P Kalinga Rao‘s Birthday : ‘ಹೌದು ನಾನು ಕಿಂಗ್ ಎಲ್ಲಿದ್ದರೂ ಅದೇ ಪ್ಯಾಲೇಸ್!’

Artists mindset : ‘ಒಮ್ಮೆ ಕಂಟೊನ್ಮೆಂಟಿನ ಬಾರ್ ಒಂದಕ್ಕೆ ಸ್ನೇಹಿತರ ಜೊತೆ ಹೋದರು. ಅಲ್ಲಿ ಕ್ಲಾರಿಯೋನೆಟ್ ನುಡಿಸುವವನ ಕೈಚಳಕಕ್ಕೆ ಮೈ ಮರೆತು ವಾಚನ್ನು ಬಿಚ್ಚಿ ಕೊಟ್ಟೇಬಿಟ್ಟರು. ಮನೆಗೆ ಬಂದ ಮೇಲೆ ಸೋಹನ್, ಮೋಹನ್ ಕುಮಾರಿಯರಿಂದ ಆದ ಅನಾಹುತ ತಿಳಿದುಬಂದಿತು. ಅದು ಸಂಪೂರ್ಣ ಚಿನ್ನದ್ದು, ರಾಯರಿಗೆ ಉಡುಗೊರೆಯಾಗಿ ಅರಮನೆಯಿಂದ ದೊರೆತ ಪುರಸ್ಕಾರವಾಗಿತ್ತು. ಇದು ತಿಳಿದ ಮೇಲೆ ಕೂಡ ರಾಯರಿಗೆ ಕೊಂಚವೂ ಪಶ್ಚಾತ್ತಾಪವಿಲ್ಲ ಸಂತೃಪ್ತರಾಗಿ ‘ಹಿ ಡಿಸರ್‍ವಸ್ ಇಟ್’ ಎಂದು ಬಿಟ್ಟರು.’ ಎನ್. ಎಸ್. ಶ್ರೀಧರಮೂರ್ತಿ

P Kalinga Rao‘s Birthday : ‘ಹೌದು ನಾನು ಕಿಂಗ್ ಎಲ್ಲಿದ್ದರೂ ಅದೇ ಪ್ಯಾಲೇಸ್!’
ಹಿರಿಯ ಗಾಯಕ ಪಾಂಡೇಶ್ವರ ಕಾಳಿಂಗರಾಯರು
Follow us
ಶ್ರೀದೇವಿ ಕಳಸದ
|

Updated on: Aug 31, 2021 | 9:17 AM

P. Kalinga Rao : (1914–1981) ಸುಗಮ ಸಂಗೀತ ಕ್ಷೇತ್ರದಲ್ಲಿರುವ ಅನೇಕ ಸಂಗೀತ ಸಂಯೋಜಕರು, ಗಾಯಕರು, ಕವಿಗಳು ಚಲನಚಿತ್ರ ಕ್ಷೇತ್ರದಲ್ಲಿ ಅವಕಾಶ ಸಿಗದೆ ‘ಅಭಾವ ವೈರಾಗ್ಯ’ ದಿಂದ ಈ ಕಡೆ ಬಂದವರು. ಆದರೆ ಅವರಲ್ಲಿ ತೀರಾ ಭಿನ್ನವಾದವರು ಕಾಳಿಂಗರಾಯರು. ಅವರು ಮನಸ್ಸು ಮಾಡಿದ್ದರೆ ಇಡೀ ದಕ್ಷಿಣ ಭಾರತ ಚಿತ್ರರಂಗವನ್ನೇ ಆಳಬಹುದಿತ್ತು. ಆದರೆ ಕನ್ನಡದ ಮೇಲಿನ ಪ್ರೀತಿಗಾಗಿಯೇ ಸುಗಮ ಸಂಗೀತದ ಕಡೆ ಬಂದರು. ಕಾಳಿಂಗರಾಯರು ಅಕ್ಷರಶಃ ಮೋಡಿಗಾರರು. ತಮ್ಮ ಕಂಠದ ಮಟ್ಟಿಗೆ ಹೇಗೋ ತೊಡಿಗೆಗಳ ಮಟ್ಟಿಗೆ ಕೂಡ ಹಾಗೆಯೇ. ಬಿರುಬೇಸಿಗೆಯಲ್ಲೂ ಸೂಟು, ಬೂಟು, ಟೈ  ಕಟ್ಟಿಕೊಂಡೇ ಓಡಾಡುವುದು ಅವರ ಸ್ವಭಾವ. ಅವರ ಬಳಿ ಒಂದು ಕಾಲದಲ್ಲಿ ನಲವತ್ತಕ್ಕೂ ಹೆಚ್ಚು ಸರ್ಜು, ಶಾರ್ಟ್ ಸ್ಕಿನ್, ಉಲ್ಲನ್, ಟ್ವೀಡ್ ಸೂಟುಗಳಿದ್ದವು. ಒಂದೊಂದಕ್ಕೂ ಸೂಟ್ ಆಗುವಂತಹ ಷರಟು, ಟೈ, ಶೂಸ್, ಸಾಕ್ಸ್​ಗಳಿಗೆ ಅವರು ಹತ್ತಾರು ಅಂಗಡಿಗಳನ್ನು ಅಲೆಯುತ್ತಿದ್ದರು. ಎನ್. ಎಸ್. ಶ್ರೀಧರಮೂರ್ತಿ, ಹಿರಿಯ ಪತ್ರಕರ್ತರು

ಕಾಳಿಂಗರಾಯರು ಹುಟ್ಟಿದ್ದು 1914ರ ಆಗಸ್ಟ್ 31ರಂದು. ಅವರ ಹೆಸರು ಕಾಳಿಂಗ ಶರ್ಮ ಮುಂದೆ ಅದು ಸುಬ್ಬರಾಯ ಶ್ಯಾನಭೋಗ್ ಆಗಿ ಕೊನೆಗೆ ಕಾಳಿಂಗರಾಯರಾಯಿತು. ತಂದೆ ಪಾಂಡವೇಶ್ವರ ನಾರಾಯಣ ರಾವ್ ಯಕ್ಷಗಾನಕ್ಕೆ ಹೆಸರಾದವರು. ಸೋದರ ಮಾವ ಮಂಜಯ್ಯ ಸಂಗೀತ ಕಲಿತವರು. ಎರಡರ ಪ್ರೇರಣೆಯೂ ರಾಯರ ಮೇಲೆ ಆಯಿತು. ಅವರ ವಿದ್ಯಾಭ್ಯಾಸ ಬಹು ದೂರ ಸಾಗಲಿಲ್ಲ. ಇನ್ನೂ ಎರಡನೆಯ ತರಗತಿಯಲ್ಲಿದ್ದ ಈ ಚುರುಕಾದ ಹುಡುಗನನ್ನು ತಮ್ಮ ಅಂಬಾ ಪ್ರಸಾದಿತ ನಾಟಕ ಮಂಡಳಿಗೆ ಸೇರಿಸಿಕೊಂಡು ಕರ್ನಾಟಕಿ ಸಂಗೀತವನ್ನು ಅರೆದು ಕುಡಿಸಿದವರು ಮುಂಡಾಜೆ ರಂಗನಾಥ ಭಟ್ಟರು. ಮುಂದೆ ರಾಮಚಂದ್ರ ಬುವಾ ಮತ್ತು ವೆಂಕಟರಾವ್ ರಾಮದುರ್ಗ ಅವರ ಶಿಷ್ಯರಾಗಿ ಹಿಂದೂಸ್ತಾನಿ ಪದ್ದತಿಯಲ್ಲೂ ಗಾಢಜ್ಞಾನ ಸಂಪಾದಿಸಿದರು. ಆಗ ಚಿತ್ರರಂಗ ಇನ್ನೂ ಆರಂಭದ ಹಂತದಲ್ಲಿತ್ತು. ಆರ್. ನಾಗೇಂದ್ರರಾಯರ ಕರೆಯನ್ನು ಹಿಂಬಾಲಿಸಿ ಕಾಳಿಂಗರಾಯರು ಮದ್ರಾಸಿಗೆ ಹೋದರು.

1941ರಲ್ಲಿ ‘ವಸಂತ ಸೇನೆ’ ಚಿತ್ರದಲ್ಲಿ ಜೈನ ಸಂನ್ಯಾಸಿಯ ಪಾತ್ರವನ್ನು ಮಾಡಿದರು. ಆಗೆಲ್ಲಾ ಅಭಿನಯಿಸುತ್ತಲೇ ಹಾಡಬೇಕಿತ್ತು. ಹಿನ್ನೆಲೆ ಗಾಯನ ಇನ್ನೂ ಬಂದಿರಲಿಲ್ಲ. ಎರಡು ಸೊಗಸಾದ ಗೀತೆಗಳನ್ನೂ ಹಾಡಿದರು. ಮುಂದೆ ಕನ್ನಡ, ತೆಲುಗು, ತಮಿಳು ಚಿತ್ರಗಳ ಸಂಗೀತಕ್ಕೆ ರಾಯರದೇ ಮಾರ್ಗದರ್ಶನ. ಮಹಾತ್ಮ ಪಿಕ್ಚರ್ಸ್ ಅವರ ‘ಕೃಷ್ಣಲೀಲಾ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರೂ ಆದರು. ಈ ಚಿತ್ರಕ್ಕೆ ನೃತ್ಯ ನಿರ್ದೇಶಕರಾಗಿ ಬಂದಿದ್ದ ಕಣಗಾಲ್ ಪ್ರಭಾಕರಶಾಸ್ತ್ರಿಗಳನ್ನು ಸಾಹಿತ್ಯದೆಡೆಗೆ ಕರೆ ತಂದಿದ್ದೇ ರಾಯರು. ‘ಭಕ್ತ ರಾಮದಾಸ’ ಇದೇ ಕಾಲದಲ್ಲಿ ಅವರು ಸಂಗೀತ ನೀಡಿದ್ದ ಇನ್ನೊಂದು ಚಿತ್ರ. ಈ ಚಿತ್ರದ ಸಂದರ್ಭದಲ್ಲಿ ಬೀದಿ ಬದಿ ಭಿಕ್ಷೆ ಬೇಡುತ್ತಾ ನಿಂತಿದ್ದ ಬಾಲಕಿಯೊಬ್ಬಳ ಕಂಠ ಸಿರಿಯಿಂದ ಆಕರ್ಷಿತರಾದ ರಾಯರು ಅವಳಿಂದಲೂ ಒಂದು ಹಾಡನ್ನು ಹೇಳಿಸಿದ್ದರು. ಸೋಹನ್ ಸಿಂಗ್ ನಿರ್ಮಿಸಿದ ‘ಕಲಾವಿದ’ ಚಿತ್ರಕ್ಕೂ ರಾಯರು ಸಂಗೀತವನ್ನು ನೀಡಿದ್ದರು.

ಇದೇ ವೇಳೆಗೆ ಅವರಿಗೆ ಚಕ್ರವರ್ತಿ ರಾಜಗೋಪಾಲಾಚಾರಿ ಯವರಿಂದ ಸ್ಥಾಪಿತವಾಗಿದ್ದ ‘ಹಿಂದಿ ಪ್ರಚಾರ ಸಭಾ’ದ ಸಂಗೀತ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆ ಅವರಿಗೆ ದೊರಕಿತು. ಆ ಕಾಲಕ್ಕೆ ಕೈ ತುಂಬಾ ಸಂಬಳ, ಸಂಗೀತ ಕಲಿಯುವ ನೂರಾರು ವಿದ್ಯಾರ್ಥಿಗಳು. ಸೋಹನ್ ಕುಮಾರಿ ಮತ್ತು ಮೋಹನ್ ಕುಮಾರಿಯರೂ ಅವರಿಗೆ ದೊರಕಿದ್ದು ಇಲ್ಲಿಯೇ. ರಾಯರ ಬದುಕು ಸಂತಸದ ಹೊಳೆಯಲ್ಲಿ ತೇಲುತ್ತಿತ್ತು. ನಡುವೆ ಚಿತ್ರರಂಗದ ಸಹವಾಸವಂತೂ ಇದ್ದೇ ಇತ್ತು. ‘ನಟ ಶೇಖರ’ ಅವರು ಸಂಗೀತ ನೀಡಿದ್ದ ಮುಖ್ಯವಾದ ಚಿತ್ರ. ಕಲ್ಯಾಣ್ ಕುಮಾರ್ ಚಿತ್ರರಂಗಕ್ಕೆ ಬಂದಿದ್ದು ಈ ಚಿತ್ರದ ಮೂಲಕವೇ ರಾಯರಿಗೆ ನಾಡಿಗೇರರ ಪರಿಚಯವಾಗಿದ್ದು ಕೂಡ ಈ ಚಿತ್ರದ ಮೂಲಕವೇ.

P Kalinga rao Birthday

ರೆಕಾರ್ಡಿಂಗ್​ವೊಂದರಲ್ಲಿ ಕಾಳಿಂಗರಾಯರು

ಷೇಕ್ಸ್​ಪಿಯರ್​ನ ‘ಟೇಮಿಂಗ್ ಆಫ್ ದಿ ಶ್ರೂ’ ನಾಟಕವನ್ನು ಆಧರಿಸಿ ಎಚ್.ಎಲ್.ಎನ್.ಸಿಂಹ ಅವರು ಬರೆದಿದ್ದ ನಾಟಕ ‘ಅಬ್ಬಾ! ಆ ಹುಡುಗಿ’ ಇದರ ರಂಗ ಪ್ರಯೋಗಕ್ಕೆ ಕಾಳಿಂಗರಾಯರೇ ಸಂಗೀತ ನೀಡಿದ್ದರು. ಸಿನಿಮಾ ಆಗ ಕೂಡ ಅವರದೇ ಸಂಗೀತ ನಿರ್ದೇಶನ. ಅತ್ಯಂತ ಪ್ರಯೋಗಶೀಲ ಗೀತೆಗಳು ಚಿತ್ರದಲ್ಲಿದ್ದವು. ‘ಹೃದಯ ದೇವಿಯೆ ನಿನ್ನ’ವಂತೂ ಒಂದು ಅಸಾಧಾರಣ ಸಂಯೋಜನೆಯಾಗಿದೆ. ಅದೇ ರೀತಿ ರಾಯರೇ ಹಾಡಿರುವ ‘ಬಾ ಚಿನ್ನ ಓ ರನ್ನ ನೋಡೆನ್ನಾ’ ಪಾಶ್ಚ್ಯಾತ್ಯ ಸಂಗೀತದ ಒಂದು ವಿಶಿಷ್ಟ ಅಳವಡಿಕೆ. ಈ ವೇಳೆಗಾಗಲೇ ರಾಯರು ಬೇರೆ ಚಿತ್ರಗಳಿಗೆ ಹಾಡಿದ್ದ ‘ತಾಯಿ ದೇವಿಯನು ಕಾಣೆ ಹಂಬಲಿಸೆ’ ‘ಓ ನಮೋ ನಾರಾಯಣ’ ಬಹಳ ಜನಪ್ರಿಯವಾಗಿದ್ದವು. ಹೀಗೆ ಜನಪ್ರಿಯತೆಯ ತುತ್ತ ತುದಿಯಲ್ಲಿ ಇದ್ದಾಗಲೇ ಅ.ನ.ಕೃ ‘ಚಿತ್ರ ಸಂಗೀತಕ್ಕೇನು ಬೇಕಾದಷ್ಟು ಸಾಧಕರು ಸಿಕ್ಕ ಬಲ್ಲರು. ಆದರೆ ಕನ್ನಡ ಕಾವ್ಯಕ್ಕೆ ನಿನ್ನ ಬಿಟ್ಟರೆ ಬೇರೆ ಯಾರೂ ಸಿಕ್ಕುವುದಿಲ್ಲ’ ಎಂದ ಮಾತು ಸೆಳೆಯಿತು. ಎಲ್ಲಾ ವೈಭವವನ್ನೂ ತಳ್ಳಿ ಕರ್ನಾಟಕಕ್ಕೆ ಬಂದು ಬಿಟ್ಟರು. ಹಳ್ಳಿ ಹಳ್ಳಿ ತಿರುಗಿ ಏಕೀಕರಣದ ಜ್ಯೋತಿಯನ್ನು ಬೆಳಗಿದರು.

ಕನ್ನಡನಾಡಿಗೆ ಬಂದ ಅವರು ದಾಸರ, ಶರಣರ ಕೃತಿಗಳಿಗೆ ಹೊಸ ವೇಷ ತೊಡಿಸಿದರು. ನವೋದಯ ಕವಿಗಳಿಗೆ ಬೆಡಗಿನ ಒಡವೆ ತೊಡಿಸಿದರು. ಜನಪದದ ಮೇಲೆ ಮುಸುಕಿದ್ದ ಧೂಳು ತೆಗೆದರು. ಸಾಮಾನ್ಯವಾಗಿ ಕಾಳಿಂಗ ರಾಯರ ಕಾರ್ಯಕ್ರಮಗಳು ಮೂರು ಗಂಟೆ ಇರುತ್ತಿದ್ದವು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ವಿನಿಂದ ಕಾರ್ಯಕ್ರಮ ಆರಂಭ. ಪ್ರೇಕ್ಷಕರ ಚಪ್ಪಾಳೆಯ ಶಬ್ದ ಕಿವಿಗೆ ಅಪ್ಪಳಿಸುತ್ತಲೇ ಗರಿಯಾಗುತ್ತಿದ್ದರು. ಎಲ್ಲರತ್ತ ಮಲ್ಲಿಗೆ ನಗೆ ಬೀರುತ್ತಾ ತೊಟ್ಟಿದ್ದ ಕೋಟನ್ನು ಮೈಕಿನ ಗೂಟಕ್ಕೆ ಸಿಕ್ಕಿಸಿ ಸಂಸ್ಕೃತ ಶ್ಲೋಕಗಳಿಗೆ ಬರುತ್ತಿದ್ದರು. ಅದು ಮುಗಿಯುತ್ತಿದ್ದಂತೆ ಎರಡು ಕೈ ಮೇಲೆತ್ತಿ ಥೇಟ್ ಭಗೀರಥನಂತೆ ‘ಇಳಿದು ಬಾ ತಾಯೆ’ ಎಂದು ಆರಂಭಿಸಿದರೆ ನೆರೆದ ಜನ ಗಂಗಾ ಪ್ರವಾಹದಲ್ಲಿ ತೊಯ್ದು ಹೋಗುತ್ತಿದ್ದರು. ‘ಏರಿಸಿ ಹಾರಿಸಿ ಕನ್ನಡದ ಬಾವುಟ’ ಎಂದರೆ ಹಿಗ್ಗುತ್ತಿದ್ದರು. ಪರಚಿಂತೆ ನಮಗೆ, ಹುಲ್ಲಾಗು ಬೆಟ್ಟದಡಿ, ಯಾರು ಹಿತವರು ನಿನಗೆ, ಅದು ಬೆಟ್ಟ ಇದು ಬೆಟ್ಟವೋ ಜಿ.ಪಿ.ರಾಜರತ್ನಂ ಅವರ ‘ಬ್ರಹ್ಮ ನಿಂಗೆ ಜೋಡಿಸ್ತೀನಿ’ ‘ಯಳ್ಕೋಳ್ಳೋಕ್ ಒಂದು ಊರು’ ಹೀಗೆ ರಾಯರ ಬತ್ತಳಿಕೆಯಲ್ಲಿ ಎಲ್ಲವೂ ಬ್ರಹ್ಮಸ್ತ್ರಗಳೇ. ಕೆ.ಎಸ್.ನರಸಿಂಹಸ್ವಾಮಿಯವರ ‘ಒಂದಿರುಳು ಕನಸಿನಲಿ’ ಕನ್ನಡಿಗರೆಲ್ಲರಿಗೂ ಚಿರಪರಿಚಿತ ಕವಿತೆ. ಅದು ರಾಯರ ಕೈಯಲ್ಲಿ ಹೊಸ ರೂಪವನ್ನೇ ಪಡೆದಿತ್ತು. ‘ಸುಮ್ಮನಿರಿ ಎಂದಳಾಕೆ’ ಎನ್ನುವುದನ್ನು ಅವರು ಹತ್ತಾರು ರೀತಿಯಲ್ಲಿ ಹಾಡುತ್ತಿದ್ದರು. ಪ್ರತಿ ಸಲ ಹಾಡಿದಾಗಲೂ ಹೊಸ ಅರ್ಥ ಕೇಳಿಸುತ್ತಿತ್ತು.

ಸುಮಾರು ಒಂದೂವರೆ ಗಂಟೆಗಳ ಕಾಲ ರಾಯರೊಬ್ಬರೇ ಹಾಡುತ್ತಿದ್ದರು. ನಂತರ ಸೋಹನ್ ಕುಮಾರಿ ಮತ್ತು ಮೋಹನ್ ಕುಮಾರಿಯವರು ಅಕ್ಕ ಪಕ್ಕ ಬಂದು ನಿಲ್ಲುತ್ತಿದ್ದರು. ಆಗ ಆರಂಭ ಜನಪದ ಗೀತೆಗಳ ಸರದಿ ‘ಮೂಡಲ್ ಕುಣಿಗಲ್ ಕೆರೆ’ ‘ಬಾರಯ್ಯ ಬೆಳದಿಂಗಳೇ’ ‘ಮಾಯದಂಥ ಮಳೆ ಬಂತಣ್ಣ’ ಎಲ್ಲವೂ ಒಂದಕ್ಕಿಂತ ಒಂದು ಸೊಗಸು. ಮೂರು ಗಂಟೆಗಳ ಕಾರ್ಯಕ್ರಮ ಮೂರು ನಿಮಿಷದಂತೆ ಮುಗಿದು ಹೋಗುತ್ತಿತ್ತು. ಕಾಳಿಂಗ ರಾಯರು ಅಷ್ಟೆಲ್ಲಾ ಗೀತೆಗಳನ್ನು ಹಾಡುತ್ತಿದ್ದರೂ ಒಮ್ಮೆಯೂ ಪುಸ್ತಕವನ್ನಾಗಲಿ ಕೊನೆಗೆ ಹಾಳೆಯ ತುಣುಕನ್ನಾಗಲಿ ನೋಡಿ ಕೊಂಡವರಲ್ಲ. ಎಲ್ಲಾ ಗೀತೆಗಳೂ ಅವರಿಗೆ ಕಂಠಸ್ತವೇ. ಎರಡೂ ಮೂರೋ ಪಕ್ಕ ವಾದ್ಯಗಳನ್ನಷ್ಟೇ ಅವರು ಯಾವಾಗಲೂ ಇಟ್ಟು ಕೊಳ್ಳುತ್ತಾ ಇದ್ದದ್ದು.

ಸುಗಮ ಸಂಗೀತದ ಅನಭಿಷಿಕ್ತ ಚಕ್ರವರ್ತಿ ಎನ್ನಿಸಿಕೊಂಡಿದ್ದ ರಾಯರ ಕೊನೆಯ ದಿನಗಳು ಕಷ್ಟದ್ದಾಗಿದ್ದು ಮಾತ್ರ ವಿಪರ್ಯಾಸ. ಒಂದು ರೀತಿಯಲ್ಲಿ ಸ್ವಯಂಕೃತ. ಗೋಪಾಲಕೃಷ್ಣ ಅಡಿಗರು ಹೇಳುವಂತೆ ಅವರು ‘ದ್ರವ್ಯವನ್ನೆಲ್ಲಾ ದ್ರವ ರೂಪಕ್ಕೆ ತಿರುಗಿಸಿಬಿಟ್ಟಿದ್ದರು.’ ಹೀಗಿದ್ದರೂ ಅವರ ಜೀವನೋತ್ಸಾಹ ಮಾತ್ರ ಕೊನೆಯವರೆಗೂ ಕುಗ್ಗಲಿಲ್ಲ. ಕನಿಷ್ಟ ನೂರು 555 ಸಿಗರೇಟ್ ಮತ್ತು ಅದಕ್ಕೆ ತಕ್ಕಷ್ಟು ಸುರೆ ಬೀಳದಿದ್ದರೆ ಅವರ ದಿನ ಸಾಗುತ್ತಲೇ ಇರಲಿಲ್ಲ. ಅಷ್ಟರ ಮಟ್ಟಿಗೆ ಅವರು ಆ ಎರಡೂ ಚಟಗಳಿಗೆ ಅಡಿಕ್ಟ್ ಆಗಿದ್ದರು. ಕಾಳಿಂಗರಾಯರು ಮಲಗಲು ಮಂಚ ಏರುತ್ತಿದ್ದದ್ದೇ ಮಧ್ಯರಾತ್ರಿ ಎರಡರ ನಂತರ ಆಗಲೂ ಅವರೇನು ನಿದ್ದೆ ಮಾಡುತ್ತಿರಲಿಲ್ಲ. ಮೆಚ್ಚಿನ ಫಿಲಿಪ್ಸ್ ರೇಡಿಯೋ ಹಿಡಿದು ಕೊಂಡು ಪರದೇಶಗಳಿಂದ ತೂರಿ ಬರುತ್ತಿದ್ದ ಸಂಗೀತಕ್ಕೆ ಕಿವಿಯಾಗುತ್ತಿದ್ದರು. ಅದರಲ್ಲೂ ಅರೆಬಿಕ್ ಸಂಗೀತವೆಂದರೆ ಅವರಿಗೆ ಪಂಚಪ್ರಾಣ. ಅವರಿಗೆ ಸಂಗೀತವನ್ನು ಯಾರು ಹೇಳಿದರೂ ಸಂತೋಷವೇ. ಒಳ್ಳೆಯ ಸಂಗೀತವನ್ನು ಕೇಳಿದರೆ ಮೈ ಮರೆತುಬಿಡುತ್ತಿದ್ದರು.

P Kalinga Rao‘s Birthday

ಮೋಹನಕುಮಾರಿ ಮತ್ತು ಸೋಹನಕುಮಾರಿಯವರೊಂದಿಗೆ ಪಿ. ಕಾಳಿಂಗರಾಯರು

ಒಮ್ಮೆ ಕಂಟೊನ್ಮೆಂಟಿನ ಬಾರ್ ಒಂದಕ್ಕೆ ಸ್ನೇಹಿತರ ಜೊತೆ ಹೋದರು. ಅಲ್ಲಿ ಕ್ಲಾರಿಯೋನೆಟ್ ನುಡಿಸುವವನ ಕೈ ಚಳಕಕ್ಕೆ ಮೈ ಮರೆತು, ಸಂತೋಷದಿಂದ ತಮ್ಮ ಕೈಯಲ್ಲಿ ವಾಚನ್ನು ಬಿಚ್ಚಿ ಕೊಟ್ಟೇಬಿಟ್ಟರು. ಮನೆಗೆ ಬಂದ ಮೇಲೆ ಸೋಹನ್, ಮೋಹನ್ ಕುಮಾರಿಯರ ಮೂಲಕ ಆದ ಅನಾಹುತ ತಿಳಿದು ಬಂದಿತು. ಅದು ಸಂಪೂರ್ಣ ಚಿನ್ನದ್ದು, ರಾಯರಿಗೆ ಉಡುಗೊರೆಯಾಗಿ ಅರಮನೆಯಿಂದ ದೊರೆತ ಪುರಸ್ಕಾರವಾಗಿತ್ತು. ಇದು ತಿಳಿದ ಮೇಲೆ ಕೂಡ ರಾಯರಿಗೆ ಕೊಂಚವೂ ಪಶ್ಚಾತ್ತಾಪವಿಲ್ಲ ಸಂತೃಪ್ತರಾಗಿ ‘ಹಿ ಡಿಸರ್‍ವಸ್ ಇಟ್’ ಎಂದು ಬಿಟ್ಟರು. ಸ್ನೇಹಿತರೇ ಕ್ಲಾರಿಯೋ ನೆಟ್‍ನವನ ಮನೆ ಹುಡುಕಿಕೊಂಡು ಹೋಗಿ ಅವನಿಗೆ ಒಂದು ಎಚ್.ಎಮ್.ಟಿ ವಾಚ್ ಕೊಟ್ಟು ಬಹಳ ಸಾಹಸದಿಂದ ಒಪ್ಪಿಸಿ ರಾಯರ ಗೋಲ್ಡ್ ವಾಚ್ ಹಿಂದಕ್ಕೆ ತರ ಬೇಕಾಯಿತು. ‘ಹೌದು ನಾನು ಕಿಂಗ್ ಎಲ್ಲಿದ್ದರೂ ಅದೇ ಪ್ಯಾಲೇಸ್’ ಎನ್ನುತ್ತಿದ್ದ ರಾಯರು ಅದರಂತೆಯೇ ಬದುಕಿದರು. ಕೊಡಗೈ ದಾನಿ ಎನ್ನಿಸಿಕೊಂಡರು. ಮುಖ್ಯವಾಗಿ ತಮ್ಮ ಶಿಷ್ಯರನ್ನು ಸಿದ್ದಗೊಳಿಸಿದರು. ಅದರಲ್ಲೂ ಮೈಸೂರು ಅನಂತಸ್ವಾಮಿ ಎಂದರೆ ಅವರಿಗೆ ಪಂಚಪ್ರಾಣ. ‘ಇದು ನಮ್ಮ ಅನಂತು ಮಾಡಿದ್ದು’ ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಒಮ್ಮೆ ಕುವೆಂಪು ಅವರ ಮನೆಗೆ ಭೇಟಿ ಕೊಟ್ಟಿದ್ದ ರಾಯರು ಮಹಾಕವಿ ತಮ್ಮ ಹೆಂಡತಿ ಹೇಮಾವತಿ ಕುರಿತು ಬರೆದಿದ್ದ ‘ಅವಳ ಬಣ್ಣ ಕೊಂಚ ಕಪ್ಪು, ಅದರೇನು ನನಗೆ ಒಪ್ಪು’ವನ್ನು ಹಾಡಿದ್ದರು. ಕುವೆಂಪು ಆನಂದದಿಂದ ಕಣ್ಣೀರು ಕರೆಯುತ್ತಾ ‘ಇನ್ನುಳಿದ ಗಾಯಕರು ನನ್ನ ಕವಿತೆಗಳನ್ನು ಹೊತ್ತುಕೊಂಡು ಹೋಗುತ್ತಾರೆ ಆದರೆ ನೀವು ಹತ್ತಿಕೊಂಡು ಹೋಗುತ್ತೀರಿ’ ಎಂದಿದ್ದರು.

1981ರ ಸೆಪ್ಟಂಬರ್ 22ರಂದು ಕಾಳಿಂಗ ರಾಯರು ತಮ್ಮ ಹಾಡುಗಳಲ್ಲಿ ಐಕ್ಯರಾದರು. ‘ಕನ್ನಡಕೊಬ್ಬನೇ ಕೈಲಾಸಂ’ ಎನ್ನುವ ಮಾತು ಎಷ್ಟು ನಿಜವೋ ‘ಕನ್ನಡಕೊಬ್ಬನೇ ಕಾಳಿಂಗರಾವ್’ ಎನ್ನುವ ಮಾತು ನಿಜ ಎನ್ನುವಂತೆ ಅವರು ಬದುಕಿದರು. ಆದರ್ಶವನ್ನೂ ಬಿಟ್ಟು ಹೋದರು.

*

ಪರಿಚಯ : ಎನ್.ಎಸ್.ಶ್ರೀಧರಮೂರ್ತಿಯವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ವೃತ್ತಿಜೀವನವನ್ನು ಆರಂಭಿಸಿದರು. ನಂತರ ಮಲ್ಲಿಗೆ ಮಾಸಪತ್ರಿಕೆಯಿಂದ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದರು. ವಿವಿಧ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಇವರು ಸಂಸ್ಕೃತಿ, ಸಾಹಿತ್ಯ, ಕಲೆ, ಚಲನಚಿತ್ರ ಇತಿಹಾಸದ ಕುರಿತು ಅಪಾರ ಜ್ಞಾನವನ್ನು ಹೊಂದಿದ್ದಾರೆ. ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ಅಧ್ಯಯನ’ ಸಂಶೋಧನಾ ಕೃತಿ. ನಾದದ ನೆರಳು ಇವರ ಕಾದಂಬರಿ.

ಇದನ್ನೂ ಓದಿ : Mohammed Rafi‘s Death Anniversary : ಫಕೀರರ ಪ್ರಭಾವಕ್ಕೊಳಗಾಗಿದ್ದ ರಫಿ ; ‘ಸಂಗೀತದಿಂದ ಹಣ ಸಂಪಾದಿಸುವುದು ತಪ್ಪು’

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ