New Book : ಅಚ್ಚಿಗೂ ಮೊದಲು : ಕಡಿದಾಳು ಶಾಮಣ್ಣನವರ ‘ಕಾಡ ತೊರೆಯ ಜಾಡು’ ನಾಳೆಯಿಂದ ಲಭ್ಯ

|

Updated on: Aug 14, 2021 | 4:36 PM

Devanuru Mahadev : ‘ರಾತ್ರಿ ಶಾಮಣ್ಣನವರು ತಮ್ಮ ಚೀಲವನ್ನು ತಲೆಗಿಟ್ಟುಕೊಂಡು ಶ್ರೀ ಕೃಷ್ಣ ಪರಮಾತ್ಮನು ದನ ಕಾಯುತ್ತಾ ಒಂದು ಮಂಡಿ ಎತ್ತರಿಸಿ ಅದರ ಮೇಲೆ ಇನ್ನೊಂದು ಕಾಲಿಟ್ಟು ಮಲಗಿದ ಭಂಗಿಯಲ್ಲಿ ಇದ್ದಾರೆ. ಅವರ ಕಣ್ಣುಗಳು ಮುಚ್ಚಿವೆ, ಆದರೆ ಅವರಿಗೆ ನಿದ್ದೆ ಬಂದಿಲ್ಲ. ಅವರ ತಲೆ ಒಂದು ಕ್ಷಣವೂ ನಿಂತ ಕಡೆ ನಿಲ್ಲುತ್ತಿಲ್ಲ. ಎಡದಿಂದ ಬಲಕ್ಕೆ ಹೊರಳುತ್ತಿತ್ತು. ಬಲದಿಂದ ಎಡಕ್ಕೆ ಹೊರಳುತ್ತಿತ್ತು.’ ದೇವನೂರ ಮಹಾದೇವ

New Book : ಅಚ್ಚಿಗೂ ಮೊದಲು : ಕಡಿದಾಳು ಶಾಮಣ್ಣನವರ ‘ಕಾಡ ತೊರೆಯ ಜಾಡು’ ನಾಳೆಯಿಂದ ಲಭ್ಯ
ಲೇಖಕಿ, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ
Follow us on

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಕಾಡ ತೊರೆಯ ಜಾಡು (ಕಡಿದಾಳು ಶಾಮಣ್ಣ ಬದುಕು ಮತ್ತು ಹೋರಾಟಗಳ ಕತೆ)
ಸಂಗ್ರಹ ಮತ್ತು ಕೃತಿರೂಪ : ಅಕ್ಷತಾ ಹುಂಚದಕಟ್ಟೆ
ಪುಟ : 324
ಬೆಲೆ : ರೂ. 310
ಮುಖಪುಟ ವಿನ್ಯಾಸ : ಅಪಾರ
ಮುಖಪುಟ ಚಿತ್ರ : ಶಿವಮೊಗ್ಗ ಯೋಗರಾಜ್
ಪ್ರಕಾಶನ : ಅಹರ್ನಿಶಿ, ಶಿವಮೊಗ್ಗ

ಕಾಡ ತೊರೆಯ ಜಾಡು ಮೊದಲ ಪರಿಷ್ಕೃತ ವಿಸ್ತೃತ ಮುದ್ರಣವು ನಾಳೆಯಿಂದ ಓದುಗರಿಗೆ ಲಭ್ಯವಾಗಲಿದೆ. ನಾಲ್ಕು ವರುಷಗಳ ಕಾಲ ಸತತವಾಗಿ ಕಡಿದಾಳು ಶಾಮಣ್ಣನವರ ಬದುಕಿನ ಕಥನವನ್ನು ಅವರಿಂದಲೇ ಆಲಿಸಿ, ಗ್ರಹಿಸಿ, ಅವರ ಭಾಷೆಯಲ್ಲೇ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕಿ ಅಕ್ಷತಾ ಹುಂಚದಕಟ್ಟೆ.

*

ಒಂದು ದೃಶ್ಯ ಸದಾ ನೆನಪಾಗುತ್ತದೆ- ಶಾಮಣ್ಣನವರನ್ನು ರೈತ ಸಂಘದ ರಾಜ್ಯ ಸಮಿತಿಯಿಂದ ಹೊರಹಾಕಲಾಗಿತ್ತು. ಯಾವುದೋ ಒಂದು ಸಭೆ. ಅದು ನಡೆದ ಸ್ಥಳ, ಸಂದರ್ಭ ಮರೆತುಬಿಟ್ಟಿದ್ದೇನೆ. ರಾತ್ರಿ ಶಾಮಣ್ಣನವರು ತಮ್ಮ ಚೀಲವನ್ನು ತಲೆಗಿಟ್ಟುಕೊಂಡು ಶ್ರೀ ಕೃಷ್ಣ ಪರಮಾತ್ಮನು ದನ ಕಾಯುತ್ತಾ ಒಂದು ಮಂಡಿ ಎತ್ತರಿಸಿ ಅದರ ಮೇಲೆ ಇನ್ನೊಂದು ಕಾಲಿಟ್ಟು ಮಲಗಿದ ಭಂಗಿಯಲ್ಲಿ ಇದ್ದಾರೆ. ಅವರ ಕಣ್ಣುಗಳು ಮುಚ್ಚಿವೆ, ಆದರೆ ಅವರಿಗೆ ನಿದ್ದೆ ಬಂದಿಲ್ಲ. ಅವರ ತಲೆ ಒಂದು ಕ್ಷಣವೂ ನಿಂತ ಕಡೆ ನಿಲ್ಲುತ್ತಿಲ್ಲ. ಎಡದಿಂದ ಬಲಕ್ಕೆ ಹೊರಳುತ್ತಿತ್ತು. ಬಲದಿಂದ ಎಡಕ್ಕೆ ಹೊರಳುತ್ತಿತ್ತು. ನಾನು ಅದನ್ನು ನೋಡುವುದು, ನೋಡುವುದಕ್ಕೆ ಕಷ್ಟವಾಗಿಯೋ ಅಥವಾ ನಿದ್ದೆ ಎಳೆಯುತ್ತಿದ್ದರಿಂದಲೋ ಕಣ್ಣು ಮುಚ್ಚುತ್ತಿದ್ದೆ. ಕಣ್ಣು ಮುಚ್ಚಿದರೂ ಕಷ್ಟವಾಗಿ ಕಣ್ಣು ತೆರೆಯುತ್ತಿದ್ದೆ.
ದೇವನೂರ ಮಹಾದೇವ, ಹಿರಿಯ ಸಾಹಿತಿ

*

ರೈತರೇ ಈ ದೇಶವನ್ನು, ರಾಜ್ಯವನ್ನು ಕಾಪಾಡೋದು. ಯಾವ್ಯಾವಾಗ ರೈತ ಸಂಘಟನೆಗಳು ಸಂಘಟಿತವಾಗಿ ಹೋರಾಟ ಮಾಡಿದ್ದಾವೆಯೋ ಆಗೆಲ್ಲ ಪ್ರಭುತ್ವದ ಸರ್ವಾಧಿಕಾರಿ ಧೋರಣೆ , ದಮನಕಾರಿ ಪ್ರವೃತ್ತಿಗಳಿಗೆ ಪೆಟ್ಟು ಬಿದ್ದಿದೆ. ಆದರೆ ರೈತ ಸಂಘಟನೆಯೊಳಗೆ ಶುರು ಆಗತ್ತಲ್ಲ ಒಳ ಜಗಳಗಳು, ಜಾತಿವಾದಿ ಧೋರಣೆಗಳು, ಗುಂಪುಗಾರಿಕೆ, ಯರ‍್ಯಾರದೋ ಮಾತುಗಳನ್ನು ಕೇಳ್ಕಂಡು ಮನಸೋ ಇಚ್ಛೆ ವರ್ತಿಸೋದು, ತನ್ನದೇ ನಡೆಯಬೇಕೆನ್ನುವ ಸ್ವಪ್ರತಿಷ್ಠೆ, ರೈತ ಮಹಿಳೆಯರನ್ನು, ಕೃಷಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡೋದು ಇವೆಲ್ಲ ತಪ್ಪಬೇಕು. ಇಂಥವುಗಳಿಂದಲೇ ರೈತ ಸಂಘಟನೆಗಳು ದುರ್ಬಲ ಆಗಿದ್ದು; ಸಂಘಟನೆ ಶಕ್ತವಾಗಿದ್ದ ಕಾಲದಲ್ಲಿ ಎಂತೆಂಥ  ಹೋರಾಟ ಮಾಡಿದ್ವಿ, ಸಂಘಟನೆ ದುರ್ಬಲ ಆಗ್ತಿದ್ದ ಹಾಗೆ ಎಂತಹ ರೈತ ವಿರೋಧಿ ನಿಲುವುಗಳನ್ನು ಜಾರಿಗೆ ತಂದರೂ ವಿರೋಧಿಸುವುದಕ್ಕೂ ಅಶಕ್ತರಾದ್ವಿ. ರೈತ ಸಂಘಟನೆಯ ಕೂಗು ದೇಶದಾದ್ಯಂತ ಈಗ ಕೇಳ್ತಿದೆಯಲ್ಲ ಅದು ಹೊಸದಲ್ಲ. ಅದು ಇತ್ತು. ಈ ಹೊತ್ತು ಎಲ್ಲರೂ ಒಗ್ಗಟ್ಟಾಗಿದ್ದಾರೆ. ಒಗ್ಗಟ್ಟು ಅನ್ನೋದು ಇಲ್ಲದಿದ್ದರೆ ಯಾವ ಸಂಘಟನೆಯು ಉಳಿಯಲ್ಲ. ರೈತರು ಒಗ್ಗಟ್ಟಾದರೆ ರೈತರು ಉಳಿತಾರೆ, ದೇಶನೂ ಉಳಿಯತ್ತೆ.
ಕಡಿದಾಳು ಶಾಮಣ್ಣ, ಹಿರಿಯ ರೈತ ಹೋರಾಟಗಾರ

*
ಮನಕೆ ಸಾಂತ್ವನ ನೀಡಿದ ಸಂಗೀತ

ಆಗ ಮೈಸೂರಿನಲ್ಲಿ ನಡೆಯುತ್ತಿದ್ದ ಒಂದೊಂದು ಸಂಗೀತ ಕಛೇರಿಯು ನನ್ನ ಪಾಲಿಗೆ ಹಲವು ನೆನಪುಗಳ ಆಗರ. ಒಂದೊಂದರ ಜೊತೆಗೂ ಹತ್ತು ಹಲವು ನೆನಪುಗಳು ಹೆಣೆದುಕೊಂಡಿವೆ ಅದನ್ನ ಬಿಚ್ಚತಾ ಕೂತ್ಕಂಬಿಟ್ರೆ ಮುಗಿತಾಯ ಅನ್ನೋದೆ ಇಲ್ಲ… ಒಮ್ಮೆ ಕ್ರಾಫರ್ಡ್ ಹಾಲ್‌ನಲ್ಲಿ ಅಲಿ ಅಕ್ಬರ್ ಹಾಗೂ ರವಿಶಂಕರ್ ಅವರ ಸರೋದ್ ಮತ್ತು ಸಿತಾರ್ ಜುಗಲ್​ಬಂದಿ ಕಛೇರಿ ಏರ್ಪಟ್ಟಿತ್ತು. ಯಥಾಪ್ರಕಾರ ಟಿಕೇಟನ್ನೆಲ್ಲ ನಾವೇ ಮಾರಿ ಹಣ ಸಂಗ್ರಹಿಸಿಕೊಟ್ಟಿದ್ವಿ. ನನಗೆ ಲೋಕಪ್ರಸಿದ್ಧ ಜೋಡಿಯಾದ ರವಿಶಂಕರ್ ಅಲಿ ಅಕ್ಬರ್‌ರ ಜುಗಲ್​ಬಂದಿ ಕಛೇರಿಗೆ ಪರಮೇಶ್ವರ ಭಟ್ರನ್ನ ಕರ‍್ಕಂಬಂದು ಕೇಳಿಸಬೇಕು ಅಂತ ಆಸೆ. ಅವರನ್ನ ಆಹ್ವಾನಿಸಲಿಕ್ಕೆ ಅವರ ಮನೆಗೆ ಹೋದೆ.
ನಾನು ಭಟ್ರಲ್ಲಿ ‘ಹೀಗೊಂದು ಸಂಗೀತ ಕಾರ್ಯಕ್ರಮ ಇದೆ. ಬನ್ನಿ’ ಅಂತ ಹೇಳ್ತಿದ್ದಂತೆ ಅವರ ಹೆಂಡತಿ ಬಂದ್ಬಿಟ್ಟು ‘ಸಂಗೀತ ಕಛೇರಿ ಯಾರದ್ದು? ಎಲ್ಲಿ ನಡೀತಿದೆ? ನನಗೂ ಸಂಗೀತ ಕೇಳಬೇಕು, ನನ್ನನ್ನೂ ಕರ‍್ಕಂಡ್ಹೋಗಿ’ ಅಂದ್ರು. ನನಗೆ ಕೂಡಲೇ ಬೇರೇನೂ ಹೇಳಕ್ಕೆ ತೋಚದೆ ‘ಆಯ್ತಮ್ಮ. ಸಂಜೆ ಟಾಂಗಾ ತಗಂಬರ‍್ತೀನಿ. ಇಬ್ರೂ ಹೊರಟಿರಿ ಅಂದೆ. ಭಟ್ರು, ‘ನಾನು ಬರಲ್ಲಯ್ಯ. ನಾನು ಏನಿದ್ರೂ ದಕ್ಷಿಣಾದಿ ಕೇಳದು, ನಿನಗೆ ಸಾಧ್ಯವಾದರೆ ಅವಳನ್ನ ಕರ‍್ಕಂಡ್ಹೋಗು. ಅವಳಿಗೆ ಸಂಗೀತದ ಬಗ್ಗೆ ಒಂದು ಮೋಹ ಇದೆ. ಕೂತು ಕೇಳ್ತಾಳೆ. ಆದರೆ ಕಛೇರಿ ಇನ್ನೇನು ಪ್ರಾರಂಭ ಆಗತ್ತೆ ಅನ್ನೋ ಹೊತ್ತಿಗೆ ಕರ‍್ಕಂಡ್ಹೋಗಿ ಮುಗಿದ ಕೂಡಲೇ ಅರೆಕ್ಷಣವೂ ತಡ ಮಾಡದೇ ಮನೆಗೆ ಕರ‍್ಕಂಬಂದು ಬಿಡೋ ವ್ಯವಸ್ಥೆ ಮಾಡ್ಬೇಕಾಗತ್ತೆ.’ ಅನ್ನೋ ಎಚ್ಚರಿಕೆಯ ಮಾತನ್ನು ಆಡಿದ್ರು. ನಾನು ಹೊರಟು ಬರಬೇಕಿದ್ರೆ ಮತ್ತೆ ಭಟ್ರ ಹೆಂಡ್ತಿ ಬಾಗಿಲ ಹತ್ರ ಬಂದು ‘ಸಂಜೆ ಕಾಯ್ತಿರತೀನಿ ಮರೀಬೇಡ. ಸಿದ್ಧವಾಗಿ ಕೂತಿರತೇನೆ. ಟಾಂಗಾ ತಗಂಡು ಬರ‍್ತೀಯಲ್ಲ?’ ಅಂತ ಮತ್ತೊಮ್ಮೆ ಖಾತ್ರಿ ಪಡಿಸಿಕೊಂಡು ಒಳಗೆ ಹೋದ್ರು.

ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಮತ್ತು ಖ್ಯಾತ ಸರೋದ್ ವಾದಕ ಉಸ್ತಾದ್ ಅಲಿ ಅಕ್ಬರ್ ಖಾನ್. ಸೌಜನ್ಯ : ಅಂತರ್ಜಾಲ

ನಾನು ಹೋಗಿದ್ದು ಭಟ್ರನ್ನ ಆಹ್ವಾನಿಸಲಿಕ್ಕೆ. ಆದರೆ ಬರೋಕೆ ಹೊರಟಿದ್ದು ಅವರ ಹೆಂಡ್ತಿ. ಎಲ್ಲ ಸರಿ ಇದ್ದಿದ್ರೆ ನನಗೆ ಏನು ಅನ್ನಿಸ್ತಿರಲಿಲ್ಲ. ಆದರೆ ಮಾನಸಿಕವಾಗಿ ಸೂಕ್ಷ್ಮ ಸ್ಥಿತಿಯಲ್ಲಿಯಲ್ಲಿರುವ ಅವರನ್ನು ಕರ‍್ಕಂಡ್ಹೋಗೋದು ಹೇಗೆ ಅನ್ನೋ ಅಳುಕು, ಆತಂಕ ಶುರುವಾಯ್ತು. ಅದು ಜಗದ್ವಿಖ್ಯಾತರ ಕಛೇರಿ ಸಾಮಾನ್ಯರದ್ದು ಅಲ್ಲ, ಜೊತೆಗೆ ಟಿಕೇಟ್ ಮಾರಿ ನಾವೇ ಸಂಘಟಿಸಿದ್ದು. ಮನೆಯಲ್ಲೆ ಸಣ್ಣ ಪುಟ್ಟದಕ್ಕೆ ಸಿಟ್ಕಂಡು ತೊಂಡೆ ಚಪ್ಪರದಡಿ ಹೋಗಿ ಕೂತು ರಂಪ ಮಾಡುವ ಅವರು ಸಂಗೀತ ಕಛೇರಿಯಲ್ಲಿ ಇನ್ನು ಹ್ಯಾಗೆ ನಡ್ಕಬಹುದು? ಅನ್ನುವ ಅನುಮಾನ ಶುರುವಾಗಿ, ತುಂಬಾ ಜನ ಸಂಗೀತ ಪ್ರೇಮಿಗಳು ಸೇರಿರ‍್ತಾರೆ ಅವರೆದುರಿಗೆ ಅಭಾಸಕ್ಕೀಡಾಗುವ ಪ್ರಸಂಗ ನಡೆದು ಬಿಟ್ಟರೆ ಅಂತ ಹೆದರಿಕೆ ಆಗೋಕೆ ಶುರುವಾಯ್ತು. ಆದರೆ ಭಟ್ಟರ ಹೆಂಡತಿಗೆ ಬಂದು ಕರ‍್ಕಂಡು ಹೋಗ್ತೀನಿ ಅಂತ ಮಾತು ಕೊಟ್ಟುಬಿಟ್ಟಿದ್ದೆ ಅದರಿಂದ ತಪ್ಪಿಸಿಕೊಳ್ಳೋಕು ಮನಸು ಬರಲಿಲ್ಲ. ಏನಾದ್ರೂ ಅಭಾಸ ನಡೆದರೆ ಅದು ನಡೆದ ಕಾಲಕ್ಕೆ ನೋಡ್ಕಳ್ಳಾಣ ಈಗ ಕೊಟ್ಟ ಮಾತಿನಂತೆ ಆ ತಾಯಿಯನ್ನು ಕಛೇರಿಗೆ ಕರ‍್ಕಂಬರಾಣ ಅಂತ ನಿರ್ಧರಿಸಿದೆ.

ಆ ಸಂಜೆ ಇನ್ನೇನು ಕಛೇರಿ ಶುರುವಾಯ್ತು ಅನ್ನೋವಾಗ ಟಾಂಗಾ ತಗಂಡು ಹೋಗಿ ಭಟ್ರ ಹೆಂಡತಿಯನ್ನ ಕರ‍್ಕಂಡು ಬಂದವನೇ ಸಭಾಂಗಣದ ಒಂದು ಮೂಲೆಯಲ್ಲಿ ಕೂರಿಸಿ ನಾನು ಒಂದ್ಕಡೆ ಜಾಗ ಮಾಡ್ಕಂಡು ಕೂತ್ಕಂಡೆ. ಆವತ್ತಿನ ಕಛೇರಿಗೆ ಪ್ರೇಕ್ಷಕರ ಸಭಾಂಗಣ ಭರ್ತಿ ಆಗಿತ್ತು. ಆದರೆ ಜನಜಂಗುಳಿ ಇದ್ದಾಗಿನ ಅಶಿಸ್ತು ಅಲ್ಲಿರದೇ ಒಂದು ಸೂಜಿ ಬಿದ್ದರೂ ಕೇಳಬೇಕು ಆ ರೀತಿ ಮೌನ ತಾಲಿನ್ಯ. ಅಲಿಅಕ್ಬರ್, ರವಿಶಂಕರರ ಜುಗಲ್​ಬಂದಿ ಪ್ರಾರಂಭ ಆಯ್ತು. ಇಡೀ ಪ್ರೇಕ್ಷಕ ಗಣ ಸರೋದ್ ಸಿತಾರಿನ ನಾದವನ್ನು ಕಿವಿಯಲ್ಲಿ ತುಂಬಿಕೊಳ್ತಾ ಮಂತ್ರಮುಗ್ದ ಸ್ಥಿತಿಯಲ್ಲಿದೆ. ಅರ್ಧಗಂಟೆ ಒಂದುಗಂಟೆ ಹೀಗೆ ಹೊತ್ತಿನ ಪರಿವೆಯೇ ಗೊತ್ತಾಗದಂತಹ ಸೊಗಸಾದ ಸಂಗೀತ… ಒಮ್ಮೆಲೆ ಬೆಚ್ಚಿ ಏನೋ ನೆನಪಾದವರಂತೆ ಭಟ್ರ ಮನೆಯವರ ಕಡೆ ನೋಡಿದರೆ ಅವರು ಉಳಿದ ಪ್ರೇಕ್ಷಕರಂತೆ ಸಂಗೀತವನ್ನು ಸಂತೋಷದಿಂದ ರಸಸ್ವಾದನೆ ಮಾಡ್ತಾ ಇದ್ದಾರೆ. ನನಗೆ ಅರೆಕ್ಷಣ ನಂಬ್ಲಿಕ್ಕೆ ಆಗ್ಲಿಲ್ಲ. ಅವರಿಗೂ ಉಳಿದ ಸಂಗೀತಾಸಕ್ತರಂತೆ ಸೂಕ್ಷ್ಮವಾಗಿ ಸಂಗೀತವನ್ನ ಆಲಿಸ್ತಾ ತನ್ಮಯತೆ ಸಾಧಿಸ್ಲಿಕ್ಕೆ ಸಾಧ್ಯವಾಗಿದೆ. ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಂತೈಸುವ ಸಂಗೀತದ ಶಕ್ತಿಗೆ ನಾನು ಬೆರಗಾಗಿದ್ದೆ.

ನಂತರದಲ್ಲಿ ಮೈಸೂರಿನಲ್ಲಿ ಯಾವುದೇ ಸಂಗೀತ ಕಛೇರಿ ನಡೆದ್ರೂ ಭಟ್ರ ಹೆಂಡ್ತಿಯನ್ನು ನಾನೇ ಹೋಗಿ ಟಾಂಗಾ ಮಾಡಿಸ್ಕಂಡು ಕರೆದುಕೊಂಡು ಹೋಗ್ತಿದ್ದೆ. ಇದನ್ನು ನೋಡಿದ ಕೆಲವು ಉಪನ್ಯಾಸಕರು ‘ಓಹೋ ಗುರುಸೇವೆ ಮಾಡ್ತಾ ಇದೀಯ? ಮಾಡು ಮಾಡು’ ಅನ್ನೋರು, ಮತ್ತೆ ಕೆಲವರು ‘ಭಟ್ಟರು, ಪಾಪದ ಹುಡುಗ ಸಿಕ್ಕ ಅಂತ್ಹೇಳಿ ಅವನ ಹತ್ರ ತಮ್ಮ ಹೆಂಡತಿಯ ಸೇವೆ ಮಾಡಿಸ್ಕಳ್ತಿದಾರೆ’ ಅಂತ ನನ್ನ ಬಗ್ಗೆ ಅನುಕಂಪ ತೋರಿಸೋರು. ನನಗೆ ಇಂತ ಮಾತುಗಳೆಲ್ಲ ಮುಖ್ಯ ಆಗ್ತಿರಲಿಲ್ಲ. ಭಟ್ರ ಮನೆಯವರನ್ನು ಸಂಗೀತಕ್ಕೆ ಕರ‍್ಕಂಡ್ಹೋದಾಗ ನನಗ್ಯಾವತ್ತೂ ಅವಮಾನ, ತೊಂದರೆ ಆಗ್ಲಿಲ್ಲ. ನನ್ನ ತಾಯಿ ಸಮಾನರಾದ ಅವರ ಮನಸಿಗೆ ಸಂಗೀತದಿಂದ ಒಂದಿಷ್ಟು ನೆಮ್ಮದಿ ಸಿಕ್ತಿತ್ತಲ್ಲ ಅದೆ ಸಮಾಧಾನ ನನಗೆ.

ಸಂಗೀತದ ರಿಯಾಝಿನಲ್ಲಿ ಶಾಮಣ್ಣ ಮತ್ತು ಅವರೊಂದಿಗೆ ಲೇಖಕಿ ಅಕ್ಷತಾ

ಮುಂದೆ ಉಲೂಪಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ನಾನು ಶ್ರೀ ಅವಳನ್ನ ನೋಡ್ಕಂಡು ಬರೋಕೆ ಆಗಾಗ ಹೋಗ್ತಿದ್ವಿ. ಹಾಗೊಮ್ಮೆ ಹೋದಾಗ ಲೇಖಕಿ ವೈದೇಹಿ ಸಿಕ್ಕಿದವರು ‘ಪರಮೇಶ್ವರ ಭಟ್ಟರು ಈಗ ಇಲ್ಲೇ ಉಡುಪಿಯ ಅಂಬಲಪಾಡಿಯಲ್ಲಿ ಅವರ ಮಗನ ಮನೆಯಲ್ಲಿದ್ದಾರೆ ಅವರ ಆರೋಗ್ಯ ಅಷ್ಟು ಸರಿಯಾಗಿಲ್ಲ’ ಅಂದ್ರು. ಕೂಡಲೇ ನಾವಿಬ್ರು ಮತ್ತೊಂದು ಯೋಚನೆ ಮಾಡ್ದೆ ಅವರನ್ನ ನೋಡೋಕೆ ಹೋದ್ವಿ. ಭಟ್ರು ವಯಸ್ಸಿನ ಕಾರಣದಿಂದ ಅನಾರೋಗ್ಯದಿಂದಿದ್ದರೂ ನಮ್ಮ ಗುರುತು ಹಿಡಿದು ಮಾತಾಡಿಸಿದ್ರು. ತಮ್ಮ ಸೊಸೆಗೆ ನಮ್ಮ ಪರಿಚಯ ಮಾಡ್ಕೊಟ್ರು. ಅವರ ಹೆಂಡತಿ ಅಷ್ಟೊತ್ತಿಗಾಗಲೇ ತೀರಿ ಹೋಗಿ ಬಹಳಷ್ಟು ಕಾಲವಾಗಿತ್ತು. ದುರ್ಬಲವಾಗಿದ್ದ ಅವರ ಕೈ ಕಾಫಿ ಕಪ್ ಹಿಡಿಯೋಕು ನಡಗ್ತಿತ್ತು. ನಡುಗುವ ಕೈನಲ್ಲಿ ಲೋಟ ಹಿಡಿದು ಕಾಫಿ ಕುಡೀತಾ ಕೂತಿದ್ದ ಭಟ್ರನ್ನ ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು ತಂದಿದ್ದೆ. ಅದೇ ಭಟ್ರೊಂದಿಗಿನ ನನ್ನ ಕೊನೆಯ ಭೇಟಿ. ಅದಾಗಿ ಕೆಲವೇ ದಿನದಲ್ಲಿ ಭಟ್ರು ತೀರ‍್ಕಂಡ್ರು. ನಂತರದ ದಿನದಲ್ಲಿ ಹಲವಾರು ಕಡೆ ನನ್ನ ಛಾಯಾಚಿತ್ರ ಪ್ರದರ್ಶನ ನಡೆದಾಗ್ಲೆಲ್ಲ ಭಟ್ರು ನಡಗುವ ಕೈಗಳಲ್ಲಿ ಕಾಫಿ ಕುಡೀತಾ ಕೂತಿದ್ದ ಚಿತ್ರವನ್ನ ಇಡ್ತಿದ್ದೆ. ಆಗೆಲ್ಲ ಭಟ್ರ ಯಾರಾದರೂ ಶಿಷ್ಯರು ಸಿಕ್ಕು ಅವರನ್ನ ನೆನಪಿಸಿಕೊಂಡು ಹೋಗೋದು ಸಾಮಾನ್ಯವಾಗಿತ್ತು.

(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 9449174662)

*

ಪರಿಚಯ : ಕವಿ, ಲೇಖಕಿ ಅಕ್ಷತಾ ಹುಂಚದಕಟ್ಟೆ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ, ನೀರ ಮೇಲಣ ಚಿತ್ರ ಕವನ ಸಂಕಲನ. ‘ಮತ್ತೆ ಮತ್ತೆ ಬೇಂದ್ರೆ’ (ಬೇಂದ್ರೆ ಕಾವ್ಯದ ಬಗ್ಗೆ ಕೀರಂ ಅವರ ಉಪನ್ಯಾಸಗಳ ಸಂಗ್ರಹ ರೂಪ). ಸದ್ಯ ಅಹರ್ನಿಶಿ ಪ್ರಕಾಶನವನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಾಕಷ್ಟು ಅಪರೂಪದ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ.

ಇದನ್ನೂ ಓದಿ : New Novel : ಅಚ್ಚಿಗೂ ಮೊದಲು : ವಾರದೊಪ್ಪತ್ತಿನಲ್ಲಿ ಓದುಗರ ಕೈಗೆ ವಿವೇಕ ಶಾನಭಾಗರ ‘ಸಕೀನಾಳ ಮುತ್ತು’

Published On - 4:21 pm, Sat, 14 August 21