ಮಕ್ಕಳಿಗಾಗಿ ನೀತಿಕತೆ: ಪ್ರೀತಿ ಮತ್ತೆ ದಯೆಯಿಂದ ಏನನ್ನು ಬೇಕಾದರೂ ಗೆಲ್ಲಬಹುದು
ಈಗ ಕತೆಗಳನ್ನು ಹೇಳುವ, ಕೇಳುವ ಪರಿಪಾಠವೇ ಕಡಿಮೆಯಾಗಿರುವುದು ವಿಷಾದನೀಯ. ಇಂತಹ ಹೊತ್ತಿನಲ್ಲಿ ಈ ಭಾನುವಾರದ ಓದಿಗೆಂದೇ ಮಕ್ಕಳಿಗಾಗಿ ಒಂದು ಅಪರೂಪದ ಕತೆಯನ್ನು ಕೊಡಲಾಗಿದೆ.
ಒಂದಾನೊಂದು ಕಾಲದಲ್ಲಿ.. ಎಂದು ಶುರುವಾಗುವ ಕತೆಗಳು ಈಗೀಗ ತೀರಾ ಅಪರೂಪ ಎಂಬಂತಾಗಿಬಿಟ್ಟಿವೆ. ಬದಲಾದ ಜೀವನ ಶೈಲಿ, ಬದುಕಿನ ಮೌಲ್ಯ, ಕುಟುಂಬ ಪದ್ಧತಿ, ಆಧುನಿಕತೆ ಇವೆಲ್ಲವೂ ನಮ್ಮ ನಡುವಿದ್ದ ಎಷ್ಟೋ ಸುಂದರ ಸಂಗತಿಗಳನ್ನು ಮರೆಗೆ ಸರಿಸಿಬಿಟ್ಟಿವೆ. ಕೇವಲ ಒಂದು ದಶಕದ ಹಿಂದೆ ಸಾಮಾನ್ಯವೆಂಬಂತೆ ಕಂಡುಬರುತ್ತಿದ್ದ ಅನೇಕ ಸಂಗತಿಗಳು ಇಂದು ಅಪರೂಪವಾಗಿಬಿಟ್ಟಿವೆ. ಅದರಲ್ಲಿ ಕತೆ ಹೇಳುವ ಪರಿಪಾಠವೂ ಒಂದು. ಮನೆಯ ಜಗುಲಿಯಲ್ಲೋ, ಪಡಸಾಲೆಯಲ್ಲೋ ಮೊಮ್ಮಕ್ಕಳನ್ನು ಕೂರಿಸಿಕೊಂಡು ಅಜ್ಜ, ಅಜ್ಜಿಯಂದಿರು ಒಂದೊಂದೇ ಕತೆಗಳನ್ನು ಸರುಳಿ ಬಿಚ್ಚಿದಂತೆ ಬಿಚ್ಚುತ್ತಾ ಹೋದರೆ ಪುಟ್ಟ ಕಿವಿಗಳನ್ನು ಅಗಲಿಸಿಕೊಳ್ಳುವ ಮಕ್ಕಳು ಕತೆಯ ಭಾಗವಾಗಿಬಿಡುತ್ತಿದ್ದರು. ತಮಾಷೆಯಿದ್ದಾಗ ನಕ್ಕು, ಬೇಜಾರಾದಾಗ ಅತ್ತು, ಅಚ್ಚರಿಯೆನಿಸಿದಾಗ ಕಣ್ಣರಳಿಸಿ ಕಥಾಲೋಕದಲ್ಲಿ ಮುಳುಗುತ್ತಿದ್ದರು. ಆದರೆ, ಈಗ ಸ್ಮಾರ್ಟ್ಫೋನ್ ಒಂದಿದ್ದರೆ ಅದುವೇ ಪ್ರಪಂಚ ಎಂಬಂತಾಗಿ ಕತೆಗಳಿಗೆ ಪೂರ್ಣ ವಿರಾಮ ಬಿದ್ದುಬಿಟ್ಟಿದೆ.
ಮಕ್ಕಳಿಗಾಗಿ ನೈತಿಕ ಕಥೆಗಳು, ರಾಮಾಯಣ, ಮಹಾಭಾರತ, ಚಾಣಕ್ಯ ನೀತಿಕಥೆಗಳು, ಪಂಚತಂತ್ರ ಹೀಗೆ ಪುಟಾಣಿಗಳ ವಯಸ್ಸಿಗೆ ತಕ್ಕಂತೆ ಸಹಸ್ರಾರು ಕತೆಗಳಿವೆ. ಅವೆಲ್ಲವೂ ಮಕ್ಕಳ ನಡವಳಿಕೆ ಮತ್ತು ಭವಿಷ್ಯದ ಹಾದಿಗೆ ಮಾರ್ಗದರ್ಶನ ನೀಡುವ ಪಾಠಗಳೂ ಹೌದು. ಕುತೂಹಲಕಾರಿ ಕತೆಗಳನ್ನು ಹೇಳುತ್ತಲೇ ಸಮಾಜದಲ್ಲಿ ಹೇಗೆ ವರ್ತಿಸಬೇಕು, ದೊಡ್ಡವರನ್ನು ಹೇಗೆ ಗೌರವಿಸಬೇಕು, ಪ್ರೀತಿ ಮತ್ತು ದಯೆಯಿಂದ ನಾವು ನಮ್ಮ ಮನಸ್ಸನ್ನು ಹೇಗೆ ಬದಲಾಯಿಸಿಕೊಳ್ಳಬಹುದು, ಜನರ ಮನಸ್ಸನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಕಲಿಸುತ್ತಿದ್ದವು. ಆದರೆ, ಈಗ ಕತೆಗಳನ್ನು ಹೇಳುವ, ಕೇಳುವ ಪರಿಪಾಠವೇ ಕಡಿಮೆಯಾಗಿರುವುದು ವಿಷಾದನೀಯ. ಇಂತಹ ಹೊತ್ತಿನಲ್ಲಿ ಈ ಭಾನುವಾರದ ಓದಿಗೆಂದೇ ಮಕ್ಕಳಿಗಾಗಿ ಒಂದು ಅಪರೂಪದ ಕತೆಯನ್ನು ಕೊಡಲಾಗಿದೆ.
ಒಂದಾನೊಂದು ಕಾಲದಲ್ಲಿ ಒಕಯಾನ ಎಂಬ ಸನ್ಯಾಸಿಯೊಬ್ಬನಿದ್ದ. ಆತ ಅದೆಷ್ಟು ಶಕ್ತಿಶಾಲಿಯಾಗಿದ್ದ ಅಂದರೆ ತನ್ನ ತಪಸ್ಸಿನಿಂದಲೇ ಯಾರನ್ನು ಬೇಕಾದರೂ ನಿಯಂತ್ರಿಸುತ್ತಿದ್ದ. ಆತನಿಗೆ ಇನ್ನೊಬ್ಬರ ತಲೆಯಲ್ಲಿ ಯಾವ ಯೋಚನೆ ಇದೆ ಎಂದು ನೋಡುವ ಅದ್ಭುತ ಶಕ್ತಿಯೂ ಇತ್ತು. ಅವನಿಗೆ ಅನೇಕ ಶಿಷ್ಯರಿದ್ದರು. ಅವರಲ್ಲಿ ಎಂಟು ವರ್ಷದ ಹುಡುಗ ಕೂಡ ಒಬ್ಬ. ಒಂದು ದಿನ ಆತ ಮಗುವಿನ ಮುಖ ನೋಡಿದಾಗ ಆತನ ಭವಿಷ್ಯ ತಿಳಿದಿತ್ತು. ಆ ಮಗುವಿನ ಜೀವನ ಇನ್ನೇನು ಮುಗಿಯುತ್ತದೆ. ಕೆಲವೇ ದಿನಗಳಲ್ಲಿ ಆತ ಸಾಯುತ್ತಾನೆ ಎಂದು ಗೊತ್ತಾಗಿಬಿಟ್ಟಿತು.
ಆ ಕ್ಷಣದಲ್ಲಿ ಬೇಸರವಾಯಿತಾದರೂ ವಿಧಿಯನ್ನು ತಪ್ಪಿಸುವುದು ಸಾಧ್ಯವಿಲ್ಲವಾದ್ದರಿಂದ ಮಗು ಸಾಯುವ ಸಮಯದಲ್ಲಾದರೂ ತನ್ನ ಹೆತ್ತವರೊಂದಿಗೆ ಇರುವುದು ಉತ್ತಮ ಎಂದು ಯೋಚಿಸಿದ. ಆದ್ದರಿಂದ ಆ ಹುಡುಗನನ್ನು ಕರೆದು, ನೋಡು ಮಗೂ.. ನೀನು ಸ್ವಲ್ಪ ವಿರಾಮ ತೆಗೆದುಕೊಂಡು ಮನೆಗೆ ಹೋಗು. ನಿನ್ನ ಹೆತ್ತವರೊಂದಿಗೆ ಸಾಧ್ಯವಾದಷ್ಟು ದಿನಗಳನ್ನು ಸಂತೋಷದಿಂದ ಕಳೆದುಬಿಡು. ಮರಳಿ ಬರಲು ಆತುರಪಡಬೇಡ ಎಂದು ಹೇಳಿ ಕಳುಹಿಸಿದ.
ಅದಾಗಿ ಮೂರು ತಿಂಗಳು ಕಳೆದಿತ್ತು. ಈ ಸನ್ಯಾಸಿ ಮಗು ಸಾವಿಗೀಡಾಗಿರಬಹುದೆಂದು ಭಾವಿಸಿದ್ದ. ಆದರೆ ಅದೊಂದು ದಿನ, ಈತ ಬೆಟ್ಟದ ಮೇಲೆ ಕುಳಿತಿರುವಾಗ ನಂಬಲು ಕಷ್ಟವಾದ ದೃರ್ಶಯವೊಂದು ಕಂಡಿತು. ಆಶ್ಚರ್ಯದಿಂದ ಕಣ್ಣುಜ್ಜಿಕೊಂಡು ಕೆಳಗೆ ನೋಡಿದ. ಯಾವ ಹುಡುಗ ಸತ್ತಿರಬಹುದು ಎಂದು ಅಂದುಕೊಳ್ಳಲಾಗಿತ್ತೋ ಅದೇ ಹುಡುಗ ಮರಳಿ ಬರುತ್ತಿದ್ದ. ಅದು ಸನ್ಯಾಸಿಯನ್ನು ಅಚ್ಚರಿಗೊಳಿಸಿತು. ಆದರೂ ತನ್ನ ಆಶ್ಚರ್ಯವನ್ನು ತೋರಿಸಿಕೊಳ್ಳದೇ, ನೀನು ಇಲ್ಲಿಂದ ಹೊರಟು ಮನೆಗೆ ತಲುಪಿದೆಯಾ? ಆಮೇಲೆ ಏನೇನಾಯಿತು? ನಡೆದಿದ್ದನ್ನೆಲ್ಲಾ ಹೇಳು ಎಂದು ಕೇಳಿದನು.
ಆ ಹುಡುಗ ಅಂದು ನಡೆದಿದ್ದನ್ನು ಯಥಾವತ್ತಾಗಿ ವಿವರಿಸಿದ. ರಸ್ತೆಯ ಮಧ್ಯದಲ್ಲಿ ಅವನು ನೋಡಿದ ತೋಳಗಳು, ದಾಟಿದ ಹಳ್ಳಿ, ಪಟ್ಟಣಗಳ ಬಗ್ಗೆ, ಹತ್ತಿದ ಬೆಟ್ಟಗಳ ಬಗ್ಗೆ, ಎದುರಾದ ನದಿಗಳ ಬಗ್ಗೆ ಒಂದೊಂದಾಗಿ ಹೇಳುತ್ತಾ ಹೋದ. ಎಲ್ಲವನ್ನೂ ಹೇಳಿದ್ದಾಯಿತು ಎಂದು ನಿಲ್ಲಿಸಿದ ಮೇಲೂ ಸನ್ಯಾಸಿಗೆ ಸಮಾಧಾನವಾಗದೆ ಬೇರೆ ಏನಾದರೂ? ಎಂದು ಮತ್ತೆ ಕೇಳಿದ.
ಆಗ ಹುಡುಗ ಮತ್ತೇನನ್ನೋ ನೆನಪು ಮಾಡಿಕೊಂಡು, ಹಾಂ.. ಹೋಗುವಾಗ ನಾನು ಒಂದು ಹಳ್ಳವನ್ನು ದಾಟಬೇಕಾಯಿತು. ಆದರೆ ಅಲ್ಲಿ ಪ್ರವಾಹ ಬಂದಿತ್ತು. ನೀರು ತುಂಬಾ ರಭಸದಿಂದ ಹರಿಯುತ್ತಿತ್ತು. ಆದರೆ, ಹಳ್ಳದ ಮಧ್ಯದಲ್ಲಿ ದ್ವೀಪದಂತೆ ಸಣ್ಣ ಮಣ್ಣಿನ ದಿಬ್ಬವಿತ್ತು. ನಾನು ನೋಡುವಾಗ ಅಲ್ಲೊಂದು ಇರುವೆ ಗೂಡು ಕಂಡಿತು. ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟಿದ್ದರೆ ಅವು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು. ನನಗೆ ಅದನ್ನು ನೋಡಿ ಕನಿಕರವಾಯಿತು. ನಾನು ತಕ್ಷಣ ಪಕ್ಕದ ಮರದ ಕೊಂಬೆಯೊಂದನ್ನು ಮಣ್ಣಿನ ದಿಬ್ಬಕ್ಕೆ ಹಿಡಿದೆ. ಆಗ ಒಂದೊಂದಾಗಿ ಇರುವೆಗಳು ಕೊಂಬೆಯ ಮೇಲೆ ಹತ್ತಿದವು. ಅಷ್ಟೂ ಇರುವೆಗಳು ಸುರಕ್ಷಿತವಾಗಿ ಕೊಂಬೆ ಹತ್ತುವ ತನಕವೂ ನಾನು ಅದನ್ನು ಹಿಡಿದು ನಿಂತಿದ್ದೆ. ಎಲ್ಲವೂ ಅಲ್ಲಿಂದ ದಾಟಿ ಕೊಂಬೆ ಏರಿ ಮರದ ಹತ್ತಿರ ಬಂದ ಮೇಲೆ ಮನೆ ದಾರಿ ಹಿಡಿದೆ. ಆ ಸಣ್ಣ ಜೀವಿಗಳನ್ನು ಉಳಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಖುಷಿಯಿಂದ ಆ ಘಟನೆಯನ್ನು ವಿವರಿಸಿದ.
ಸನ್ಯಾಸಿಗೆ ತಕ್ಷಣವೇ ಆ ಹುಡುಗ ಸಾವಿನಿಂದ ಪಾರಾಗಿದ್ದು ಹೇಗೆ ಎನ್ನುವುದು ಅರ್ಥವಾಯ್ತು. ಆತ ಇರುವೆಗಳನ್ನು ಬದುಕಿಸಿದ್ದನ್ನು ನೋಡಿ ಖುಷಿಯಾದ ದೇವರು ಹುಡುಗನಿಗೆ ಬದುಕಲು ಮತ್ತಷ್ಟು ಅವಕಾಶ ಕೊಟ್ಟಿದ್ದಾರೆ ಎಂದು ಗೊತ್ತಾಗಿಬಿಟ್ಟಿತು.
ನೀತಿ: ನಾವು ದಯೆ ಮತ್ತು ಪ್ರೀತಿಯಿಂದ ಏನು ಮಾಡುತ್ತೇವೆಯೋ ಅದು ನಮ್ಮ ಹಣೆಬರಹವನ್ನು ಬದಲಾಯಿಸಬಲ್ಲದು.
ಇದನ್ನೂ ಓದಿ: Chanakya Niti: ಮಕ್ಕಳ ಈ ಕೆಲವು ಅಭ್ಯಾಸಗಳನ್ನು ನಿರ್ಲಕ್ಷಿಸುವುದು ಭವಿಷ್ಯವನ್ನೇ ಕಿತ್ತುಕೊಳ್ಳಬಹುದು; ಚಾಣಕ್ಯ ನೀತಿ
Chanakya Niti: ಈ 4 ಅಂಶಗಳನ್ನು ಪಾಲಿಸಿದರೆ ಗೆಲುವು ನಿಮ್ಮ ಬಳಿ ಇರುತ್ತದೆ ; ಚಾಣಕ್ಯ ನೀತಿ
(Moral stories for kids thoughtful and inspirational stories in Kannada)