Web Series : 2018-19 ರ ನಂತರ ಕೋವಿಡ್ ಯುಗ ಶುರುವಾದ ಮೇಲೆ ಮನೆಯಿಂದ ಕೆಲಸ (Work From Home) ಎನ್ನುವ ಕಾನ್ಸೆಪ್ಟ್ ಬಂದ ಮೇಲೆ ಈ ಸೀರೀಸ್ಗಳ ಸುಗ್ಗಿಯೇ ಆರಂಭವಾಗಿದೆ. ಸಾಲುಸಾಲು ಸೀರೀಸ್ಗಳು ಸಿನಿಮಾಗಳು ತಯಾರಾಗುತ್ತಿವೆ. ಶೇ. 99 ಇವುಗಳಲ್ಲಿ ಸೆಕ್ಸ್ ಮತ್ತು ಕ್ರೌರ್ಯ ಢಾಳಾಗಿ ತುಂಬಿದೆ. ಇವೆರಡೂ ಇಲ್ಲದೆ ಸೀರೀಸ್ ಇಲ್ಲ ಎಂಬಂತಾಗಿದೆ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಪಂಚಾಯತ್, ಬ್ಯಾಂಡಿಟ್ಸ್, ಬಂದಿಶ್, ದ ಫ್ಯಾಮಿಲಿಮ್ಯಾನ್, ಆರ್ಯ, ಸ್ಪೆಷಲ್ ಆಪ್ಸ್ , ಬ್ರೀತ್ ಮುಂತಾದ ಒಳ್ಳೆಯ ಅಭಿರುಚಿಯ ಸೀರೀಸ್ ಸಹಾ ಬಂದಿವೆ. ಯಶಸ್ವಿಯೂ ಆಗಿವೆ. ಆದರೂ ಲೈಂಗಿಕತೆ ತುಂಬಿರುವ ಸೀರೀಸ್ ಗಳ ನಡುವೆ ಇವು ಕಾಣುವುದು ಕಡಿಮೆ. ಜನರ ಅಭಿರುಚಿ ಮನೋಭಾವ ಹೀಗೆ ಬದಲಾಗಿ ಬಿಟ್ಟಿದೆಯೇ ಎಂದು ಅಚ್ಚರಿಯಾಗುತ್ತದೆ.
ವೀಣಾ ರಾವ್
ವೀಣಾ ರಾವ್ ಓದಿದ್ದು ಇತಿಹಾಸ ಮತ್ತು ಪತ್ರಿಕೋದ್ಯಮ. ಆಸಕ್ತಿಯ ಕ್ಷೇತ್ರ ಸಾಹಿತ್ಯ. ಉದಯವಾಣಿಯಲ್ಲಿ ಕೆಲವರ್ಷಗಳ ಕಾಲ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ ಇವರು ಸದ್ಯ ಹವ್ಯಾಸಿ ಲೇಖಕರು. ಈಗಿಲ್ಲಿ ವೆಬ್ ಸೀರೀಸ್ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಒಮ್ಮೆ ನನ್ನ ತಮ್ಮನ ಹದಿನೈದು ವರ್ಷದ ಮಗಳು ಒಂದು ದಿನ “ನಾನು ನೋಡಬಹುದಾದ ಯಾವುದಾದರೂ ವೆಬ್ ಸೀರೀಸ್ ಅಥವಾ ಸಿನಿಮಾ ಇದ್ದರೆ ಹೇಳು ಅತ್ತೆ” ಎಂದು ಕೇಳಿದಳು. ನನಗೆ ಒಮ್ಮೆ ಕಕ್ಕಾಬಿಕ್ಕಿ ಆಯಿತು. ಯಾವ ಮಕ್ಕಳು ಹೀಗೆ ಇಷ್ಟು ಪ್ರಾಮಾಣಿಕವಾಗಿ ಕೇಳುತ್ತಾರಪ್ಪ ಎನಿಸಿದರೂ ಅವಳಿಗೆ ಹೇಳುವಂಥಾ ಸಿನಿಮಾ ವೆಬ್ ಸೀರೀಸ್ ಯಾವುದಿದೆ ಎಂದು ಯೋಚಿಸಿ ಒಂದೆರಡು ಹೇಳಿದ್ದೆ. ಮತ್ತು ಅವಳಿಗೆ ನೀನು ಯಾವುದೇ ಆತರಹ ನೋಡಬೇಕೆಂದರೂ ನನಗಾಗಲಿ ಅಮ್ಮನಿಗಾಗಲಿ ಹೇಳಿ ನಂತರ ನೋಡು ಎಂದು ಹೇಳಿದೆ.
ಹೀಗೆ ಹೇಳಬೇಕಾಗಿ ಬಂದಿದ್ದು ನಮ್ಮ ದೌರ್ಭಾಗ್ಯ. ನಾವೆಲ್ಲ ಚಿಕ್ಕಂದಿನಲ್ಲಿ ಮನೆಮಂದಿಯೆಲ್ಲ ಕೂತು ಸಿನಿಮಾ ಸೀರಿಯಲ್ ನೋಡುತ್ತಿದ್ದೆವು. ಯಾವುದೇ ಮಾದಕ ಅಥವಾ ಸೆಕ್ಸ್ ಸಂಬಂಧ ಪಟ್ಟ ದೃಶ್ಯಗಳು ಇರುತ್ತಿರಲಿಲ್ಲ. ಎಲ್ಲವೂ ಸೀದಾಸಾದಾ ಇರುತ್ತಿತ್ತು. ಪ್ರೇಮ ಪ್ರೀತಿಯ ದೃಶ್ಯಗಳು ಒಂದು ನೋಟ ಅಥವಾ ಒಂದು ಸಣ್ಣ ಸ್ಪರ್ಶದಲ್ಲಿ ಮುಗಿದು ಹೋಗುತ್ತಿತ್ತು. ಅಥವಾ ಮುಖದ ಭಾವನೆಗಳಲ್ಲಿ ಕವಳಿಕೆಗಳಲ್ಲಿ ಪ್ರೇಮ ಪ್ರೀತಿ ಕಾಮ ಕೂಡ ತೋರಿಸುವ ಚಾಣಾಕ್ಷತೆ ನಮ್ಮ ಹಿಂದಿನ ನಿರ್ದೇಶಕರಿಗೆ ಇತ್ತು. ಆದರೆ ಈಗ ಆಧುನಿಕತೆ ತಾಂತ್ರಿಕತೆ ಬೆಳೆದಂತೆಲ್ಲ ಮುಚ್ಚುಮರೆ ಇಲ್ಲದೆ ಹೋಗಿದೆ. ಇಂದಿನ ಸಿನಿಮಾ ಆಗಲಿ ವೆಬ್ ಸೀರೀಸ್ ಆಗಲೀ ಪ್ರೇಮ ಕಾಮಗಳನ್ನು ತೋರಿಸುವಾಗ ನೋಟ ಅಥವಾ ಒಂದು ಸಣ್ಣ ಸ್ಪರ್ಶಕ್ಕೆ ಉಳಿದುಕೊಂಡಿಲ್ಲ. ಈಗಿನ ಸಿನಿಮಾಗಳಲ್ಲಿ ಕಾಮ ಮತು ಲೈಂಗಿಕತೆ ಢಾಳಾಗಿ ಹರಡಿಕೊಂಡಿದೆ. ಥ್ರಿಲ್ ಮತು ಸಸ್ಪೆನ್ಸ್ ಇದ್ದ ಕಡೆ ಲೈಂಗಿಕತೆಯೂ ಇರಲೇ ಬೇಕು ಎಂಬ ಅಘೋಷಿತ ನಿರ್ಣಯ ಆದಹಾಗೆ ಆಗಿದೆ. ಯಾವ ಎಗ್ಗೂ ಸಿಗ್ಗೂ ಇಲ್ಲದೆ ಒಬ್ಬರ ಮೇಲೆ ಒಬ್ಬರು ಏರಿ ಹೋಗುತ್ತಾರೆ. ಮುಲಾಜಿಲ್ಲದೆ ಬಟ್ಟೆ ಕಳಚುತ್ತಾರೆ. ಕಾಮ ಪ್ರಚೋದಕ ದೃಶ್ಯಗಳಂತೂ ತುಂಬಾ ಸಾಮಾನ್ಯ. ಚುಂಬನ ದೃಶ್ಯಗಳಂತೂ ಕಾಫಿ ಕುಡಿದಷ್ಟೇ ಸಲೀಸು. ಈಗ ಮಕ್ಕಳೊಂದಿಗೆ ಯಾವುದೇ ಸಿನಿಮಾ ಅಥವಾ ವೆಬ್ ಸೀರೀಸ್ ನೋಡುವಾಗ ಅದರ ರೇಟಿಂಗ್ ಎಷ್ಟು ಎಂಬುದು ಗಮನದಲ್ಲಿ ಇರಬೇಕು.
ಮೊದಲಾದರೆ ನಾವು ಚಿಕ್ಕವರಿದ್ದಾಗ ಅಂದರೆ 80/90 ರ ದಶಕದಲ್ಲಿ ಎಲ್ಲವೂ ಯು ಸರ್ಟಿಫಿಕೇಟ್ ಸಿನಿಮಾಗಳೆ ಆಗಿದ್ದವು. ಯಾವುದೇ ಭಯ ಇರುತ್ತಿರಲಿಲ್ಲ. ಹಾಗೊಂದು ವೇಳೆ ಅಸಭ್ಯ ದೃಶ್ಯಗಳಿದ್ದರೆ ಆ ಸಿನಿಮಾ ಮಕ್ಕಳಿಗೆ ವರ್ಜ್ಯ. ರಾಜ್ ಕಪೂರ್ ನಿರ್ದೇಶನದ ಸಿನಿಮಾಗಳು ಮಕ್ಕಳಿಗೆ ತೋರಿಸುತ್ತಲೇ ಇರಲಿಲ್ಲ. ಆಗ ಅವೆಲ್ಲಾ ಅಡಲ್ಟ್ ಸಿನಿಮಾಗಳಾಗಿದ್ದವು ಅದು ಸತ್ಯಂ ಶಿವಂ ಸುಂದರಂ ಇರಬಹುದು ಅಥವಾ ರಾಮ್ ತೇರಿ ಗಂಗಾ ಮೈಲಿ ಇರಬಹುದು. ಮೋಹಕತಾರೆ ಲಕ್ಷ್ಮಿ ಅಭಿನಯದ ಜೂಲಿ ಸಿನಿಮಾ ನನಗಂತೂ ನಮ್ಮ ಅಮ್ಮ ನೋಡಲೇಬಾರದೆಂದು ತಾಕೀತು ಮಾಡಿದ್ದರು. ಆದರೂ ಕುತೂಹಲ ತಡೆಯಲಾರದೆ ಅದು ಸಾಕಷ್ಟು ಹಳೆಯದಾದ ಮೇಲೆ ನೋಡಿದ್ದೆ. ಈಗಿನ ವೆಬ್ ಸೀರೀಸ್ ಗೆ ಹೋಲಿಸಿದರೆ ಆ ಚಿತ್ರಗಳು ಏನೇನೂ ಇಲ್ಲ.
ವೆಬ್ ಸೀರೀಸ್ ಗಳು ಬಂದ ಹೊಸದು. ಥ್ರಿಲ್ಲರ್ ಮತ್ತು ಸಸ್ಪೆನ್ ಇರುವ ಕತೆಗಳು ನನಗಂತೂ ಇಷ್ಟ. ಹಾಗಾಗಿ 2018ರಲ್ಲಿ ಬಿಡುಗಡೆಯಾದ ವೆಬ್ ಸೀರೀಸ್ ಸೇಕ್ರೆಡ್ ಗೇಮ್ಸ್ (ನೆಟ್ಫ್ಲಿಕ್ಸ್) ನೋಡಿದೆ. ಥ್ರಿಲ್ ಮತ್ತು ಸಸ್ಪೆನ್ಸ್ ಏನೋ ಇದೆ. ಮೈನವಿರೇಳಿಸುತ್ತದೆ. ಆದರೆ ಅದರಲ್ಲಿ ಸೆಕ್ಸ್ ಕೂಡ ಧಾರಾಳವಾಗಿ ತುಂಬಿಸಿದ್ದಾರೆ. ಅದರ ಮುಖ್ಯ ಭೂಮಿಕೆಯಲ್ಲಿರುವ ಗಣೇಶ್ ಗಾಯತೊಂಡೆ ಪಾತ್ರದ ನವಾಜುದ್ದೀನ್ ಸಿದ್ದಿಕಿ ಆ ಸೀರೀಸ್ನಲ್ಲಿ ಎಷ್ಟು ಹುಡುಗಿಯರ ಜೊತೆ ಮಲಗುತ್ತಾನೋ ಲೆಕ್ಕವಿಲ್ಲ. ಅದೂ ತುಂಬಾ ಬಿಡಿಸಿಟ್ಟ ಹಣ್ಣಿನಂತೆ ಸೆಕ್ಸನ್ನು ತೋರಿಸಿದ್ದಾರೆ. ಎಲ್ಲವೂ ಖುಲ್ಲಂ ಖುಲ್ಲಾ. ನನಗಂತೂ ಅದನ್ನು ನೋಡಿ ಮೂರ್ಛೆ ಬರುವುದೊಂದು ಬಾಕಿ.
ಅದಾದ ನಂತರ ಮಿರ್ಜಾಪುರ್ (ಅಮೇಜಾನ್ ಪ್ರೈಮ್) ನೋಡಿದೆ. ಇದರಲ್ಲಿ ಮುಖ್ಯ ಭೂಮಿಕೆಯಲ್ಲಿ ಇರುವ ಅಖಂಡಾನಂದ್ ಪಾತ್ರದ ಪಂಕಜ್ ತ್ರಿಪಾಟಿಯ ನಟನೆ ಬಗ್ಗೆ ಎರಡು ಮಾತಿಲ್ಲ. ಆದರೆ ಅವನ ಮಗನಾಗಿ ಅಭಿನಯಿಸಿದ ಮುನ್ನಾ ತ್ರಿಪಾಟಿ ಪಾತ್ರದ ದಿವೇಂದು ಎಂಬ ನಟ ಅಬ್ಬಾ ಕ್ರೌರ್ಯದ ಇನ್ನೊಂದು ಮುಖವಾಗಿ ನಟಿಸಿದ್ದಾನೆ. ಇದರಲ್ಲಿ ಲೈಂಗಿಕತೆಯೂ ಕ್ರೂರತನದಿಂದ ಕೂಡಿದೆ ಎಂದರೆ ತಪ್ಪಾಗಲಾರದು. ಮಿರ್ಜಾಪುರದ ಅನಭಿಷಿಕ್ತ ಸಾಮ್ರಾಟ ಅಖಂಡಾನಂದ ತ್ರಿಪಾಟಿ. ಇವನ ಒಬ್ಬನೇ ಮಗ ಮುನ್ನಾ. ಇವನು ಬಯಸಿದ ಹೆಣ್ಣುಗಳೆಲ್ಲ ಇವನೊಟ್ಟಿಗೆ ಮಲಗಬೇಕು. ಇವನಿಗೆ ಸೆಕ್ಸ್ ಬೇಕೆನಿಸಿದಾಗ ಮನೆಯ ಕೆಲಸ ಮಾಡುವ ಹೆಣ್ಣುಗಳಾದರೂ ಸರಿ ಹಾಸಿಗೆಗೆ ಇವನು ಕರೆದೊಡನೆ ಬರಬೇಕು. ಅವನೆಷ್ಟು ಕ್ರೂರವಾಗಿ ಹಾಸಿಗೆಯಲ್ಲಿ ನಡೆದುಕೊಂಡರೂ ಕಮಕ್ ಕಿಮಕ್ ಎನ್ನದೆ ಸಹಿಸಬೇಕು.
ಇನ್ನು ಅಖಂಡಾನಂದನ ಎರಡನೇ ಹೆಂಡತಿ ಬೀನಾ ತ್ರಿಪಾಟಿ (ರಸಿಕಾ ದುಗ್ಗಲ್) ಲೈಂಗಿಕ ಅತೃಪ್ತಳು. ತನ್ನ ಗಂಡನಿಂದ ಸಿಗುವ ಸುಖ ಸಾಲದೆ ಅಡಿಗೆಯವನ ಜೊತೆ ಇವಳ ಕಾಮಕೇಳಿ ನಡೆಯುತ್ತಿರುತ್ತದೆ. ಅದನ್ನು ನೋಡಿದ ಅವಳ ಮಾವ (ಕುಲಭೂಷಣ್ ಖರಬಂದಾ) ಸೊಸೆಯ ಮೇಲಿನ ಕೋಪಕ್ಕೆ ಅವಳನ್ನು ಬ್ಲ್ಯಾಕ್ಮೇಲ್ ಮಾಡಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಾನೆ. ಈ ವೆಬ್ ಸೀರೀಸ್ ಎರಡು ಭಾಗಗಳಲ್ಲಿ ಬಂದಿದೆ. ಎರಡರಲ್ಲಿಯೂ ಕಾಮ ಮತ್ತು ಕೊಲೆ ತುಂಬಾ ಸರಾಗ. ತರಕಾರಿ ಕೊಚ್ಚಿದ ಹಾಗೆ ಮನುಷ್ಯರನ್ನು ಕೊಚ್ಚುವುದು. ಹಸಿವಾದಾಗ ತೋಳದಂತೆ ಹೆಣ್ಣಿನ ಮೇಲೆ ಬೀಳುವುದು. ಹದಿಹರೆಯದವರು ಇಂಥ ಸೀರೀಸ್ ನೋಡಿದರೆ ಗತಿಯೇನು ಎಂದು ಭಯವಾಯಿತು. ಅವರ ಮಾನಸಿಕ ಸ್ಥಿತಿಯ ಬಗ್ಗೆ ಯೋಚಿಸಲೂ ಮನಸ್ಸು ಹಿಮ್ಮೆಟ್ಟುತ್ತದೆ. ಇಂಥದೇ ಸಾಲುಸಾಲು ವೆಬ್ ಸೀರೀಸ್ಗಳು ಇವೆ. ಅಮೇಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಹಾಟ್ ಸ್ಟಾರ್, ಜೀ5, ಸೋನಿಲಿವ್, ವೂಟ್ ಇನ್ನೂ ಬೇಕಾದಷ್ಟು. ತಿಂಗಳಿಗೆ ಅಥವಾ ವರ್ಷಕ್ಕೆ ಎಂದು ಇಂತಿಷ್ಟು ಕಟ್ಟಿ ಚಂದಾದಾರರಾದರೆ ಸಿನಿಮಾ ನಿಮ್ಮ ಮನೆಬಾಗಿಲಿಗೆ ಬರುತ್ತದೆ.
2018-19 ರ ನಂತರ ಕೋವಿಡ್ ಯುಗ ಶುರುವಾದ ಮೇಲೆ ಮನೆಯಿಂದ ಕೆಲಸ ಎನ್ನುವ ಕಾನ್ಸೆಪ್ಟ್ ಬಂದ ಮೇಲೆ ಈ ಸೀರೀಸ್ಗಳ ಸುಗ್ಗಿಯೇ ಆರಂಭವಾಗಿದೆ. ಸಾಲುಸಾಲು ಸೀರೀಸ್ಗಳು ಸಿನಿಮಾಗಳು ತಯಾರಾಗುತ್ತಿವೆ. ಶೇ. 99 ಇವುಗಳಲ್ಲಿ ಸೆಕ್ಸ್ ಮತ್ತು ಕ್ರೌರ್ಯ ಢಾಳಾಗಿ ತುಂಬಿದೆ. ಇವೆರಡೂ ಇಲ್ಲದೆ ಸೀರೀಸ್ ಇಲ್ಲ ಎಂಬಂತಾಗಿದೆ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಪಂಚಾಯತ್, ಬ್ಯಾಂಡಿಟ್ಸ್, ಬಂದಿಶ್, ದ ಫ್ಯಾಮಿಲಿಮ್ಯಾನ್, ಆರ್ಯ, ಸ್ಪೆಷಲ್ ಆಪ್ಸ್ , ಬ್ರೀತ್ ಮುಂತಾದ ಒಳ್ಳೆಯ ಅಭಿರುಚಿಯ ಸೀರೀಸ್ ಸಹಾ ಬಂದಿವೆ. ಯಶಸ್ವಿಯೂ ಆಗಿವೆ. ಆದರೂ ಲೈಂಗಿಕತೆ ತುಂಬಿರುವ ಸೀರೀಸ್ ಗಳ ನಡುವೆ ಇವು ಕಾಣುವುದು ಕಡಿಮೆ. ಜನರ ಅಭಿರುಚಿ ಮನೋಭಾವ ಹೀಗೆ ಬದಲಾಗಿ ಬಿಟ್ಟಿದೆಯೇ ಎಂದು ಅಚ್ಚರಿಯಾಗುತ್ತದೆ.
ನನಗೆ ಈಗಲೂ ಮೆಚ್ಚಿಗೆಯಾಗುವ ಚಿತ್ರ ದಿ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾಸಂಗಮ ಚಿತ್ರ. ಈ ಚಿತ್ರದಲ್ಲಿ ಆರತಿ ಕುರುಡಿಯಾಗಿ ಅಭಿನಯಿಸಿದ್ದಾರೆ. ಅವರು ಸ್ನಾನ ಮಾಡುವ ದೃಶ್ಯವೊಂದಿದೆ. ಆಗ ಅಲ್ಲಿ ಖಳನಟನಾಗಿ ಅಭಿನಯಿಸಿದ ರಜನಿಕಾಂತ್ ಸ್ನಾನದ ಮನೆಯಲ್ಲಿ ಮೊದಲೇ ಬಂದು ಕೂತಿರುತ್ತಾರೆ. ಆರತಿ ಸ್ನಾನ ಮಾಡುವ ದೃಶ್ಯ ಅದನ್ನು ರಜನಿಕಾಂತ್ ನೋಡಿ ಸಂಭ್ರಮಿಸುವ ದೃಶ್ಯ ಎಷ್ಟು ಚೆನ್ನಾಗಿ ಪುಟ್ಟಣ್ಣನವರು ಚಿತ್ರಿಸಿದ್ದಾರೆ ಎಂದರೆ ಅಲ್ಲಿ ಅಶ್ಲೀಲಕ್ಕೆ ಆಸ್ಪದವೇ ಇಲ್ಲ. ಬರೀ ನೆರಳು ಮತ್ತು ರಜನಿಕಾಂತನ ಕಣ್ಣುಗಳಲ್ಲಿ ಕಾಣುವ ಭಾವನೆಗಳಲ್ಲಿ ಇಡೀ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಇದು ನನ್ನ ಮಟ್ಟಿಗೆ ಅದ್ಭುತ ಎನಿಸಿತ್ತು. ಇನ್ನು ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ಜಯಂತಿ ಅನುಭವಿಸುವ ವಿರಹದ ಭಾವನೆಯಂತೂ ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅಶ್ಲೀಲತೆಯ ಲೇಪವೇ ಇಲ್ಲದೆ ಮನೋಜ್ಞವಾಗಿ ಚಿತ್ರೀಕರಿಸಿದ್ದಾರೆ. ಈಗಿನ ಸಿನಿಮಾ ಅಥವಾ ವೆಬ್ ಸೀರೀಸ್ನಲ್ಲಿ ಈ ನೆರಳು ಬೆಳಕಿನಾಟ, ಮುಚ್ಚುಮರೆ ಏನೂ ಇರುವುದಿಲ್ಲ. ಲೈಂಗಿಕ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ ನಟನಟಿಯರು ಅವರ ಖಾಸಗಿ ಜೀವನದಲ್ಲಿ ಹೇಗಿರುತ್ತಾರೋ ಎಂದು ನನಗೆ ಆಶ್ಚರ್ಯವಾಗುತ್ತದೆ.
ನಾಗೇಶ್ ಕುಕನೂರ್ ನಿದೇರ್ಶನದ 2014 ರಲ್ಲಿ ಬಿಡುಗಡೆಯಾದ ಲಕ್ಷ್ಮಿ ಚಿತ್ರ (ಹಿಂದಿ) ಲೈಂಗಿಕತೆಯ ಕ್ರೌರ್ಯದ ಪರಮಾವಧಿಯನ್ನು ಮುಟ್ಟಿದೆ. ಕೆಂಪುದೀಪದ ಪ್ರದೇಶದಲ್ಲಿ ನಡೆಯುವ ಕ್ರೌರ್ಯ ಅದರಲ್ಲಿ ನೋಡಿಯೇ ತಿಳಿಯಬೇಕು. ಅಬ್ಬಾ! ಎನಿಸುತ್ತದೆ. ಮೈ ಮರಗಟ್ಟಿ ಹೋಗುತ್ತದೆ. ಹಸಿಬಿಸಿ ದೃಶ್ಯಗಳಿದ್ದರೂ ಒಂದು ಮಿತಿಯಲ್ಲಿ ತೋರಿಸಿದ್ದಾರೆ. ಕುಕನೂರ್ ಆ ಮಟ್ಟಿಗೆ ಸೈ ಅನಿಸಿಕೊಂಡಿದ್ದಾರೆ. ಆದರೆ ಅವರದೇ ನಿರ್ದೇಶನದ ಸಿಟಿ ಆಫ್ ಡ್ರೀಮ್ಸ್ ವೆಬ್ ಸೀರೀಸ್ ನಲ್ಲಿ ಲೈಂಗಿಕತೆಯ ದೃಶ್ಯಗಳು ಪ್ರಚೋದನಕಾರಿಯಾಗಿದೆ.
ಯಾವುದು ಮುಚ್ಚಿಡಬೇಕೋ ಅದು ಜಗಜ್ಜಾಹಿರು ಮಾಡಿ ತೋರಿಸುತ್ತಾರೆ. 12-13 ವಯಸ್ಸಿಗೆ ಬಂದ ಕೂಡಲೇ ಮಕ್ಕಳಿಗೆ ಎಲ್ಲವೂ ಕುತೂಹಲ. ಅವರಿಗೆ ಈಗ ಕಾಯುವ ಮನಸ್ಸು ಇಲ್ಲ. ಎಲ್ಲವನ್ನೂ ದಕ್ಕಿಸಿಕೊಳ್ಳಬೇಕು, ಎಲ್ಲವನ್ನೂ ತಿಳಿದುಕೊಂಡು ಬಿಡಬೇಕು ಎಂಬ ಹಪಾಹಪಿ. ಅದಕ್ಕೆ ತಕ್ಕ ಹಾಗೆ ಈಗ ಲೈಂಗಿಕತೆ ತುಂಬಿರುವ ಚಿತ್ರಗಳೆ ಸಾಲುಸಾಲಾಗಿ ಬರುತ್ತಿವೆ. ಮುಂಚೆ ಪಾಶ್ಚಾತ್ಯ ಚಿತ್ರಗಳೆಂದರೆ ಅದರಲ್ಲಿ ಬರೀ ಲೈಂಗಿಕತೆ ಇರುತ್ತದೆ ಅವನ್ನು ನೋಡಬಾರದು ಎನ್ನುತ್ತಿದ್ದರು. ಆದರೆ ಈಗ ನಮ್ಮ ಭಾರತೀಯ ಸಿನಿಮಾಗಳು ಸಹ ಈ ನಿಟ್ಟಿನಲ್ಲಿ ಜೋರುಜೋರಾಗಿ ತಯಾರಾಗುತ್ತಿರುವುದು ವಿಪರ್ಯಾಸ.
ಡ್ರಗ್ಸ್, ಕ್ರೌರ್ಯ-ಕೊಲೆ, ಲೈಂಗಿಕತೆ ಇರದ ಸಿನಿಮಾಗಳು ಈಗ ಇಲ್ಲವೇ ಇಲ್ಲ. ಸಾವಿಲ್ಲದ ಮನೆಯ ಸಾಸಿವೆ ತಂದ ಹಾಗೆ. ಇವಕ್ಕೆ ನಮ್ಮ ಕಾನೂನಿನಲ್ಲಿ ಅಂಕುಶ ಹಾಕಬೇಕು. ಯುವಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಚಿತ್ರಗಳಿಗೆ ಒಂದು ಎಲ್ಲೆ ಹಾಕಿದರೆ ಒಳ್ಳೆಯದೇನೋ.
(ನಿಮ್ಮ ಅಭಿಪ್ರಾಯಕ್ಕಾಗಿ, ಪ್ರತಿಕ್ರಿಯಾತ್ಮಕ ಬರಹಕ್ಕಾಗಿ tv9kannadadigital@gmail.com)
ಇದನ್ನೂ ಓದಿ : Netflix Anthology : ‘ಅನ್ಕಹಿ ಕಹಾನಿಯಾ’ದಲ್ಲಿ ಜಯಂತ ಕಾಯ್ಕಿಣಿ ಅವರ ‘ಮಧ್ಯಂತರ’
Published On - 12:07 pm, Fri, 17 September 21