Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’ (AvithaKavithe) ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ; ಕವಿ, ಅನುವಾದಕಿ ಡಾ. ಆರ್. ತಾರಿಣಿ ಶುಭದಾಯಿನಿ (Dr. R. Tarini Shubhadayini) ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ. ಇವರ ಪಿಎಚ್.ಡಿ ಪ್ರಬಂಧ Cultural Politics of Translation; A Study of Attitude and Form. ಇವರ ಪ್ರಕಟಿತ ಕೃತಿಗಳು ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ, ಪೂರ್ವಭಾಷಿ, ಹೆಡೆಯಂತಾಡುವ ಸೊಡರು, ಗಳಿಗೆ ಬಟ್ಟಲು, ಸಾಮಯಿಕ, ಸನ್ನೆಗೋಲು, ಅಂಗುಲಹುಳುವಿನ ಇಂಚುಪಟ್ಟಿ, ಡಯಾಸ್ಪೊರಾ ಮಾನೋಗ್ರಾಫ್, ಸ್ತ್ರೀ ಶಿಕ್ಷಣ ಚಾರಿತ್ರಿಕ ಹೆಜ್ಜೆಗಳು. 2021ನೇ ಸಾಲಿನ ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿ ಪಡೆದ ‘ವಿವೇಕಿಯ ಸ್ವಗತ’ ಇಂದು ಕಾಂತಾವರದಲ್ಲಿ ಬಿಡುಗಡೆಯಾಗಲಿದೆ. ಕೆಲ ಕವನಗಳು ನಿಮ್ಮ ಓದಿಗೆ.
*
ಪ್ರತಿ ಕವಿಯೂ ನಿರಂತರವಾಗಿ ದಿಕ್ಚ್ಯುತಿಗಳನ್ನು ಮಾಡುತ್ತಿರುತ್ತಾಳೆ/ನೆ. ಬರವಣಿಗೆಯು ತುಂಬ ಬುದ್ಧಿಪೂರ್ವಕ ಅನ್ನಿಸುವಾಗ ಅದರಿಂದ ಹೊರಳಿ ಭಾವತೀವ್ರ ಕವಿತೆಗಳೆಡೆಗೆ ನಡೆಯುವುದು ಅಥವಾ ಬರೀ ಭಾವನೆಗಳೇ ತುಂಬಿದ ಅಭಿವ್ಯಕ್ತಿಯಿಂದ ಮತ್ತೊಂದೆಡೆಗೆ ಚಲಿಸುವುದು ಇತ್ಯಾದಿ. ಆದರೆ ಯಾವುದೇ ಒಂದು ಬಗೆಯ ಪ್ರಜ್ಞಾಪೂರ್ವಕ ನಿರಾಕರಣೆಯಿಂದಾಗಲೀ, ಸ್ವೀಕರಣೆಯಿಂದಾಗಲೀ ಕವಿತೆ ಸಾಧ್ಯವಿಲ್ಲ ಎನ್ನುವ ಎಚ್ಚರವೂ ತಾರಿಣಿಯವರ ಕವಿತೆಗಳಲ್ಲಿ ಇದೆ. ಒಂದು ಕವಿತೆಯಲ್ಲಿ ಒಮ್ಮೆ ಬಳಸಿದ ಭಾಷೆಯು ಮತ್ತೊಂದು ಕವಿತೆ ಬರೆಯುವ ಹೊತ್ತಿಗೆ ‘ಸ್ಥಾಪಿತ’ವಾದದ್ದಾಗುತ್ತದೆ. ಹಾಗಾಗಿ, ಪ್ರತಿ ಕವಿತೆಯೂ ಹೊಸ ಕನ್ನಡವನ್ನು ಬಳಸಿದಾಗ ಮಾತ್ರ ಹಳೆಯ ಕನ್ನಡವನ್ನು ಮುರಿದು ಕಟ್ಟುವ ಪ್ರಯತ್ನ ನಿರಂತರವಾಗಿರುತ್ತದೆ. ಅಂತಹ ಯತ್ನ ಈ ಸಂಕಲನದಲ್ಲಿ ಕಾಣುತ್ತದೆ.
ಕಾವ್ಯ, ಸಂಶೋಧನೆ, ಅನುವಾದ, ವಿಮರ್ಶೆ, ಸಂಪಾದನೆ- ಹೀಗೆ ಭಿನ್ನ ಬಗೆಗಳಲ್ಲಿ ತಾರಿಣಿ ಅವರು ಕ್ರಮಿಸಿರುವ, ಅಭಿವ್ಯಕ್ತಿಗೆ ಕಂಡುಕೊಂಡ ಸಾಹಿತ್ಯ ಮಾರ್ಗಗಳ ಒಳಗೆ ಅವರ ಸಾಹಿತ್ಯ ಕ್ಷೇತ್ರದ ಹೆಜ್ಜೆಗಳು ಮತ್ತು ಅದನ್ನು ಪ್ರೇರಿಸಿರುವ ಲೋಕದ ಕಡೆಗೆ ನನ್ನ ಮನಸ್ಸು ಹೊರಳುತ್ತದೆ. ಅಧ್ಯಾಪನ, ಸಂಶೋಧನೆಯ ಒಳಗೆ ಸುಲಭವಾಗಿ ಶುಷ್ಕವಾಗಿ ಬಿಡಬಹುದಾದ ಮನಸ್ಸನ್ನು ತೇವವಾಗಿಟ್ಟುಕೊಳ್ಳಲು ತಾರಿಣಿ ಆಸರೆ ಪಡೆದಿರುವುದು ಕಾವ್ಯದಲ್ಲಿ ಅಂತಲೂ ಅನ್ನಿಸುತ್ತದೆ. ಇಲ್ಲಿನ ಹಲವು ಕವಿತೆಗಳಲ್ಲಿ ಕಂಡು ಬರುವ ಮನುಷ್ಯ ಸ್ವಭಾವದ ಸತ್ಯಾನ್ವೇಷಣೆಯ ನೆಲೆಗಳು, ಸಂಬಂಧಗಳ ಸುಖ, ಅದು ಒಡ್ಡುವ ಸಂಘರ್ಷ, ಸವಾಲುಗಳು, ಇದನ್ನು ನಿಭಾಯಿಸಲು ಅಗತ್ಯವಿರುವ ಮನಸ್ಥಿತಿ, ಇವನ್ನೆಲ್ಲ ಅಭಿವ್ಯಕ್ತಿಗೊಳಿಸುವಾಗ ಮಾತು-ಅರ್ಥಗಳ ನಡುವಿನ ತಾಕಲಾಟದಲ್ಲಿ ಕೇಳುವ ಭಿನ್ನ ಕಾವ್ಯದನಿಯಿಂದ ಇದು ವಿದಿತ. ‘ಹೊಳೆಯಬಹುದು ಅರ್ಥ ಮಾತಿನ ಒಳಗು’ ಅನ್ನುವ ಈ ಕವಿಗೆ, ‘ಅಕ್ಷರಗಳಲ್ಲಿ ಸಕಲೆಂಟನ್ನೂ ಮೂಡಿಸುವೆನೆಂದಿಲ್ಲ’ ಎನ್ನುವ ಎಚ್ಚರವೂ ಇದೆ.
ಜ.ನಾ ತೇಜಶ್ರೀ, ಕವಿ, ಅನುವಾದಕಿ
*
*
ಗೋಡೆ
ಗೋಡೆ ಕೆಲವರಿಗೆ
ಪ್ರಾರ್ಥನೆಯ ಜಾಗ
ಕೆಲವರಿಗೆ ತಲೆಯಾನಿಸಿ
ಭುಜವೆಂದು ಸಂತೈಕೆ
ಅರಸುವ ತಾಣ
ಕೆಲವರಿಗೆ ಒಂಟಿ ಕಾಲಲ್ಲಿ
ಒರಗಿ ಸಿಗರೇಟುಗಿಗರೇಟು
ಸೇದುತ್ತಲೊ ಫೋನಿನಲ್ಲಿ ಮಾತಾಡುತ್ತಲೊ
ಮೈಮರೆಯಲು ಇರುವ ಹಿತದ ತಾವು
ಹಳೇದುರ್ಗದ ಬೀದಿಗಳಲ್ಲಿ ಸೆಗಣಿ ತಟ್ಟಿರದ
ಗೋಡೆಗಳೇ ಕಾಣೆ
ಇಂತವರ ಮನೆ ಹೀಗೇ ಎನ್ನುವ ಗುರುತು
ಹಚ್ಚಿಕೊಡುವ ಬೊಟ್ಟುಗಳುಳ್ಳ ಮಣ್ಣಿನ ಕಲ್ಲಿನ
ಗೋಡೆ
ಪೋಸ್ಟರ್ ಹಚ್ಚುವ ಹುಡುಗರು
ನಡುರಾತ್ರಿಯಲಿ ಕನಸ ಒತ್ತಿ ಮೆತ್ತಿ
ನಾಳೆಗೆ ನೋಡಿಕೊಳ್ಳಿರೋ ಎಂದು
ಕೈಯೆತ್ತಿ ಸೈಕಲ್ ಹತ್ತಿ ಹೋಗೇ ಬಿಟ್ಟ
ವರಿಗೆ ತಡೆ ಎಲ್ಲಿ? ಗೋಡೆ ಮಾತ್ರ!
ವಾಟ್ಸಾಪ್ ಗೋಡೆಯಂತೂ ಬಿಡಿ
ನಮ್ಮನಮ್ಮದನ್ನ ಎತ್ತಿ
ಒತ್ತಿ ಒತ್ತಿ ಹೇಳಿಕೊಳ್ಳುವ
ತಾವಿದ್ದೇವೆಂಬುದನ್ನ ಸತ್ತ ಮೇಲೂ
ನೆನಪಿಸಬಹುದಾದ ತಾವು
ಎದ್ದವರಿಗೊಂದು ಬಿದ್ದವರಿಗೊಂದು
ಮರೆಗೊಂದು ಕೊರೆಗೊಂದು
ಇದ್ದಾಗ ಮನೆಮನೆ ಕತೆಗಳ ಹಂಚಿಕೆ
ವರ್ತಮಾನಕ್ಕೆ ತಕ್ಕಂತೆ ಗೋಡೆ ಗೀಚಿದರೆ
ಗಲಭೆ, ಕ್ಷೋಭೆ. ಬಿದ್ದರೆ ತಲೆದಂಡ
ಕೆಡವಿದರೆ ಅನಾಹುತ
ಗೋಡೆ ಅಂದರೆ ಇತಿಹಾಸ
ಗೋಡೆ ಅಂದರೆ ಜರ್ಮನಿ
ಗೋಡೆ ಅಂದರೆ ಜನ
ದಾಟಬಲ್ಲ ಅಡೆತಡೆ
*
ಪುಷ್ಪ ರಗಳೆ
ಹೂಬುಟ್ಟಿಗಳು ತೇಲಿ ತೇಲಿ
ಸ್ವಾಮಿಪಾದವ ಮುಟ್ಟುತಾವೆ
ಉಘೇ ಗೇ ಗೇ ಗೇ…
ಹಡಗಲಿಯ ಬಳಸಿ ಹರಿದು
ಕೆನ್ನೀರು ಮಣ್ಣಿನೋಕುಳಿ ನೀರು
ಉಘೇ ಗೇ ಗೇ ಗೇ…
ವಿರೂಪಾಕ್ಷನ ಪಾದಕ್ಕೆ ಸನ್ನು
ಅವನ ಪಾದವ ಕಂಡರ‍್ಯಾರು ಇಹದೊಳಗೆ
ಉಘೇ ಗೇ ಗೇ ಗೇ…
ತಲೆಮೇಲೆ ಸ್ವಾಮಿ ಚಂದ್ರನ ಮುರುಕು ತೊಟ್ಟ
ಗಂಟಲಲಿ ವಿಷದ ಗಂಟು ಒತ್ತರಿಸಿಟ್ಟ
ಉಘೇ ಗೇ ಗೇ ಗೇ…
ಹೂವೀಳ್ಯ ಒಪ್ಪಿಸಿಕೊ ನನ್ನಪ್ಪ ಹೂಮನದವನೆ
ಕರುಣಾಮಯನೆ ಭೋಲನೆ ಭಾಲನೇತ್ರನೆ
ಉಘೇ ಗೇ ಗೇ ಗೇ…
ಹೂಬಾಣ ಹೂಡಿದ ಮನ್ಮಥ ಸತ್ತ
ಮತ್ತೆ ಹೂವ್ಯಾಕೊ ಭವದ ಸಂತತಿ
ಉಘೇ ಗೇ ಗೇ ಗೇ…
ಒಕ್ಕಣ್ಣು ಮುಕ್ಕಣ್ಣು ದೃಷ್ಟಿ ಇಳಿಸಿ ಶಿವನಿಗೆ
ಕೊನ್ನಿ ಕೊನ್ನಿ ಕೆಂಧೂಳಿ ವಿರೂಪನ
ಉಘೇ ಗೇ ಗೇ ಗೇ…
ಸಂಜೆಗೆ ನೀಲಕಂಠದ ಗಗನ ಗುಡಿ ಮೇಲೆ
ಸ್ವಾಮಿ ಪಾದ ಬುವಿಯ ಕೆಂಪು ಮಣ್ಣೊಳಗೆ
ಉಘೇ ಗೇ ಗೇ ಗೇ…
ಕಲ್ಲಾಗಿ ನಿಂತ ಕಲ್ಲಪ್ಪ ನನ್ನಪ್ಪ ಹಣೆಗಣ್ಣ
ಭಕುತರ ಮೇಲೊಂದು ತಾಯಿದೃಷ್ಟಿಯಿಟ್ಟು
ಉಘೇ ಗೇ ಗೇ ಗೇ…
ಶರಣು ಶರಣು ಶರಣು ಹೂವಿಗೆ ಹೂಮಗನಿಗೆ
ಹೂವೆಲ್ಲವು ತಾನಾದ ಕೆಂಚಪ್ಪನಿಗೆ
*
ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ‘ಓದಿನಗಂಗಳ’ದಲ್ಲಿ ತಾರಿಣಿ ಶುಭದಾಯಿನಿ ಕಾಣಿಸಿದ ‘ಕೌಬಾಯ್ಸ್ ಮತ್ತು ಕಾಮ ಪುರಾಣ’
*
ಕವಿತೆ ಎಂದರೆ ಯಾಕೆ ಪ್ರೀತಿ? ಈಗ ಐದನೆಯ ಸಂಕಲನ ತರುತ್ತಿರುವ ಹೊತ್ತಿಗೆ ಈ ಪ್ರಶ್ನೆಯನ್ನಂತು ನನಗೆ ನಾನೇ ಅನೇಕ ಸಾರಿ ಕೇಳಿಕೊಂಡಿದ್ದಿದೆ. ‘ಕಾಮನ ಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ’ ಎಂಬ ಕುಣಿಕುಣಿಯುವ ಪ್ರಾಸದ ಸಾಲುಗಳೇ ಕವಿತೆ ಎಂದು ಪುಟ್ಟ ಮಿದುಳಿನಲ್ಲಿ ಅಚ್ಚಾಗಿದ್ದಕ್ಕಿಂತ ಹೊರತಾಗಿ ಏನೊ ಯಾಕೊ ನಾನೇ ಬರೆದೇಬಿಡಬೇಕು ಎನ್ನುವ ತಹ ತಹ ಹುಟ್ಟಿತ್ತಲ್ಲವಾ? ಅದೇ ಕವಿತೆ ಎನ್ನುವುದು ನನ್ನೊಳಗೆ ಮೊಳೆತ ದಿನ ಅನ್ನಿಸುತ್ತೆ. ಕೂಡುಕುಟುಂಬದ ಗೌಜಿಯಲ್ಲಿ ಬಾಲ್ಯ ಎನ್ನುವುದು ಅರಳುತ್ತಿದ್ದ ಹೊತ್ತಲ್ಲಿ ಜನರ ಮಧ್ಯೆ ಐಡೆಂಟಿಟಿ ಸಿಗದ ಮನಸ್ಸು ಏಕಾಂತಕ್ಕೆಳಸಿ, ಕವಿತೆಯಂತದ್ದೇನೊ ಮೂಡಿಸಲೆತ್ನಿಸಿತೊ ತಿಳಿಯದು. ಹೆಣ್ಣಾಗಿ ಹುಟ್ಟಿ ಸುತ್ತಲಿನವರ ನಿರ್ಲಕ್ಷ್ಯ, ತಾತ್ಸಾರಗಳನ್ನು ನೋಡುತ್ತಾ, ನುಂಗುತ್ತಾ, ಕಣ್ಣೀರು ಹಾಕುತ್ತಾ ಬೆಳೆದವಳು ನಾನು. ಜೊತೆಗೆ ಬಣ್ಣದ ಪ್ರಮಾಣ ಬೇರೆ! ಸುಂದರವಾಗಿರುವವರ ಕೆಟಗರಿಯಲ್ಲಿ ನಾನು ಇಲ್ಲವೆಂಬ ಭಾವ ಹುಟ್ಟಿಸಿದ ಜಗತ್ತು ನನ್ನನ್ನು ನನ್ನದೇ ಆದ ಲೋಕದೊಳಗೆ ಹೋಗುವಂತೆ ಪ್ರೇರೇಪಿಸುತ್ತಿತ್ತು.
ಅಜ್ಜನ ಮನೆಯಲ್ಲಿ ಹೊರಗೆ ನಿಲ್ಲುವಂತಿಲ್ಲ, ಹೆಚ್ಚು ಹೂ ಮುಡಿಯುವಂತಿಲ್ಲ, ನಗುವಂತಿಲ್ಲ ಕಡೆಗೆ ಅಳುವಂತೆಯೂ ಇಲ್ಲ. ನಿಷೇಧಗಳ ನಡುವೆಯೇ ನನ್ನದೇ ಆದ ಸ್ಪೇಸ್ ಎನ್ನುವುದು ಹುಟ್ಟಿಸಿಕೊಳ್ಳುವ ಕಾತುರದಲ್ಲಿ ಕವಿತೆ ಹುಟ್ಟಿತೇನೊ. ಸುಮಾರು ಐದನೆಯ ಕ್ಲಾಸ್ ಓದುವಾಗ ಮೊದಲ ಕವಿತೆ ಹುಟ್ಟಿದ್ದು. ಆ ದೃಷ್ಟಿಯಿಂದ ಬಾಲಾಪರಾಧಿ ನಾನು! ಆನಂತರ ಬರಹಗಾರರಾಗಿದ್ದ ನನ್ನ ತಂದೆಯ ಸಖ್ಯದಲ್ಲಿ ಓದಿಗೆ ತೆರೆದುಕೊಂಡ ಮೇಲೆ ಅನೇಕ ಕೃತಿಗಳು ನನಗೆ ಆಪ್ತವಾದವು. ಆದರೆ ನಾನು ಸೃಜನಶೀಲವಾಗಿ ತೊಡಗಿಕೊಳ್ಳಬೇಕು ಎಂದು ಹೋದಾಗಲೆಲ್ಲ ಕವಿತೆಯೇ ಕೈ ಹಿಡಿಯುತ್ತಿದ್ದುದು. ಹಾಗಾಗಿ ಕವಿತೆ ಎನ್ನುವುದು ನನ್ನೊಳಗೆ ಇರಬಹುದು ಎಂಬ ಸಣ್ಣ ಹುಂಬ ನಂಬಿಕೆ ಹುಟ್ಟಿಕೊಂಡು ಇಲ್ಲಿಯವರೆಗು ಕರೆದುಕೊಂಡು ಬಂದಿದೆ.
ಕವಿತೆ ಎಂದರೇನು? ಎನ್ನುವುದಕ್ಕೆ ಮೀಮಾಂಸೆಯ ಉತ್ತರವನ್ನೇನೂ ಕೊಡಬೇಕಾಗಿಲ್ಲ. ಅದು ಮುಚ್ಚಿಬಿಚ್ಚಿ ಹೇಳುವ ಭಾಷೆಯ ವಿಲಾಸ ಆಗಿರುವುದರಿಂದ, ಸ್ವತಃ ಅನಂತದವರೆಗೂ ವಿಸ್ತರಿಸಬಲ್ಲ ಶಕ್ತಿಯುಳ್ಳ ಕಾರಣ ಅದು ಹತ್ತಿರ ಎನ್ನಿಸುತ್ತದೆ. ಆದರೆ ಅದರ ಮೋಹಕತೆಯೊಂದೇ ಅದರ ಗುರಿಯಲ್ಲ. ಅದು ನಮ್ಮೊಳಗೆ ಅರಳಿಸುವ ಅರಿವು, ಬದುಕಿನ ಋಜು ಮಾರ್ಗಗಳನ್ನು ಶೋಧಿಸಿಕೊಳ್ಳಲು ಇರುವ ಸಾಧನ. ಹಾಗಾಗಿ ಕವಿತೆ ಎನ್ನುವುದು ಬದುಕಿನ ನಿಜದ ಶೋಧನೆಗೆ ನೆರವಾಗುವಂತದ್ದು. ಬದುಕಿನ ಗತಿಯಲ್ಲಿ ಎಲ್ಲೊ ಹೇಗೊ ಕವಿತೆಯ ಎರಡು ಸಾಲು ನೆನಪಾಗುತ್ತದೆಯಲ್ಲ, ಅದೇ ಅಲ್ಲವೇ ಕವಿತೆಯ ಶಕ್ತಿ? ಆಕಾಶದ ತನಕ ಹಾರಿಸಿ ಆಕಾಶಕ್ಕೇ ಏಣಿ ಹಾಕಿ ನೋಡಿಕೊ ‘ತಾರೆ ಚಂದ್ರರ ಸಂಪತ್ತನ್ನ’ ಎಂದು ಬಿಡುವ ರಾಕೆಟ್ ಕವಿತೆ.
ಸದ್ಯದ ಧಾವಂತದಲ್ಲಿ ಎಲ್ಲರೂ ಕವಿತೆ ಯಾರು ಓದುವವರು? ಎನ್ನುತ್ತಾರೆ. ಆದರೆ ಸ್ವತಃ ಸಾಕೆನಿಸುವಷ್ಟು ಕವಿತೆಗಳನ್ನು ಬರೆದು ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಹಾಕುತ್ತಾರೆ! ಇದಲ್ಲವೇ ವೈರುಧ್ಯ? ಅಂದರೆ, ಕವಿತೆ ಎನ್ನುವುದು ಎಲ್ಲರಿಗೂ ಬೇಕು. ಆದರೆ ಸೋಗಿನ ಹಿಂದೆ ನಿಜವಾದ ಕವಿತೆ ಇರುವುದನ್ನು ಹುಡುಕಲು ಬೇಕಾದ ನಿಧಾನ ಇಲ್ಲ. ಕುವೆಂಪು ಹೇಳಿದಂತೆ ‘ಇಲ್ಲಿ ಅವಸರವು ಸಾವಧಾನದ ಬೆನ್ನೇರಿದೆ!’ ಎನ್ನುವ ತಿಳಿವು ಹುಟ್ಟಿದರೆ ಎಷ್ಟು ಚೆನ್ನ ಎಂದು ಈ ಹೊತ್ತು ಯೋಚಿಸುತ್ತಿದ್ದೇನೆ.
*
ಸೋಫೋಕ್ಲಿಸ್ ಪದ್ಯಗಳು
(ತೊಂಬತ್ತೊಂದು ವರ್ಷವಾದರೂ ಅಪ್ಪ ಸಾಯಲಿಲ್ಲ, ಆಸ್ತಿ ಸಿಗಲಿಲ್ಲ ಅಂತ ನಾಟಕಕಾರ ಸೋಫೊಕ್ಲಿಸ್‌ನ ಮಕ್ಕಳಿಗೆ ಕಡುಕೋಪ. ನ್ಯಾಯಾಲಯಕ್ಕೆ ಇದೇ ವಿಷಯಕ್ಕೆ ತಕರಾರು ತೆಗೆದುಕೊಂಡು ಹೋಗಿದ್ದರಂತೆ.)
ಮಕ್ಕಳು ನೆಟಿಗೆ ಮುರಿದಿದ್ದು
.. ..ಕಡೆಗೆ ಬದುಕಿ ಬಾಳುವುದೇ
ಕಣ್ಣಿಗೆ ಕಿಸುರು
ಮುದಿಯಾಗುವುದೆಂದರೆ ಕಾಲು
ಬಾತು
ಕೋಳಿಯ ಹಾಗೆ ಆಯಕೊಂಡು ತಿನ್ನುವ
ನತಜೀವನ
ವಯಸ್ಸು ಅಂದಾಜಿಸುವ ಕಣ್ಗಳಿಗೆ
ಕಿಂಚಿತ್ತಾದರೂ ದಯವಿಲ್ಲ
ಪ್ರತಿ ಸುಕ್ಕು ನೆರಿಗೆಗು ಲೆಕ್ಕ
ಹಿಡಿದು ಅಲ್ಲಾಡಿಸಿ ನೋಡಿ
ಸಾಯಬೇಕಿತ್ತು ಇಷ್ಟುಹೊತ್ತಿಗೆ
ನಾಚಿಕೆಯಿಲ್ಲ ಪರಶಿವನ ಪಾದವ
ಕಾಣಬೇಕಿತ್ತು ಹೇಸಿಗೆಯಿಲ್ಲ
ಜನ್ಮಕ್ಕೆ. ಊರು ತಡೆದಿದೆ ಕಾಡು ದೂರವಿದೆ
ಇನ್ನಷ್ಟು ಏನೊ ಸೀಟಿಕೊಳ್ಳುವಂತೆ
ತಡಕಾಡಿ ನೆಲವ
ಗೊಡ್ಡಾಗಿ ಹಲ್ಲುಬಿದ್ದ ಮೇಲೆ
ಮೇವಿನ ಹಂಗ್ಯಾಕೆ?
ಹುಲ್ಲಿನ ಆಸೆಯೇತಕೆ?
ಮಸೆದು ಸವೆದ ನಖಗಳ
ಮಡಿಸಿಟ್ಟುಕೊಂಡು ತೆಪ್ಪಗಿರದೆ
ಇರುವ ಹಲ್ಲು ಉಗುರು ಚರ್ಮಗಳ
ಸಮಪಾಲು ಮಾಡಿ ಹಂಚಿ
ಹಾಳಾಗಿ ಹೋಗಬಾರದೆ?
*
ಶಾಪ
ಉಸಿರು ಪರಿಮಳವಾದರೆ
ಕಸ್ತೂರಿ ಭವವಾಗಿ ಕಾಡುತ್ತೆ
ಇನ್ನೂ ಮೋಹದಾಹಗಳ ಕೊಸರು
ಕೋಪಸೇಡುಗಳ ಕಸರು
ಮನುಕುಲದಲಿ ಒಳಗೊಳಗೆ
ಯಾರಿಗೂ ಹೇಳಲಾರದ
ಸತ್ಯಗಳ ತಳಮಳ
ಜೀವ ಕಳವಳಿಸಿ
ಯಾವ ಯಾವ ಕೊಂಬೆಗೊ
ಹತ್ತಿ, ಕಾಲುಚಾಚಿ ಕೂರಬಯಸಿ
ನೆಮ್ಮದಿ ಕಾಣದೆ ಪರ‍್ರನೆ ಹಾರಿ
ಹೋಗುವ ಜೀವಗಳ
ಜೀವ ಕಂಡು ಬೆರಗಾಗಿ
ಬರೆಯದೆ ಹೇಗಿರಲಿ ಹೇಳಿ?
ಇವರ, ಹಾದರದ, ಕೊಲೆ
ಹಸಿಹುಸಿ ಸಂಬಂಧಗಳ
ದುರಂತಗಾಥೆಗಳ
ಪಿಸುಗುಡುವ ಆತ್ಮಸಾಕ್ಷಿಗಳೆ
ಜೋರಾಗಿ ಕಿರುಚಿ
ಬನ್ನಿ ಮೈಕಿನ ಮುಂದೆ
ಬಯಲಾಗಲಿ ನಾಟಕದ ರಂಗದಲಿ
*
ಇದನ್ನೂ ಓದಿ : Vaidehi‘s Birthday: ಹೆಣ್ತನವೆಂದರೇನು ಮೀನಾಕ್ಷತ್ತೆ, ಮಾಕಾಳಿ, ಲಿಲ್ಲೀಬಾಯಿ, ಪುಟ್ಟಮ್ಮತ್ತೆ, ವಾರಿಜಾ, ವಿಶಾಖಾ ಬೆನ್, ಮೂಕತ್ತೆ
*
ನಗು
(ಅತ್ಯುತ್ತಮ ದುರಂತ ನಾಟಕಗಳ ಬರೆದ ಸೊಫೊಕ್ಲಿಸ್ ತನಗೆ ಯಾವುದೋ ಸಾಹಿತ್ಯ ಬಹುಮಾನ ಬಂದ ಸುದ್ದಿ ಕೇಳಿ ಆನಂದಾತಿಶಯದಿಂದ ಸತ್ತನಂತೆ!)
ದುರಂತ ಬರೆದು ಬರೆದೂ
ಛೇ ಹೋಗ್ರೊ ಹುಡುಗರಾ
ನಗು ಎನ್ನುವುದು ನಾಕಾಣೆ
ಎಲ್ಲಿ ಯಾವ ಕತ್ತಲ ಕೋಣೆಯ
ಪೆಟಾರಿಯಲಿ ಅಡಗಿ ಕೂತಿತ್ತೊ
ಒಮ್ಮೆಗೇ ಬೆಳ್ಳಿ ಬೆಳಕು
ಮಿಂಚು ಪಳಾರನೆ ಹೊಳೆದಂತೆ
ಸಾವು
ಬೆಲೆಬಾಳುವ ಪದಕ ರಜತ
ಕಾಗೆಬಂಗಾರದ ಹೊಳಪು
ಕೇಳಿದಷ್ಟೂ ಇನಿದಾಗುವ
ಚಪ್ಪಾಳೆ ಸದ್ದು
ಪಾಪ ಮುದಿಗಿವಿಗಳಿಗೆ ಸವಿಯಾಗುವ
ಬಹುಮಾನದ ರಖಮಿನ ಕಿಣಿಕಿಣಿ ಸದ್ದು
ಮನದ ಮೂಲೆಯಲ್ಲಿ ಅಡಗಿದ್ದ
ಮಲಗಿದ್ದ ಹಾವನ್ನು ಬಡಿದೆಬ್ಬಿಸಿ
ಕಲ್ಲು ತೂರಿ ನೀರು
ರಭಸದಲಿ ತೂರಿಯೇ ಬಿಟ್ಟಿತು
ಪ್ರವಾಹ ಕೊಚ್ಚಿ ಹಾಕಿತು
ಸಾವೆನ್ನುವುದು ಸಾಜ ದುರಂತ ನಾಟಕಕ್ಕೆ
ನಗುವೆನ್ನುವುದು ಘನಘೋರ
ಕಾಮಿಡಿಗು
ತಾಕತ್ತು ಬಂದಿದ್ದೇ
ದುರಂತ ಕವಿಯ ಸಾವಿನಿಂದ
ಅವನು ನಕ್ಕು ಸಾವನ್ನು ಕರೆದಂದಿನಿಂದ
*
ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಇದನ್ನೂ ಓದಿ : Poetry: ಅವಿತಕವಿತೆ; ಸೂರ್ಯ ಸುಟ್ಟು ಉಳಿದ ಪಾಡುಗಳ ಹಾಡಾಗಿಸಲು ಚಂದಿರನ ಕರೆತರಬೇಕಿದೆ
Published On - 11:10 am, Sun, 13 February 22