Books for Children : ಅಚ್ಚಿಗೂ ಮೊದಲು : ‘ಮಗಳಿಗೆ ಅಪ್ಪ ಬರೆದ ಪತ್ರಗಳು’ 1929ರಲ್ಲಿ ಬರೆದ ಕೃತಿ 2021ರಲ್ಲಿ ಮತ್ತೆ ಕನ್ನಡಕ್ಕೆ

|

Updated on: Aug 29, 2021 | 3:47 PM

Letters from a Father to His Daughter : ‘ಈ ಪುಸ್ತಕವನ್ನು ನಾವು ಪ್ರಕಟಿಸಲು ಇನ್ನೊಂದು ಸ್ಪಷ್ಟ ಕಾರಣ ನೆಹರು ಅವರ ಸುತ್ತ ದ್ವೇಷದ ಗೋಡೆ ಕಟ್ಟಿ ಅವರ ವ್ಯಕ್ತಿತ್ವ ದಮನಿಸುವ ವಿಷಕಾರಿ ಬೆಳವಣಿಗೆಗಳು. ಸ್ವಾತಂತ್ರ್ಯೋತ್ತರ ಹೊಸ ಭಾರತವನ್ನು ಸೆಕ್ಯುಲರ್, ವೈಜ್ಞಾನಿಕ ಮತ್ತು ಪ್ರಗತಿಪರ ಚಿಂತನೆಯ ಅಡಿಪಾಯದ ಮೇಲೆ ಕಟ್ಟಬೇಕು ಎಂಬ ಕನಸನ್ನ ಇಟ್ಟುಕೊಂಡವರು ನೆಹರು. ಈ ನಿಟ್ಟಿನಲ್ಲಿ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಳೆಯರಿಗೆ ಈ ಕೃತಿ ಸಹಕಾರಿಯಾಗಲಿದೆ.’ ಕುಂಟಾಡಿ ನಿತೇಶ್

Books for Children : ಅಚ್ಚಿಗೂ ಮೊದಲು : ‘ಮಗಳಿಗೆ ಅಪ್ಪ ಬರೆದ ಪತ್ರಗಳು’ 1929ರಲ್ಲಿ ಬರೆದ ಕೃತಿ 2021ರಲ್ಲಿ ಮತ್ತೆ ಕನ್ನಡಕ್ಕೆ
ಲೇಖಕ, ಅನುವಾದಕ ಕಪಟರಾಳ ಕೃಷ್ಣರಾವ್
Follow us on

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಮಗಳಿಗೆ ಅಪ್ಪ ಬರೆದ ಪತ್ರಗಳು 
ಇಂಗ್ಲಿಷ್ : ಜವಾಹರಲಾಲ ನೆಹರು
ಕನ್ನಡಕ್ಕೆ : ಕಪಟರಾಳ ಕೃಷ್ಣರಾಯರು
ಪುಟ : 132
ಬೆಲೆ : ಸಾದಾಪ್ರತಿ ರೂ. 140 – ಹಾರ್ಡ್ ಬೌಂಡ್  ರೂ. 250
ಮುಖಪುಟ ವಿನ್ಯಾಸ : ಗೌರೀಶ ಕಪನಿ
ಪ್ರಕಾಶನ : ಋತುಮಾನ, ಬೆಂಗಳೂರು

*
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ತಮ್ಮ ಹತ್ತು ವರುಷದ ಮಗಳಿಗೆ ಬರೆದ ಪತ್ರಗಳ ಸಂಗ್ರಹ ಈ ಪುಸ್ತಕ. ಇದು 1929ರಲ್ಲಿ ಇಂಗ್ಲಿಷಿನಲ್ಲಿ ಪುಸ್ತಕರೂಪ ಪಡೆದು 1941ರಲ್ಲಿ ಶ್ರೀ ಕಪಟರಾಳ ಕೃಷ್ಣರಾಯರಿಂದ ಕನ್ನಡಕ್ಕೆ ಅನುವಾದಗೊಂಡಿತು. ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಮಂಗಳೂರು ಗೋವಿಂದರಾಯರು ಇದನ್ನು ಪ್ರಕಟಿಸಿದರು. ಸರಿ ಸುಮಾರು ಒಂದು ಶತಮಾನದ ಹಿಂದೆ ತಂದೆಯೊಬ್ಬ ಮಗಳಿಗೆ ಲೋಕದ ಬಾಗಿಲನ್ನು ತೆರೆದು ತೋರಿಸಿದ ಪರಿ ಇದು. ಈಗ 21ನೇ ಶತಮಾನದ ಮಕ್ಕಳು ಈ ಪುಸ್ತಕವನ್ನು ಏಕೆ ಓದಬೇಕು? ಮಾಹಿತಿಯ ಭಂಡಾರವೇ ನಮ್ಮೆದುರು ಸುಲಭ ಲಭ್ಯವಿರುವಾಗ ಈ ಪುಸ್ತಕದ ಔಚಿತ್ಯದ ಪ್ರಶ್ನೆ ಬರುವುದು ಸಹಜ. ನಮ್ಮ ಬೆರಳ ತುದಿಯಲ್ಲೇ ಜಗತ್ತಿನ ಚರಿತ್ರೆ, ವಾರ್ತೆಗಳು ಲಭ್ಯವಿದ್ದರೂ ಮಕ್ಕಳು ಅದನ್ನು ತಿಳಿದುಕೊಳ್ಳಲು ಒಂದು ಸರಿಯಾದ ಕ್ರಮದ ಅಗತ್ಯವಿದೆ. ಆ ಕ್ರಮ ಈ ಪುಸ್ತಕದ ಓದಿನಿಂದ ಸಾಧ್ಯವಾಗಲಿದೆ. ಅದಕ್ಕಿಂತ ಮಿಗಿಲಾಗಿ ಮಕ್ಕಳಲ್ಲಿ ಆಧುನಿಕ ದೃಷ್ಟಿಕೋನ ಮತ್ತು ವೈಚಾರಿಕ ಮನೋಭಾವ ಬೆಳೆಸುವಲ್ಲಿ ಈ ಪುಸ್ತಕ ಮೊದಲ ಹೆಜ್ಜೆಯಾಗಲಿದೆ.

ಇದನ್ನು ನಾವು ಪ್ರಕಟಿಸಲು ಇನ್ನೊಂದು ಸ್ಪಷ್ಟ ಕಾರಣ ನೆಹರೂವಿನ ಸುತ್ತ ದ್ವೇಷದ ಗೋಡೆ ಕಟ್ಟಿ ಅವರ ವ್ಯಕ್ತಿತ್ವ ದಮನಿಸುವ ವಿಷಕಾರಿ ಬೆಳವಣಿಗೆಗಳು. ಸ್ವಾತಂತ್ರ್ಯೋತ್ತರ ಹೊಸ ಭಾರತವನ್ನು ಸೆಕ್ಯುಲರ್, ವೈಜ್ಞಾನಿಕ ಮತ್ತು ಪ್ರಗತಿಪರ ಚಿಂತನೆಯ ಅಡಿಪಾಯದ ಮೇಲೆ ಕಟ್ಟಬೇಕು ಎಂಬ ಕನಸನ್ನ ಇಟ್ಟುಕೊಂಡವರು ನೆಹರು. ಈ ನಿಟ್ಟಿನಲ್ಲಿ ನೆಹರು ಅವರನ್ನ ಅರ್ಥ ಮಾಡಿಕೊಳ್ಳುವಲ್ಲಿ ಎಳೆಯರಿಗೆ ಈ ಕೃತಿ ಸಹಕಾರಿಯಾಗಲಿದೆ. ಮುಗ್ದತೆಯ ಪೊರೆ ಕಳಚಿಕೊಂಡು ಜಾಗತಿಕ ವಿದ್ಯಮಾನಗಳಿಗೆ ಕುತೂಹಲದ ಕಣ್ಣ ತೆರೆಯುತ್ತಿರುವ ಎಳೆಯರಿಗೆ ಇಲ್ಲಿನ ಲೋಕ ವಿಚಾರಗಳು ವೈಚಾರಿಕ ಮನೋಭಾವದೆಡೆಗೆ ಸೂಕ್ತ ಅಡಿಪಾಯ ಹಾಕಿಕೊಡುತ್ತವೆ ಮತ್ತು ನಿಸ್ಸಂದೇಹವಾಗಿ ಭಾರತ ಕಂಡ ಒಬ್ಬ ಪ್ರಮುಖ ವಿಚಾರವಾದಿಯೊಬ್ಬರ ಮನಸ್ಸನ್ನು ಕನ್ನಡ ನಾಡಿನ ಮಕ್ಕಳಿಗೆ ಈ ಕೃತಿ ತೆರೆದಿಡುತ್ತದೆ ಎಂಬ ನಂಬಿಕೆ ಈ ಪುಸ್ತಕ ಪ್ರಕಟಣೆಯ ಹಿಂದಿದೆ.
ಕುಂಟಾಡಿ ನಿತೇಶ, ಸಂಪಾದಕರು, ಋತುಮಾನ 

*

ಪ್ರಾಚೀನ ಕಾಲದ ಇತಿಹಾಸ ಹೇಗೆ ಬರೆಯಲ್ಪಟ್ಟಿತು ?

ನಾನು ನಿನಗೆ ಬರೆದ ನಿನ್ನೆಯ ಪತ್ರದಲ್ಲಿ, ಸೃಷ್ಟಿಯ ಪುಸ್ತಕದಿಂದ ಭೂಮಿಯ ಪ್ರಾಚೀನ ಚರಿತ್ರೆಯನ್ನು ಹೇಗೆ ತಿಳಿದುಕೊಳ್ಳಬೇಕೆಂಬುದನ್ನು ತಿಳಿಸಿದೆನು. ಈ ಪುಸ್ತಕ, ನಾವು ನಮ್ಮ ಸುತ್ತು ಮುತ್ತ ನೋಡುತ್ತಿರುವ ಪ್ರತಿಯೊಂದು ಪದಾರ್ಥ- ಬೆಟ್ಟ, ಗುಡ್ಡ, ಹೊಳೆ, ಸಮುದ್ರ ಮತ್ತು ಜ್ವಾಲಾಮುಖಿಯ ಪರ್ವತಗಳಿಂದ ಕಂಗೊಳಿಸುತ್ತದೆ. ಈ ಪುಸ್ತಕ ಪ್ರಾಚೀನ ಕಾಲದ ಇತಿಹಾಸ ಹೇಗೆ ಬರೆಯಲ್ಪಟ್ಟಿತು? ಯಾವಾಗಲೂ ತೆರೆದಿರುತ್ತದೆ. ಆದರೆ ಅತ್ತ ಲಕ್ಷ್ಯ ಕೊಡುವವರಾಗಲಿ ಅದನ್ನು ಓದಲು ಹವಣಿಸುವವರಾಗಲಿ ಎಷ್ಟು ಜನ? ಈ ಪುಸ್ತಕವನ್ನು ಓದಿ ತಿಳಿಯಬಲ್ಲೆವಾದರೆ ಅದು ನನಗೆ ಎಂತಹ ಮನೋರಂಜಕವಾದ ಕತೆಯನ್ನು ಹೇಳಬಲ್ಲುದು! ನಾವು ಅಲ್ಲಿನ ಪುಸ್ತಕಗಳಲ್ಲಿ ಓದಿಕೊಳ್ಳುವ ಈ ಕತೆಗಳು, ಕಟ್ಟು ಕತೆಗಳಿಗಿಂತ ಹೆಚ್ಚು ಮನೋರಂಜಕವಾಗಿರುವುವು.

ಯಾವ ಕಾಲದಲ್ಲಿ ಈ ನಮ್ಮ ಭೂಮಿಯ ಮೇಲೆ ಮನುಷ್ಯನು ಮತ್ತು ಪ್ರಾಣಿಗಳು ಬದುಕಿ ಬಾಳುತ್ತಿರಲಿಲ್ಲವೋ ಅಂತಹ ತೀರ ಹಿಂದಿನ ಕಾಲದ ಸಂಗತಿಗಳನ್ನು ಈ ಸೃಷ್ಟಿಯ ಪುಸ್ತಕದಿಂದ ನಾವು ಕಲಿಯಬಲ್ಲೆವು. ನಾವು ಅದನ್ನು ಓದುತ್ತ ಹೋದಂತೆ ನಮಗೆ ತಿಳಿದುಬರುವುದೇನೆಂದರೆ: ಮೊದಲು ಪ್ರಾಣಿಗಳು ಕಾಣಿಸಿಕೊಂಡವು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಪ್ರಾಣಿಗಳು ಕಾಣಿಸಿಕೊಳ್ಳುವುವು. ಆಮೇಲೆ ಬರುವವರು ಮನುಷ್ಯರು – ಗಂಡಸರು ಮತ್ತು ಹೆಂಗಸರು, ಆದರೆ ಆ ಕಾಲದ ಮನುಷ್ಯರು ನಾವು ಈಗ ನೋಡುತ್ತಿರುವ ಮನುಷ್ಯರಿಗಿಂತ ತೀರ ಬೇರೆ ತರದವರು. ಅವರು ಕಾಡು ಮನುಷ್ಯರು – ಪ್ರಾಣಿಗಳಿಗಿಂತ ಬಹಳ ಭಿನ್ನರಲ್ಲದವರು, ಮೆಲ್ಲ ಮೆಲ್ಲನೆ ಅವರು ಅನುಭವ ಪಡೆದು ವಿಚಾರ ಮಾಡತೊಡಗುವರು. ಈ ವಿಚಾರ ಶಕ್ತಿಯೇ ಅವರನ್ನು ಪ್ರಾಣಿಗಳಿಂದ ಬೇರ್ಪಡಿಸುವುದು. ಈ ವಿಚಾರ ಶಕ್ತಿಯೇ ಅವರನ್ನು ಬಹಳ ದೊಡ್ಡ ಮತ್ತು ಅತಿ ಭಯಂಕರ ಪ್ರಾಣಿಗಳಿಗಿಂತ ಬಲಿಷ್ಠರನ್ನಾಗಿ ಮಾಡುವುದು. ಒಬ್ಬ ಚಿಕ್ಕ ಮನುಷ್ಯನು ಬಹಳ ದೊಡ್ಡದಾದ ಆನೆಯ ಮೇಲೆ ಕುಳಿತು ತನ್ನ ಮನಬಂದಂತೆ ಅದನ್ನು ಕೆಲಸದಲ್ಲಿ ತೊಡಗಿಸುವುದನ್ನು ನೀನು ಈಗ ನೋಡುತ್ತಿರುವೆ. ಆನೆ ಬಹು ದೊಡ್ಡದಾದ ಬಲಿಷ್ಠವಾದ ಪ್ರಾಣಿ, ತನ್ನ ಮೇಲೆ ಕುಳಿತಿರುವ ಮಾವುತನಿಗಿಂತ ಅದು ಎಷ್ಟೋ ಬಲವುಳ್ಳದ್ದು. ಆದರೆ ಮಾವುತನಿಗೆ ಯೋಚನಾಶಕ್ತಿ ಇದೆ. ಮನುಷ್ಯನು ಆನೆಯ ಒಡೆಯನಾಗಿರುವುದು ಆನೆ ಅವನ ಆಳಾಗಿರುವುದೂ ಇದರಿಂದಲೇ, ಹೀಗೆ ಮನುಷ್ಯನಲ್ಲಿ ವಿಚಾರ-ಶಕ್ತಿ ಬೆಳೆದಂತೆ ಅವನು ಹೆಚ್ಚು ಜಾಣನಾಗತೊಡಗಿದನು; ಅವನ ಬುದ್ಧಿ ಹೆಚ್ಚು ಚುರುಕಾಯಿತು. ಅವನು ಅನೇಕ ವಿಷಯಗಳನ್ನು, ಅಂದರೆ ಬೆಂಕಿ ಹೊತ್ತಿಸುವುದು, ಉತ್ತು ಬೆಳೆಯುವುದು, ನೇಯುವುದು, ಮನೆ ಕಟ್ಟುವುದು ಮೊದಲಾದುವುಗಳನ್ನು ಕಂಡುಹಿಡಿದನು. ಎಷ್ಟೋ ಗಂಡಸರೂ ಹೆಂಗಸರೂ ಕೂಡಿ ಇರತೊಡಗಿದರು. ಮೊಟ್ಟಮೊದಲು ಊರುಗಳಾದುದು ಹೀಗೆ. ಊರುಗಳಾಗುವ ಮೊದಲು ಮನುಷ್ಯರು ಪ್ರಾಯಶಃ ಅಲೆದಾಡುತ್ತಿದ್ದರು; ಮತ್ತು ಒಂದು ತರದ ಗುಡಾರದ ಮನೆಗಳಲ್ಲಿ ವಾಸಿಸುತ್ತಿದ್ದರು. ಆಗ ಅವರಿಗೆ ಭೂಮಿಯಿಂದ ಧಾನ್ಯವನ್ನು ಹೇಗೆ ಬೆಳೆಯಬೇಕೆಂದು ಗೊತ್ತಿರಲಿಲ್ಲ. ಆದುದರಿಂದ ಅವರಲ್ಲಿ ಅಕ್ಕಿಯು ಇರಲಿಲ್ಲ; ರೊಟ್ಟಿ ಮಾಡಲು ಬೇಕಾದ ಜೋಳವೂ ಇರಲಿಲ್ಲ. ಕಾಯಿ ಪಲ್ಲೆಯೂ. ಈಗ ನೀನು ಉಣ್ಣುವ ಅನೇಕ ಪದಾರ್ಥಗಳೂ ಅವರಿಗೆ ತಿಳಿದಿರಲಿಲ್ಲ. ಕೆಲವು ಕಾಡುಗಡ್ಡೆಗಳು ಮತ್ತು ಹಣ್ಣು ಹಂಪಲುಗಳು ಸಿಗುತ್ತಿದ್ದು ಅವರು ಅವುಗಳನ್ನೇ ತಿನ್ನುತ್ತಿದ್ದಿರಬಹುದು. ಬಹಳ ಮಾಡಿ, ತಾವು ಬೇಟೆಯಾಡಿ ತಂದ ಪ್ರಾಣಿಗಳಿಂದಲೇ ಅವರು ಜೀವಿಸುತ್ತಿದ್ದಿರಬಹುದು.

ಊರು ಮತ್ತು ಪಟ್ಟಣಗಳು ಬೆಳೆದಂತೆ ಜನರು ಸೊಗಸಾದ ಕೈಗಾರಿಕೆಗಳನ್ನು ಕಲಿತುಕೊಂಡರು. ಬರೆಯುವದನ್ನೂ ಕಲಿತರು. ಆದರೆ ಬಹಳ ಕಾಲದವರೆಗೆ ಬರೆಯಲು ಕಾಗದವಿರಲಿಲ್ಲ. ಜನರು ಭೂರ್ಜಪತ್ರ ಇಲ್ಲವೆ ತಾಡವೋಲೆಗಳ ಮೇಲೆ ಬರೆಯುತ್ತಿದ್ದರು. ಬಹಳ ಹಿಂದಿನದಾದ ಆಗಿನ ಕಾಲದಲ್ಲಿ ತಾಡವೋಲೆಗಳ ಮೇಲೆ ಸಂಪೂರ್ಣವಾಗಿ ಬರೆದ ಪುಸ್ತಕಗಳನ್ನು ಕೆಲವು ಪುಸ್ತಕಾಲಯಗಳಲ್ಲಿ ಇಂದಿಗೂ ನೀನು ನೋಡಬಹುದು. ಆಮೇಲೆ ಹಾಳೆ ಬಳಕೆಗೆ ಬಂದು ಬರೆಯಲು ಸುಲಭವಾಯಿತು. ಆದರೆ ಅಚ್ಚು-ಮನೆ ( Printing Press ) ಗಳಿಲ್ಲದುದರಿಂದ ಈಗಿನಂತೆ ಸಾವಿರಾರು ಪುಸ್ತಕಗಳನ್ನು ಅಚ್ಚುಹಾಕಲು ಆಗುತ್ತಿರಲಿಲ್ಲ. ಒಂದು ಸಲ ಒಂದು ಪುಸ್ತಕವನ್ನು ಮಾತ್ರ ಬರೆಯಬಹುದಾಗಿತ್ತು. ಆಮೇಲೆ ಕೈಯಿಂದ ಬಹಳ ಕಷ್ಟಪಟ್ಟು ಅದರ ಪ್ರತಿಗಳನ್ನು ತೆಗೆಯಬೇಕಾಗಿದ್ದಿತು. ಆದುದರಿಂದ ಪುಸ್ತಕಗಳು ವೆಗ್ಗಳವಾಗಿರುವುದು ಸಾಧ್ಯವಿರಲಿಲ್ಲ. ಪುಸ್ತಕಗಳನ್ನು ಮಾರುವವನಲ್ಲಿ ಇಲ್ಲವೆ ಪುಸ್ತಕಗಳ ಅಂಗಡಿಗಳಿಗೆ ಹೋಗಿ ಪುಸ್ತಕವನ್ನು ಕೊಂಡುಕೊಳ್ಳುವುದು ಶಕ್ಯವಿರಲಿಲ್ಲ. ಅದರ ಪ್ರತಿಯನ್ನು ಮಾಡಿಸಿಕೊಳ್ಳಲು ಬಹಳ ಕಾಲ ಬೇಕಾಗುತ್ತಿತ್ತು. ಆದರೆ ಆಗಿನ ಕಾಲದಲ್ಲಿ ಜನರು ಬಹಳ ಮುದ್ದಾಗಿ ಬರೆಯುತ್ತಿದ್ದರು. ನಮ್ಮ ಪುಸ್ತಕಾಲಯದಲ್ಲಿ ಸುಂದರವಾದ ಕೈಬರೆಹದ ಅನೇಕ ಹೊತ್ತಗೆಗಳು ಈಗ ನಮಗೆ ದೊರೆಯುತ್ತವೆ. ಸಂಸ್ಕೃತ, ಪಾರಸಿ, ಹಿಂದಿ ಮತ್ತು ಕನ್ನಡ ಕೈಬರಹದ ಹೊತ್ತಗೆಗಳು ಭಾರತದಲ್ಲಿವೆ. ಪುಸ್ತಕವನ್ನು ಪ್ರತಿಮಾಡಿದವನು ಹಲವು ಸಲ ಓಲೆಯ ಇಕ್ಕೆಲದಲ್ಲಿಯೂ ಹೂಗಳನ್ನೂ ಚಿತ್ರಗಳನ್ನೂ ತೆಗೆದಿರುವನು.

ಊರುಗಳು ಬೆಳೆದಂತೆಲ್ಲ ದೇಶಗಳೂ, ರಾಷ್ಟ್ರಗಳೂ ರೂಪುಗೊಂಡವು. ದೇಶದಲ್ಲಿ ಒಬ್ಬರಿಗೊಬ್ಬರು ನೆರೆಹೊರೆಯಾಗಿ ಜನರು ಇರತೊಡಗಿದುದರಿಂದ ಒಬ್ಬರಿಗೊಬ್ಬರ ಗುರುತು ತಾನಾಗಿಯೇ ಆಯಿತು. ಬೇರೆ ದೇಶಗಳ ಜನರಿಗಿಂತ ತಾವು ಹೆಚ್ಚಿನವರೆಂದು ಅವರು ತಿಳಿದುಕೊಂಡರು ಮತ್ತು ಬುದ್ದಿಗೇಡಿಗಳಾಗಿ ಅವರೊಂದಿಗೆ ಕಾದಾಡತೊಡಗಿದರು. ಕಾದಾಡುವುದು, ಒಬ್ಬರನ್ನೊಬ್ಬರು ಕೊಲ್ಲುವುದು ತೀರ ತಿಳಿಗೇಡಿತನದ ಕೆಲಸವೆಂದು ಆಗಿನವರು ತಿಳಿದಿರಲಿಲ್ಲ; ಇಂದಿಗೂ ತಿಳಿದುಕೊಳ್ಳಲೊಲ್ಲರು. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ.

ಈ ಊರು ಮತ್ತು ದೇಶಗಳ ಚರಿತ್ರೆಯನ್ನು ತಿಳಿದುಕೊಳ್ಳುವುದಕ್ಕಾಗಿ ನಾವು ಹಳೆಯ ಪುಸ್ತಕಗಳ ನೆರವನ್ನು ಪಡೆಯಬೇಕಾಗುತ್ತದೆ. ಆದರೆ ಇಂತಹ ಹೊತ್ತಗೆಗಳು ಬಹಳ ದೊರೆಯುವದಿಲ್ಲ. ನಮಗೆ ನೆರವಾಗುವ ಬೇರೆ ಬೇರೆ ಒಡವೆಗಳಿವೆ. ಹಿಂದಿನ ಕಾಲದ ಅರಸರು ಮತ್ತು ಸಾಮ್ರಾಟರು ತಮ್ಮ ಆಳ್ವಿಕೆಯ ಕಾಲದಲ್ಲಿ ನಡೆದ ಸಂಗತಿಗಳನ್ನು ಕಲ್ಲಿನ ಕಂಬಗಳ ಮೇಲೆ ಇಲ್ಲವೆ ಇಟ್ಟಂಗಿಗಳ ಮೇಲೆ ಬರೆಯಿಸುತ್ತಿದ್ದರು. ಪುಸ್ತಕಗಳು ಬಹಳ ಕಾಲ ಬಾಳುವುದಿಲ್ಲ. ಅವುಗಳ ಕಾಗದಗಳು ಹುಳುತುಹೋಗುತ್ತವೆ. ಆದರೆ ಕಲ್ಲುಗಳು ಬಹಳ ಕಾಲದವರೆಗೆ ಬಾಳುತ್ತವೆ. ಅಲಹಾಬಾದಿನ ಕೋಟೆಯಲ್ಲಿ ಅಶೋಕನ ದೊಡ್ಡ ಕಲ್ಲಿನ ಕಂಬವನ್ನು ನೋಡಿದ್ದುದು ನಿನಗೆ ನೆನಪಿರಬಹುದು. ಅಶೋಕನು ನೂರಾರು ವರುಷಗಳ ಹಿಂದೆ ಭಾರತದ ದೊಡ್ಡ ಅರಸನಾಗಿದ್ದನು. ಅವನು ಇಂತಹ ಕಂಬಗಳ ಮೇಲೆ ತನ್ನ ಶಾಸನಗಳನ್ನು ಕೊರೆಯಿಸಿ ಸಾರಿರುವನು. ನೀನು ಲಖನೌ ಪಟ್ಟಣದಲ್ಲಿಯ ಪುರಾತನ ವಸ್ತು ಸಂಗ್ರಹಾಲಯಕ್ಕೆ ಹೋದರೆ ಅಕ್ಷರಗಳನ್ನು ಕೆತ್ತಿದ ಹಲವು ಇಟ್ಟಂಗಿಗಳು ನಿನ್ನ ಕಣ್ಣಿಗೆ ಬೀಳುವುವು.

ಬೇರೆ ಬೇರೆ ದೇಶಗಳ ಪ್ರಾಚೀನ ಇತಿಹಾಸವನ್ನು ನಾವು ಅಭ್ಯಾಸ ಮಾಡುವಾಗ, ಬಹಳ ಹಿಂದಿನ ಕಾಲದಲ್ಲಿ ಚೀನ ಮತ್ತು ಈಜಿಪ್ಟ್ ದೇಶಗಳಲ್ಲಿ ಅಲ್ಲಿಯ ಜನರು ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿರುವುದು ನಮಗೆ ಗೊತ್ತಾಗುತ್ತದೆ. ಆಗ ಯುರೋಪಿನ ದೇಶಗಳು ಇನ್ನೂ ಕಾಡು ಜನರಿಂದ ತುಂಬಿದ್ದವು. ರಾಮಾಯಣ, ಮಹಾಭಾರತಗಳನ್ನು ಬರೆದ ಕಾಲದಲ್ಲಿ ಭಾರತದ ವೈಭವದ ದಿನಗಳ ಸಂಗತಿಗಳೂ ನಮಗೆ ಗೊತ್ತಾಗುತ್ತವೆ. ಆಗಿನ ಕಾಲದಲ್ಲಿ ನಮ್ಮ ಭಾರತ ಬಲಿಷ್ಠವಾಗಿಯೂ ಸಿರಿಯುಳ್ಳದ್ದಾಗಿಯೂ ಇದ್ದಿತು. ಇಂದು ಅದು ತೀರ ಬಡತನಕ್ಕೆ ಈಡಾಗಿದೆ ಮತ್ತು ಪರಕೀಯರ ಆಳ್ವಿಕೆಗೆ ಒಳಪಟ್ಟಿದೆ. ನಮ್ಮ ದೇಶದಲ್ಲಿಯೆ ನಮಗೆ ಸ್ವಾತಂತ್ರ್ಯವಿಲ್ಲ. ಅದರಿಂದ ನಮಗೆ ಬೇಕಾದುದನ್ನು ನಾವು ಮಾಡಲಾರೆವು. ಆದರೆ ಈ ಸ್ಥಿತಿ ಹಿಂದಿನಿಂದಲೂ ಇರಲಿಲ್ಲ. ನಾವು ಪ್ರಯತ್ನ ಮಾಡಿದರೆ ನಮ್ಮ ದೇಶವನ್ನು ನಾವು ಸ್ವತಂತ್ರವಾಗಿ ಮಾಡಬಲ್ಲೆವು. ಅದರಿಂದ ನಮ್ಮ ಬಡಜನರೆಲ್ಲರನ್ನೂ ಒಳ್ಳೆಯ ಸ್ಥಿತಿಗೆ ತರಬಹುದು. ಯುರೋಪಿನ ಸುಖಮಯವಾದ ಕೆಲವು ದೇಶಗಳಂತೆ ನಮ್ಮ ಭರತಭೂಮಿಯೂ ಆಗಬಹುದು.

ಭೂಮಿಯ ಮನೋಹರವಾದ ಚರಿತ್ರೆಯನ್ನು ಮೊದಲಿನಿಂದ ನನ್ನ ಮುಂದಿನ ಓಲೆಯಲ್ಲಿ ಬರೆಯತೊಡಗುವೆನು.

(ಈ ಪುಸ್ತಕ ಮುದ್ರಣ, ಇ ಬುಕ್, ಆಡಿಯೋ ಬುಕ್ ರೂಪದಲ್ಲಿ ಲಭ್ಯ. ಖರೀದಿಗಾಗಿ ಸಂಪರ್ಕಿಸಿ : 9480035877  ಋತುಮಾನ)

*

ಜವಾಹರಲಾಲ ನೆಹರು : (1889-1964) ಸ್ವತಂತ್ರ ಭಾರತದ ಮೊದಲ ಪ್ರಧಾನಿ. ಭಾರತದ ಸ್ವಾತಂತ್ರ್ಯಕ್ಕೆ ಮೊದಲು ಮತ್ತು ನಂತರದ ರಾಜಕೀಯದಲ್ಲಿ ಕಾಣಿಸಿಕೊಳ್ಳುವ ಮುಂಚೂಣಿ ನಾಯಕರಲ್ಲಿ ಒಬ್ಬರು. 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ, ಮತನಿರಪೇಕ್ಷ ತತ್ವದಡಿಯಲ್ಲಿ, ಪ್ರಜಾಪ್ರಭುತ್ವ ಗಣರಾಜ್ಯ, ಸಾರ್ವಭೌಮ, ಸ್ವತಂತ್ರ ಭಾರತದ ಕನಸು ಕಂಡು ಅದಕ್ಕಾಗಿ ಶ್ರಮಿಸಿದವರು. ಆಧುನಿಕ ಭಾರತದ ಶಿಲ್ಪಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಭಾರತೀಯ ಮಕ್ಕಳಲ್ಲಿ ಚಾಚಾ ನೆಹರು ಎಂದೇ ಪ್ರಸಿದ್ಧರು.

ಕಪಟರಾಳ ಕೃಷ್ಣರಾವ್ : (1889-1996) ಹೈದ್ರಾಬಾದ್ ಕರ್ನಾಟಕದ ಹಿರಿಯ ಸಾಹಿತಿ, ಸಂಶೋಧಕರು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಹಾಗೂ ಸಂಶೋಧನೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ಹುಟ್ಟಿದ್ದು ಸುರಪುರ ಬಳಿಯ ಹಾಲಗಡಲಿ ಎಂಬ ಹಳ್ಳಿಯಲ್ಲಿ. ಉರ್ದು ಮತ್ತು ಮರಾಠಿ ಪ್ರಬಲವಾಗಿರುವಾಗ ಕಲಬುರ್ಗಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಿದ ಕೆಲವು ಮಹನೀಯರಲ್ಲಿ ಒಬ್ಬರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದರು. ಇವರು ಇತಿಹಾಸಕ್ಕೆ ಸಂಬಂಧಿಸಿದಂತೆ ಮೂರು ಸಂಶೋಧನಾ ಗ್ರಂಥಗಳನ್ನು ಬರೆದಿದ್ದಾರೆ. ನಾಡ-ನುಡಿಯ ಇತಿಹಾಸ, ಕರ್ನಾಟಕ ಕಲಾಕುಳ ಶೈವರ ಇತಿಹಾಸ, ಸುರಪುರ ಸಂಸ್ಥಾನದ ಇತಿಹಾಸ.

ಇದನ್ನೂ ಓದಿ : Short Stories for Children : ಅಚ್ಚಿಗೂ ಮೊದಲು ; ‘ಕಾಡಂಚಿನ ಊರಿನಲ್ಲಿ’ ಬಾಲ್ಯವೆಂಬ ಹೂ ಕಣಿವೆ

Published On - 3:37 pm, Sun, 29 August 21