ ಕಳಿಸಲು ಒಪ್ಪಿಸಿದರು. ರೈತರು ಹೋರಾಟ ಹಿಂತೆಗೆದುಕೊಂಡರು. ಮರುದಿನವೇ ಬಳಗೋಡಕ್ಕೆ ಟಿಸಿ ಬಂತು.

*

ಪರಿಚಯ : ಟಿ.ಎಸ್.ಗೊರವರ ಅವರು ಧಾರವಾಡದಲ್ಲಿ ವಾಸವಾಗಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದ ಇವರು 1984 ಜೂನ್ 10 ರಂದು ಜನಿಸಿದ್ದಾರೆ. ರಾಜೂರು, ಗಜೇಂದ್ರಗಡದಲ್ಲಿ ವಿದ್ಯಾಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (೨೦೦೭) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (೨೦೧೧) ಅನುಭವ ಕಥನ, ಕುದರಿ ಮಾಸ್ತರ (೨೦೧೨) ಕಥಾ ಸಂಕಲನ, ರೊಟ್ಟಿ ಮುಟಗಿ (೨೦೧೬) ಕಾದಂಬರಿ, ಮಲ್ಲಿಗೆ ಹೂವಿನ ಸಖ (೨೦೧೮) ಕಥಾ ಸಂಕಲನ, ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ(೨೦೨೦) ಗದ್ಯ ಕವಿತೆಗಳು, ಬರವಣಿಗೆಯ ತಾಲೀಮು (ಸಂ) (೨೦೨೧), ಹಸಿರು ಟಾವೆಲ್ (ರೈತನೊಬ್ಬನ ಜೀವನ ಕಥನ) (೨೦೨೧) ಪ್ರಕಟಿತ ಕೃತಿಗಳು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದ.ರಾ.ಬೇಂದ್ರೆ ಗ್ರಂಥ ಬಹುಮಾನ, ಅರಳು ಪ್ರಶಸ್ತಿ, ಪ್ರಜಾವಾಣಿ, ಕನ್ನಡಪ್ರಭ ದೀಪಾವಳಿ ಕಥಾಸ್ಪರ್ಧೆ, ಬಸವರಾಜ ಕಟ್ಟೀಮನಿ ಪುರಸ್ಕಾರ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಯುವ ಸಾಹಿತಿ, ಡೆಕ್ಕನ್ ಹೆರಾಲ್ಡ್​ನ DH Changemakers ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಎಂಟು ವರ್ಷ ಉಪಸಂಪಾದಕರಾಗಿ ಕಾರ್ಯನಿರ್ವಹಣೆ. ಸದ್ಯ ‘ಸಂಗಾತ ಪುಸ್ತಕ’ ಪ್ರಕಾಶನವನ್ನು ನಡೆಸುತ್ತಿದ್ದಾರೆ. ‘ಅಕ್ಷರ ಸಂಗಾತ’ ಮಾಸಿಕ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದಾರೆ.

(ಈ ಪುಸ್ತಕ ಖರೀದಿಸಲು  : 9341757653)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ‘ಸೃಷ್ಟಿಯು ಸೃಷ್ಟಿಯನ್ನೇ ಮುಟ್ಟುವ ಆ ಗಳಿಗೆ ಏನಾಗಿತ್ತು’