Amrita Pritam’s Birthday : (1919-2005) ಇಂದು ಪಂಜಾಬಿನ ಹೆಸರಾಂತ ಕವಿ ಅಮೃತಾ ಪ್ರೀತಮ್ ಅವರ 102 ನೇ ಹುಟ್ಟುಹಬ್ಬ. ಜಗತ್ತಿನ ಎಲ್ಲ ಪ್ರೇಮಿಗಳ ಹೃದಯದಲ್ಲಿ ಪ್ರೇಮದ ಹೆಬ್ಬಯಕೆಯ ಚಿಗುರು ಬಳ್ಳಿ ನವಿರಾಗಿ ನಲಿದು ಸುಳಿದು ಸೂಸುವ ಹೂಗಾಳಿಯಂತೆ ಬೆಚ್ಚನೆಯ ಭಾವವೊಂದು ಸದಾ ಪ್ರವಹಿಸುತ್ತಲೇ ಇರುತ್ತದೆ. ಅಮೃತಾ ಪ್ರೀತಂ ಎಂದರೆ ನೆನಪಾಗುವುದು ಸಾಹಿರ್ ಲೂಧಿಯಾನ್ವಿಗಾಗಿ ಅವರಲ್ಲಿದ್ದ ಉತ್ಕಟ ಪ್ರೀತಿ. ಲಾಹೋರಿನ ಒಂದು ಮುಷಾಯಿರಾದಲ್ಲಿ ಸಾಹಿರ್ನನ್ನು ಭೇಟಿಯಾಗಿದ್ದ ಅಮೃತಾರಿಗೆ ಸಾಹಿರ್ ಲೂಧಿಯಾನ್ವಿ ಪ್ರೇಮ ಅಮೃತಾರ ಜೀವಿತಕಾಲದವರೆಗೂ ಎದೆಯಲ್ಲುಳಿದುಹೋಯ್ತು. ಆದರೆ ಅವರೆಂದೂ ಸೇರುವುದಿಲ್ಲ. ಒಮ್ಮೆ ಯಾವುದೋ ಸೆಮಿನಾರ್ಗಾಗಿ ಮುಂಬಯಿಗೆ ಹೋದ ಅಮೃತಾರನ್ನು ಸಾಹಿರ್ ಮನೆಗೆ ಕರೆದೊಯ್ಯುತ್ತಾರೆ. ಅವರ ತಾಯಿಯೂ ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ಅವರೊಂದಿಗೆ ಕಳೆದ ಆ ಮಧುರವಾದ ಕ್ಷಣಗಳನ್ನೇ ಅಮೃತಾ ಕತೆಯಾಗಿಸಿದ್ದಾರೆ. ‘ಯೆಹ್ ಕಹಾನಿ ನಹೀ’ – ಹೌದು ಇದು ಕಥೆಯಲ್ಲ.
‘ಈ ಘಟನೆಯನ್ನೊಮ್ಮೆ ಇಮ್ರೋಝ್ ನನಗೆ ಅವರ ಮನೆಯಲ್ಲಿ ಕುಳಿತು ಹರಟುವಾಗ ಕೂಡ ಹೇಳಿದ್ದರು. ತಕ್ಷಣವೇ ಅದನ್ನು ಅನುವಾದಿಸಿ ಹಾಳೆಗಿಳಿಸಿ ಅಕ್ಷರರೂಪವನ್ನೇನೋ ಕೊಟ್ಟೆ. ನಂತರ ಅಮೃತಾ ಬರೆದ ಈ ಕಥೆಯೂ ಸಿಕ್ಕಿತು. ಅಂದಿನಿಂದಲೂ ಅಮೃತಾ ಕ್ರಮಿಸಿದ ಹಾದಿ ಅದಿನ್ನೂ ನನ್ನೊಳಗೇ ಚಲಿಸುತ್ತಲೇ ಇದೆ. ಬಹುಶಃ ಚಲಿಸುತ್ತಲೇ ಇರುತ್ತದೆ ನನ್ನುಸಿರು ಇರುವವರೆಗೂ.’
ರೇಣುಕಾ ನಿಡಗುಂದಿ, ಕವಿ, ಅನುವಾದಕರು
ಇದು ಕಥೆಯಲ್ಲ
ಅಲ್ಲಿ ಕಲ್ಲು ರಾಶಿ ಬಿದ್ದಿತ್ತು, ಮತ್ತು ಸುಣ್ಣವೂ ಬಹಳಷ್ಟಿತ್ತು. ಇನಿತು ಜಾಗದಲ್ಲಿ ಇವೆರಡೂ ತುಸು ಗೋಡೆಯಂತೆ ಎದ್ದು ನಿಂತಿದ್ದರೆ ಮನೆಯ ಗೋಡೆಗಳಾಗುತ್ತಿದ್ದವು. ಆದರೆ ಹಾಗೇನೂ ಆಗಲಿಲ್ಲ. ಅವು ನೆಲದ ಮೇಲೆ ಉದ್ದುದ್ದಕ್ಕೆ ರಸ್ತೆಯಂತೆ ಚಾಚಿಕೊಂಡವು ಮತ್ತು ಅವರಿಬ್ಬರೂ ಬದುಕಿನುದ್ದಕ್ಕೆ ಆ ರಸ್ತೆಯ ಮೇಲೆ ನಡೆಯುತ್ತಲೇ ಹೋದರು.
ಈ ರಸ್ತೆಗಳು, ಪರಸ್ಪರರ ಪಕ್ಕೆಯಿಂದಲೂ ಟಿಸಿಲೊಡೆಯಬಹುದು, ಒಬ್ಬರಿನೊಬ್ಬರ ದೇಹವನ್ನು ಸೀಳಿಕೊಂಡೂ ಹೋಗಬಹುದು. ಒಬ್ಬರೊಬ್ಬರ ಕೈಬಿಡಿಸಿಕೊಂಡು ಫಕ್ಕನೇ ಮಾಯವೂ ಆಗಬಹುದು. ಒಮ್ಮೊಮ್ಮೆ ಅವು ಒಬ್ಬರಿನ್ನೊಬ್ಬರನ್ನು ತಬ್ಬಿಕೊಂಡು ಪರಸ್ಪರರಲ್ಲೇ ಲೀನವೂ ಆಗಿಬಿಡುತ್ತಿದ್ದವು. ಬೆರಳೆಣಿಕೆಯ ಸಂದರ್ಭಗಳಲ್ಲಿ ಮಾತ್ರವೇ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಯಾವಾಗೆಂದು ನಿರ್ದಿಷ್ಟವಾಗಿ ಹೇಳಲಾಗದು. ಆಗೊಮ್ಮೆ, ಈಗೊಮ್ಮೆ, ಅವರಿಬ್ಬರ ಪಾದಗಳಡಿಯಲ್ಲಿ ಹರಡಿಕೊಂಡ ರಸ್ತೆ ಅಚಾನಕ್ಕಾಗಿ ಒಂದನ್ನೊಂದು ಕೂಡಿಕೊಂಡಾಗ!
ಗಳಿಗೆ ಎರಡು ಗಳಿಗೆ ಬಹುಶಃ ರಸ್ತೆಯೂ ಅಚ್ಚರಿಯಿಂದ ನಿಂತುಬಿಡುತ್ತಿತ್ತು, ಅವರ ಕಾಲುಗಳಂತೆ. ಆಗ ಬಹುಶಃ ಅವರಿಬ್ಬರಿಗೂ ಕಟ್ಟದೇ ಹೋದ ತಮ್ಮ ಮನೆಯ ನೆನಪಾಗುತ್ತಿತ್ತು.
ಕಟ್ಟಬಹುದಿತ್ತು, ಆದರೇಕೆ ಕಟ್ಟಲಿಲ್ಲ? ಈ ಯೋಚನೆ ಬಂದದ್ದೇ ಅವರಿಬ್ಬರೂ ಹೈರಾಣಾಗಿ ತಮ್ಮ ಪಾದದಡಿಯ ನೆಲವನ್ನು ಶೂನ್ಯವಾಗಿ ದೃಷ್ಟಿಸುತ್ತಿದ್ದರು. ತಮ್ಮ ಪ್ರಶ್ನೆಯನ್ನು ಭೂತಾಯಿಯ ಒಡಲಲ್ಲಿ ಹುಡುಕುತ್ತಿರುವರೇನೋ ಎಂಬಂತೆ.
ನೋಟ ಮಾತ್ರದಿಂದಲೇ ತಮ್ಮ ಕನಸಿನ ಮನೆಗೆ ಪಾಯ ಹಾಕುತ್ತಿರುವವರಂತೆ ಮಗ್ನತೆಯಲ್ಲಿ ಎಷ್ಟೋ ಹೊತ್ತು ಅವರಿಬ್ಬರೂ ನೆಲದಲ್ಲಿ ನೋಟನೆಟ್ಟು ಮೈಮರೆತು ನಿಂತಿರುತ್ತಿದ್ದರು, ಕೆಲವು ಬಾರಿ ನಿಜವಾಗಲೂ ಅವರ ಕನಸಿನ ಮನೆ ಅಲ್ಲಿ ಎದ್ದು ನಿಂತಿರುವಂತೆಯೂ , ಅವರಿಬ್ಬರೂ ಆ ಮನೆಯಲ್ಲಿ ವಾಸಮಾಡುತ್ತಿರುವಂತೆಯೂ ಅನಿಸಿ ಪುಳಕಿತರಾಗುತ್ತಿದ್ದರು.
ಇದೇನೂ ಅವರ ಹರೆಯದ ಕಥೆಯಲ್ಲ. ಇತ್ತೀಚಿನದೇ, ಇಳಿವಯಸ್ಸಿನ ಕಥೆಯೇ. ಒಂದು ಸರಕಾರಿ ಮೀಟಿಂಗಿಗಾಗಿ ‘ಸ’ ನ ಶಹರಿಗೆ ಬಂದಳು ‘ಅ’.. ಬದುಕು ‘ಅ’ಳಿಗೂ ‘ಸ’ ನಷ್ಟೇ ಸಮಾನ ಸ್ಥಾನಮಾನ ನೀಡಿದೆ. ಸಮಾನ ಮನಸ್ಕರು, ಸಮಾನ ಸ್ಥಾನಮಾನದ ಜನರು ಮೀಟಿಂಗ್ ಮುಗಿಸಿ ತಮ್ಮ ತಮ್ಮ ಊರುಗಳಿಗೆ ಮರಳಲು ಆ ಸರಕಾರಿ ಕಚೇರಿ ವಿಮಾನದ ಟಿಕೆಟ್ಟುಗಳನ್ನೂ ಕಾದಿರಿಸಿತ್ತು.
‘ಸ’ ಮುಂದಾಗಿ ‘ಅ’ ಳ ಟಿಕೆಟ್ಟನ್ನು ತೆಗೆದುಕೊಂಡು ಹೊರಬರುತ್ತ ತನ್ನ ಗಾಡಿಯಲ್ಲಿ ಹೋಗಿ ಕೂರಲು ‘ಅ’ಳಿಗೆ ಆದೇಶಿಸಿದ.
‘ಸಾಮಾನುಗಳೆಲ್ಲಿ?’
‘ಹೋಟೆಲಿನಲ್ಲಿ’
ಚಾಲಕನಿಗೆ ಮೊದಲು ಹೋಟೆಲ್ಲು ಆನಂತರ ಮನೆಗೆ ಹೋಗಲು ಸೂಚಿಸಿದ ‘ಸ’.
‘ಅ’ ಅವನನ್ನು ತಡೆಯಲಿಲ್ಲ. ಸ್ವಗತವೆಂಬಂತೆ ಹೇಳಿಕೊಂಡಳು– ‘ವಿಮಾನ ಹೊರಡಲು ಇನ್ನೇನು ಎರಡೇ ತಾಸಿರುವುದು. ಹೋಟೆಲ್ ಗೆ ಹೋಗಿ ಮತ್ತೆ ಏರ್ಪೋರ್ಟ್ ತಲುಪುವುದು ಕಷ್ಟ’
‘ವಿಮಾನ ನಾಳೆಯೂ ಹೊರಡುತ್ತದೆ, ನಾಡದ್ದೂ ಹೊರಡುತ್ತೆ, ದಿನಾ ಹೋಗುತ್ತೇ – ‘ಸ’ ಇಷ್ಟನ್ನೇ ಹೇಳಿದ. ರಸ್ತೆಯುದ್ದಕ್ಕೂ ಇನ್ನೇನನ್ನೂ ನುಡಿಯಲಿಲ್ಲ.
ಹೋಟಲ್ ತಲುಪಿ ಅವಳ ಸೂಟಕೇಸನ್ನು ಗಾಡಿಯಲ್ಲಿಡುವಾಗ ಅವಳು ಮತ್ತೆ ಹೇಳಿದಳು…
‘ಸಮಯ ಬಹಳ ಕಮ್ಮಿಯಿದೆ, ಫ್ಲೈಟ್ ಮಿಸ್ ಆಗುತ್ತೆ’
ಉತ್ತರವೆಂಬಂತೆ ಅವನೆಂದ – ‘ಮನೆಯಲ್ಲಿ ತಾಯಿ ದಾರಿ ಕಾಯುತ್ತಿರಬಹುದು’.
ಅವಳು ಮೂಕಳಾಗಿ ಯೋಚಿಸುತ್ತಲೇ ಕುಳಿತಳು- ಬಹುಶಃ ಅವನು ತನ್ನ ತಾಯಿಗೆ ಇಂದಿನ ಮೀಟಿಂಗ್ ಮತ್ತು ತಾನು ಬರುವ ವಿಷಯ ಮುಂದಾಗಿಯೇ ತಿಳಿಸಿದ್ದಾನೆ. ಯಾಕೆ ತಿಳಿಸಿದ? ಅರ್ಥವಾಗಲಿಲ್ಲ ಅವಳಿಗೆ.
ಅವಳು ಬಹಳಷ್ಟು ಸಲ ‘ಯಾಕೆ’ ಎಂದು ಪ್ರಶ್ನೆ ಹಾಕಿಕೊಳ್ಳುತ್ತಾಳಾದರೂ ಉತ್ತರಕ್ಕಾಗಿ ಕಾಯುವುದಿಲ್ಲ. ಅವಳಿಗೆ ಗೊತ್ತು, ಹೆಕ್ಕಿದರೂ ಒಡಲಾಳದಿಂದ ಯಾವ ಉತ್ತರವೂ ದೊರೆಯುವುದಿಲ್ಲವೆಂದು. ಸುಮ್ಮನೆ ಕಿಟಕಿಯ ಗಾಜಿನಾಚೆ ಕಾಣುವ ನಗರದ ದೊಡ್ಡ ದೊಡ್ಡ ಇಮಾರತ್ತುಗಳನ್ನು ನೋಡುತ್ತ ಕುಳಿತುಬಿಟ್ಟಳು.
ಸ್ವಲ್ಪ ಹೊತ್ತಿನಲ್ಲಿ ಇಮಾರತ್ತುಗಳ ಸರಣಿ ಮುಗಿದು, ನಗರದ ಹೊರವಲಯ ಪ್ರದೇಶ ಆರಂಭವಾಯಿತು. ದೊಡ್ದ ದೊಡ್ಡ ತಾಳೆ ಮರಗಳ ಸಾಲು ಕಾಣತೊಡಗಿದವು. ಕಡಲು ಬಹುಶಃ ಹತ್ತಿರದಲ್ಲೇ ಇತ್ತೇನೋ… ತಲ್ಲಣದಲ್ಲಿ ಅವಳ ಉಸಿರೂ ಉಪ್ಪುಪ್ಪಾಗತೊಡಗಿತು. ತನ್ನ ಕೈಗಳು ತಾಳೆ ಮರದ ಎಲೆಗಳೋಪಾದಿ ಕಂಪಿಸುತಿರುವಂತೆ ತೋರಿತು ಅವಳಿಗೆ. ಬಹುಶಃ ಅವನ ಮನೆ ಹತ್ತಿರ ಬಂದಿರಬಹುದು.
ಮರಗಳು -ಹಸಿರೆಲೆಗಳಿಂದಾವೃತವಾದ ಒಂದು ಪುಟ್ಟ ಬಂಗಲೆಯ ಎದುರು ಗಾಡಿ ನಿಂತಿತು. ಅವಳೂ ಇಳಿದಳು. ಒಳಹೋಗುವ ಮೊದಲು ಅಲ್ಲೇ ಹತ್ತಿರದ ಬಾಳೆಗಿಡದಡಿಯಲ್ಲಿ ತುಸು ನಿಂತಳು. ಕಂಪಿಸುವ ಬಾಳೆ ಎಲೆಗಳ ನಡುವೆ ಥರಗುಡುವ ತನ್ನ ಕೈಗಳನ್ನು ಬಚ್ಚಿಡಬೇಕೆಂದು ಆ ಕ್ಷಣ ತೀವ್ರವಾಗಿ ಅನಿಸಿತವಳಿಗೆ. ಅವನೊಂದಿಗೇ ಅವಳು ಬಂಗಲೆಯ ಒಳಗೆ ಹೋಗಬಹುದಿತ್ತು, ಅಲ್ಲಿ ಈ ಕೈಗಳ ಅಗತ್ಯವೂ ಇದ್ದಿಲ್ಲ. ಬಹುಶಃ ಈ ಕೈಗಳಿಂದ ಈಗ ಅವನಿಗೆ ಏನನ್ನೂ ಕೊಡಲಾರಳು, ಏನನ್ನೂ ಪಡೆಯಲಾರಳು.
ಗಾಡಿಯ ಸದ್ದು ಕೇಳಿತೆಂದು ತೋರುತ್ತದೆ, ಅವನ ಅಮ್ಮ ಹೊರ ಬಂದರು. ಎಂದಿನಂತೆ ಹಣೆಗೆ ಮುತ್ತಿಟ್ಟು – ಬಾ ಮಗಳೇ – ಎಂದು ಬರಮಾಡಿಕೊಂಡರು.
ಈ ಬಾರಿ ಅವಳು ಬಹಳ ದಿನಗಳ ನಂತರ ಅವನ ಅಮ್ಮನನ್ನು ಕಂಡಿದ್ದಳು. ಅಮ್ಮ ಅವಳ ತಲೆಯ ಮೇಲಿನಿಂದ ಮಣಭಾರವನ್ನು ಇಳಿಸುವವರಂತೆ ಅವಳ ತಲೆಯನ್ನು ಪ್ರೀತಿಯಿಂದ ನೇವರಿಸುತ್ತ ಒಳಗೆ ಕರೆದೊಯ್ದು – ಏನು ಕುಡಿಯುತ್ತೀ ಮಗಳೇ? ಎಂದು ಉಪಚರಿಸತೊಡಗಿದ್ದರು.
ಅಷ್ಟರಲ್ಲಿ ಅವನೂ ಮನೆಯೊಳಗೆ ಬಂದಾಗಿತ್ತು. ತಾಯಿಯನ್ನುದ್ದೇಶಿಸಿ ಹೇಳಿದ – ಮೊದಲು ಚಾಯ್ ಆಗಲಿ, ನಂತರ ಊಟ.
ಡ್ರೈವರ್ ಗಾಡಿಯಿಂದ ಅವಳ ಸೂಟಕೇಸ್ ಎತ್ತಿಕೊಂಡು ಬರುವುದು ಆಕೆಯ ಕಣ್ಣಿಗೆ ಬಿತ್ತು. ಅವಳು ಅವನನ್ನುದ್ದೇಶಿಸಿ ಮೆಲ್ಲಗೇ ಉಸುರಿದಳು, ‘ಸಮಯ ತೀರಾ ಕಡಿಮೆಯಿದೆ, ಏರ್ಪೋರ್ಟನ್ನು ತಲುಪುತ್ತೀನಾ… ಅನುಮಾನ’
ಅವನು ಅವಳತ್ತ ಗಮನ ಕೊಡದೇ ಡ್ರೈವರನಿಗೆ ಹೇಳಿದ – ‘ನಾಳೆ ಮುಂಜಾನೆ ಹೋಗಿ ನಾಡದ್ದಿನ ಟಿಕೆಟ್ ತಕೊಂಡು ಬಾ’ ಮತ್ತೆ ತಾಯಿಯತ್ತ ತಿರುಗಿ – ‘ಬಹಳ ದಿನಗಳಿಂದ ನೀನೆನೋ ನನ್ನ ಗೆಳೆಯರಿಗೆಲ್ಲ ಊಟಕ್ಕೆ ಕರೀಬೇಕು ಅಂತಿದ್ದೆಯಲ್ಲ, ನಾಳೆ ಕರೆಯೋಣ’ ಎಂದ.
ಅವಳು ನಿರಾಸೆ ಮತ್ತು ನಿರೀಕ್ಷೆಯ ಕಣ್ಣುಗಳಿಂದ ಅವನ ಜೇಬಿನತ್ತಲೇ ನೋಡುತ್ತಿದ್ದಳು , ಅದರಲ್ಲಿ ಅವಳ ಹಿಂದಿರುಗುವ ವಿಮಾನಿನ ಟಿಕೆಟ್ ಕುಳಿತು ಅಣಕಿಸುತ್ತಿತ್ತು. – ‘ಸುಮ್ಮನೇ ಟಿಕೆಟ್ ಹಾಳಾಗುತ್ತದೆ’
ಅಡುಗೆ ಮನೆಯತ್ತ ಹೊರಟಿದ್ದ ಅಮ್ಮ ಕ್ಷಣ ನಿಂತು, ಅವಳ ಭುಜವನ್ನು ಮಮತೆಯಿಂದ ಅದುಮಿ – ಟಿಕೆಟ್ ಏನು ಮಹಾ ದೊಡ್ಡದು ಮಗಳೇ, ಇಷ್ಟು ಅಕ್ಕರಾಸ್ಥೆಯಿಂದ ಹೇಳ್ತಿದಾನೆ… ಇರು ಒಂದಿನ’ ಎಂದು ಆಗ್ರಹಪಡಿಸಿದರು
‘ಯಾತಕ್ಕೆ ?’
ಅವಳ ಮನದಲ್ಲಿ ಒಂದು ಪ್ರಶ್ನೆ ಸರ್ರನೇ ಹಾದುಹೋಯಿತು. ಆದರೆ ಏನನ್ನೂ ಅನ್ನಲಾಗಲಿಲ್ಲ. ಮೌನವಾಗಿ ಕುರ್ಸಿಯಿಂದೆದ್ದು ಕೋಣೆಯೆದುರಿನ ವರಾಂಡದಲ್ಲಿ ಹೋಗಿ ನಿಂತುಕೊಂಡಳು. ಎದುರು ದೂರ ದೂರದವರೆಗೂ ತಾಳೆಯ ಮರಗಳಿದ್ದವು. ಇನ್ನೊಂದೆಡೆ ಸಮುದ್ರವಿತ್ತು. ಕಡಲಿನ ಮೊರೆತ ಕೇಳಿಬರುತ್ತಿತ್ತು. ಅವಳಿಗನಿಸಿತು… ಈ ‘ಯಾಕೆ’ ಎನ್ನುವುದು ಇಂದಿನ ಪ್ರಶ್ನೆ ಮಾತ್ರ ಅಲ್ಲ. ಅವಳ ಬದುಕಿನ ಎಷ್ಟೋ ‘ಯಾಕೆ’ ಗಳು ಅವಳ ಮನದ ಕಡಲ ತಡಿಯಲ್ಲಿ ಈ ತಾಳೆ ಮರಗಳಂತೆ ಬೆಳೆದು ನಿಂತಿವೆ. ಮತ್ತು ಅನೇಕ ವರ್ಷಗಳಿಂದ ಅವುಗಳ ಎಲೆಗಳು ಗಾಳಿಯಲ್ಲಿ ಕಂಪಿಸುತ್ತಿವೆ ಉತ್ತರ ಸಿಗದೇ’.
ಅವಳು ಆ ಮನೆಯ ಅತಿಥಿಯಂತೆ ಚಾಯ್ ಕುಡಿದಳು, ರಾತ್ರಿ ಭೋಜನವನ್ನು ಮಾಡಿದಳು, ಬಚ್ಚಲು ಮನೆಯೆಲ್ಲಿ ಎಂದು ಕೇಳಿ, ಹೋಗಿ ಬಟ್ಟೆ ಬದಲಿಸಿ ಬಂದಳು. ಮನೆಯಲ್ಲಿ ಉದ್ದದ ನಡುಮನೆಯಿತ್ತು. ಡ್ರಾಯಿಂಗ್ ಮತ್ತು ಡೈನಿಂಗ್ ಸೇರಿ. ಇದಲ್ಲದೇ ಎರಡು ಕೋಣೆಗಳಿದ್ದವು. ಒಂದು ಅವನದು. ಇನ್ನೊಂದು ಅಮ್ಮನದು. ಅಮ್ಮ ಹಟಮಾಡಿ ಅವಳಿಗೆ ತನ್ನ ಕೋಣೆ ಬಿಟ್ಟುಕೊಟ್ಟು ತಾವು ನಡುಮನೆಯಲ್ಲಿ ಮಲಗಿದರು.
ಅವಳು ಮಲಗುವ ಕೋಣೆಗೇನೋ ಹೋದಳು. ಆದರೆ ಎಂಥದೋ ಅಸಮಂಜಸದಲ್ಲಿ ಎಷ್ಟೋ ಹೊತ್ತು ನಿಂತೇ ಇದ್ದಳು. ತಾನೇ ಈ ಎರಡು ರಾತ್ರಿ ನಡುಮನೆಯಲ್ಲಿ ಅತಿಥಿಯಂತೆ ಮಲಗಬೇಕಿತ್ತು, ಇದು ಅಮ್ಮನ ಕೋಣೆ, ನ್ಯಾಯವಾಗಿ ಅಮ್ಮನೇ ಮಲಗಿಕೋಬೇಕಿತ್ತು’ ತಲೆತುಂಬ ಏನೇನೋ ಯೋಚನೆಗಳು ಅವಳನ್ನು ಮುತ್ತಿದ್ದವು.
ಪ್ರತಿ ಮನೆಯ ಮಲಗುವ ಕೋಣೆಯ ಪಲ್ಲಂಗದಲ್ಲಿ, ಹಾಸಿಗೆಯಲ್ಲಿ, ಹಾಗೂ ಕಪಾಟಿನಲ್ಲಿ ವಿಲಕ್ಷಣವಾದ ಒಂದು ಪರಿಚಿತ ಗಂಧವಿರುತ್ತದೆ. ಅವಳು ಮೂಗರಳಿಸಿ ದೀರ್ಘ ಶ್ವಾಸವನ್ನೆಳೆದುಕೊಂಡು ಆ ಗಂಧವನ್ನು ತನ್ನೊಳಗೆ ಹೀರಿಕೊಂಡಳು. ಮರುಕ್ಷಣವೇ ತನ್ನದೇ ಉಸಿರಿಗೆ ಬೆಚ್ಚಿದವಳಂತೆ ಶ್ವಾಸ ಬಿಗಿಹಿಡಿದಳು.
ಪಕ್ಕದ ಕೋಣೆ ಅವನದು. ನಿಶ್ಯಬ್ದ ಆವರಿಸಿತ್ತು. ಸ್ವಲ್ಪ ಹೊತ್ತಿನ ಮೊದಲು ಅವನು ತಲೆನೋವೆಂದು ಮಾತ್ರೆ ನುಂಗಿದ್ದ. ಈಗ ನಿದ್ದೆ ಹತ್ತಿರಬಹುದು. ಪಕ್ಕದ ಕೋಣೆಗೂ ತನ್ನದೇ ಆದ ಒಂದು ಗಂಧವಿರುತ್ತದಲ್ಲಾ, ಅವಳಿಗೆ ಆ ಗಂಧವನ್ನು ತನ್ನ ಪುಪ್ಪುಸದೊಳಗೆ ಹೀರಿಕೊಳ್ಳಬೇಕೆನಿಸಿತು ಆ ಕ್ಷಣವೇ. ಆದರೆ ಉಸಿರಾಟದನ್ನೇ ಮರೆತವಳಂತೆ ನಿಂತೇ ಇದ್ದಳು,
ಕಪಾಟಿನ ಕೆಳಗೆ ನೆಲದ ಮೇಲೆ ಬಿದ್ದುಕೊಂಡ ತನ್ನ ಸೂಟ್ಕೇಸ್ ಕಡೆ ಗಮನಹೋಗಿ ವಿಷಾದದ ಸಣ್ಣ ನಗುವೊಂದು ಅವಳ ತುಟಿಗಳ ಮೇಲೆ ಹಾದುಹೋಯಿತು. ಇದು ಬೇರೆ ಕೇಡು, ಈ ಸೂಟಕೇಸ್ ಇಡೀ ರಾತ್ರಿ ನನ್ನ ದಿವಾಳಿತನವನ್ನು ನೆನಪಿಸುತ್ತಲೇ ಇರುತ್ತದಿನ್ನು.
ಅವಳು ಸೂಟಕೇಸನ್ನು ನೋಡುತ್ತಲೇ… ತೀರ ದಣಿದವಳಂತೆ ಹಾಸಿಗೆಯ ಮೇಲುರುಳಿ ದಿಂಬಿನ ಮೇಲೆ ತಲೆಯಿಟ್ಟದ್ದಷ್ಟೇ ನೆನಪು. ಯಾವಾಗಲೋ ನಿದಿರಾದೇವಿ ಆವರಿಸಿಕೊಂಡುಬಿಟ್ಟಿದ್ದಳು. ಬೆಳಿಗ್ಗೆ ಕಣ್ಣುಬಿಟ್ಟಾಗ ಹೊತ್ತೇರಿತ್ತು. ನಡುಮನೆಯಲ್ಲಿ ರಾತ್ರಿ ಭೋಜನಕೂಟದ ತಯಾರಿ ನಡೆದಿತ್ತು.
ಅವಳು ಎವೆ ಪಿಳುಕಿಸದೇ ಕಣ್ಣರಳಿಸಿ ನೋಡುತ್ತಲೇ ಇದ್ದಳು – ಅವನು ನಡುಮನೆಯ ಬಾಗಿಲಲ್ಲಿ ನಿಂತಿದ್ದ. ನೀಲಿ ಬಣ್ಣದ ಚೌಕಳಿ ಚೌಕಳಿಯ ರಾತ್ರಿಯುಡುಗೆ ತೊಟ್ಟಿದ್ದ. ಅವಳೆಂದೂ ಹೀಗೆ ಅವನನ್ನು ರಾತ್ರಿಯುಡುಪಿನಲ್ಲಿ ನೋಡಿರಲಿಲ್ಲ. ಸದಾ ಹಗಲಿನಲ್ಲೇ ಕಂಡಿದ್ದಳು. ರಸ್ತೆಯ ಮೇಲೆ, ರಸ್ತೆಯಂಚಿನಲ್ಲಿ, ಯಾವುದೋ ಕೆಫೆಯಲ್ಲೋ, ಹೋಟೆಲಿನಲ್ಲೋ, ಇಲ್ಲ ಸರಕಾರಿ ಆಯೋಜಿತ ಯಾವುದಾದರೂ ಮೀಟಿಂಗಿನಲ್ಲಿ. ಈ ರೂಪಿನಲ್ಲಿ ಅವನು ಹೊಸದಾಗಿ ಕಂಡ. ಅವನ ಈ ಹೊಸರೂಪು ಕಣ್ಣಿನಲ್ಲಿ ಅಚ್ಚೊತ್ತಿಕೊಂಡಿತು.
ಅವಳೂ ರಾತ್ರಿಯುಡುಪಿನಲ್ಲೇ ಇದ್ದಳು. ಆದರೆ ನಡುಮನೆಗೆ ಬರುವವರೆಗೆ ಅದವಳ ಗಮನಕ್ಕೇ ಬರಲಿಲ್ಲ. ಈಗ ಫಕ್ಕನೇ ಅರಿವಾಗಿ ಮುಜುಗರವಾಯ್ತು. ಸಾಧಾರಣವಾದುದು ಅಸಾಧಾರಣವಾಗುತ್ತಿರುವಂತೆ.
ನಡುಮನೆಯಲ್ಲಿ ನಿಂತಿದ್ದ ಅವನು ಅವಳು ಬರುವುದನ್ನು ಗಮನಿಸಿ ಹೇಳಿದ- ‘ಇಗೋ ಇವೆರಡೂ ಸೋಫಾಗಳನ್ನು ಹೀಗೆ ಒಂದೇ ಬದಿಗೆ ಉದ್ದುದ್ದಕ್ಕೆ ಇಟ್ಟರೆ ಮಧ್ಯ ಇದೆಲ್ಲ ಖಾಲಿ ಜಾಗ ಸಿಗುತ್ತದಲ್ಲವಾ’.
ಅವಳು ಸೋಫಾಗಳನ್ನು ಸರಿಸಿಡಲು ಅವನಿಗೆ ನೆರವಾದಳು. ಸಣ್ಣ ಮೇಜನ್ನು ಎರಡು ಖುರ್ಸಿಗಳ ನಡುವೆ ವ್ಯವಸ್ಥಿತವಾಗಿಟ್ಟಳು. ಅಡುಗೆಮನೆಯಿಂದ ಅಮ್ಮ ಕರೆದಾಗ ಓಡಿಹೋಗಿ ಅವನಿಗಾಗಿ ಚಹ ತಂದು ಮೇಜಿನ ಮೇಲಿಟ್ಟಳು.
ಚಹ ಕುಡಿದು ಅವನೆಂದ – ‘ನಡೆ ತಯಾರಾಗು, ಯಾರನ್ನೆಲ್ಲ ಆಮಂತ್ರಿಸಬೇಕೋ ಅವರ ಮನೆಗೆ ಹೋಗಿ ಆಹ್ವಾನಿಸಿ ಬರುವಾ, ಹಾಗೆಯೇ ಬರ್ತಾ ಹಣ್ಣು- ಹಂಪಲುಗಳ ತರೋಣ’.
ಇಬ್ಬರೂ ಹಳೇ ಗೆಳೆಯರ ಮನೆ ಮನೆಗೆ ಹೋಗಿ ಕರೆಗಂಟೆಯೊತ್ತಿದರು, ರಾತ್ರಿಭೋಜನದ ಆಹ್ವಾನವಿತ್ತರು, ಮರಳುವಾಗ ದಾರಿಯಲ್ಲಿ ಏನೇನೋ ಖರೀದಿಸಿದರು, ಮನೆಗೆ ಬಂದು ಊಟ ಮಾಡಿ ಮತ್ತೆ ನಡುಮನೆಯಲ್ಲಿ ಹೂಗಳನ್ನು ಅಲಂಕರಿಸುತ್ತ ಕುಳಿತರು.
ದಾರಿಯಲ್ಲೂ ಇಬ್ಬರೂ ಮಾತಾಡಿದ್ದು ಅಷ್ಟಕ್ಕಷ್ಟೇ. ಯಾವ ಹಣ್ಣು ತಗೋಳೋಣ? ವೀಳೆಯದೆಲೆ ತಕ್ಕೋಳ್ಳಣವಾ ಬೇಡವಾ? ಡ್ರಿಂಕ್ಸ್ ಜೊತೆ ಕುರುಕಲು ಕಬಾಬ್ ಎಷ್ಟು ತಗೋಳೋಣ? ಇಂಥವರ ಮನೆ ಈ ಹಾದಿಯಲ್ಲೇ ಇದೆ, ಅವರನ್ನೂ ಕರೆಯೋಣವೇ? ಏಳು ದೀರ್ಘ ವರುಷಗಳ ನಂತರ ಭೇಟಿಯಾಗುತ್ತಿರುವವರು ಮಾತಾಡುವ ಮಾತುಗಳಂತಿರಲಿಲ್ಲ ಅವರ ಸಂಭಾಷಣೆ.
ಅವಳಿಗೆ ಬೆಳಿಗ್ಗೆ ಅತಿಥಿಗಳ ಮನೆ ಮನೆಗೆ ಹೋಗಿ ಕರೆಗಂಟೆಯೊತ್ತುವಾಗ ಸ್ವಲ್ಪ ಹೊತ್ತು ಮುಜುಗರವೆನಿಸಿತು. ಆಮೇಲೆ ಮನಸ್ಸೂ ಒಗ್ಗಿಕೊಂಡಿತು. ಅವರೆಲ್ಲ ಅವನ ಗೆಳೆಯರಾಗಿದ್ದರೂ ಅವಳಿಗೂ ಬಹಳ ಪರಿಚಿತರಿದ್ದರು. ವರುಷಗಳಿಂದ ಅವಳನ್ನೂ ಬಲ್ಲವರಿದ್ದರು. ಆದರೂ ಅವರೆಲ್ಲ ಬಾಗಿಲು ತೆರೆದಾಗ ಎದುರಿನಲ್ಲಿ ಅವನೊಂದಿಗೆ ಅವಳನ್ನು ಕಂಡು ಅಚ್ಚರಿಪಡುತ್ತ – ಅರೇ ನೀವು’ ಎಂದು ಉದ್ಗರಿಸಿದ್ದರು.
ಪುನಃ ಅವರು ಗಾಡಿಯಲ್ಲಿ ಕುಳಿತುಕೊಳ್ಳುತ್ತಲೇ ಅವನು –ದೊಡ್ದದಾಗಿ ನಕ್ಕುಬಿಡುತ್ತಿದ್ದ. ನೋಡಿದೆಯಾ? ನಮ್ಮನ್ನು ಕಂಡು ಅವನಿಗೆ ಎಷ್ಟು ಶಾಕ್ ಆಯಿತೆಂದರೆ, ಅವನ ಬಾಯಿಕಟ್ಟಿಯೇ ಹೋಗಿತ್ತು’
ಇಂಥವೇ ಒಂದೆರಡು ಅಚ್ಚರಿಗಳ ನಂತರ ಗೆಳೆಯರ ಅಚ್ಚರಿಗಳೂ ಅವರ ಸಾಮಾನ್ಯ ಮಾತಿನ ಸಂಗತಿಯಲ್ಲಿ ಬೆರೆತುಹೋದವು. ಈಗ ಅವಳೂ ಸಹಜವಾಗಿ ನಗತೊಡಗಿದ್ದಳು.
ಸಂಜೆ ಯಾಕೋ ಏನೋ ಅವನು ಎದೆನೋವೆಂದು ಒದ್ದಾಡಿದ. ಅಮ್ಮ ಬಟ್ಟಲಲ್ಲಿ ತುಸು ಬ್ರಾಂಡಿ ಹಾಕಿ ಅವಳ ಕೈಗಿಡುತ್ತ – ‘ತಗೋ ಮಗೂ, ಅವನ ಎದೆಗೆ ಸವರು ಇದನ್ನು’. ಇಷ್ಟೊತ್ತಿಗಾಗಲೇ ಅವರಿಬ್ಬರೂ ಸದಾ ಜೊತೆಗೇ ಇದ್ದವರಂತೆ ಒಗ್ಗಿಹೋಗಿದ್ದರು. ಅವಳು ಅವನ ಶರಟಿನ ಮೇಲಿನ ಗುಂಡಿ ಬಿಚ್ಚಿ, ತನ್ನ ಕೈಗಳಿಂದ ಅವನ ಎದೆಗೆ ಬ್ರಾಂಡಿ ಉಜ್ಜತೊಡಗಿದಳು.’
ಬಹುಶಃ ಹೊರಗಡೆ ತಾಳೆ ಮರದ ಎಲೆಗಳು ಹಾಗೂ ಬಾಳೆಗಿಡದ ಎಲೆಗಳಿನ್ನೂ ಕಂಪಿಸುತ್ತಿದ್ದವೆಂದು ತೋರುತ್ತದೆ. ಆದರೆ ಅವಳ ಕೈಗಳೀಗ ಥರಗುಡುತ್ತಿರಲಿಲ್ಲ. ಒಬ್ಬ ಗೆಳೆಯನಂತೂ ಸಮಯಕ್ಕಿಂತ ಮೊದಲೇ ಆಗಮಿಸಿದ್ದ. ಅವಳು ಬ್ರಾಂಡಿ ಬಳಿದ ಕೈಯಿಂದಲೇ ಅವನಿಗೆ ‘ನಮಸ್ಕಾರ’ ಹೇಳಿ ಅಭಿವಂದಿಸಿದಳು. ಉಳಿದ ಬ್ರಾಂಡಿಯಲ್ಲಿ ಕೈಯದ್ದಿ ಮತ್ತೊಮ್ಮೆ ಅವನ ಕತ್ತು ಮತ್ತು ಭುಜದವರೆಗೂ ಸವರಿದಳು.
ನಿಧಾನವಾಗಿ ಇಡೀ ಕೋಣೆ ಅತಿಥಿಗಳಿಂದ ತುಂಬಿಹೋಯಿತು. ಅವಳು ಫ್ರಿಜ್ಜಿನಿಂದ ಬರ್ಫನ್ನು ತೆಗೆಯುತ್ತಲೇ ಇದ್ದಳು, ಮತ್ತು ಸಾದಾ ನೀರನ್ನು ಫ್ರಿಜ್ಜಿನಲ್ಲಿ ಇಡುತ್ತಲೇ ಇದ್ದಳು. ನಡುನಡುವೆ ಅಡುಗೆಕೋಣೆಗೆ ಹೋಗಿ ತಣ್ಣಗಾಗಿಹೋದ ಕಬಾಬುಗಳನ್ನು ಬಿಸಿ ಮಾಡಿ ತಂದಿಡುತ್ತಿದ್ದಳು. ಬಂದ ಅತಿಥಿಗಳಲ್ಲಿ ಮೂರು ನಾಕು ಜನರು ಕರೆಯದೇ ಬಂದವರೆಂತಲೂ ಮತ್ತು ಗೆಳೆಯರ ಮಾತು ಕೇಳಿ ನಿನ್ನನ್ನು ನೋಡುವುದಕ್ಕಾಗಿಯೇ ಬಂದಿರಬಹುದೆಂದು ಅವನು ಅವಳ ಕಿವಿಯಲ್ಲಿ ಪಿಸುಗುಟ್ಟಿದಾಗ ಮಾತ್ರ ಅವಳು ಸ್ವಲ್ಪ ವಿಚಲಿತಳಾದಳು. ಪುನಃ ಅವನು ಗ್ಲಾಸುಗಳನ್ನು ತೊಳೆದು ತರಲು ಹೇಳಿದಾಗ ಸಾವರಿಸಿಕೊಂಡಳು.
ಭೋಜನಕೂಟ ರಂಗೇರಿತು.. ನಿಧಾನಕ್ಕೆ ಏರಿದ ಬಣ್ಣವೂ ಕರಗತೊಡಗಿತು. ಸುಮಾರು ಮಧ್ಯರಾತ್ರಿಯ ಹೊತ್ತಿಗೆ ಎಲ್ಲ ಅತಿಥಿಗಳೂ ಹೋಗಿಯಾಗಿತ್ತು. ಮಲಗುವ ಕೋಣೆಗೆ ಹೋಗಿ ತನ್ನ ಸೂಟಕೇಸಿನಿಂದ ರಾತ್ರಿಯುಡುಪುಗಳನ್ನು ತೆಗೆದು ಉಡುವಾಗ ಅವಳಿಗೆ ತೀವ್ರವಾಗಿ ಅನಿಸಿತು – ರಸ್ತೆಯಲ್ಲಿ ತಾವಿಬ್ಬರೂ ಕಲ್ಪಿಸಿಕೊಂಡ ಮಾಯದ ಮನೆ ಈಗೆಲ್ಲೂ ಇಲ್ಲ!
ಈ ಮಾಯದ ಮನೆಯನ್ನು ಅವಳು ಅನೇಕ ಬಾರಿ ಕಂಡಿದ್ದಳು. ಕಟ್ಟಿದ್ದನ್ನೂ ಮತ್ತು ಮುರಿದುಬಿದ್ದಿದ್ದನ್ನೂ. ಆದ್ದರಿಂದ ಅವಳಿಗೆ ಇದೇನೂ ಘಾಸಿಗೊಳಿಸಲಿಲ್ಲ. ದಣಿವಿನಿಂದ ದಿಂಬಿಗೊರಗಿ ಯೋಚಿಸತೊಡಗಿದಳು.
ಯಾವಾಗಿನ ಮಾತಿದು? ಬಹುಶಃ ಇಪ್ಪತ್ತೈದು ವರುಷಗಳಾದವೆಂದು ತೋರುತ್ತದೆ. ಇಲ್ಲ ಮೂವತ್ತೋ. ಆಗ ಮೊದಲ ಬಾರಿಗೆ ಅವರು ಬದುಕಿನ ಹಾದಿಯಲ್ಲಿ ಸಿಕ್ಕಿದ್ದರು. ಅವಳು ಯಾವ ರಸ್ತೆಯಿಂದ ಬಂದಳು, ಅವನು ಯಾವ ಹಾದಿಯಿಂದ ಬಂದ ಎಂದು ಕೇಳುವುದನ್ನೂ , ಹೇಳುವುದನ್ನೂ ಸಹ ಮರೆತಿದ್ದರು. ನೆಲದಲ್ಲಿಯೇ ನೋಟ ನೆಟ್ಟು ಅವರು ಭೂಮಿಯಲ್ಲಿ ಪಾಯ ಹಾಕತೊಡಗಿದರು. ಮತ್ತು ಅವರ ಮಾಯದ ಮನೆ ಬೆಳೆದು ತಲೆಯೆತ್ತಿ ನಿಂತಿತು. ಅವರಿಬ್ಬರೂ ಆ ಮನೆಯಲ್ಲಿ ನೆಮ್ಮದಿಯಾಗಿ ಇರತೊಡಗಿದ್ದರು.
ಮತ್ತೆ ಅವರಿಬ್ಬರ ಹಾದಿಗಳೂ ಅವರನ್ನು ಕೂಗಿ ಕರೆದಾಗ ಅವರಿಬ್ಬರು ತಮ್ಮ ತಮ್ಮ ಹಾದಿಯಲ್ಲಿ ಹೋಗುತ್ತಿದ್ದವರು ಬೆಚ್ಚಿ ನಿಂತರು. ನೋಡಿದರೆ ಅವರಿಬ್ಬರ ಹಾದಿಯ ನಟ್ಟನಡುವೆ ದೊಡ್ಡ ಕಣಿವೆ ಬಾಯ್ದೆರೆದು ನಿಂತಿತ್ತು. ಅವನು ಎಷ್ಟೋ ಹೊತ್ತು ಆ ಕಣಿವೆಯನ್ನೇ ನೋಡುತ್ತಿದ್ದ – ‘ನೀನು ಈ ಕಣಿವೆಯನ್ನು ಹೇಗೆ ದಾಟಿ ಬರುತ್ತೀ ?’ ಎಂದು ಅವಳನ್ನು ಕೇಳುತ್ತಿರುವವನಂತೆ.
ಅವಳು ಉತ್ತರಿಸಲಿಲ್ಲ. ‘ನೀನು ಕೈಹಿಡಿದು ದಾಟಿಸು, ನಾನು ಈ ಜಾತಿಮತದ ಕಣಿವೆಯನ್ನು ದಾಟಿ ಬರುವೆ’ – ಎನ್ನುತ್ತಿರುವಂತೆ ಅವಳು ಅವನ ಕೈಗಳತ್ತಲೇ ನೋಡುತ್ತಿದ್ದಳು.
ಮತ್ತೆ ಅವನ ಲಕ್ಷ್ಯ ಮೇಲೆ ಅವಳ ಕೈಗಳತ್ತ ಹೊರಳಿತು. ಅವಳ ಕೋಮಲವಾದ ಬೆರಳುಗಳಲ್ಲಿ ವಜ್ರದುಂಗುರ ಹೊಳೆಯುತ್ತಿತ್ತು. ‘ನಿನ್ನ ಬೆರಳಿಗೆ ಕಟ್ಟುಪಾಡುಗಳ ದಾರ ಸುತ್ತಿಕೊಂಡಿದೆ, ಏನು ಮಾಡಲಿ ನಾನಿದನ್ನು?’ ಎಂದು ಅವನು ಕೇಳುತ್ತಿರುವವನಂತೆ ಅವನು ಬಹಳ ಹೊತ್ತು ಅವಳ ಬೆರಳುಗಳನ್ನೇ ನೋಡುತ್ತಿದ್ದ.
ಅವಳು ತನ್ನ ಬೆರಳನ್ನು ನೋಡಿಕೊಂಡು ನಸುನಕ್ಕಳು. ಮನಸ್ಸು ಚೀರಿ ಚೀರಿ ಹೇಳುತ್ತಿತ್ತು. ನೀನು ಒಂದೇ ಒಂದು ಬಾರಿ ಹೇಳಿನೋಡು. ನಾನು ಈ ಕಟ್ಟುಪಾಡುಗಳ ದಾರವನ್ನು ಉಗುರಿನಿಂದ ಬಿಡಿಸಿಕೊಳ್ಳುವೆ. ಉಗುರಿನಿಂದ ಬರದಿದ್ದರೆ ಹಲ್ಲುಗಳಿಂದ ಕಚ್ಚಿ ಕಿತ್ತೆಸೆಯುವೆ.
ಆದರೆ ಅವನೂ ಸುಮ್ಮನಿದ್ದ. ಅವಳೂ ಸುಮ್ಮನೇ ನಿಂತಿದ್ದಳು. ರಸ್ತೆಗಳು ಸ್ಥಾವರದಂತೆ ಇದ್ದಲ್ಲೇ ಬಿದ್ದುಕೊಂಡೂ ಗಮ್ಯದತ್ತ ಚಲಿಸುತ್ತಿರುವಂತೆ ಅವರಿಬ್ಬರೂ ಒಂದೆಡೆ ನಿಶ್ಚಲರಾಗಿ ನಿಂತರೂ ಚಲಿಸುತ್ತಲೇ ಇದ್ದರು.
ಹೀಗೇ ಒಂದಿನ ಅವನ ಶಹರಿನಿಂದ ಹೊರಟ ಹಾದಿ ಅವಳ ಊರಿಗೆ ಬಂದು ತಲುಪಿತ್ತು. ಮತ್ತೆ ಅವಳು ಅವನ ದನಿ ಕೇಳಿ ತನ್ನ ಒಂದು ವರ್ಷದ ಮಗುವನ್ನು ಎತ್ತಿ ಹೆಗಲಮೇಲೆ ಹಾಕಿಕೊಂಡು ಬೀದಿಗೋಡಿ ಬಂದು ಅವನ ಪಕ್ಕ ನಿಂತಿದ್ದಳು. ಅವನು ಮಲಗಿದ ಮಗುವನ್ನು ಹಗುರಾಗಿ ಅವಳಿಂದ ಎತ್ತಿಕೊಂಡು ತನ್ನ ಭುಜದ ಮೇಲೆ ಒರಗಿಸಿಕೊಂಡ. ದಿನವಿಡೀ ಅವರು ಊರಿನ ಬೀದಿಯಲ್ಲಿ ನಡೆಯುತ್ತಲೇ ಇದ್ದರು.
ಅದು ಅವರಿಬ್ಬರ ತುಂಬು ಯೌವನದ ದಿನಗಳು. ಅವರಿಗೆ ಬಿಸಿಲೇನು, ಮಳೆಯೇನು? ಒಮ್ಮೆ ಚಹ ಕುಡಿಯಲೆಂದು ಒಂದು ಕೆಫೆಯ ಒಳಹೊಕ್ಕಾಗ ಒಬ್ಬ ಗಂಡು, ಒಂದು ಹೆಣ್ಣಿನ ಜೊತೆ ಒಂದು ಮಗುವನ್ನು ನೋಡಿ ಒಂದು ಮೂಲೆಯ ಕುರ್ಸಿಗಳನ್ನು ಒರೆಸಿ ಕೂತುಕೊಳ್ಳಲು ಚೊಕ್ಕಮಾಡಿಕೊಟ್ಟಿದ್ದ ಮಾಣಿ. ಮತ್ತು ಆ ಮೂಲೆಯಲ್ಲಿ ಅವರ ಕನಸಿನ ಮನೆ ನಿರ್ಮಿತಗೊಂಡಿತ್ತು ಆ ಕ್ಷಣ.
ಮತ್ತೊಮ್ಮೆ ಓಡುತ್ತಿರುವ ರೈಲಿನಲ್ಲಿ ಅವರಿಬ್ಬರೂ ಆಕಸ್ಮಿಕವಾಗಿ ಭೇಟಿಯಾದರು. ಅವನ ಜೊತೆಗೆ ಅಮ್ಮನೂ ಇದ್ದಳು. ಜೊತೆಗೊಬ್ಬ ಗೆಳೆಯನೂ. ಅವಳ ಸೀಟು ಬಹಳ ದೂರದಲ್ಲಿತ್ತು. ಅವನ ಗೆಳೆಯ ತನ್ನ ಸೀಟನ್ನು ಅವಳಿಗೆ ಬಿಟ್ಟುಕೊಟ್ಟು ಅವಳ ಸೂಟಕೇಸನ್ನು ಅವನ ಸೂಟಕೇಸಿನ ಪಕ್ಕವೇ ತಂದಿಟ್ಟ. ಗಾಡಿಯಲ್ಲಿ ಹಗಲು ಚಳಿಯಿರಲಿಲ್ಲ. ರಾತ್ರಿ ತುಂಬ ಚಳಿಯಿತ್ತು. ಅಮ್ಮ ಇಬ್ಬರಿಗೂ ಒಂದು ಕಂಬಳಿ ಕೊಟ್ಟಳು. ಅರ್ಧ ಅವನಿಗೆ ಇನ್ನರ್ಧ ಅವಳಿಗೆ. ಓಡುತ್ತಿರುವ ಗಾಡಿಯಲ್ಲಿ ಅವರು ಹಂಚಿಕೊಂಡ ಕಂಬಳಿಯ ಅಂಚುಗಳು ಗೋಡೆಗಳಾಗಿ ಅವರ ಕನಸಿನ ಮನೆ ನಿರ್ಮಿತವಾಗಿತ್ತು.
ಹೀಗೆ ಮೋಹದ ಗೋಡೆ ಎಳುತ್ತಿದ್ದವು, ಉರುಳುತ್ತಿದ್ದವು. ಕೊನೆಗೆ ಅವರಿಬ್ಬರ ನಡುವೆ ಹಾಳುಕೊಂಪೆಯಂಥ ಮೌನದ ಗುಡ್ಡೆ ರಾಶಿಬಿದ್ದಿರುತ್ತಿತ್ತು. ಅವನಿಗೆ ಯಾವ ಬಂಧನವೂ ಇದ್ದಿಲ್ಲ. ಅವಳಿಗಿತ್ತು. ಅವಳು ಕಳಚಿಕೊಳ್ಳಬಹುದಿತ್ತು. ಆದರೇನು… ಅವರಿಬ್ಬರೂ ಜೀವನ ಪರ್ಯಂತ ಬೀದಿಗಳಲ್ಲಿ ನಡೆಯುತ್ತಲೇ ಉಳಿದರು.
ಈಗ ಆಯುಷ್ಯವೇ ಕಳೆದಿದೆ. ಅವಳು ತನ್ನ ಆಯುಷ್ಯದ ಸುಡುವ ದಿನಗಳನ್ನೂ ಮತ್ತು ತಣ್ಣಗಿನ ದಿನಗಳನ್ನೂ ನೆನೆದಳು. ಎಲ್ಲಾ ದಿನಗಳು,ಎಲ್ಲಾ ವರುಷಗಳು ಅವಳಿಗೆ ತಾಳೆ ಮರದ ಎಲೆಗಳಂತೆ ಗಾಳಿಯಲ್ಲಿ ಕಂಪಿಸುತ್ತಿರುವಂತೆ ಅನಿಸಿತು.
ಬಹಳ ಹಿಂದಿನ ಮಾತು. ಅವಳು ವರುಷಗಳ ಮೌನವನ್ನು ಮುರಿದು ಕೇಳಿದ್ದಳು, ‘ನೀನೇಕೆ ಮಾತಾಡುವುದಿಲ್ಲ? ಏನನ್ನೂ ಹೇಳುವುದಿಲ್ಲ. ಏನಾದರೂ ಹೇಳು’ ಅವನು ನಕ್ಕುಬಿಟ್ಟಿದ್ದ. ‘ಇಲ್ಲಿ ತುಂಬಾ ಬೆಳಕಿದೆ. ಎಲ್ಲೆಡೆಗೂ ಪ್ರಖರವಾದ ಬೆಳಕಿದೆ. ನನಗೆ ಮಾತನಾಡಲಾಗದು..!’
ಸೂರ್ಯನನ್ನು ಹಿಡಿದು ನಂದಿಸಿಬಿಡುವಷ್ಟು ಅವಳಿಗೆ ಉರಿದುಹೋಯ್ತು.
ಬೀದಿಗಳಲ್ಲಿ ಬರೀ ಹಗಲಿರುತ್ತದೆ. ರಾತ್ರಿಯಂತೂ ಮನೆಗಳಲ್ಲಿರುತ್ತದೆ. ಆದರೆ ಅವರಿಗೆ ಮನೆಯಂತೂ ಇರಲಿಲ್ಲ. ಹೀಗಾಗಿ ರಾತ್ರಿಯೂ ಇದ್ದಿಲ್ಲ. ಅವರ ಪಾಲಿಗೆ ಕೇವಲ ಬೀದಿಗಳಿದ್ದವು, ಸೂರ್ಯನಿದ್ದ. ಆದರೆ ಅವನು ಸೂರ್ಯನ ಬೆಳಕಿನಲ್ಲಿ ಮಾತಾಡಲಾರ!
ಒಮ್ಮೆ ಅವನು ಬಾಯಿತೆರೆದಿದ್ದ.
ಹೀಗೆಯೇ ಅವನು ಮೌನವಾಗಿ ಕುಳಿತಿದ್ದಾಗ ಅವಳು ಕೇಳಿದ್ದಳು – ಏನು ಯೋಚಿಸುತ್ತಿದ್ದಿ ?
‘ಹುಡುಗಿಯರೊಂದಿಗೆ ಫ್ಲರ್ಟ್ ಮಾಡಬೇಕು, ನಿನ್ನನ್ನು ನೋಯಿಸಬೇಕು’ ಅಂತಾ ಯೋಚಿಸ್ತಿದೀನಿ ಎಂದಿದ್ದ.
ಒಂದುವೇಳೆ ಇದೇ ನಿಜವಾಗಿದ್ದರೆ, ಅವಳು ಇಷ್ಟು ದುಃಖಿತಳಾಗುತ್ತಿದ್ದಿಲ್ಲ, ಪರಮ ಸುಖಿಯಾಗಿರುತ್ತಿದ್ದಳು. ಅದನ್ನೇ ನೆನೆದು ಅವಳು ಬಿದ್ದು ಬಿದ್ದು ನಕ್ಕಿದ್ದಳು. ಅವನೂ ನಕ್ಕಿದ್ದ.
ಆಮೇಲೆ ಮತ್ತೊಂದು ದೀರ್ಘ ಮೌನ.
ಅನೇಕ ಬಾರಿ ಅವಳಿಗೆ ಅನಿಸಿದ್ದಿದೆ- ಅವನ ಮೌನದೊಳಗೆ ಕೈ ಚಾಚಿ ಅವನನ್ನು ಈಚೆಗೆ ಎಳೆದುಕೊಳ್ಳಬೇಕೆಂದು. ಎಲ್ಲಿವರೆಗೆಂದರೆ ಹೃದಯದ ನೋವು ಬಿರಿದು ಮನಸ್ಸು ಆರ್ದ್ರವಾಗುವವರೆಗೂ. ಆದರೆ ಅವಳು ಅಸಹಾಯಕಳಂತೆ ತನ್ನ ಕೈಗಳನ್ನೇ ಶೂನ್ಯ ನೋಟದಿಂದ ದಿಟ್ಟಿಸುತ್ತಿದ್ದಳು. ಯಾವತ್ತೂ ಆ ಕೈಗಳಿಗೆ ಏನನ್ನೂ ಹೇಳಲಿಲ್ಲ ಆಕೆ.
ಒಮ್ಮೆ ಅವನು ಅಂದಿದ್ದ – ‘ನಡೆ ಚೀನಾ ದೇಶಕ್ಕೆ ಹೋಗೋಣ’
‘ಚೀನಾ’
‘ಹೋಗೋಣ, ಮರಳಿ ಬರುವುದು ಬೇಡ’
‘ಆದರೆ ಚೀನಾ ಯಾಕೆ’
ಈ ‘ಯಾಕೆ’ ಅನ್ನುವುದು ಬಹುಶಃ ಆ ತಾಳೆಮರದಂತೆಯೇ ಇತ್ತು. ಅದರ ಎಲೆಗಳು ಗಾಳಿಯಲ್ಲಿ ಕಂಪಿಸತೊಡಗಿದ್ದವು.
ಅವಳು ದಿಂಬಿಗೊರಗಿ ಮಲಗಿದ್ದಳು. ನಿದ್ರೆ ಹತ್ತಿರವೂ ಸುಳಿದಿರಲಿಲ್ಲ. ಅವನೂ ಪಕ್ಕದ ಕೋಣೆಯಲ್ಲಿ ಮಲಗಿದ್ದ. ಬಹುಶಃ ನಿದ್ದೆ ಮಾತ್ರೆಗಳನ್ನು ನುಂಗಿ. ಅವಳಿಗೆ ತನ್ನ ನಿದ್ದೆ ಬಾರದದ್ದಕ್ಕಾಗಿ ಸಿಟ್ಟು ಬರಲಿಲ್ಲ, ಅವನ ನಿದ್ದೆಯ ಮೇಲೂ ಕೋಪ ಬರಲಿಲ್ಲ. ಬೀದಿಯಲ್ಲಿ ನಡೆಯುತ್ತಾ ನಡೆಯುತ್ತಾ ನಾವಿಬ್ಬರೂ ಎಲ್ಲೋ ಹೀಗೆ ಭೇಟಿಯಾದಾಗಲೆಲ್ಲ ಯಾಕೆ ಈ ಮಾಯದ ಮನೆ ಹುಟ್ಟಿಕೊಂಡು ಬಿಡುತ್ತೆ ಗೊತ್ತಿಲ್ಲ. ಇದೊಂದೇ ನೋವು ಅವಳ ಹೃದಯವನ್ನು ಹಿಂಡುತ್ತಿತ್ತು. ಘಾಸಿಗೊಳಿಸುತ್ತಿತ್ತು. ಅವಳು ಮತ್ತೆ ಮತ್ತೆ ಇದೇ ಯೋಚಿಸುತ್ತಿದ್ದಳು.
ಅವಳಿಗೆ ನಗು ಬಂತು. ಯೌವನ ತುಂಬಿ ಹರಿಯುತ್ತಿದ್ದಾಗಲಾದರೆ ಸರಿ. ಈಗ್ಯಾಕೆ ಹೀಗೆ ಆಗುತ್ತಿದೆ? ಇಂದೇಕೆ ಹೀಗನಿಸಿತು? ಗೊತ್ತಿಲ್ಲ ಅದೇನಿತ್ತೋ ಏನೋ ಅದ್ಯಾವುದೂ ಅವಳ ಎಣಿಕೆಗೆ ಎಟಕುವಂತಿರಲಿಲ್ಲ.
ರಾತ್ರಿ ಹೇಗೆ ಕಳೆಯಿತೆಂದೇ ತಿಳಿಯಲಿಲ್ಲ. ಡ್ರೈವರ್ ಬಾಗಿಲನ್ನು ಮೆಲ್ಲಗೆ ಬಡಿದು ಏರ್ಪೋರ್ಟಿಗೆ ಹೋಗುವ ಸಮಯವಾಯಿತೆಂದು ಎಚ್ಚರಿಸುತ್ತಿದ್ದ.
ಅವಳು ಸೀರೆಯುಟ್ಟುಕೊಂಡು, ಸೂಟ್ಕೇಸ್ ಎತ್ತಿಕೊಂಡಳು. ಅವನೂ ಎದ್ದು ತನ್ನ ಕೋಣೆಯಿಂದ ಹೊರಬಂದ. ಅವರಿಬ್ಬರೂ ಹೊರಗೆ ಬೀದಿಗೆ ತೆರೆದುಕೊಳ್ಳುತ್ತಿದ್ದ ಬಾಗಿಲಿನೆಡೆಗೆ ಹೆಜ್ಜೆ ಹಾಕಿದರು.
ಡ್ರೈವರ್ ಅವಳ ಕೈಯಿಂದ ಸೂಟ್ಕೇಸ್ ತೆಗೆದುಕೊಂಡ. ಅವಳಿಗೆ ಆ ಕ್ಷಣ ತನ್ನ ಕೈಗಳು ಖಾಲಿಖಾಲಿಯಾದಂತೆನಿಸಿ ಬಾಗಿಲಲ್ಲೇ ಹೆಜ್ಜೆಗಳು ತಡವರಿಸಿದಂತಾದವು. ಪುನಃ ಸಾವರಿಸಿಕೊಂಡು ಒಳಗೆ ಹೋಗಿ ಮಲಗಿದ್ದ ಅಮ್ಮನಿಗೆ ಅವೇ ಖಾಲಿ ಕೈಗಳಿಂದ ನಮಸ್ಕರಿಸಿ ಹೊರಬಂದಳು.
ಮತ್ತೆ ಏರ್ಪೋರ್ಟಿಗೆ ಹೋಗುವ ರಸ್ತೆ ಶುರುವಾಗಿ, ಕೊನೆಗೊಳ್ಳುತ್ತಲೂ ಬಂತು. ಆದರೆ ಅವನು ಸುಮ್ಮನೇ ಇದ್ದ…ಅವಳೂ ಕೂಡ…
ಒಮ್ಮೆಲೇ ಅವನೆಂದ – ‘ನೀನು ಏನೋ ಹೇಳಿದೆಯಾ?’
‘ಇಲ್ಲ’
ಮತ್ತೆ ಅವನು ಸುಮ್ಮನಾಗಿಬಿಟ್ಟ
ಇಬ್ಬರಿಗೂ ಅನಿಸುತ್ತಿತ್ತು. ಬಹುಶಃ ಹೇಳಲು – ಕೇಳಲು ಬೇಕಾದಷ್ಟಿತ್ತು. ಆದರೆ ಬಹಳ ತಡವಾಗಿ ಹೋಗಿತ್ತು. ಈಗ ಎಲ್ಲ ಶಬ್ದಗಳೂ ಭೂಮಿಯಲ್ಲಿ ಹೂತುಹೋಗಿ ಅವೆಲ್ಲವೂ ತಾಳೆ ಮರಗಳಾಗಿಬಿಟ್ಟಿದ್ದವು. ಹೃದಯದ ಕಡಲ ತಡಿಯಲ್ಲಿ ನೆಟ್ಟ ಆ ಮರಗಳ ಎಲೆಗಳು ಈ ಭೂಮಿಯ ಮೇಲೆ ಗಾಳಿ ಇರುವವರೆಗೂ ಕಂಪಿಸುತ್ತಲೇ ಇರುತ್ತವೆ.
ಏರ್ಪೋರ್ಟ್ ಬಂದೇ ಬಿಟ್ಟಿತು. ಪಾದಗಳಡಿಯಿಂದ ಅವನ ಶಹರಿನ ರಸ್ತೆ ಕುಸಿದುಹೋಯಿತು.
ಅಮೃತಾ ಪ್ರೀತಮ್ : ಇವರು ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಪಂಜಾಬೀ ಕವಿ. ಇವರು ಕವಿಯಷ್ಟೇ ಅಲ್ಲ ಕಾದಂಬರಿಗಾರ್ತಿ, ಪ್ರಬಂಧಗಾರ್ತಿ, ಸುಮಾರು 100ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ ನೇರ ನಿರ್ಭಿಡೆಯ ಹೆಣ್ಣುಮಗಳು. ಇವರ ಜೀವನ ಚರಿತ್ರೆ ಭಾರತೀಯ ವಿವಿಧ ಭಾಷೆಗಳಲ್ಲಿ ಹಾಗೂ ವಿದೇಶಿ ಭಾಷೆಗಳಲ್ಲೂ ಅನುವಾದಗೊಂಡಿವೆ. ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪಡೆದಿರುವ ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದಾರೆ. 1947ರಲ್ಲಿ ಭಾರತ ಇಬ್ಭಾಗವಾದ ನಂತರ ಸುಮಾರು ಒಂದು ದಶಲಕ್ಷದಷ್ಟು ಮುಸ್ಲಿಮರು, ಹಿಂದೂಗಳು ಮತ್ತು ಸಿಖ್ಖರು ಕೋಮುಗಲಭೆಗಳಲ್ಲಿ ಮೃತಪಟ್ಟರು. ಆಗ 28 ವರ್ಷ ವಯಸ್ಸಿನ ಅಮೃತಾ ಪ್ರೀತಮ್ ಲಾಹೊರ್ನಲ್ಲಿನ ಪಂಜಾಬೀ ನಿರಾಶ್ರಿತರ ತಾಣದಿಂದ ನವದೆಹಲಿಗೆ ತೆರಳಿದರು. ನಂತರ 1948 ರಲ್ಲಿ ಅವರು ತಮ್ಮ ಪುತ್ರನನ್ನು ಒಡಲಲ್ಲಿ ಹೊತ್ತಾಗ ಡೆಹರಾಡೂನ್ನಿಂದ ದೆಹಲಿಗೆ ಪ್ರಯಾಣಿಸುವ ಸಂದರ್ಭದಲ್ಲಿ ತಮ್ಮ ಆಕ್ರೋಶವನ್ನು ತುಂಡು ಕಾಗದವೊಂದರ ಮೇಲೆ ಕಾಣಿಸಿ ಅದಕ್ಕೆ ಕವನದ ರೂಪ ಕೊಟ್ಟರು. ಆ ಕವಿತೆ,‘ಆಜ್ ಅಖಾನ್ ವಾರಿಸ್ ಶಾಹ್ ನು’ (ನಾನಿಂದು ಶಾಹ್ನು ವಾರಿಸ್ನನ್ನು ಪ್ರಶ್ನಿಸುತ್ತಿದ್ದೇನೆ) ಈ ಕವಿತೆ ನಂತರ ಬಹಳ ಜನಪ್ರಿಯವಾಗಿ ಜನಮಾನಸದಲ್ಲಿ ಸ್ಥಿರಸ್ಥಾಯಿಯಾಯಿತು. ಅಮೃತಾ ಪ್ರೀತಂ ತಮ್ಮ 86ನೇ ವಯಸ್ಸಿನಲ್ಲಿ ನಿಧನ ಹೊಂದಿದರು.
ರೇಣುಕಾ ನಿಡಗುಂದಿ : ರೇಣುಕಾ ನಿಡಗುಂದಿ ಅವರ ಮೂಲ ಧಾರವಾಡ. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ. ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ. ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ ಜಂಟಿಕಾರ್ಯದರ್ಶಿಯಾಗಿಯೂ, ಸಂಘದ ಮುಖವಾಣಿ ‘ಅಭಿಮತ’ ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ ‘ರಾಜಧಾನಿಯಲ್ಲಿ ಕರ್ನಾಟಕ’ ಪುಸ್ತಕವನ್ನು ಸಂಪಾದಿಸಿದ್ದು ಅನೇಕ ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ. ಬಿಡುಗಡೆಯಾದ ಕೃತಿಗಳು; ‘ಕಣ್ಣ ಕಣಿವೆ’, ‘ದಿಲ್ಲಿ ಡೈರಿಯ ಪುಟಗಳು’, ‘ಅಮೃತ ನೆನಪುಗಳು’, ‘ನಮ್ಮಿಬ್ಬರ ನಡುವೆ’, ‘ಬಾ ಇಂದಾದರೂ ಮಾತಾಡೋಣ’ ಅಜೀತ್ ಕೌರ್ ಅವರ ಆತ್ಮಕಥನದ ಅನುವಾದ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’.
ಇದನ್ನೂ ಓದಿ : P Kalinga Rao‘s Birthday : ‘ಹೌದು ನಾನು ಕಿಂಗ್ ಎಲ್ಲಿದ್ದರೂ ಅದೇ ಪ್ಯಾಲೇಸ್!’
Published On - 1:17 pm, Tue, 31 August 21