Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಕವನಗಳು ನಿಮ್ಮ ಓದಿಗೆ.
ಮಂಜುನಾಥರ ಕವಿತೆಗಳು ಯಾವತ್ತೂ ಧ್ವನಿಲಯವನ್ನು ಬಿಟ್ಟುಕೊಡುವುದಿಲ್ಲ. ಅಷ್ಟರಮಟ್ಟಿಗೆ ಅವು ಶಬ್ದದ ನಾದಮಾಧುರ್ಯಕ್ಕೆ ನ್ಯಾಯ ಸಲ್ಲಿಸುವ ಪಣತೊಟ್ಟಂತಿವೆ. ಆದರೆ ಎಲ್ಲಿಯೂ ಅದು ತನ್ನ ನುಡಿಗೆ ತಾನೇ ಮೈಮರೆಯುವ ಹಂತಕ್ಕೆ ಹೋಗುವುದಿಲ್ಲ. ಇಲ್ಲವಾದಲ್ಲಿ ಸಾಕಷ್ಟು ಓದಿಕೊಂಡಿರುವ, ಪ್ರಾಯಪ್ರಬುದ್ಧರೂ ಆಗಿರುವ, ಭಾಷೆಯ ನೆಲೆಯಿಂದ ಸಾಕಷ್ಟು ಪಳಗಿರುವ ಅವರ ಕವಿತೆಗಳೆಲ್ಲಾ ಶಬ್ದಜಾಲದ ಮೋಹಕತೆಗೇ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬಹುದಾದ ಅಪಾಯ ಇದ್ದೇ ಇತ್ತು. ಆದರೆ ಇಲ್ಲಿ ಹಾಗಾಗುವುದಿಲ್ಲ ಎನ್ನುವುದೇ ಈ ಕವಿತೆಗಳ ಹೆಚ್ಚುಗಾರಿಕೆ.
ನರೇಂದ್ರ ಪೈ, ಕಥೆಗಾರ, ವಿಮರ್ಶಕ
ವೃತ್ತಿಯಲ್ಲಿ ಆರಕ್ಷಕರಾಗಿರುವ ಮಂಜುನಾಥ ಪ್ರವೃತ್ತಿಯಲ್ಲಿ ಕವಿ. ಕನ್ನಡದ ಪ್ರೀತಿಯ ಕವಿ ಜಯಂತ ಕಾಯ್ಕಿಣಿಯವರು ಮುನ್ನುಡಿಯಲ್ಲಿ ಇವರ ಕವನಗಳ ಬಗ್ಗೆ ಬರೆಯುತ್ತ “ವೃತ್ತಿಯಲ್ಲಿ ಪ್ರವೃತ್ತಿಯಲ್ಲಿ ಸಮಾಜವನ್ನು ಒಂದು ದೊಡ್ಡ ಕುಟುಂಬವೆಂದು ಗ್ರಹಿಸುವ ಜೀವಿಯೊಬ್ಬನ ಆತ್ಮಸಾಕ್ಷಿ ರೂಪುಗೊಳ್ಳುವ ಧ್ವನಿ ಸೊಲ್ಲುಗಳು ಇಲ್ಲಿವೆ. ಸಮಾಜದ ಜೀವಪರಿಸರದಲ್ಲಿ ತನ್ನ ಅಸ್ಮಿತೆಯನ್ನು ಬೆರೆಸಿಕೊಂಡಿರುವ ಈ ಕವಿತೆಗಳ ತುಡಿತ ಮಹತ್ವದ್ದಾಗಿದೆ ಎನ್ನುತ್ತಾರೆ.” ಯಾವ ವಿಷಯವಾಗಿಯೂ ಇವರದು ಸಹನೆ ಮೀರದ ಕಾವ್ಯ. ಮನದಿಂಗಿತವನ್ನು ನಿರ್ಭಯವಾಗಿ ಹೇಳುವ ಕಸುಬುಗಾರಿಕೆ ಇವರಿಗೆ ಕರಗತ. ಓದು, ಬುದ್ಧಿ, ಭಾವಗಳು ಮೇಳೈಸಿದ ಕಾವ್ಯ ಕುಸುರಿಯಲ್ಲಿ ಇವರು ನಿರಂತರತೆಯನ್ನು ಕಾಯ್ದುಕೊಂಡರೆ ಸಾಹಿತ್ಯದ ಯಾವುದೇ ಮಜಲುಗಳನ್ನು ಮುಟ್ಟುವ ಸಾಮರ್ಥ್ಯವನ್ನು ಪಡೆದುಕೊಳ್ಳಬಲ್ಲರು.
ರಾಮಮೂರ್ತಿ ಎಸ್. ನಾಯಕ, ಲೇಖಕ
*
ಈ ಶಹರದ ಕಣ್ಣುಗಳಲ್ಲಿ
ನೆತ್ತರು ಮೆತ್ತಿದ ಶಹರದ ಡಾಂಬರು ರಸ್ತೆಯ
ಉನ್ಮಾದದ ತುದಿಗೆ ಹಸಿವ ತೃಷೆಗೆ ಕುಕ್ಕಡಿಸೋ ಗಿಡುಗಕ್ಕೆ
ರಕ್ತ ಬಿಸಿಯಲ್ಲ ಸಿಹಿಯ ಮೃಷ್ಟಾನ್ನ
ಶಹರದ ರಸ್ತೆಯ ಮೈದಡವಿದ ಬಸ್ಸು ಲಾರಿ
ಕಾರಿನ ಓಘಕ್ಕೆ ಟೈರಿಗಂಟಿದ ರಕ್ತದ ಕಲೆ
ಶಹರದ ಬೀದಿಯ ಸ್ನಾನಗೃಹ
ಈ ಶಹರದ ಕಣ್ಣುಗಳಲ್ಲಿ
ನಿಲುಕುವ ನಿಲುಕದ ನೋಟಗಳಲ್ಲಿ
ಒಡೆದ ಕನ್ನಡಿಯ ಬಿಂಬ
ಮತ್ತೇರುವ ಚೌಕಗಳಲ್ಲಿ
ಮದಿರೆ, ನೀರೆಯರ ಝಳಕಿನಲ್ಲಿ
ಶಹರದ ಸಂತೆಯಲ್ಲಿ ಬಿಕರಿಗಿಟ್ಟ
ಕೆಂಗುಲಾಬಿ ಘಮಲುಗಳೆದುರು
ಹಸಿಬಿಸಿಯುಸಿರಿನ ಚೌಕಾಸಿಗೆ
ನಿಡುಸುಯ್ಯುವ ಅಗುಳಿನ ಕನಸು.
ಕಿವಿಯಾನಿಸಿ ಕೇಳುತ್ತಿದೆ ಶಹರ
ಬಂಗಲೆ ಕಾಲಬುಡದಡಿಗೆ
ಉಡುಗುವ ಕೊಳಗೇರಿಯ
ಬಿರುಕು ಬಿಟ್ಟ ಗೋಡೆಗೆ
ಖಾಲಿ ಮಡಿಕೆಯ ನಿತಂಬದ ನೀರವ
ಸದ್ದಿಗೆ ನೊರೆಹಾಲಿಗಾಗಿ ಹಾತೊರೆವ
ಚಿಗುರು ಪೈರಿನ ಕಲರವವ
ಪಚ್ಚೆ ನೊಸಲಿನ ಶಹರ
ಕಂಬನಿ ಮಿಡಿಯುತ್ತಿದೆ ಶಹರ
ಕಣ್ಣಂಚು ಒದ್ದೆಯಾಗಿದೆ
ಕುಳಿರ್ಗಾಳಿಯ ಕ್ರೋಧದುರಿಗೆ
ನೆಲಸಮ ಚಾಳಗಳ ಕಣ್ಣೀರ ಕೊರಡುಗಳಿಗೆ
ಎಳೆ ಮೊಗ್ಗು ಮಸಣದ ಮನೆಯಲ್ಲಿ
ಯಾರದ್ದೋ ಪಾಪದ ಹೂವಾಗಿದ್ದಕ್ಕೆ
ಮುನ್ನುಗ್ಗಿ ಮುಗ್ಗರಿಸುತಿದೆ ಶಹರ
ಇತ್ತೀಚಿನ ದಿನಗಳಲ್ಲಿ
ಈ ಶಹರದ ಕಣ್ಣುಗಳಲ್ಲಿ
ಮತ್ತಿನ್ನೇನೋ ಕದಡಿದ ಬಿಂಬ
ಕಾಣಲಿಕ್ಕಿದೆಯೋ!
ಮಾಯಗನ್ನಡಿಯಲ್ಲಿ…
*
ಗಸ್ತು
ಮಗುಮ್ಮಾಗಿ ಪಕ್ಷಿನೋಟದ ಅಕ್ಷಿ
ದ್ವಯಗಳ ಬೇಕಾಬಿಟ್ಟಿ
ಹೊರಳಿಸುವುದಷ್ಟೇ ಈ ಗಸ್ತಿನ ದಿನಚರಿಯಲ್ಲ
ವೀರಭಟರ ಎದೆಗಾರಿಕೆ
ರಾಜಠೀವಿಯ ಗತ್ತಿನ ನಡಿಗೆ
ಪೇಟೆಯ ಸಂದಣಿಗಳಲ್ಲಿ
ಜಂಗುಳಿಯ ರೌದ್ರತೆಯ ಚಣಗಳಲ್ಲಿ
ಸಾಗಿದೆ ಗಸ್ತು ನಿರ್ಭಿಡೆಯಲಿ
ಗೊತ್ತು ಗುರಿಯಿರದ ನಡೆಗಳಿಗೆ
ಕೊಟ್ಟು ಸೊಂಟದ ಪೆಟ್ಟು
ಗಸ್ತೆಂದರೆ ಬರೀ ತಿರುಗಾಟದ ಹುಕಿಯಲ್ಲ
ಶಬ್ದ ನಿಶ್ಶಬ್ದಗಳ ಸೀಳುವ ಹುಬೆಯಲ್ಲ
ಗಲಾಟೆ ಗಂಡಾಂತರ ಗೋಳಾಟಗಳ
ಪಲ್ಲಟಗೊಳಿಸುವ ಸಂಚಾರಿ ನಡೆಯಲ್ಲ
ಗಸ್ತೆಂದರೆ ಬರೀ ಗತ್ತಲ್ಲ
ಎಲ್ಲಾ ಹಕೀಕತ್ತುಗಳ ಬೆಂಕಿ
ಭಸ್ಮ ದೊಂಬಿ ದಾಂಧಲೆ
ಕೊಲೆ ಸುಲಿಗೆಗಳ ಸದ್ದಡಗಿಸುವ
ಚೇತೋಹಾರಿ ನಡಿಗೆಯಲ್ಲ
ಗಸ್ತಿನ ಗೈರತ್ತೇ ಬೇರೆ ಬೇರೆ
ಒಂದೇ ಘರ್ಜನೆಯ ಬೆಚ್ಚಿಗೆ
ಒಂದೇ ಸೀಟಿಯ ಸದ್ದಿಗೆ
ಮಂಡಲದೊಳಗೆ ಧರಣಿ ನಿಂತ
ಪೋಷಾಕು ಪುರುಷರ ಮೀಸೆ
ಅಂಚಿನಲಿ ಬೆವರಸಾಲ ಹೊಳೆ
ಆತಂಕದ ದಿನಚರಿಗಳ ನಡುವೆ
ಇದ್ದರಷ್ಟೆ ಗಸ್ತು
ಬಸವನಹುಳುಗಳಿಗೆ
ಚಿಪ್ಪೊಳಗೆ ಅಡಗಿದ ಆಮೆಗಳಿಗೆ
ರಸ್ತೆಗಿಳಿಯುವ ಧೈರ್ಯ
ಗಸ್ತಿನ ಚಿಂತೆ ಇದ್ದುದು
ಹಸು ಕುರಿಗಳಿಗಲ್ಲ
ಬಿಲದಲ್ಲಡಗಿದ ಹುಲಿ ಸಿಂಹಗಳಿಗಷ್ಟೆ.
ಪದಗಳ ಬೆರಗು, ಕಲ್ಪನೆಯ ಸೆರಗು, ಅರ್ಥವಂತಿಕೆಯ ಮೆರಗು ಹದವಾಗಿ ಬೆರೆತಾಗ ಭಾವಜನ್ಯವಾಗುವ ಶಿಶುವೇ ಈ ಕಾವ್ಯ. ಈ ಶಿಶುವಿನ ಸಖ್ಯದಿಂದ ಅಳುವ ಕಡಲು ನಗೆಯ ಹರಿಗೋಲಾಗುತ್ತದೆ. ಸಂತೋಷ, ದುಃಖದ ಕ್ಷಣಗಳು ಭಾವನೆ, ಬುದ್ಧಿಯ ಕುಡುಗೋಲಲ್ಲಿ ಕಡೆದು ಬೆಣ್ಣೆಯ ಮೃದುತ್ವದಂತೆ ಕಾವ್ಯಕನ್ನಿಕೆಯಾಗಿ ಮೆಲ್ನುಡಿಯುತ್ತದೆ. ಮಜ್ಜಿಗೆಯಾಗಿ ಮನಕ್ಕೆ ತಂಪೆರೆಯುತ್ತದೆ. ಕಾವ್ಯ ರಸಿಕರ ಹದದ ನಾಲಿಗೆಯ ಮೇಲಿನ ತುಪ್ಪವಾಗಿ ಸ್ವಾದ ಸೂಸುತ್ತದೆ.
ನನಗೆ ಕಾವ್ಯವೆಂದರೆ ಜೀವಂತಿಕೆಯ ನಿಗಿನಿಗಿ ಕೆಂಡ; ಅರ್ಥವಂತಿಕೆಯ ಬೆರಗು, ಸೂಜಿಗಲ್ಲಿನ ಸೆಳೆತದ ಹಾಲುಗಲ್ಲದ ಕಂದ, ಮುಟ್ಟ ಹೋದರೆ ಮಿಡಿಯಬಲ್ಲ ವಿಸ್ಮಯ, ಕ್ರಮಿಸಿದರೂ ಗುರಿ ತಲುಪಲಾರದ ಹೆದ್ದಾರಿ, ಹಕ್ಕಿಯ ಕಂಠದಿಂದ ಹೊರಬಿದ್ದ ಚಿಲಿಪಿಲಿ, ತಪದ ಮುನಿಯ ತಲ್ಲೀನತೆ, ಕಾಂತಿಯ ಓಜಸ್ಸು, ಚಿಂತನೆಯ ನಾಗಾಲೋಟದಲ್ಲಿ ಧುತ್ತೆಂದು ಸಿಕ್ಕ ಮೈಲಿಗಲ್ಲು, ಸೋತ ರಟ್ಟೆಗಳು ದಣಿವಾರಿಸಿಕೊಳ್ಳೊ ನಿಲ್ದಾಣ, ಸಾಂತ್ವಾನದ ನಿಟ್ಟುಸಿರು ನಿಡುಸುಯ್ಯುವ ಭಾವನಾಶರಧಿ, ಎಚ್ಚರದ ಹಾದಿಯ ಆಕಸ್ಮಿಕ ತಿರುವು, ಪದವನರಿಯದ ಮುಗುದ ಜನರ ಕಂಬನಿಗಳ ಕ್ರೋಧದ ಬುಗ್ಗೆಯ ಮಹಾಸ್ಫೋಟ, ಅನ್ವೇಷಣೆಯ ಧಾವಂತದ ದುರಿತ ಕಾಲದ ಪದ ಪದಾರ್ಥ, ವೈಶಾಲ್ಯತೆಯೆಡೆಗೆ ತುಡಿವ ಅನಂತ ಆಕಾಶ.
ನೆರಳೂ ಇರದ ಮರ
ಎಲ್ಲ ಸಿಹಿಹಣ್ಣು ಹುಳಿಯ ಸುಳಿವಿಲ್ಲ
ಬೇರಮೇಲಿಂದ ಶಿರಶೃಂಗದವರೆಗೆ ನಳನಳಿತ
ಹಸಿರುಗುಡ್ಡ ಹಸಿರೆಲೆಗೆ ಬುನಾದಿ ಹಸಿರು ಮರ
ಹಣ್ಣು ಹತ್ತಿ ಕೀಳ್ವ, ಬಿದ್ದ ಹಣ್ಣು ಬಸಿರಬೇನೆಗೆ ತಂಪೆರೆವ
ಮರದ ನೆರಳಲಿ ಮೋಜು ಹುಡುಗರ ಸಾಲು
ಮರಕೋತಿ ಆಟ, ವೃಕ್ಷದ ನೆರಳಲಿ ಹುಕ್ಕಾಟ
ಕುಣಿದು ತಣಿದ ಮನ ಸಂತಸದ ಮಗ್ಗಲು ಬದಲಿಸಿ
ಮರದ ನೆರಳಲಿ ಶಯನ ತೃಪ್ತಿಯಲಿ ನಯನ ಹೊರಳಿಸಿ
ಹಸಿರುಟ್ಟ ಗುಡ್ಡದೆದೆಯ ಮೇಲೆ
ಎಲೆಹಸಿರು ಮೈಬಸಿರು ಹಣ್ಣು ಹೂ ಕೊಂಬೆಗಳ ತಳಿರು
ಹಸಿರೆಲೆಯ ಮರ ಹಸನು ದೇಹದ ಮರ.
ಕೋಗಿಲೆಗಳ ಕುಹೂ ಕುಹೂ ಕಂಠದ ಸ್ವರದೊಳಗೆ
ಸಂಗೀತಶಾಲೆ ತೆರೆದು ಶಿರದ ಮೇಲೆ ಲಾಲಿಸಿಕೊಂಡು
ಕಾಡೆಲ್ಲ ನಾದಮಯ, ರೆಂಬೆಕೊಂಬೆಗಳೆಲ್ಲಾ
ಸಪ್ತಸ್ವರ ಕಂಪನದ ಗೋಡೆಗಳಾಗಿ
ಗೂಡುಕಟ್ಟಿ ತೂಗುಯ್ಯಾಲೆಯಾಡಿದ ಗುಬ್ಬಿ
ಜೇನು ಕಟ್ಟಿ ಸಿಹಿ ಹಂಚಿದ ಜೇನುನೊಣಗಳು
ಚಿಗುರೊಡೆದು ಕೇಕೆಹಾಕಿದ ವಸಂತ
ಹೂವ ಮಕರಂದವನರಸುತ ಬರುವ ದುಂಬಿ
ನೆತ್ತಿಸುಡುವ ನೇಸರನ ಕೋಪಾಲಾಪಕೆ
ನೆರಳ ಹಾಸಿಗೆಗೊರಗುವ ದನಕರುಗಳು
ದಣಿವಾರಿಸಿಕೊಳ್ಳುವ ಖಗಕುಲ ಬಾನ ಈಜುಪಟುಗಳು
ದಿಬ್ಬಣದ ಮೆರವಣಿಗೆ ನಡುವೆ ನಿಟ್ಟುಸಿರು.
ಯಾವುದಿದು ದಿವ್ಯಚೋರತನ, ಮಹಾಕಂಟಕ ನರ್ತನ
ಏನಿದು ಮನ್ವಂತರದ ರೂಪಾಂತರದ ಸಿಡಿಲು
ಹಸಿರುಚಪ್ಪರದ ಮರಕ್ಕೆ ಹಣ್ಣೆಲೆಯ ಮುಡಿ
ಕಾಯಿಹಣ್ಣುಗಳೆಲ್ಲಾ ರಸದ ಕೊರಳೊಡೆದು
ಕೊಳೆತು ಗಬ್ಬು, ಬರೀ ಕಹಿಯ ತಬ್ಬಿಬ್ಬು
ಎತ್ತರದ ತಲೆಯ ರೆಂಬೆಕೊಂಬೆ
ಹಸಿರೆಲೆಯಿರದೆ ಬೋಳು, ಬರೀ ಬೆಂದೊಗಲು
ಗೂಡಹಕ್ಕಿಮರಿಗಳ ಗರಬಡಿದು ಚೀರಾಟ
ಯಾರ ವ್ಯಾಮೋಹದ ಸಿಡಿಲಿದು
ಬರದ ಕರಿಬಾವುಟದ ನೆರಳು
ಯಾರ ಕೊಡಲಿಯೇಟಿನ ದಿವ್ಯಾಸ್ತ್ರಕೆ
ತಲೆಬುಡ, ರೆಂಬೆಕೊಂಬೆಗಳಲಿ ನರಕದ ಕಂಪನ
ಹೂ ಹಣ್ಣುಗಳ ನುಂಗಿ
ರೆಂಬೆಕೊಂಬೆಗಳ ಕಸುವು ಕಡಿದೆಳೆದು
ತುದಿಯೆಲೆ ಮೇಲಿನ ಹಕ್ಕಿ ಚಿಲಿಪಿಲಿಯ
ಬರಿಗೈಯಲ್ಲೋಡಿಸಿ ಕೊರಳು ಹಿಂಡಿ
ಫಲದ ಮರವೀಗ ಬರಡು ಬರಡು
ವಲಸೆದಾರರ ಯಾದಿಯೊಳು ನಿಂತ ಖಗಕುಲ.
ಕೋಗಿಲೆ ಹಾಡುವುದಿಲ್ಲ
ಹಣ್ಣುಗಳು ಉದುರುವುದಿಲ್ಲ
ರೆಂಬೆ ಕೊಂಬೆ ಕಾಂಡದೊಳಗೆ
ಗುಲಗಂಜಿಯಷ್ಟೂ ಕಸುವಿಲ್ಲ
ಬೋಳುಗುಡ್ಡದ ಮೇಲೆ
ಬೋಳು ತಲೆಯ ಮರ
ಬರೀ ಹಣ್ಣು ಹೂಗಳಷ್ಟೇ ಅಲ್ಲ
ನೆರಳೂ ಇರದ ಮರ
*
ಅಜ್ಜಯ್ಯನ ಅಮವಾಸ್ಯೆ
ಅಜ್ಜಯ್ಯನ ಕಾಲಿಗೆ
ದಾರಿಬಿಡದ ಬೀದಿಯಿಲ್ಲ
ಕೋಲಿನ ಹೆಜ್ಜೆಗೆ ತಡೆಗೋಡೆ
ಒಂದೂ ಎದುರಿಲ್ಲ
ಕತ್ತಲು ಕಂಬಳಿ ಹಾಸಿ ಮಲಗಿದೆ
ಅಜ್ಜಯ್ಯ ನಡೆವ ಹಾದಿಯಲಿ
ಅಮವಾಸ್ಯೆಯ ರೌರವ ನಿಶೆ
ಅಧಮದ ಕಟ್ಟೆಯೊಡೆದು
ಬಟಾಬಯಲಾಗಿದೆ ಕತ್ತಲ ರಾತ್ರಿಯಲಿ
ಅಜ್ಜಯ್ಯನ ಭೀಷ್ಮಪ್ರತಿಜ್ಞೆಯ ಮುಂದೆ.
ಊರೊಳಗೆ ಅಜ್ಜಯ್ಯ ಅಮವಾಸ್ಯೆಯಂತವನು
ನಾನೋ
ಹುಣ್ಣಿಮೆ ಚಂದ್ರನಂತವನು
ಗೊತ್ತಿಲ್ಲ ನನಗೆ
ಅಮಾವಾಸ್ಯೆಯ ಕಗ್ಗತ್ತಲ ಕರಾಳರಾತ್ರಿಯಲಿ
ನಿಶಾಚರಿಗಳು ಪ್ರೇತಾತ್ಮಗಳು
ಕಿರಿಚುಲಿವ ನರಿ ಶುಕ ತೋಳಗಳು
ಶ್ವೇತವಸ್ತ್ರ ಮುಸುಕುಧಾರಿಗಳ ಬೀಭತ್ಸಗಳ
ಮುಂದೆ ಏಕಾಂಗಿ ಪಯಣವ ಗೆಲ್ಲಬಲ್ಲ
ದಿಟ್ಟ ಎದೆಯಿಲ್ಲ ನನಗೆ.
ಅಜ್ಜಯ್ಯ ಪ್ರೀತಿಸುತ್ತಾನೆ ಕತ್ತಲುಗಳ
ಅಮಾವಾಸ್ಯೆಯ ರಾತ್ರಿ ನೀರವ ಮೌನದಲಿ
ಕತ್ತಲ ಕೈಕಾಲು ಮುಖಗಳನ್ನು
ಬೆಂಕಿಯ ಕೆನ್ನಾಲಿಗೆಗೆ
ಸುಟ್ಟ ಇದ್ದಿಲು ಹಲ್ಲುಗಳನ್ನು
ಎಣಿಸುತ್ತಾನೆ ಬೀಡಿಗೆ ಕಿಚ್ಚು ಹತ್ತಿಸುತ್ತಾ
ಮನೆ ಮುಂದಿನ ಆಲದ ಮರದ ಬುಡದಲಿ.
ಕತ್ತಲಿಗೆ ಎಷ್ಟು ಬಾಹುಗಳಿವೆ
ಎಷ್ಟು ಆಳಗಳಿವೆ, ಕುಳಿಗಳಿವೆ
ಸೆಳವೆಷ್ಟಿದೆ, ಬಲವೆಷ್ಟಿದೆ
ಕತ್ತಲಬಾವಿಯೊಳಗೆ ಜಲದ ಸೆಲೆಯೆಷ್ಟಿದೆ
ಕತ್ತಲ ಚಕ್ರವ್ಯೂಹವ ಭೇದಿಸಿ
ನಿರ್ಗಮಿಸುವ ಕವಲುದಾರಿಗಳೆಷ್ಟಿವೆ
ಅಜ್ಜಯ್ಯ ಎಲ್ಲವೂ ಪ್ರಾಜ್ಞ
ಊರಲ್ಲಿ ಅಜ್ಜಯ್ಯನೆಂದರೆ
ಅಮವಾಸ್ಯೆಯ ಅಜ್ಜಯ್ಯ
ಅಮವಾಸ್ಯೆಯ ರಾತ್ರಿಯಲಿ
ಅಸಾದೃಶ, ಅಸ್ಪಷ್ಟತೆಯ ಕತ್ತಲ ಬೆದರುಗಳಿಗೆ
ಬೆನ್ನಟ್ಟುತ್ತಾನೆ ಗುಟುರುಗೂಳಿಯಾಗಿ
ಕತ್ತಲ ಬೆತ್ತಲು ತನುವಿಗೆ
ಬೆಳಕಿನುಡುಗೆ ತೊಡಿಸಿ
ಕೊಂಚ ಅಪ್ಯಾಯಮಾನ ಗೆಲುವುಣಿಸುತ್ತಾನೆ.
ಅಜ್ಜಯ್ಯನ ಅಮವಾಸ್ಯೆಗಳಿಗೂ
ನನ್ನ ಹುಣ್ಣಿಮೆಗಳಿಗೂ
ಶುರುವಾಗಿದೆ ಮಲ್ಲಯುದ್ಧ
ಅಜ್ಜಯ್ಯ ಸವಾಲು ಹಾಕುವ
ಅಮಾವಾಸ್ಯೆಯ ಕತ್ತಲಲಿ ನಿಂತು
ಗೆದ್ದು ತೋರಿಸೆಂದು
ನಾನು ಹುಣ್ಣಿಮೆಯಂತ ಹುಡುಗ
ಕತ್ತಲು ಬಯಸದವನು
ಅಮವಾಸ್ಯೆಗಳೆದುರು ಎದೆಹಿಗ್ಗಿನಿಲ್ಲದವನು
ಅಜ್ಯಯ್ಯನ ಅಮವಾಸ್ಯೆಗಳ ಮುಂದೆ
ನನ್ನ ಹುಣ್ಣಿಮೆಗಳಿಗೆ ಸೋಲಾಗುತ್ತದೆ.
ಅಜ್ಜಯ್ಯನ ಅಮವಾಸ್ಯೆ ಅಪೂರ್ವ
ಅಜ್ಜಯ್ಯ ಸೋಲಿಲ್ಲದವನು.
*
ಶವದ ಮೇಲಿನ ಚಿಟ್ಟೆ
ಹೂಬನದ ಆಘ್ರಾಣಿಸುವ
ಸುವಾಸನೆಯ ಘಮಕ್ಕೆ ಸಂತೃಪ್ತಗೊಳ್ಳದೇ
ದುರಾಸೆಯ ರೆಕ್ಕೆಗೆ
ಆಮಿಷದ ಕೊಚ್ಚೆಯಲಿ ಮೀಯಿಸಿ
ಚಟ್ಟದ ಮೇಲಿನ ಶವದ
ಹೂವ ಮಕರಂದದಾಸೆಗೆ
ದೂರದಿಂದ ಓಡೋಡಿ
ದಣಿದು ಬಂದು ಕೂತಿತು
ಭ್ರಮರ ಚಿಟ್ಟೆ
ಶವದ ಬಟ್ಟೆಯ ಮೇಲಿನ
ಘಮ್ಮೆನಿಸುವ ಹೂವ ತುತ್ತತುದಿ
ಚಿಟ್ಟೆಯ ಚುಂಬನದ ಹಾಸಿಗೆ
ಶವದ ನಿಸ್ತೇಜ ಕಂಗಳಲಿ
ಸತ್ತು ಮಲಗಿದೆ ಸ್ವರ್ಗದ ಮೆರವಣಿಗೆ
ಸ್ವರ್ಗಕ್ಕೋ ನರಕಕ್ಕೋ
ಮರಣನ ಮನೆ ಕಡೆಗೋ
ದೇವರ ಪಾದದ ಮುಡಿಗೋ
ಯಮನ ಪಾಶದ ಅಡಿಗೋ
ಕತ್ತಲಗೂಡಿಗೋ, ಬೆಳಕಿನ ಬೀಡಿಗೋ
ಪಯಣವನರಿಯದೆ
ಹೆಣವ ಹೆಗಲಿಗಾನಿಸಿ ಹೊರಟ
ಸವಾರರ ಸಂಕಟಗಳ
ಶಿರದ ಮೇಲಿನ ಚಿಟ್ಟೆಗೆ
ಚಟ್ಟಕ್ಕೆ ಗೋಪುರವಾಗುವಾಸೆ
ಶವದ ಬಟ್ಟೆಯ ಮೇಲೆ
ಮೊಟ್ಟೆಯನಿಡುವಾಸೆ
ಮರಿಯ ಮಾಡಿ
ಸಂಸಾರವ ಮಾಡಿ
ಚಟ್ಟದ ಮನೆಯಲಿ ಬೆಚ್ಚನೆ ಮಲಗಿ
ಬದುಕಿನ ಕನಸ ಗೂಡುಕಟ್ಟಿದೆ ಚಿಟ್ಟೆ
ಚಟ್ಟದ ಮೇಲೆ ಮಲಗಿದ ಶವದ
ಸ್ವರ್ಗದ ಕನಸು ಮೂರಾಬಟ್ಟೆ.
*
ಪರಿಚಯ: ಮಂಜುನಾಥ ನಾಯ್ಕ ಯಲ್ವಡಿಕೂರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿಕವೂರಿನವರು. ಸದ್ಯ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕೃಷಿ ಪ್ರವೃತ್ತಿಯಾಗಿದೆ. 2020ರಲ್ಲಿ ಇವರ ಮೊದಲ ಕವನ ಸಂಕಲನ ‘ಅಂಜುಬುರುಕಿಯ ರಂಗವಲ್ಲಿ’ ಅಂಕೋಲೆಯ ಅದಿತಿ ಪ್ರಕಾಶನದಿಂದ ಪ್ರಕಟವಾಗಿದೆ.
ಇದನ್ನೂ ಓದಿ : Poetry : ಅವಿತಕವಿತೆ : ಅರಿವುದು ಬೇರೆ ಅನುಭವ ಬೇರೆ, ಅನುಭವ ನನಗಿಲ್ಲ