New Kannada Play : ಅಚ್ಚಿಗೂ ಮೊದಲು ; ಊರು ಸುಟ್ಟರೂ… ಪ್ರಮೀಳಾ ಡ್ರೀಮ್ಸ್ ಏಪ್ರಿಲ್ ಫೂಲ್!? ಹೇಳು ಅಲೈದೇವ್ರು…

Kannada Literature : ‘ಈವತ್ತಿನ ಸಾಂಸ್ಕೃತಿಕ ವಲಯದಲ್ಲಿ ನನ್ನವು ನೀನು ಓದು, ನಿನ್ನವು ನಾನು ಓದುತ್ತೇನೆ ಅನ್ನುವ ವಾತಾವರಣವಿದೆ. ಬರಹಗಾರರ ಬರಹಗಳನ್ನು ಬರಹಗಾರರೇ ಓದುವ, ಓದಿಸುವ ಅನಿವಾರ್ಯತೆ ಇದೆ. ಹೊಸ ಓದುಗರನ್ನು ಕಂಡುಕೊಳ್ಳುವುದರಲ್ಲಿ ನಾವು ಸೋತಿದ್ದೇವೆ. ಆದರೆ, ನಾಟಕ ಹಾಗಲ್ಲ. ನನ್ನ ಮೊದಲ ನಾಟಕ ರಾಜ್ಯಾದ್ಯಂತ ಪ್ರದರ್ಶನಗೊಂಡಾಗ, ಈ ಮಾಧ್ಯಮದಿಂದ ಎಲ್ಲಾ ವರ್ಗದವರನ್ನೂ ಹೊಸಬರನ್ನೂ ತಲುಪಬಹುದು ಅನ್ನಿಸಿತು.‘ ಹನುಮಂತ ಹಾಲಿಗೇರಿ

New Kannada Play : ಅಚ್ಚಿಗೂ ಮೊದಲು ; ಊರು ಸುಟ್ಟರೂ... ಪ್ರಮೀಳಾ ಡ್ರೀಮ್ಸ್ ಏಪ್ರಿಲ್ ಫೂಲ್!? ಹೇಳು ಅಲೈದೇವ್ರು...
ಲೇಖಕ ಹನಮಂತ ಹಾಲಿಗೇರಿ
Follow us
ಶ್ರೀದೇವಿ ಕಳಸದ
|

Updated on:Aug 24, 2021 | 7:08 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಅಲೈದೇವ್ರು ಮತ್ತಿತರ ನಾಟಕಗಳು ಲೇಖಕರು : ಹನುಮಂತ ಹಾಲಿಗೇರಿ ಪುಟ : 280 ಬೆಲೆ : ರೂ. 300 ಮುಖಪುಟ ವಿನ್ಯಾಸ : ಡಿ. ಕೆ. ರಮೇಶ ಪ್ರಕಾಶನ : ಆಲಿಸಿರಿ ಪ್ರಕಾಶನ, ಬೆಂಗಳೂರು

ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ‘ಆಲಿಸಿರಿ’ ಸ್ಟುಡಿಯೋದಲ್ಲಿ ಇದೇ 29ರಂದು ಹನುಮಂತ ಹಾಲಿಗೇರಿ ಅವರು ಬರೆದ ಈ ಪುಸ್ತಕ ಬಿಡುಗಡೆಯಾಗಲಿದೆ. ಹಿರಿಯ ಕಥೆಗಾರ, ವಿಮರ್ಶಕರಾದ ಕೇಶವ ಮಳಗಿ, ಲೇಖಕರಾದ ಡಾ.ರಾಮಲಿಂಗಪ್ಪ ಟಿ.ಬೇಗೂರು, ಆನಂದ ಕುಂಚನೂರು ಅವರು ಪಾಲ್ಗೊಳ್ಳಲಿದ್ದಾರೆ.

*

ಮಹಿಳೆಯರು ಇಂದು ಕಂಡುಕೊಳ್ಳುತ್ತಿರುವ ಬಿಡುಗಡೆಯ ಹಾದಿಯ ಬಗೆಗೆ ಸಮಾಜದಲ್ಲಿ ಒಟ್ಟಾಗಿ ಕಂಡುಬರುತ್ತಿರುವ ಅಭಿಪ್ರಾಯವೇನು? ಒಂದೊಮ್ಮೆ ಇಂದು ಗಂಡು ನಡೆದುಕೊಂಡಂತೆ ಹೆಣ್ಣುಮಕ್ಕಳು ನಡೆದುಕೊಂಡರೆ ಈಗ ನೋಡುವ ಬಗೆಯಲ್ಲೇ ಎಲ್ಲರೂ ಅದು ಸಹಜವೆಂಬಂತೆ ಒಪ್ಪಿಕೊಂಡಾರೇ? ಇಲ್ಲವೆಂದಾದರೆ ಇಂದು ಹೆಣ್ಣುಮಕ್ಕಳನ್ನು ಕಾಣುತ್ತಿರುವ ಬಗೆ ಅನ್ಯಾಯದಿಂದ ಕೂಡಿದ್ದಲ್ಲವೇ? ಶಿಲಾಯುಗದ ಹಂತದಲ್ಲಿದ್ದ, ಪ್ರಾಣಿಯಾದ ಮನುಷ್ಯನ ಜೊತೆಗೇ ಇರುವ ಇನ್ನಿತರ ಪ್ರಾಣಿಗಳ ಮಧ್ಯೆ ಕಾಣುವ ಮುಕ್ತತೆ ಮನುಷ್ಯರ ಮಧ್ಯೆ ಯಾಕೆ ಇಲ್ಲ? ನಮ್ಮನ್ನು ನಡೆಸುತ್ತಿರುವ ಶಕ್ತಿರಾಜಕಾರಣದ ಒಳಸುಳಿಗಳು ಯಾವುವು? ಹೀಗೆ ನಾಟಕ ಹಲವು ಪ್ರಶ್ನೆಗಳ ಸುತ್ತ ರೂಪುಗೊಂಡಿದೆ. ಹೀಗೆ ಪ್ರಶ್ನೆಗಳನ್ನೆತ್ತುತ್ತಾ ನಾಳಿನ ದಿನಗಳು ಎಂಥವಿರಬೇಕು ಎಂಬ ಚಿಂತನೆಗೆ ನಮ್ಮನ್ನು ಸೆಳೆಯುತ್ತದೆ. ‘ಪ್ರಮೀಳಾ ಡ್ರೀಮ್ಸ್’ ನಾಟಕದಲ್ಲಿ, ವಿಶಿಷ್ಟವಾದ ವಸ್ತುವನ್ನು ಹಾಲಿಗೇರಿಯವರು ಎಚ್ಚರದಿಂದ ನಿರ್ವಹಿಸಿದ್ದಾರೆ.  ಡಾ. ಭಾರತೀದೇವಿ.ಪಿ, ಹಾಸನ, ಲೇಖಕರು, ವಿಮರ್ಶಕರು

ಕಥೆಗಾರನಾಗಿ ಒಂದಿಷ್ಟು ಯಶಸ್ಸು ಕಂಡಿರುವ ನಾನು ಕಥೆಗಳನ್ನೇ ಬರೆದುಕೊಂಡು ಇದ್ದುಬಿಡಬಹುದಿತ್ತೇನೋ? ಆದರೆ, ಇವತ್ತಿನ ಸಾಂಸ್ಕೃತಿಕ ವಲಯದಲ್ಲಿ ನನ್ನವು ನೀನು ಓದು, ನಿನ್ನವು ನಾನು ಓದುತ್ತೇನೆ ಅನ್ನುವ ವಾತಾವರಣವಿದೆ. ಬರಹಗಾರರ ಬರಹಗಳನ್ನು ಬರಹಗಾರರೇ ಓದುವ,  ಓದಿಸುವ ಅನಿವಾರ್ಯತೆ ಇದೆ. ಹೊಸ ಓದುಗರನ್ನು ಕಂಡುಕೊಳ್ಳುವುದರಲ್ಲಿ ನಾವು ಸೋತಿದ್ದೇವೆ. ಆದರೆ, ನಾಟಕ ಹಾಗಲ್ಲ. ನನ್ನ ಮೊದಲ ನಾಟಕ ಊರು ಸುಟ್ಟರೂ ಹನುಮಪ್ಪ ಹೊರಗ, ರಾಜ್ಯದ ಎಲ್ಲ ವರ್ಗಗಳ ಜನರೂ ನೋಡಿದಾಗ ನಾಟಕಗಳ ಮೂಲಕ ಹೊಸಬರನ್ನು ತಲುಪಬಹುದು ಅನ್ನಿಸಿತು. ಹನುಮಪ್ಪ ನಾಟಕವನ್ನು, ಧಾರವಾಡದ ಆಟಮಾಟ, ಸಾಣೆಹಳ್ಳಿಯ ಶಿವಸಂಚಾರ, ಬೆಂಗಳೂರಿನ ವಿಕಸಂ, ಹೂವಿನಹಡಗಲಿಯ ರಂಗಭಾರತಿ, ನಾಗಮಂಡಲದ ಕನ್ನಡ ಸಂಘ ತಂಡಗಳು ತಿರುಗಾಟ ಮಾಡಿ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಪ್ರದರ್ಶನ ನೀಡಿವೆ. ಕೆಲವೊಂದು ಪ್ರದರ್ಶನಗಳಂತೂ ಹತ್ತು ಸಾವಿರಕ್ಕೂ ಹೆಚ್ಚು ಜನರಿಂದ ವೀಕ್ಷಣೆಗೊಂಡಿವೆ. ಹಗಲೆಲ್ಲ ಕೂಲಿ ಮಾಡುವ, ಆಟೋ ಓಡಿಸುವ, ಕಾರ್ಖಾನೆ ಕಂಪನಿಗಳಲ್ಲಿ ಕೆಲಸ ಮಾಡುವ ಜನ ಸಾಮಾನ್ಯರು ತನ್ನ ದಿನದ ದಣಿವನ್ನು ಮರೆಯಲು ನಾಟಕ ನೊಡಲು ಬರುತ್ತಾರೆ. ಅವರು ಒಂದಿಷ್ಟು ನಕ್ಕು ಇನ್ನೊಂದಿಷ್ಟು ಚಿಂತನೆಯ ಬೆಳಕಿನೊಂದಿಗೆ ಹೊರಹೋಗುತ್ತಾರೆ ಅನ್ನೋ ನಂಬಿಕೆ ನನ್ನದು. ಇತ್ತೀಚೆಗೆ ನಾಟಕ ನೋಡಿದವರೊಬ್ಬರು, ಮೂರು ಹೊತ್ತು ಪೂಜೆ ಪುನಸ್ಕಾರಗಳಲ್ಲಿ ಕಳೆಯುತ್ತಿದ್ದ ನಮ್ಮ ಮನೆಯ ಯಜಮಾನರು ಈಗ ದೇವರನ್ನು ಭೂಮಿಗೆ ಇಳಿಸಿ, ಅದರ ಪಾಡಿಗೆ ಅದನ್ನು ಬಿಟ್ಟಿದ್ದಾರೆ ಎಂದು ಹಂಚಿಕೊಂಡಾಗ ನಿಜಕ್ಕೂ ಧನ್ಯ ಅನಿಸುತ್ತದೆ. ಇಂಥ ಧನ್ಯತೆಯೇ ಈ ನಾಲ್ಕು ನಾಟಕಗಳನ್ನು ಬರೆಸಿದೆ. ಹನುಮಂತ ಹಾಲಿಗೇರಿ, ಕಥೆಗಾರರು 

*

ನಾಟಕ : ಪ್ರಮೀಳಾ ಡ್ರೀಮ್ಸ್

ದೃಶ್ಯ : 11ರ ಆಯ್ದ ಭಾಗ

(ಮೈತ್ರಿ ರಾವ್ ಅವರ ಮಲಗುವ ಕೊಣೆ. ಮನೆ ಸಮಯ ರಾತ್ರಿ 10 ಗಂಟೆ. ರಾಮು ಮನೆಯ ಕೆಲಸಗಳಲ್ಲಿ ನಿರತನಾಗಿದ್ದಾನೆ. ಮೈತ್ರಿ ರಾವ್ ಅವರು ಗಂಡನ ಬರುವಿಕೆಗಾಗಿ ಚಡಪಡಿಸುತ್ತಾ ಟಿವಿ ನೋಡುತ್ತಿದ್ದಾರೆ. ಕೆಲಸವನ್ನೆಲ್ಲ ಮುಗಿಸಿ ಕೈಕಾಲು ತೊಳೆದುಕೊಂಡು ಮಲಗುವ ಕೊಣೆಗೆ ರಾಮು ನೇರ ಮಂಚಕ್ಕೆ ಹೋಗಿ ಬೆನ್ನು ತಿರುವಿ ರಗ್ಗು ಹೊದ್ದು ಮಲಗಿಬಿಡುತ್ತಾನೆ. ಮೈತ್ರಿ ರಾವ್ ಅವರು ರಾಮುನ ಪಕ್ಕದಲ್ಲಿ ಬಂದು ಉರುಳಿಕೊಂಡು  ನಿಧಾನಕ್ಕೆ ರಾಮನನ್ನು ತೋಳುಗಳಲ್ಲಿ ಬಳಸಿ ಹಿಂದಿನಿಂದ ಅಪ್ಪಿಕೊಳ್ಳುತ್ತಾರೆ. ಆದ್ರೆ ರಾಮು ಮಾತ್ರ ಜಪ್ಪಯ್ಯ ಅಂತಿಲ್ಲ. ಈ ಸಲ ಮತ್ತಷ್ಟು ಹತ್ತಿರಕ್ಕೆ ಸರಿದ ಮೈತ್ರಿಯವರು ಬಿಗಿಯಾಗಿ ಅಪ್ಪಿಕೊಂಡು ರಾಮುಗೆ ಒಂದು ಮುತ್ತು ಕೊಡುತ್ತಾರೆ. ಆದ್ರೂ ಏನು ಪ್ರತಿಕ್ರಿಯೆ ನೀಡದ ರಾಮು ಪೂರ್ತಿಯಾಗಿ ರಗ್ಗು ಹೊದ್ದು, ಕುಂಡಿ ತಿರುವಿ ಮಲಗಿಬಿಡುತ್ತಾನೆ.)

ಮೈತ್ರಿ ರಾವ್: ಯಾಕೆ ಚಿನ್ನು ಏನಾಯಿತು. ಇಷ್ಟೊತ್ತು ಚನ್ನಾಗೆ ಇದ್ಯೆಲ್ಲ, ಈಗೇನು ಬಂತು ನಿನಗೆ ರೋಗ? (ಮುದ್ದಾಡಲು ಹೋಗುವಳು)

ರಾಮು: (ಅವಳ ಕೈಯಿಂದ ಬಿಡಿಸಿಕೊಂಡು ಎದ್ದು ಕುಳಿತು) ಮುನಿಸಿನಿಂದ ನನ್ನ ಮಾತಾಡಿಸಬೇಡಿ ನೀವು, ಅವನ್ಯಾರನ್ನು ಕದ್ದು ಕದ್ದು ನೋಡ್ತಿದ್ರೆಲ್ಲಾ? ಅವನ ಹಿಂದೆನೇ ಹೋಗಿ.

ಮೈತ್ರಿ ರಾವ್: (ಎದ್ದು ಕುಳಿತು) ಲೋ ಏನು ನಿಂದು? ಯಾವಾಗಲೂ ಇದೆ ಆಯ್ತಲ್ಲ ರೋಗ. ನಿಮ್ಮ ಗಂಡ್ಕುಲವೇ ಇಷ್ಟು ಯಾವಾಗಲೂ ಅನುಮಾನ ಪಟ್ಟು ನೀವು ಸಾಯ್ತಿರ್ತಿರಾ. ನಮ್ಮನ್ನು ಸಾಯಿಸ್ತಿರಾ. ಯಾರನ್ನು ಎಲ್ಲಿ ನೊಡ್ತಿದ್ದೆ ನಾನು.

ರಾಮು: ನೀವೇ ನೆನಪು ಮಾಡ್ಕಳಿ. ಏನು ಗೊತ್ತಿರಲಾರದಂಗೆ ಕಿಸಿಬೇಡಿ.

ಮೈತ್ರಿ ರಾವ್: (ವಿಚಾರ ಮಾಡುವಂತೆ ನಟಿಸುತ್ತಾ) ಐರನ್ ಬಟ್ಟೆ ತಂದಿಟ್ಟು ಹೋದ್ನಲ್ಲ, ಆ ದೇವಾನಂದನ ಬಗ್ಗೆನಾ ನೀನು ಅನುಮಾನ ಪಡ್ತಿರೋದು?

ರಾಮು: ಅಯ್ಯೋ, ಆ ಹುಡುಗನ್ನ ಜೊತೆನೋ ಚಕ್ಕಂದ ಶುರು ಮಾಡ್ಕೊಂಡು ಬಿಟ್ರಾ?

ಮೈತ್ರಿ ರಾವ್: ಏಯ್, ಏಯ್ ಕೋತಿ, ಅತಿಯಾಗಿ ಆಡಬ್ಯಾಡ ನೀನು. ಆ ಹುಡುಗ ಹಾಗಲ್ಲ. ಚಿಕ್ಕ ಹುಡುಗ  ಪಾಪ ಅಂವ. ಅಂವನ ಜೊತೆಯೆಲ್ಲ ನನ್ನ ಅನುಮಾನ ಪಡ್ತಿಯಲ್ಲ. ಥೂ.

ರಾಮು: ಉಹುಂಹುಂ, ಪಾಪ ಅಂತೆ ಪಾಪ, ಹಂಗೆ ಬಿಟ್ರೆ ಆ ಚಿಕ್ಕ ಹುಡುಗನ ಜೊತೆನೂ ಚಕ್ಕಂದ್ ಆಡಿ ಪಾಪುನ್ನ ಹೆತ್ತು ಕೊಟ್ಟುಬಿಡ್ತಿರಿ ನೀವು. ಸಣ್ಣೋರನ್ನಲ್ಲ, ದೊಡ್ಡೋರನ್ನಲ್ಲ, ನಿಮ್ಮ ಕಚ್ಚೆಹರಕು ಬುದ್ಧಿ ತೋರಿಸೇ ಬೀಡ್ತಿರಿ ಮನೆಗೆ ಯಾರೇ ಗಂಡಸರು ಬಂದ್ರೂ ಅವರನ್ನ ಆಸೆಯಿಂದ ನೋಡೋದೇ ಆಯಿತು. ಥೂ ನಿಮ್ಮ ನಾಯಿ ಬುದ್ಧಿಗೆ ಬೆಂಕಿ ಬೀಳ.

ಮೈತ್ರಿ ರಾವ್: ನಾಲಿಗೆ ಉದ್ದ ಬಿಡಬ್ಯಾಡ. ಏನು ಮಾತಾಡ್ತಾ ಇದ್ದಿ, ಅರಿವಾದ್ರೂ ಇದೆಯಾ ನಿಂಗೆ?

ರಾಮು : ದೇವಾನಂದ ಸುದ್ದಿ ಹಾಳಾಗಿ ಹೋಗ್ಲಿ ಬಿಡಿ. ಕಾರ್ ಡ್ರೈವರ್ ಜೊತೆ ಏನು ಮನೆ ಹೊರಗೆ ಅಷ್ಟು ಹೊತ್ತು ನಿಂತ್ಕೊಂಡು ಲಲ್ಲೆ ಹೊಡೆತಿದ್ರಿ.

ಮೈತ್ರಿ ರಾವ್ : ಲಲ್ಲೆನಾ?

ರಾಮು : ಹು ಮತ್ತೆ. ಅಂವನ ಜೊತೆ ಹಲ್ಕಿರಿಯದೆನೋ, ಕಣ್ಣು ಮಿಟುಕಿಸೋದೇನು? ಹುಂಹುಂಹುಂ.

ಮೈತ್ರಿ ರಾವ್ :  ಒದ್ದುಬಿಡ್ತಿನಿ ನೋಡು ಇನ್ನೊಂದು ಮಾತಾಡಿದ್ರೆ. ಬರೇ ಅನುಮಾನ ಪಡೋದೇ ಆಯ್ತು ನಿಂದು.  ನಮ್ಮ ದೀಪು ಮುಂದೆ ಅವರ ಮಾಲಕ್ತಿ ಮನೆಗೆ ಹೋಗುವ ಹುಡುಗ. ಅವರ ಮನೆ ವಿಚಾರ ಒಂಚೂರು ತಿಳ್ಕೊಣಾಂತ ಮಾತಾಡ್ತಿದ್ದೆ. ಅಷ್ಟಕ್ಕೆ ಅನುಮಾನ ಪಡ್ತಿಯಲ್ಲೋ ನೀನು ಲೋಫರ್.

ರಾಮು : ಹೂಂ ನೀವು ಸಿಟ್ಟು ಮಾಡ್ಕೊಂಡ್ರೆ ನಾ ಬಿಟ್ಟು ಬಿಡ್ತಿನಾ. ಥೂ. ನಿಮ್ಮ ಹೆಂಗಸರ ಬುದ್ಧಿನೇ ಇಷ್ಟು.

ಮೈತ್ರಿ ರಾವ್ : ಏಯ್ ಬಾಸ್ಟರ್ಡ (ಹೊಡೆಯಲು ಕೈ ಎತ್ತುವನು. ರಾಮು ಅಳುತ್ತಾ ಅವನ ಕಡೆ ಬೆನ್ನು ಮಾಡಿ ಗುಡಿಗ್ಗಾಲು ಹಾಕ್ಕೊಂಡು ಮಲಗಿಬಿಡುವನು)

ಮೈತ್ರಿ ರಾವ್ :  ಥೂ ನೀನೊಂದು ಗಂಡ್ಸಾ? ದುಡಿಯೋ ಹೆಂಡತಿ ಮೇಲೆ ಗೌರವವೇ ಇಲ್ಲ. ಆದ್ರೆ ಅನುಮಾನ ಮಾತ್ರ ಬೆಟ್ಟದಷ್ಟು ಇಟ್ಕೊಂಡಿದೀಯ. ನಿನ್ನನ್ನು ಇಷ್ಟು ಲೂಜು ಬಿಡಬಾರದಿತ್ತು. ಬೇರೆ ಹೆಂಡಂದಿರ ತರಹ ನಿನ್ನ ನಾಯಿ ಹಾಗೆ ನೋಡಿಕೊಳ್ಳಬೇಕಿತ್ತು. ತಪ್ಪು ಮಾಡಿಬಿಟ್ಟೆ ನಾ. ನಿನ್ನ ತಲೆ ಮೇಲೆ ಕೂಡ್ರಿಸಿಕೊಂಡು ಬಿಟ್ಟೆ. ಅದಕ್ಕೆ ಹಿಂಗೆಲ್ಲ ಆಡ್ತಾ ಇದ್ದಿಯಾ? (ಬೀರುನಲ್ಲಿದ್ದ ಬಾಟ್ಲಿ ತಂದು ನೀರು ಬೆರೆಸಿಕೊಂಡು ಕುಡಿಯುತ್ತಾ) ನಿಮ್ಮಂಥ ಅನುಮಾನದ ಗಂಡಸರಿಂದಾಗಿಯೇ ಇಂದು ಗಂಡ್ಕುಲ ನಾಶ ಆಗ್ತಿದೆ ಗೊತ್ತಾ? ಒಂದು ತಿಳ್ಕೊ. ಹೆಣ್ಣಿಲ್ಲದೇ, ಈ ಜಗತ್ತೇ ನಡೆಯೋದಿಲ್ಲ. ಆದರೆ, ಗಂಡಿಲ್ಲದೇ ನಾವು ಲಕ್ಷಾಂತರ ವರ್ಷಗಳವರೆಗೆ ಈ ಜಗತ್ತನ್ನು ಮುನ್ನಡೆಸಬಹುದು?

ರಾಮು: (ಪಟ್ಟನೆ ರಗ್ಗು ತೆಗೆದು ಅಳು ದನಿಯಲ್ಲಿ) ಅದ್ಹೇಗೆ ಸಾಧ್ಯ? ಭೂಮಿಗೆ ಬೀಜ ಬಿತ್ತಿದ್ರೆ ತಾನೆ ಫಲ ಬರೋದು, ಪುರುಷನಿಲ್ಲದ ಪ್ರಕೃತಿಗೆ ಅರ್ಥ ಇದೆಯಾ?

ಮೈತ್ರಿ ರಾವ್ : ಈಗ ಇನ್ನೊಂದು ಐವತ್ತು ವರ್ಷ ತಡಿ ಕಣಪ್ಪಿ. ಎಲ್ಲ ರೀಸರ್ಚ ನಡಿತಾ ಇದೆ. ಅದು ಸಕ್ಸಸ್ ಆದರೆ ಭೂಮಿ ಮೇಲೆ ಗಂಡೇ ಇರಲ್ಲ, ಇದ್ರೂ ಕೌ ಫಾರ್ಮ್​ನಲ್ಲಿ ಸ್ಪರ್ಮ್ ಕಲೆಕ್ಷನ್​ ಗೆ ಹೋರಿ ಬಳಸ್ತಾರೆ ನೋಡು. ಹಂಗ  ಬಳಸ್ತೀವಷ್ಟೇ.

ರಾಮು: ಸಾಧ್ಯನೆ ಇಲ್ಲ (ಜೋರಾಗಿ ಚೀರುವನು)

ಮೈತ್ರಿ ರಾವ್ : ಈಗ ನೋಡು, ಡೇರಿ ಫಾರ್ಮ್ ಗೊತ್ತಲ್ಲ ನಿಂಗೆ, ಆ ಡೇರಿ ಫಾರ್ಮಿನೊಳಗ ನೂರಾರು ಹಸು ಇರ್ತಾವು. ಒಂದಾದ್ರೂ ಹೋರಿ ಇರುತ್ತಾ? ಇಲ್ಲ ತಾನೆ. ಹಾಗಾದ್ರೆ ಹೋರಿ ಇಲ್ಲದೇ ಆ ಎಲ್ಲ ಹಸುವಿನ ಗರ್ಭದೊಳಗೆ ಕರು ಬರೋದು ಹೇಗೆ ಹೇಳು? ಅರ್ಥ ಆಯಿತಲ್ವಾ?

ರಾಮು : ಅಂದ್ರೆ?

ಮೈತ್ರಿ ರಾವ್ : ಅಂದ್ರೆ, ಬೀಜಕ್ಕೆ ಮಾತ್ರ ಸಧೃಡವಾದ, ಹ್ಯಾಂಡಸಮ್ ಆಗಿರೋ ಗಂಡಸರನ್ನು ಸಾಕೋದು ಮತ್ತು ಅವರಿಂದ ಬೀಜ ಪಡೆದು ಸ್ಟೋರ್ ಮಾಡಿ ಇಡೋದು. ಬೇಕಾದಾಗ ನಳಿಕೆ ಮೂಲಕ ಗರ್ಭ ಧರಿಸೋದು ಅಷ್ಟೆಯಾ.

ರಾಮು: ನಿಜವಾಗ್ಲೂ ಆ ಥರಾ ರಿಸರ್ಚ್ ಮಾಡ್ತಿದ್ದಾರಾ?

ಮೈತ್ರಿ ರಾವ್ : ಮತ್ತೆ, ನಿಮ್ಮಂಥ ಗಂಡ್ಸು ನನ್ನಂತ ಅಮಾಯಕ ಹೆಂಗ್ಸನ್ನ ಆಟ ಆಡಿಸಿದರೆ ಅಷ್ಟೆಯಾ? ಇನ್ನೇನು ಮಾಡೋದು? (ಮತ್ತೆ ರಾಮುನನ್ನು ರಮಿಸಲು ಮುಂದಾಗುವಳು)

ರಾಮು : ಸರೀ ರೀ ದೂರ, ಅದೇನೋ ಹೇಳಿದ್ರಲ್ವಾ, ನಳಿಕೆ ಅದು ಇದು ಅಂತ, ಹಂಗೆ ಮಾಡ್ಕೋ ಹೋಗಿ.

ಮೈತ್ರಿ ರಾವ್ : ಆದ್ರೆ ಏನೇ ಆದ್ರೂ ಅದ್ರಿಂದ ಸುಖ ಸಿಗಲ್ಲ ಕಣೋ. ನಿನ್ನಂಥವನ ದೇಹ ಬೇಕೇ ಬೇಕು.

ರಾಮು : ಮತ್ತೆ ಗಂಡಸರಿಲ್ಲದಂಗ ಮಾಡ್ತೀನಿ ಅಂತಿರಿ, ಗಂಡಸರಿಲ್ಲದೇ ಅದ್ಹೇಗೆ ಸುಖ ಪಡೀತೀರೋ ಪಡ್ಕೊ ಹೋಗ್ರಿ.

ಮೈತ್ರಿ ರಾವ್: ಅವುಕ್ಕೂ ರೋಬೋಟ್ ಕಂಡು ಹಿಡಿತಿದ್ದಾರೆ ತಡಿ (ಮೈತ್ರಿ ಮತ್ತೆ ಬಳಸಿಕೊಳ್ಳಲು ಮುಂದಾಗುತ್ತಾಳೆ. ಆದರೆ, ರಾಮು ದೂರ ಸರಿಯುತ್ತಾನೆ. ಇಬ್ಬರ ಮಧ್ಯೆ ಜಗ್ಗಾಟ ಶುರುವಾಗುತ್ತದೆ. ಈ ಜಗ್ಗಾಟದಲ್ಲಿ ಮೈತ್ರಿ ರಾವ್ ಕೈಯಿಂದ ತಪ್ಪಿಸಿಕೊಂಡ ರಾಮು ಜೋರಾಗಿ ಕುಹಕ ನಗೆ ನಗುತ್ತಾನೆ. ಇದರಿಂದ ಅವಮಾನ ತಾಳಲಾರದೆ ಮೈತ್ರಿ ರಾಮುನ ಹೊಟ್ಟೆಗೆ ಜೋರಾಗಿ ಒದ್ದುಬಿಡುತ್ತಾನೆ. ರಂಗಭೂಮಿ ಮೇಲೆ ಒಮ್ಮೆಲೆ ಕತ್ತಲಾವರಿಸುತ್ತದೆ. ದೀಪ ಹತ್ತಿದಾಗ ಮೈತ್ರಾದೇವಿ ಮೈತುಂಬಾ ಸೀರೆ ಉಟ್ಟಿದ್ದಾಳೆ. ಹಣೆತುಂಬಾ ಕುಂಕುಮ, ತಲೆಯಲ್ಲಿ ಮಲ್ಲಿಗೆ ಕೈ ತುಂಬಾ ಬಳೆ ತೊಟ್ಟಿದ್ದಾಳೆ. ಟೈ ಶರ್ಟ, ನೈಟ್ ಪ್ಯಾಂಟ ಧರಿಸಿರುವ ರಾಮು ಮಂಚದ ಕೆಳಗೆ ಬಿದ್ದಿದ್ದಾನೆ. ಮೈಯೆಲ್ಲ ಪೂರ್ತಿ ಬೆವೆತಿದ್ದಾನೆ, ದಿಕ್ಕು ತೋಚದಂತಾಗಿ ಮೈತ್ರಾಳತ್ತ ಕಣ್ಣು ಕಣ್ಣು ಬಿಡತೊಡಗಿದ್ದಾನೆ.)

(ಪುಸ್ತಕ ಖರೀದಿಗಾಗಿ ಸಂಪರ್ಕಿಸಿ : 9986302947)

kengulabi alaidevru gowrish akki

ಹನುಮಂತ ಹಾಲಿಗೇರಿ ಅವರ ಕೆಂಗುಲಾಬಿ ಕಾದಂಬರಿ ಆಧಾರಿತ ಸಿನೆಮಾದಲ್ಲಿ ಗೌರೀಶ ಅಕ್ಕಿ ಮತ್ತು ಕೃತಿಕಾ

ಪರಿಚಯ : ಬಾಗಲಕೋಟೆಯ ತುಳಸೀಗೇರಿಯವರಾದ ಹನುಮಂತ ಹಾಲಿಗೇರಿಯವರು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕಥೆಗಾರರಾಗಿಯೂ ಗುರುತಿಸಿಕೊಂಡಿರುವ ಇವರು ಇದುವರೆಗೂ ಕತ್ತಲ ಗರ್ಭದ ಮಿಂಚು, ಮಠದ ಹೋರಿ, ಗೆಂಡೆದೇವ್ರು ಮತ್ತು ಏಪ್ರಿಲ್ ಫೂಲ್, ಕಥಾ ಸಂಕಲನಗಳನ್ನು ಹೊರ ತಂದಿದ್ದಾರೆ. ಕೆಂಗುಲಾಬಿ ಇವರ ಬಹುಚರ್ಚಿತ ಕಾದಂಬರಿಯಾಗಿದ್ದು, 6ನೇ ಮುದ್ರಣ ಕಾಣುತ್ತಿದೆ. ಇದೇ ಹೆಸರಿನಲ್ಲಿ ಸಿನೆಮಾ ತೆರೆಕಂಡು, ರಾಜ್ಯ ಸರಕಾರದಿಂದ ಅತ್ಯುತ್ತಮ ಕಥಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿಜಯ ಕರ್ನಾಟಕ, ವಾರ್ತಾಭಾರತಿ, ಕನ್ನಡಪ್ರಭ, ಅಗ್ನಿ ವಾರಪತ್ರಿಕೆ, ಸುದ್ದಿ ಟಿವಿಗಳಲ್ಲಿ ಕೆಲಸ ಮಾಡಿರುವ ಇವರು ಸದ್ಯ ಸಂವಾದ ಯುವ ಸಂಪನ್ಮೂಲಕ ಕೇಂದ್ರದಲ್ಲಿ ಯುವಜನ ಕಾರ್ಯಕರ್ತರಾಗಿದ್ದಾರೆ. ಧಾರವಾಡದ ಬೇಂದ್ರೆ ಗ್ರಂಥ ಬಹುಮಾನ, ಶಿವಮೊಗ್ಗದ ಕರ್ನಾಟಕ ಸಂಘದಿಂದ ಕುವೆಂಪು ಕಾದಂಬರಿ ಪುರಸ್ಕಾರ, ಅಮೆರಿಕಾದ ಅಕ್ಕ ಕಥಾ ಪ್ರಶಸ್ತಿ, ಸಿಂಗಪುರದ ಸಿಂಚನ ಕಥಾ ಪ್ರಶಸ್ತಿ, ಮೈಸೂರಿನ ದಲಿತ ಸಾಹಿತ್ಯ ಅಕಾಡೆಮಿಯಿಂದ, ಗದಗಿನ ಕಸಾಪದಿಂದ ವರ್ಷದ ಅತ್ಯುತ್ತಮ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಇವರ ಕೃತಿಗಳು ಪಡೆದುಕೊಂಡಿವೆ.

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ದಾವಣಗೆರೆಯಿಂದ ಆಸ್ಟ್ರೇಲಿಯಾದ ತನಕ ‘ಉದಕ ಉರಿದು’

Published On - 5:57 pm, Tue, 24 August 21

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ