New Novel : ಅಚ್ಚಿಗೂ ಮೊದಲು ; ಮಲ್ಲಿಕಾರ್ಜುನ ಹಿರೇಮಠರ ಹೊಸ ಕಾದಂಬರಿ ‘ಹಾವಳಿ’

|

Updated on: Aug 26, 2021 | 4:46 PM

Kannada Literature : ‘ನಾನು ಅವರ ಹಾಂಗ ಕಾಲೇಜು ಕಲಿತವನಲ್ಲ. ನಾನೊಬ್ಬ ಸಾಮಾನ್ಯ ದರ್ಜಿ. ಏನೋ ನನ್ನ ಕೆಲಸಾ ನೋಡಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ನನಗ ಈ ಜವಾಬ್ದಾರಿ ವಹಿಸಿದರು. ನಿಜಾಮ ಸರಕಾರ ನಾನು ಸತ್ಯಾಗ್ರಹದಲ್ಲಿ ತೊಡಗಿದಾಗ ದೇಶದ್ರೋಹದ ಆರೋಪ ಹೊರಿಸಿ ವಾರಂಟ್ ಹೊಂಡಿಸಿದ್ದರಿಂದ ಭೂಗತ ಕಾರ್ಯಾಚರಣೆಯಲ್ಲಿ ತೊಡಗಿದೆ.’

New Novel : ಅಚ್ಚಿಗೂ ಮೊದಲು ; ಮಲ್ಲಿಕಾರ್ಜುನ ಹಿರೇಮಠರ ಹೊಸ ಕಾದಂಬರಿ ‘ಹಾವಳಿ’
ಲೇಖಕ ಮಲ್ಲಿಕಾರ್ಜುನ ಹಿರೇಮಠ
Follow us on

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಹಾವಳಿ (ಕಾದಂಬರಿ)
ಲೇಖಕರು : ಮಲ್ಲಿಕಾರ್ಜುನ ಹಿರೇಮಠ
ಪುಟ : 406
ಬೆಲೆ : ರೂ. 400
ಮುಖಪುಟ ವಿನ್ಯಾಸ : ಸೌಮ್ಯ ಕಲ್ಯಾಣಕರ್
ಪ್ರಕಾಶನ : ಮನೋಹರ ಗ್ರಂಥಮಾಲಾ, ಧಾರವಾಡ

ಸ್ವಾತಂತ್ರ್ಯ ಚಳುವಳಿಯನ್ನು ಕುರಿತು ಕನ್ನಡದಲ್ಲಿ ಹಲವಾರು ಕತೆ-ಕಾದಂಬರಿಗಳು ಪ್ರಕಟವಾಗಿವೆ. ಈ ಪರಂಪರೆಯಲ್ಲೂ ಹಿರೇಮಠರ ‘ಹಾವಳಿ’ ಗೆ ಒಂದು ವಿಶಿಷ್ಟ ಸ್ಥಾನವಿದೆ. ಹಿಂಸೆಯ ಅನ್ಯ ಮೂಲವನ್ನು ಹುಡುಕುವುದು ಸುಲಭ. ನಮ್ಮೊಳಗೇ ಇರುವ ಹಿಂಸೆಯ ಸಾಧ್ಯತೆಗಳನ್ನು ಅರಿತಾಗ, ಅದನ್ನು ಎದುರಿಸಿ ಅದರಿಂದ ವಿಮೋಚನೆ ಪಡೆದಾಗ ಮಾತ್ರ ನಿಜವಾದ ಸ್ವಾತಂತ್ರ್ಯವನ್ನು ಪಡೆಯಬಹುದು ಎಂದು ಹಿರೇಮಠರ ಕಾದಂಬರಿ ಸೂಚಿಸುತ್ತಿದೆ. ಒಬ್ಬ ವ್ಯಕ್ತಿಯ ಅಥವಾ ಗುಂಪಿನ ವಿಕೃತಿಗಳಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದೂ ಹಿಂಸೆಯ ಮತ್ತೊಂದು ಕರಾಳ ರೂಪವೇ. ಕೋಮುವಾದೀ ಕಥನಗಳು ಮಾಡುವುದೇ ಅದನ್ನು. ಇಂಥ ಅಪಾಯದಿಂದ ತಪ್ಪಿಸಿಕೊಂಡಿರುವುದು ಹಿರೇಮಠರ ಕಾದಂಬರಿಯ ಹೆಗ್ಗಳಿಕೆಯಾಗಿದೆ. ಹಾಗೆಂದು ಎಲ್ಲವನ್ನೂ ಸಪಾಟಾಗಿ ಸಮನ್ವಯಗೊಳಿಸುವ, ಸಮತೋಲನಗೊಳಿಸುವ ಸರಳ-ಸುಲಭ ‘ರಾಜಕೀಯವಾಗಿ ಸರಿ’ ಯಾದ ಮಾರ್ಗವನ್ನೂ ಅವರು ತುಳಿದಿಲ್ಲ. ಈ ಎಲ್ಲ ಕಾರಣಗಳಿಂದ ‘ಹಾವಳಿ’ ಗೆ ಕನ್ನಡ ಕಾದಂಬರಿ ಪರಂಪರೆಯಲ್ಲಿ ಒಂದು ಮಹತ್ವದ ಸ್ಥಾನ ಖಂಡಿತಾ ಇದೆ.
ಟಿ.ಪಿ.ಅಶೋಕ, ಹಿರಿಯ ವಿಮರ್ಶಕರು

ಇತಿಹಾಸಕ್ಕಾಗಿಯೇ ಕಾದಂಬರಿಯನ್ನು ಓದಬೇಕಿಲ್ಲ. ಸಾಹಿತ್ಯ ಇತಿಹಾಸಕ್ಕಿಂತ ಮುಂದೆ ಸಾಗುವಂಥದ್ದು. ಈಚೆಗೆ ನಾನು ಒಂದೆಡೆಗೆ ಓದಿದ ಬ್ರಾಡ್‍ಸ್ಕಿಯ ಮಾತು ನೆನಪಿಗೆ ಬರುತ್ತವೆ: ‘ಸಾಹಿತ್ಯವನ್ನು ನಮ್ಮ ಇತಿಹಾಸವೆಂದು ಕರೆಯಲಾಗದು. ಸಾಹಿತ್ಯವು ಇತಿಹಾಸಕ್ಕೆ ಸಮಾಂತರವಾಗಿ ಅಥವಾ ಒಂದು ತೂಕ ಮುಂದೆಯೇ ಹೋಗುವಂಥದು. ಇದಕ್ಕೇ ಸಾಹಿತ್ಯ ಆಗಿಂದಾಗ್ಗೆ ನಮ್ಮ ಬೆಳವಣಿಗೆಗಿಂತಲೂ ಮುಂದೆ ಹೋಗುವಂತೆ ಕಾಣಿಸುವದು. ನಮ್ಮ ತಾತ್ವಿಕ ನೆಲೆಗಟ್ಟನ್ನು ಕೊನೆಗೂ ನಾವು ಕಂಡುಕೊಳ್ಳಬೇಕಾದ್ದು ಸಾಹಿತ್ಯದಲ್ಲೇ. ಯಾವ ರಾಜಕೀಯ ಸಿದ್ಧಾಂತಕ್ಕಿಂತಲೂ ಈ ವಿಷಯದಲ್ಲಿ ಹೆಚ್ಚು ವಿಶ್ವಾಸಾರ್ಹವಾದುದು.’
ಮಲ್ಲಿಕಾರ್ಜುನ ಹಿರೇಮಠ, ಹಿರಿಯ ಲೇಖಕರು

*

ಶಂಕರ ಒಂದು ದಿನ ಇದ್ದಕ್ಕಿದ್ದಂತೆ ಗಜೇಂದ್ರಗಡಕ್ಕೆ ಹೊರಟು ಬಂದ. ಗಜೇಂದ್ರಗಡ ಶಿಬಿರ ಸೇರಿದ್ದ ಕಳಕಪ್ಪ ಕಪ್ಪತ್ತು ಗುಡ್ಡದಲ್ಲಿ ತರಬೇತಿ ನಡೆದಿರುವಾಗ ತಮ್ಮಲ್ಲಿಗೆ ತರಬೇತುದಾರರನ್ನ ಕರೆದುಕೊಂಡು ಹೋಗಲು ಬಂದಾಗ ತಮ್ಮ ಗಡಾದ ಗುಡ್ಡ, ಕಾಲಕಾಲೇಶ್ವರ ದೇವಾಲಯ ಬಗ್ಗೆ ಹೇಳುತ್ತಾ ತಮ್ಮ ಶಿಬಿರಾಧಿಪತಿ ಪುಂಡಲೀಕಪ್ಪ ಜ್ಞಾನಮೋಠೆ ಅವರ ಬಗ್ಗೆ ಮತ್ತು ಅವರ ಗುರು ಹಾಗೂ ಮಾರ್ಗದರ್ಶಿ ಭೀಮಜ್ಜ ಮುರಡಿ ಅವರ ಬಗ್ಗೆ ಬಹಳ ಅಭಿಮಾನದಿಂದ ಮಾತಾಡಿ ಬಿಡುವು ಮಾಡಿಕೊಂಡು ಬರಲು ಹೇಳಿದ್ದ. ಆಗ ಈ ಎಲ್ಲಾ ಗದ್ದಲ ಮುಗಿದ ಮ್ಯಾಲೆ ಶೇಖರನ ಜತಿಲೆ ಅವಶ್ಯ ಬರ್ತೀನಿ ಅಂತ ಹೇಳಿದ್ದನ್ನ ನೆನಪಿಸಿಕೊಂಡು ಈಗ ಒಂಟಿಯಾಗಿ ಅಲ್ಲಿಗೆ ಹೊರಟು ಬಂದಿದ್ದ. ಭೀಮಜ್ಜ ಒಂದು ಆಶ್ರಮ ನಡೆಸುತ್ತಿರುವುದಾಗಿಯೂ ಕೇಳಿದ್ದ. ಇದೀಗ ಅವರನ್ನ ಭೇಟಿಯಾಗಿ ಅವರ ಸಲಹೆ ಮಾರ್ಗದರ್ಶನ ಪಡೀಬೇಕು. ಕಾಲಕಾಲೇಶ್ವರನ ದರ್ಶನ ಪಡೆದು ಅಲ್ಲೊಂದಿಷ್ಟು ಧ್ಯಾನ ಮಾಡಿ ತನ್ನ ಜಂಜಡ ಗೊಂದಲಗಳನ್ನ ದೂರೀಕರಿಸಿಕೊಳ್ಳಬೇಕೆಂದು ಮನಶ್ಯಾಂತಿಯನ್ನರಸಿ ಬಂದುಬಿಟ್ಟಿದ್ದ.

ಹೇಳದೇ ಕೇಳದೇ ಒಮ್ಮಲೆ ಹಳೆಯ ಗೆಳೆಯ ತನ್ನನ್ನು ಹುಡುಕಿಕೊಂಡು ಬಂದಿದ್ದಕ್ಕೆ ಕಳಕಪ್ಪನಿಗೆ ಆಶ್ಚರ್ಯ ಮತ್ತು ಸಂತೋಷ ಆಯಿತು. ಗಜೇಂದ್ರಗಡದ ಕಾರ್ಯಾಲಯಕ್ಕೆ ಕಳಕಪ್ಪ ಗೆಳೆಯನನ್ನ ಕರೆದುಕೊಂಡು ಹೋಗಿ ಶಿಬಿರಾಧಿಪತಿ ಜ್ಞಾನಮೋಠೆ ಅವರನ್ನು ಭೇಟಿ ಮಾಡಿಸಿದ. ಈಗಾಗಲೇ ಕಳಕಪ್ಪ ಅವರ ಸರಳತೆ, ಸಜ್ಜನಿಕೆ ಬಗ್ಗೆ ಹೇಳಿದ್ದ. ಹೋಗುವ ಮುಂಚೆ ಅವರ ಬಗ್ಗೆ ಇನ್ನಷ್ಟು ಹೇಳಿದ… ಬಡತನ ಅಂದ್ರೇನು ಅಂತ ತಮ್ಮ ತಾರುಣ್ಯದಲ್ಲೇ ತಿಳಿದಿದ್ದ ಪುಂಡಲೀಕಪ್ಪ ತಮ್ಮ ಕಷ್ಟ ನಷ್ಟಗಳಲ್ಲೇ ಮುಳುಗದೇ ಸಮಷ್ಟಿಯ ಹಿತಕ್ಕೆ ದುಡಿದಂಥವರು. ತೀವ್ರ ಬರಗಾಲ ಬಿದ್ದು ಜನ ಕಂಗಾಲಾಗಿರುವಾಗ, ಗುಳೇ ಹೋಗತಾ ಇರುವಾಗ ತಮ್ಮ ಸ್ನೇಹಿತರ ಮನವೊಲಿಸಿ ಗಂಜೀ ಕೇಂದ್ರ ತೆರೆದವರು, ಬಡ ವಿದ್ಯಾರ್ಥಿಗಳಿಗಾಗಿ ಬೋರ್ಡಿಂಗ್‍ನ್ನು ಸುರು ಮಾಡಿದವರು… ಅಪ್ಪಟ ಪ್ರಾಮಾಣಿಕ ನಿಸ್ಪೃಹ ವ್ಯಕ್ತಿ ಅಂತ ಗೆಳೆಯ ಬಣ್ಣಿಸಿದ. ಅವರ ಸತ್ಯಪರತೆ, ಪ್ರಾಮಾಣಿಕತೆಗೆ ಸಾಣೆ ಹಿಡಿದವರು ಅವರ ಗುರುಗಳಾದ ಮುರಡಿ ಭೀಮಜ್ಜ. ಅಸ್ಪೃಶ್ಯತೆಯ ನಿವಾರಣೆಯ ವಿಧಾಯಕ ಕಾರ್ಯಕ್ರಮದ ಅನುಷ್ಠಾನ ಪ್ರಯುಕ್ತ ಗಾಂಧೀಜಿ ಕರ್ನಾಟಕ ಪ್ರವಾಸ ಕೈಕೊಂಡಾಗ ಭಾನಾಪುರದ ಸ್ಟೇಷನ್ನಿನಲ್ಲಿ ಅವರ ಗಾಡಿ ನಿಲ್ಲುವದಿತ್ತು.ಅವರ ಒಂದೆರಡು ಮಾತು ಕೇಳಲು ಕಾತರದಿಂದ ಹೋಗಿ ಅವರ ದರ್ಶನದ ದೀಪ್ತಿಯಿಂದ ಪ್ರಭಾವಿತರಾಗಿ ಅವರ ಅನುಯಾಯಿಯಾದವರು… ಇಂಥವರನ್ನ ಭೇಟಿಯಾಗುವದೇ ತನ್ನ ಪುಣ್ಯ ವಿಶೇಷ… ಇವರು ತನಗೊಂದು ಮಾದರಿ.. ಅಂತ ಶಂಕರ ಭಾವಿಸಿದ.

ಮಲ್ಲಿಕಾರ್ಜುನ ಹಿರೇಮಠರ ಕೃತಿಗಳು

…ಮೂವತ್ತು ವಯಸ್ಸಿನ ಆಜೂಬಾಜೂ ಇದ್ದ ಪುಂಡಲೀಕಪ್ಪ ಗಾಂಧಿ ಟೊಪ್ಪಿಗಿ ಶುಭ್ರ ಬಿಳಿ ಜುಬ್ಬಾ ಧರಿಸಿದ್ದರು. ಇವರನ್ನು ಕಾಣುತ್ತಲೇ ಮುಗುಳ್ನಗುತ್ತ ಕೈ ಮುಗಿದು ಸ್ವಾಗತಿಸಿದರು. ಗೆಳೆಯ ಹೇಳಿದಂತೆ ಸರಳತೆ, ಮುಗ್ಧತೆ, ಪ್ರಾಮಾಣಿಕತೆ ಮುಖದ ಮೇಲೇ ಒಡೆದು ಕಾಣತಿದ್ದವು. ಅವರು ಈ ಯೋಧನನ್ನ ಕಂಡು ಸಂತೋಷಪಟ್ಟರು. ‘ನಿಮ್ಮ ಶಿಬಿರಾಧಿಪತಿ ಬಾಳ ಜವಾಬ್ದಾರಿಯಿಂದ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದ್ದು ಬಲ್ಲೆ… ನಾನು ಅವರ ಹಾಂಗ ಕಾಲೇಜು ಕಲಿತವನಲ್ಲ. ನಾನೊಬ್ಬ ಸಾಮಾನ್ಯ ದರ್ಜಿ. ಏನೋ ನನ್ನ ಕೆಲಸಾ ನೋಡಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ನನಗ ಈ ಜವಾಬ್ದಾರಿ ವಹಿಸಿದರು. ನಿಜಾಮ ಸರಕಾರ ನಾನು ಸತ್ಯಾಗ್ರಹದಲ್ಲಿ ತೊಡಗಿದಾಗ ದೇಶದ್ರೋಹದ ಆರೋಪ ಹೊರಿಸಿ ವಾರಂಟ್ ಹೊಂಡಿಸಿದ್ದರಿಂದ ಭೂಗತ ಕಾರ್ಯಾಚರಣೆಯಲ್ಲಿ ತೊಡಗಿದೆ. ನನ್ನ ರಾಜಕೀಯ ಹಾಗೂ ಸಾಮಾಜಿಕ ಗುರು ತಪಸ್ವಿ ಭೀಮಜ್ಜ ಮುರಡಿಯವರ ಮಾರ್ಗದರ್ಶನದಲ್ಲಿ ರಜಾಕಾರರ ದುರಾಚಾರ ಹಿಂಸಾಚಾರಗಳನ್ನ ತಡೆಗಟ್ಟಲಿಕ್ಕೆ ಹೋರಾಟ ಮಾಡಿದ್ವಿ. ಸ್ವಾತಂತ್ರ್ಯ ಸಂಗ್ರಾಮಗಳ ಹಾಗೂ ನಿಜಾಮ ಪೊಲೀಸರ ನಡುವೆ ನಡೆದ ಯುದ್ಧದಲ್ಲಿ ನಮ್ಮ ಸೇನಾನಿಗಳು ಅಲ್ಲೀಸಾಬ, ಹನಮಪ್ಪ ಕೊನಾಪುರ, ರಾಮುಲು ಪೊಲೀಸರ ಗುಂಡಿಗೆ ಆಹುತಿಯಾಗಿ ಹುತಾತ್ಮರಾದರು. ಅದೇ ನನ್ನನ್ನ ಕೊರೀತಾ ಅದ. ಅವರ ತ್ಯಾಗ ಬಲಿದಾನಗಳನ್ನ ನಾನು ಸದಾ ನೆನೀತಾ ಇರ್ತೀನಿ.’’ ನಿಧಾನ ಶಂಕರ ತಾನು ಬಂದ ವಿಷಯವನ್ನು ಪ್ರಸ್ತಾಪಿಸಿದ: ‘ನಾನು ನನ್ನ ಜೀವದ ಗೆಳೆಯ ಶೇಖರನನ್ನ ಈ ಯುದ್ಧದಾಗ ಕಳಕೊಳ್ಳಬೇಕಾಯಿತು. ಅವನ ಅಗಲಿಕೆ ನನ್ನನ್ನ ಕಾಡ್ತಾ ಬಂದಿದೆ. ನಾನು, ಕಳಕಪ್ಪ, ಶೇಖರ ಹೈಸ್ಕೂಲಿನ ಗೆಳೆಯರು. ಕಳಕಪ್ಪ ಈ ಹಿಂದೆಯೇ ತಮ್ಮ ಬಗ್ಗೆ ಮತ್ತು ಭೀಮಜ್ಜರ ಬಗ್ಗೆ ಬಹಳ ಪ್ರೀತಿಯಿಂದ, ಅಭಿಮಾನದಿಂದ ಹೇಳಿ ನಮ್ಮನ್ನ ಆಹ್ವಾನಿಸಿದ್ದ. ಇದೀಗ ತಮ್ಮ ಭೇಟಿಯಾಗಿ, ಭೀಮಜ್ಜರ ದರ್ಶನ ಪಡಕೊಂಡು ಹೋಗಬೇಕಂತ ಬಂದೀನಿ.’ ‘ಒಳ್ಳೇದು ಭೀಮಜ್ಜ ಗುಡ್ಡದ ಗವಿಯಲ್ಲಿರ್ತಾರ ಅನುಷ್ಠಾನ ಮಾಡಿಕೋತ… ಆದ್ರ ಬಂದವರ ಭೇಟಿಯನ್ನ ನಿರಾಕರಿಸೋದಿಲ್ಲ. ತಮ್ಮ ಸಲಹೆ ಮಾರ್ಗದರ್ಶನ ಕೋರಿ ಬಂದವರನ್ನ ನಿರಾಶಗೊಳಿಸೋದಿಲ್ಲ… ಹೋಗಿ ಬರ್ರಿ’ ಅಂತ ಹೇಳಿ ಕಳಿಸಿದರು.

ಗಡಾದ ಖಾನಾವಳಿಯಲ್ಲಿ ಊಟಾ ಮಾಡಿಕೊಂಡು ಬೆಟ್ಟದ ಗವಿಗೆ ಹೋದಾಗ ಭೀಮಜ್ಜ ಯಾರೋ ಇಬ್ಬರೊಂದಿಗೆ ಮಾತಾಡತಾ ಕೂತಿದ್ದರು. ಅವರು ತಮಗೊದಗಿದ ವಿಪತ್ತುಗಳ ಬಗ್ಗೆ ಹೇಳ್ತಾ ಅವರ ಸಲಹೆ ಕೇಳತಿದ್ದರು. ಇವರು ಸಮಾಧಾನದಿಂದ ಉತ್ತರಿಸ್ತಿದ್ದರು. ಕಲ್ಲಗೋಡೆಯ ಮೇಲೆ ‘ಮಾನವರ ರಾಜ್ಯಗಳಲ್ಲಿ ದೇವರ (ಮಂಗಳ) ಸಾಮ್ರಾಜ್ಯ ಮೊಳಗಲಿ’ ಎಂಬ ಬರಹ ಶಂಕರನ ಲಕ್ಷ್ಯ ಸೆಳೀತು. ಅವನು ಓದತಿದ್ದುದನ್ನ ಗಮನಿಸಿ ಕಳಕಪ್ಪ ಕಿವಿಯಲ್ಲಿ ಉಸುರಿದ, ‘ಅದು ಅಜ್ಜ ಅವರ ಧ್ಯೇಯವಾಕ್ಯ’ ಎಲ್ಲಾರೂ ‘ಅಜ್ಜಾರು’ ಅಂತ ಹೇಳ್ತಿದ್ದರಿಂದ ಶಂಕರ ಭೀಮಜ್ಜ ಬಹಳ ಹಿರಿಯರಿರಬೇಕಂತ ಭಾವಿಸಿದ್ದ. ನೋಡಿದರೆ ಪುಂಡಲೀಕಪ್ಪ ಅವರಗಿಂತ ನಾಕೈದು ವರ್ಷ ಕಿರಿಯರೇ. ಸುಮಾರು 24-25 ವಯಸ್ಸು ಅಷ್ಟೆ. ಈ ತರುಣ ಸನ್ಯಾಸಿಯ ಮುಖದ ಮ್ಯಾಲೆ ದಿಟ್ಟತನ ಮತ್ತು ಕಾಂತಿ ಕಾಣತಿತ್ತು. ಜಟಾಧರ, ನೀಳಗಡ್ಡ ಮೀಸೆ ಇದ್ದ ಈ ಸನ್ಯಾಸಿಯ ಉಡುಪು: ಮೊಣಕಾಲವರೆಗೆ ಒಂದು ಪಂಜೆ, ಇನ್ನೊಂದು ತುಂಡು ಮೈ ಮ್ಯಾಲೆ ಅಷ್ಟೆ… ಈ ಹಿಂದೆಯೇ ಗೆಳೆಯ ಹೇಳಿದ್ದ: ಮೂಲ ಮುರಡಿಯ ಶ್ರೀಮಂತ ದೇಸಗತಿಯ ಭೀಮರಾವ್ ಹೈದರಾಬಾದಿನಲ್ಲಿ ಇಂಟರ ಮೀಡಿಯೆಟ್ ಓದಿದ್ದವರು. ತನ್ನ ತಂದೆ ತಮ್ಮ ಪ್ರದೇಶ ತೀವ್ರ ಬರಗಾಲಕ್ಕೆ ತುತ್ತಾದಾಗ ತಮ್ಮ ಹಗೆಗಳಲ್ಲಿ ಸಾವಿರಾರು ಚೀಲ ಜೋಳ ಇದ್ದರೂ ಬಡಬಗ್ಗರಿಗೆ ಹಂಚಲು ನಿರಾಕರಿಸಿದಾಗ ಅದನ್ನು ಪ್ರತಿಭಟಿಸಿ ಮನಿಯಿಂದ ಹೊರಬಿದ್ದು ಶಿಕ್ಷಕರಾಗಿ ಆ ಮ್ಯಾಲೆ ಚಲೇಜಾವ್ ಚಳವಳಿಯಲ್ಲಿ ಧುಮುಕಿ ಹಿಂಡಲಗಾ ಜೇಲಿನಲ್ಲಿ ನಾಕು ತಿಂಗಳು ಬಂಧಿತರಾಗಿ ಬಂದ ನಂತರ ಅಧ್ಯಾತ್ಮ ಸಾಧನೆಗಾಗಿ ನ್ಯಾಯ ಸ್ವೀಕಾರ ಮಾಡಿದರು.

ಅಧ್ಯಾತ್ಮದ ತುಡಿತ ಇದ್ದರೂ ತಮ್ಮ ಸಮಷ್ಟಿ ಕಾಳಜಿಯನ್ನ ಕೊನೀವರೆಗೂ ಬಿಡಲಿಲ್ಲ. ಆಶ್ರಮ ಸ್ಥಾಪಿಸಿ ಅಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿದರು. ಮುರಡಿ, ಕುಷ್ಟಗಿ ಊರುಗಳ ದೇವಸ್ಥಾನಗಳಲ್ಲಿ ಹರಿಜನರಿಗೆ ಪ್ರವೇಶ ಕೊಡಿಸಿದರು. ಕೇರಿಯ ಜನ ಭಜನಿ ಮಾಡುತ್ತಾ ಆಶ್ರಮಕ್ಕೆ ಬಂದರೆ ಅವರ ಕಾಲಿಗೆ ಕೊಡಾ ನೀರು ಹಾಕಿ… ಅವರಿಗೆ ನಮಸ್ಕರಿಸಿ ಬರಮಾಡಿಕೊಂಡ ಪ್ರಸಂಗವನ್ನ ಗೆಳೆಯ ಅಭಿಮಾನದಿಂದ ಹೇಳಿದ್ದ. ಇಂಥ ವೀರ ಸನ್ಯಾಸಿಯ ಸಮ್ಮುಖದಲ್ಲಿ ತಾನು ಕೂತಿದ್ದೇನಲ್ಲ ಅಂತ ಅವನಿಗೆ ಹೆಮ್ಮೆಯೆನಿಸಿತು.

(ಕಾದಂಬರಿಯ ಖರೀದಿಗೆ ಇಲ್ಲಿ ಸಂಪರ್ಕಿಸಿ : ಮನೋಹರ ಗ್ರಂಥಮಾಲಾ)

ಪರಿಚಯ : ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರು ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1946ರ ಜೂನ್​ 5ರಂದು. ಧಾರವಾಡದಲ್ಲಿ ವಾಸವಾಗಿರುವ ಇವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಆಕ್ವೇರಿಯಂ ಮೀನು, ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ, ಅಂತರ್ಗತ, ಅಭಿಮುಖ, ಹವನ, ಮೊಲೆವಾಲು ನಂಜಾಗಿ, ಮೂರುಸಂಜೆ ಮುಂದ ಧಾರವಾಡ, ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ) ಪ್ರಕಟಿತ ಕೃತಿಗಳು. ಕನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ, ಹಾವನೂರು ಪ್ರತಿಷ್ಠಾನ ಪ್ರಶಸ್ತಿ, ಸಮೀರವಾಡಿ ಪ್ರಶಸ್ತಿ, ಸಂಗಮ ಗೌರವ ಪ್ರಶಸ್ತಿ, ನೀರಾವರಿ ಟ್ರಸ್ಟ್ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಇದನ್ನೂ ಓದಿ : New Kannada Play : ಅಚ್ಚಿಗೂ ಮೊದಲು ; ಊರು ಸುಟ್ಟರೂ… ಪ್ರಮೀಳಾ ಡ್ರೀಮ್ಸ್ ಏಪ್ರಿಲ್ ಫೂಲ್!? ಹೇಳು ಅಲೈದೇವ್ರು

Published On - 4:20 pm, Thu, 26 August 21